ಸನ್ಮಾರ್ಗ ವಾರ್ತೆ
ಬಿಹಾರದಲ್ಲಿ ನೂರ್ ಆಲಮ್ ಎಂಬ ಕಾರ್ಮಿಕನನ್ನು ಥಳಿಸಿ ಗಂಭೀರ ಗಾಯಗೊಳಿಸಲಾಗಿದೆ. ಬಾಂಗ್ಲಾದೇಶ ನುಸುಳುಕೋರ ಎಂದು ಹೇಳಿ ಗುಂಪೊಂದು ಥಳಿಸಿದೆ. ನೂರ್ ಆಲಂ ಅವರ ಮೊಬೈಲ್ನಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಂಬರ್ ಇದ್ದು, ಈ ವ್ಯಕ್ತಿ ವಿದೇಶಿಯೆಂಬುದಕ್ಕೆ ಇದುವೇ ಪುರಾವೆ ಎಂದು ವಿಡಿಯೋದಲ್ಲಿ ವ್ಯಕ್ತಿಯೋರ್ವ ಹೇಳುವುದು ಕೇಳಿಸುತ್ತದೆ ಆದರೆ ಅವರ ಮೊಬೈಲ್ನಲ್ಲಿ ಆಕ್ಷೇಪಾರ್ಹ ವಸ್ತುಗಳು ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆಗೆ ಬ್ಯಾಂಡೇಜ್ ಅನ್ನು ಕಟ್ಟಿರುವ ಮತ್ತು ದೇಹದ ಭಾಗಗಳು ಊದಿಕೊಂಡಿರುವ ಸ್ಥಿತಿಯಲ್ಲಿ ನೂರ್ ಆಲಂ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ತನ್ನಲ್ಲಿ ಜೈ ಶ್ರೀರಾಮ್ ಎಂದು ಹೇಳುವಂತೆ ಗುಂಪು ಒತ್ತಾಯಿಸಿತು. ನಾನು ಹೇಳದೆ ಇರುವಾಗ ತನ್ನ ಮೇಲೆ ಹಲ್ಲೆ ಪ್ರಾರಂಭಿಸಿತು ಎಂದು ಹೇಳಿದ್ದಾರೆ.
ಇದೇ ವೇಳೆ ನೂರ್ ಆಲಂ ಅವರು ಸೂಪೌರ್ ಜಿಲ್ಲೆಯ ನಿವಾಸಿಯಾಗಿದ್ದು ವಿದೇಶಿ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ಹತ್ಯಾಯತ್ನ ಪ್ರಕರಣದಡಿ ಪ್ರಕರಣ ದಾಖಲಿಸಲಾಗಿದೆ.
ಇತ್ತೀಚೆಗೆ ಮುಸ್ಲಿಮರ ಮೇಲೆ ಗುಂಪು ಥಳಿತ ಹೆಚ್ಚಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಮೂರ್ನಾಲ್ಕು ಮಂದಿಯ ಮೇಲೆ ಇಂಥ ಹಲ್ಲೆಗಳು ನಡೆದಿದೆ.












