✍️ ಖದೀಜ ನುಸ್ರತ್
ಮನುಷ್ಯನ ಜೀವನದಲ್ಲಿ ಯಾತ್ರೆಯು ಮನಸ್ಸಿನ ಮತ್ತು ಆತ್ಮದ ಚಿಕಿತ್ಸೆಯಂತೆ ಕಾರ್ಯನಿರ್ವಹಿಸುತ್ತದೆ. ದೈನಂದಿನ ಜೀವನದ ಒತ್ತಡ, ಏಕಾಂತತೆ ಮತ್ತು ಸೌಕರ್ಯದ ವಲಯದಿಂದ ಹೊರಬಂದು ಹೊಸ ಸ್ಥಳಗಳ ಸಂದರ್ಶನವು ಮನಸ್ಸಿಗೆ ತಾಜಾತನವನ್ನು ನೀಡುತ್ತದೆ. ಮನುಷ್ಯನಿಗೆ ಪುಸ್ತಕ, ಶಾಲಾ-ಕಾಲೇಜು, ಶಿಕ್ಷಣ ಮತ್ತು ಅನುಭವಗಳಂತೆಯೇ ಯಾತ್ರೆಯೂ ಹಲವು ಪಾಠಗಳನ್ನು ಕಲಿಸುತ್ತದೆ. ಬೃಹತ್ ನಗರಗಳಿಂದ ಶಾಂತವಾದ ಸಾಗರದ ತೀರದವರೆಗೆ, ಮರುಭೂಮಿಯಿಂದ ಗುಡ್ಡೆಕಾಡುಗಳ ವರೆಗಿನ ಯಾತ್ರೆಯು ಜೀವನದಲ್ಲಿ ಶಾಶ್ವತವಾದ ನೆನಪುಗಳನ್ನು ಸೃಷ್ಟಿಸಿ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಯಾತ್ರೆಯು ನಮ್ಮ ಉಪಬೋಧ ಮನಸ್ಸಿನಲ್ಲಿ ಜೀವನದಾದ್ಯಂತ ಒಂದು ಉತ್ತಮ ನೆನಪಾಗಿ ಉಳಿಯುತ್ತದೆ.
“ಅವನು ಸೃಷ್ಟಿಯ ಆರಂಭ ಹೇಗೆ ಮಾಡಿರುತ್ತಾನೆಂಬುದನ್ನು ಭೂಮಿಯ ಮೇಲೆ ಸಂಚರಿಸಿ ನೋಡಿರಿ.” (ಪವಿತ್ರ ಕುರ್ಆನ್ 29:20)
ನಾವು ಹಜ್ಜ್, ಉಮ್ರಾದಂತಹ ಧಾರ್ಮಿಕ ಆರಾಧನೆಯ ಯಾತ್ರೆ. ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರ, ಚಿಕಿತ್ಸೆ, ಬಂಧು-ಮಿತ್ರರನ್ನು ಭೇಟಿಯಾಗಲು, ಸಮುದ್ರ ಕಿನಾರೆ, ಅತ್ಯಾಕರ್ಷಕ ನಗರ, ತಂಪಾದ ಪರಿಸರ, ಹೂತೋಟ, ಸಮ್ಮೇಳನ, ಪುಸ್ತಕ ಮೇಳ, ಮದುವೆ, ಮರಣ, ಗೃಹಪ್ರವೇಶದಂತಹ ಸಂತೋಷ ಹಾಗೂ ದುಃಖದಲ್ಲಿ ಭಾಗವಹಿಸುವ ಸಲುವಾಗಿ ಕೆಲವೊಮ್ಮೆ ಸುದೀರ್ಘ ಯಾತ್ರೆಯನ್ನು ನಡೆಸುತ್ತೇವೆ. ಅನೇಕ ಸಂದರ್ಭಗಳಲ್ಲಿ ತಂದೆ-ತಾಯಿಯರನ್ನು ಕಾಣಲು ಮಕ್ಕಳು ಮತ್ತು ಮಕ್ಕಳನ್ನು ಕಾಣಲು ತಂದೆ ತಾಯಿಯವರು, ಸಹೋದರರು ಮತ್ತು ಸಹೋದರರಿಯರು ಪರಸ್ಪರ ಭೇಟಿಯಾಗಲು ಬಹಳ ದೂರದಿಂದ ಯಾತ್ರೆ ಮಾಡಿ ಬರುತ್ತಾರೆ.
ಯಾತ್ರೆಯು ಇಸ್ಲಾಮೀ ಇತಿಹಾಸದಲ್ಲಿ ಒಂದು ಅವಿಭಾಜ್ಯ ಅಂಗವಾಗಿತ್ತು. ಆದಂ(ಅ), ಇಬ್ರಾಹೀಂ(ಅ), ಮೂಸಾ(ಅ), ಅಂತ್ಯ ಪ್ರವಾದಿ ಮುಹಮ್ಮದ್(ಸ) ವರೆಗೆ ವ್ಯಾಪಾರ, ಧರ್ಮ ಪ್ರಚಾರ ಹಾಗೂ ವಲಸೆ ಎಂದು ಹಲವು ಯಾತ್ರೆಗಳನ್ನು ಮಾಡಿದ್ದರು. ಪಂಡಿತರು ಮತ್ತು ಪ್ರವಾದಿಯ ಅನುಚರರು ಹೊಸ ಹೊಸ ವಿಷಯಗಳನ್ನು ಕಲಿಯಲು, ಧರ್ಮ ಪ್ರಚಾರ ಮಾಡಲು ಬೇರೆ ಬೇರೆ ಪ್ರದೇಶಗಳಿಗೆ ಯಾತ್ರೆ ಮಾಡಿದ್ದರು. ಮೂವರು ಯಾತ್ರೆ ಮಾಡುವಾಗ ಒಬ್ಬರನ್ನು ನಾಯಕನನ್ನಾಗಿ ಮಾಡಬೇಕೆಂದು ಪ್ರವಾದಿ ಮುಹಮ್ಮದ್(ಸ) ಆದೇಶಿಸಿದ್ದಾರೆ.
ಝಕಾತ್ನ ಪಾಲುದಾರರಲ್ಲಿ ಯಾತ್ರಿಕರನ್ನೂ ಸೇರಿಸಲಾಗಿದೆ. ಯಾತ್ರಿಕರಿಗೆ ಸುಲಭವಾಗುವಂತೆ ನಮಾಝನ್ನು ಕಸ್ರ್ ಮಾಡುವ (ಕಡಿತಗೊಳಿಸುವ) ಹಾಗೂ ಎರಡು ಕಡ್ಡಾಯ ನಮಾಝ್ ಗಳನ್ನು ಒಟ್ಟಿಗೆ ನಿರ್ವಹಿಸುವ, ನೀರು ಸಿಗದಿರುವಾಗ ತಯಮ್ಮುಮ್ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಪವಿತ್ರ ರಂಝಾನ್ ತಿಂಗಳ ಕಡ್ಡಾಯ ಉಪ ವಾಸಗಳನ್ನು ಬೇರೆ ಸಮಯದಲ್ಲಿ ಆಚರಿಸುವ ಅವಕಾಶವನ್ನೂ ನೀಡಲಾಗಿದೆ.
“ನಿಮಗಾಗಿ ಭೂಮಿಯನ್ನು ಅಧೀನ ಗೊಳಿಸಿದವನು ಅವನೇ. ಅದರ ಎದೆಯ ಮೆಲೆ ನಡೆದಾಡಿರಿ.” (ಪವಿತ್ರ ಕುರ್ಆನ್- 67:15)
ನದಿ, ಸಮುದ್ರ ಕಿನಾರೆ, ಬೆಟ್ಟ ಗುಡ್ಡೆಗಳಲ್ಲಿ ಸೂರ್ಯೋದಯ, ಸೂರ್ಯಾಸ್ತಮಾನ ನೋಡುತ್ತಾ ಶುದ್ಧ ಗಾಳಿಯಲ್ಲಿ ಪ್ರಕೃತಿಯೊಂದಿಗೆ ಸಮಯ ಕಳೆಯುವಾಗ ಮೆದುಳಿನಲ್ಲಿ ಸಂತೋಷದ ಹಾರ್ಮೋನ್ ಎನ್ಡೋರ್ಫಿನ್ ಬಿಡುಗಡೆಯಾಗುತ್ತದೆ. ಜನರನ್ನು ಭೇಟಿಯಾಗುವಾಗ, ನಗು ನಗುತ್ತಾ ಮಾತನಾಡುತ್ತಾ ಸಮಯ ಕಳೆಯುವಾಗ ಮೆದುಳಿನಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಹಚ್ಚಹಸಿರು ಮರ, ಹೂಬಳ್ಳಿಗಳ ಉದ್ಯಾನ, ಜಲಪಾತ, ಘಟ್ಟ ಪ್ರದೇಶಗಳ ತಿರುವು ಮುರುವು ರಸ್ತೆಗಳಲ್ಲಿ ತಂಪಾದ ಮಂಜು ತುಂಬಿದ ಹವಾಮಾನಗಳಲ್ಲಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ, ಸೃಷ್ಟಿಕರ್ತನ ಮಹಿಮೆಯನ್ನು ನೋಡುತ್ತಾ ಸ್ತುತಿಸುತ್ತಾ ಹೊಸ ಹೊಸ ಪ್ರದೇಶಗಳನ್ನು ಚಲಿಸುವಾಗ ಮಾನಸಿಕ ಒತ್ತಡ, ಚಿಂತೆ, ಆತಂಕ ಕಡಿಮೆಯಾಗುತ್ತದೆ.
ಮನಸ್ಸಿನಲ್ಲಿರುವ ದುಃಖ, ಕಷ್ಟ, ನಷ್ಟಗಳನ್ನು ಮರೆಯುವಂತೆ ಮಾಡುತ್ತದೆ. ದಿನನಿತ್ಯ ಫ್ಲಾಟ್ಗಳ ಕೋಣೆಗಳಲ್ಲಿ ಸೆರೆಯಾಗಿರುವವರು, ಆಫೀಸ್ನ ಕಂಪ್ಯೂಟರ್ ತೆರೆಯ ಮುಂದೆ ದಿನಗಳನ್ನು ಕಳೆಯುವ ವರು ಹತ್ತಿರದ ಉದ್ಯಾನವನದ ಹಸಿರಿನ ತೋಟಗಳಲ್ಲಿ, ನದಿಯ ತೀರದಲ್ಲಿ, ಕಡಲ ಕಿನಾರೆಯಲ್ಲಿ ಹಚ್ಚ ಹಸಿರು ಹುಲ್ಲಿನ ಮೇಲೆ, ಮರಗಳ ನೆರಳಿನಡಿ ಯಲ್ಲಿ, ಮಣ್ಣಿನ ಸುವಾಸನೆಯ ಮಧ್ಯೆ ಸಮಯವನ್ನು ಕಳೆಯಬೇಕು. ಮನುಷ್ಯ ನಿರ್ಮಿತ ಕಟ್ಟಡ, ಹೆದ್ದಾರಿ, ವಾಸ್ತುಶಿಲ್ಪ, ಬೇರೆ ಬೇರೆ ರೀತಿಯ ಆಹಾರ, ಹಣ್ಣು ಹಂಪಲು, ಪಾರಂಪರಿಕ ಗ್ರಾಮ ಹೀಗೆ ಬೇರೆ ಬೇರೆ ಪ್ರದೇಶಗಳಿಗೆ ಬಸ್ಸು, ಕಾರು, ವಿಮಾನ, ರೈಲು, ಸಮುದ್ರ ಯಾನ ಮಾಡುವಾಗ ಸಿಗುವ ಅನುಭವ ಬೇರೆಯೇ ಆಗಿರುತ್ತದೆ.
ಮಕ್ಕಳಿಗೆ ಮೊಬೈಲ್, ಟಾಬ್ ಹಾಗೂ ಕಂಪ್ಯೂಟರ್ನಂತಹ ಯಾಂತ್ರಿಕ ಲೋಕದಿಂದ ಹೊರಬಂದು ನೈಜ ಜಗತ್ತಿನ ವಿಸ್ಮಯಗಳನ್ನು ಕಂಡು ಆಹ್ಲಾದಿಸಲು ಸಹಕಾರಿಯಾಗುತ್ತದೆ. ಬೇರೆ ಬೇರೆ ನಗರಗಳ ಮಾರುಕಟ್ಟೆಗಳ ಸಮೀಕ್ಷೆ ನಡೆಸುತ್ತಾ, ಸೋಲು ವಿಜಯಗಳ ಬಗ್ಗೆ ಅಧ್ಯಯನ ನಡೆಸುವಾಗ ಮಕ್ಕಳಲ್ಲಿ ಹೊಸಹೊಸ ಆಲೋಚನೆಗಳು ಮೂಡಿ ಬರುವುದು. ಕೈಗಾರಿಕೋದ್ಯಮ, ಕಾರ್ಖಾನೆ, ಮೃಗಾಲಯ, ವಸ್ತು ಸಂಗ್ರಹಾಲಯ, ಹೈನುಗಾರಿಕಾ ತಾಣಗಳಿಗೆ ಭೇಟಿ, ಕಯಾಕಿಂಗ್, ರಾಫ್ಟಿಂಗ್, ಟ್ರೆಕ್ಕಿಂಗ್, ಹೈಕಿಂಗ್ ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಗುರಿಯಲ್ಲಿ ಮುಟ್ಟ ಬೇಕೆಂಬ ಭಾವನೆ ಉಂಟು ಮಾಡುತ್ತದೆ.
ಕೆಲವೊಂದು ಯಾತ್ರೆಗಳು ವ್ಯಾಪಾರದ ಹೊಸಹೊಸ ಕ್ಷೇತ್ರ, ಯೋಜನೆ, ಕಾರ್ಯತಂತ್ರಗಳನ್ನು ಪರಿಚಯಿಸುತ್ತದೆ. ಬೇರೆ ಬೇರೆ ರೀತಿಯ ಬಾಷೆ ಮತ್ತು ಸಂಸ್ಕೃತಿಯ ವ್ಯತ್ಯಾಸವನ್ನು ಗುರುತಿಸುವಂತಹ ಸಾಮರ್ಥ್ಯವನ್ನು ಪಡೆಯುತ್ತಾರೆ. ಸಹನೆ, ಸಹಿಷ್ಣುತೆ, ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ಮನೋಭಾವವನ್ನು ಪ್ರೋತ್ಸಾಹಿಸುತ್ತದೆ. ಶಾಲೆಯ ಪರೀಕ್ಷೆ, ಹೋಮ್ ವರ್ಕ್ ಹಾಗೂ ಯಾವುದೇ ಒತ್ತಡಗಳಿಲ್ಲದ ಮಾತಾಪಿತರು ಮತ್ತು ಕುಟುಂಬದ ಇತರ ಎಲ್ಲಾ ಸದಸ್ಯರೊಂದಿಗೆ ನಗುತ್ತಾ ಸಮಯ ಕಳೆಯಲು ಅವಕಾಶ ಸಿಗುತ್ತದೆ.
ಮಕ್ಕಳು ಯಾವಾಗಲೂ ವಿನೋದ, ಮನೋರಂಜನೆ ಮತ್ತು ಸಂತೋಷದ ಆಲಿಂಗನದಲ್ಲೇ ಮುಳುಗಿದ್ದರೆ, ಅವರ ಹೃದಯದಲ್ಲಿ ದುಃಖವನ್ನು ತಡೆದುಕೊಳ್ಳುವ ಶಕ್ತಿಯು ಮೊಳಕೆಯಾಗಲಾರದು. ರಜೆಯ ದಿನಗಳಲ್ಲಿ ಕೆಲವೊಮ್ಮೆ ಮನೆಯೊಳಗೆ ಕುಳಿತು ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಾ ಬೇಸರ ಮತ್ತು ನೀರಸವನ್ನು ಸಹಿಸುವ ಅನುಭವವಿರಬೇಕು.
ಯಾತ್ರೆಯು ದುಂದುವೆಚ್ಚ, ಅತಿರೇಕಕ್ಕೆ ಎಡೆಮಾಡಿಕೊಡದಂತೆ ಜಾಗರೂ ಕತೆವಹಿಸಬೇಕು. ಯಾತ್ರೆಯಲ್ಲಿ ದೇವಸ್ಮರಣೆ, ನಮಾಝ್ಗಳಿಗೆ ಆದ್ಯತೆ ನೀಡ ಬೇಕು. ಧರ್ಮಸಮ್ಮತ ಆಹಾರ ಲಭ್ಯವಿದೆಯೇ, ಹಿಜಾಬ್ ಪರ್ದಾಗಳಿಗೆ ಅವಕಾಶವಿದೆಯೆಂದು ಮೊದಲೇ ಖಚಿತಪಡಿಸಿಕೊಳ್ಳಬೇಕು. ಭೂಮಿಯ ಮೇಲೆ ಮಸ್ಜಿದುಲ್ ಹರಾಮ್, ಮಸ್ಜಿದುನ್ನಬವಿ ಮತ್ತು ಮಸ್ಜಿದುಲ್ ಅಕ್ಸಾದ ಹೊರತು ಇತರ ಯಾವುದೇ ಮಸೀದಿಗಳಿಗೆ ಪ್ರಯಾಣ ಬೆಳೆಸುವುದು ಪುಣ್ಯಕರ್ಮವಲ್ಲ. ಆದರೆ ಯಾವುದಾದರೂ ಹೊಸ ಪ್ರದೇಶಗಳಿಗೆ ಹೋದಾಗ ನಮಾಝ್ನ ಸಮಯದಲ್ಲಿ ಸ್ಥಳೀಯ ಮಸೀದಿಗಳಿಗೆ ಭೇಟಿ ನೀಡಬೇಕು. ಹೊಸ ಹೊಸ ಜನರನ್ನು ಭೇಟಿಯಾಗಲು, ಬೇರೆ ಬೇರೆ ಸ್ಥಳಗಳಲ್ಲಿ ಅಲ್ಲಾಹನಿಗೆ ಸಾಷ್ಟಾಂಗವೆರಗಲು ಅವಕಾಶ ಸಿಗುತ್ತದೆ. ಮಸೀದಿಯ ವಾಸ್ತಿಶಿಲ್ಪ, ಮಿನಾರ, ಗುಮ್ಮಟ, ಸ್ಥಳೀಯ ಸಂಸ್ಕೃತಿ ಬೇರೆ ಬೇರೆ ರೀತಿಯಾಗಿರುತ್ತದೆ.
“ಇವರ ಹೃದಯಗಳು ಗ್ರಹಿಸುವಂತಾಗಲು ಅಥವಾ ಇವರ ಕಿವಿಗಳು ಆಲಿಸುವಂತಾಗಲು ಇವರು ಭೂಮಿಯಲ್ಲಿ ಸಂಚರಿಸಲಿಲ್ಲವೇ?” (ಪವಿತ್ರ ಕುರ್ಆನ್- 22:46)
ನಾವು ನಮ್ಮ ಮಕ್ಕಳೊಂದಿಗಿನ ವಿನೋದ ಯಾತ್ರೆಯಲ್ಲಿ ಪ್ರಾಯವಾದವರನ್ನೂ ಕರೆದುಕೊಂಡು ಹೋಗಬೇಕು. ಅವರಿಗೆ ತಮ್ಮ ಗತಕಾಲದ ಸ್ಮೃತಿ ಮತ್ತು ಸ್ಮರಣೆಗಳನ್ನು ಮೆಲುಕು ಹಾಕುತ್ತಾ ಮಾತನಾಡಲು ಅವಕಾಶ ಸಿಗುತ್ತದೆ. ಅವರ ಬಾಲ್ಯಕಾಲದ ಗೆಳೆಯರೊಂದಿಗೆ ಸಂವಾದ ನಡೆಸುಲು ಸುವರ್ಣ ಅವಕಾಶಗಳನ್ನು ನೀಡಬೇಕು. ಕುಟುಂಬ ಸಮ್ಮಿಲನದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ, ಸಹೋದರ ಸಹೋದರಿಯರೊಂದಿಗೆ ಕೈಹಿಡಿದು ನಗುವುದಕ್ಕೂ, ಗಟ್ಟಿಯಾಗಿ ಆಲಿಂಗನ ಮಾಡಿ ಆನಂದ ಬಾಷ್ಪ ಹಾರಿಸಲಿಕ್ಕೂ, ದುಃಖದ ಸನ್ನಿವೇಶಗಳನ್ನು ನೆನೆಪಿಸುತ್ತಾ ಕಣ್ಣೀರು ಹರಿಸುವುದಕ್ಕೂ, ಮನಸ್ಸು ತೆರೆದು ಬೆರೆಯಲು ಮುಕ್ತ ಅವಕಾಶಗಳನ್ನು ಕಲ್ಪಿಸಬೇಕು.
ಇದರಿಂದ ಅವರ ನೆನಪಿನ ಶಕ್ತಿಯು ಉಜ್ಜಲವಾಗಿ ಬೆಳಗುತ್ತದೆ, ಆರೋಗ್ಯವು ಹೊಸ ಜೀವತುಂಬಿ ಎದ್ದು ನಿಲ್ಲುತ್ತದೆ. ಕೈಕಾಲು ದುರ್ಬಲವಾಗಿದೆ, ಶರೀರದಲ್ಲಿ ನೋವಿದೆ ಎಂದು ಮನೆಯಲ್ಲಿಯೇ ಕೂರಿಸಿದರೆ ಅವರು ಮೂಲೆಗೆ ಸೇರಿಹೋಗುತ್ತಾರೆ. ಬದಲಿಗೆ ಯಾತ್ರೆಯ ಹೊಸ ವಾತಾವರಣ, ಬದಲಾದ ಹವಾಮಾನ ಅವರಲ್ಲಿ ಹೊಸ ಹುರುಪು ಮತ್ತು ಉತ್ಸಾಹವನ್ನು ತುಂಬ ಬಹುದು. ಅವರ ಕಣ್ಣುಗಳಲ್ಲಿ ಮರೆಯುತ್ತಿರುವ ಗತಕಾಲದ ಚಿತ್ರಗಳನ್ನು ಮಾತಿನ ಮಧುರ ಸ್ಪರ್ಶದಿಂದ ಮತ್ತೊಮ್ಮೆ ಜೀವಂತಗೊಳಿಸುತ್ತದೆ. ಯಾತ್ರೆಯು ಅವರ ದಾರಿಯಲ್ಲಿ ಕಣ್ಣೀರು ನಗುವಾಗಲಿ, ನಗುವು ನೆನಪಾಗಲಿ, ನೆನಪು ಜೀವನವಾಗಲಿ. ಅವರ ಶಾರೀರಿಕ ನೋವನ್ನು ಮರೆಯಲು, ಮನಸ್ಸನ್ನು ತುಂಬಲು ಇದೊಂದು ಅತ್ಯುತ್ತಮ ಮಾರ್ಗವಾಗಿದೆ.
ಕೆಲವೊಮ್ಮೆ ಒಂಟಿಯಾಗಿ, ಮಾತಾಪಿತರೊಂದಿಗೆ, ಪತ್ನಿ ಮಕ್ಕಳೊಂದಿಗೆ, ಸಹೋದರ ಸಹೋದರಿ- ಅವರ ಮಕ್ಕಳೊಂದಿಗೆ, ಅತ್ತೆ ಮಾವ ಸೊಸೆ, ಗೆಳೆಯ, ಗೆಳತಿಯರೊಂದಿಗೆ, ಸಹೋದ್ಯೋಗಿ, ಶಿಕ್ಷಕರು, ಸಹಪಾಠಿಯರೊಂದಿಗೆ ಹೀಗೆ ಬೇರೆ ಬೇರೆ ಜನರೊಂದಿಗಿರುವ ಯಾತ್ರೆಯು ಬೇರೆ ಬೇರೆ ರೀತಿಯ ಅನುಭವಗಳನ್ನು ನೀಡುತ್ತದೆ. ನಮ್ಮ ಶಾಲಾದಿನಗಳಲ್ಲಿ ಸಹಪಾಠಿಗಳೊಂದಿಗೆ ನಡೆಸಿದ ಪ್ರವಾಸದ ಸವಿ ನೆನಪುಗಳು ಅದೆಷ್ಟು ಕಾಲ ಕಳೆದರೂ ನಮ್ಮ ಮನಸ್ಸಿನಲ್ಲಿ ಸದಾ ಮರುಕಳಿಸುವುದು ಅದಕ್ಕೆ ಉತ್ತಮ ಉದಾಹರಣೆಯಾಗಿದೆ.












