ಮಾನ್ವಿ ಜಮಾಅತೆ ಇಸ್ಲಾಮೀ ಹಿಂದ್ ಹಿರಿಯ ಸದಸ್ಯ ಸೈಯ್ಯದ್ ಮಹ್ಮೂದ್ ಖಾದ್ರಿ ಸಾಹೇಬರು ಈಗ ನೆನಪು ಮಾತ್ರ

0
542

✍️ ಮುಹಮ್ಮದ್ ರಝಾ ಮಾನ್ವಿ, ಭಟ್ಕಳ

ಜಮಾಅತೆ ಇಸ್ಲಾಮಿ ಹಿಂದ್ ಮಾನ್ವಿ ಘಟಕದ ಹಿರಿಯ ಸದಸ್ಯರು, ಮಾರ್ಗದರ್ಶಕರು ಮತ್ತು ನಮ್ಮೆಲ್ಲರಿಗೂ ಆತ್ಮೀಯರಾದ ಸೈಯ್ಯದ್ ಮಹ್ಮೂದ್ ಖಾದ್ರಿ ಸಾಹೇಬರ ನಿಧನ ವಾರ್ತೆ ನನ್ನ ಮನಸ್ಸಿಗೆ ತೀವ್ರ ದುಃಖವನ್ನುಂಟು ಮಾಡಿತು.

ಜೀವನದಲ್ಲಿ ಕೆಲವು ವ್ಯಕ್ತಿತ್ವಗಳು ಕೇವಲ ಹುದ್ದೆಗಳಿಂದ ದೊಡ್ಡವರಾಗುವುದಿಲ್ಲ; ಅವರ ನಿಷ್ಠೆ, ತ್ಯಾಗ ಮತ್ತು ಅಚಲವಾದ ನಿಲುವಿನಿಂದಲೇ ಅವರು ಮಹತ್ವ ಪಡೆದಿರುತ್ತಾರೆ. ಸೈಯ್ಯದ್ ಮಹ್ಮೂದ್ ಖಾದ್ರಿ ಸಾಹೇಬರು ಅಂಥವರಲ್ಲೊಬ್ಬರು.

ಸುಮಾರು 88 ವರ್ಷಗಳ ಸುದೀರ್ಘ ಜೀವನಯಾನವನ್ನು ಪೂರೈಸಿದ ಅವರು, ತಮ್ಮ ಕೊನೆಯ ಉಸಿರಿನವರೆಗೂ ದೇವನ ಮಾರ್ಗದಲ್ಲಿ ಸೇವೆ ಸಲ್ಲಿಸಿದ ಧೀಮಂತ ವ್ಯಕ್ತಿತ್ವದವರಾಗಿದ್ದರು. ಪವಿತ್ರ ರಮಝಾನ್ ಮಾಸದ ಸೌಭಾಗ್ಯಕರ ದಿನಗಳಲ್ಲಿ ಅವರು ತಮ್ಮ ಸೃಷ್ಟಿಕರ್ತನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿರುವುದು, ಒಂದು ಅರ್ಥದಲ್ಲಿ ಅವರ ಜೀವನಪೂರ್ಣ ಭಕ್ತಿಗೆ ದೊರೆತ ಗೌರವವೇ ಸರಿ.

ಮಾನ್ವಿ ಜಮಾಅತೆ ಇಸ್ಲಾಮಿ ಹಿಂದ್ ಘಟಕದ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಅವರು ಸಲ್ಲಿಸಿದ ಸೇವೆ ಮರೆಯಲಾಗದು. ಜಮಾಅತ್‌ನ ಆರಂಭದ ದಿನಗಳಲ್ಲಿ ಸಮಾಜದಲ್ಲಿ ಸಂಘಟನೆಯ ಬಗ್ಗೆ ಅನೇಕ ತಪ್ಪು ಕಲ್ಪನೆಗಳು, ಅನುಮಾನಗಳು ಮತ್ತು ವಿರೋಧಗಳಿದ್ದವು. ಅಂತಹ ಸನ್ನಿವೇಶದಲ್ಲಿ ಧೈರ್ಯದಿಂದ ಮುಂಚೂಣಿಗೆ ಬಂದು, ಪ್ರತಿಯೊಂದು ಸವಾಲನ್ನೂ ಸಮಾಧಾನದಿಂದ ಎದುರಿಸಿ, ಸಂಘಟನೆಯನ್ನು ವಿಸ್ತರಿಸುವಲ್ಲಿ ಅವರು ತೋರಿದ ಶ್ರಮ ಮತ್ತು ಬದ್ಧತೆ ನಿಜಕ್ಕೂ ಅನನ್ಯವಾದುದು. ಅವರ ಕಾರ್ಯಪದ್ಧತಿ ಕಠಿಣವಾಗಿರಲಿಲ್ಲ; ಆದರೆ ಸ್ಪಷ್ಟವಾಗಿತ್ತು. ಅವರ ಮಾತು ಗಂಭೀರವಾಗಿರಲಿಲ್ಲ; ಆದರೆ ಪರಿಣಾಮಕಾರಿಯಾಗಿತ್ತು.

ನಾನು ಅವರನ್ನು ಬಹಳ ಹತ್ತಿರದಿಂದ ಕಂಡಿರುವೆ. 1990ರ ದಶಕದಲ್ಲಿ ನಾನು ಮಾನ್ವಿಯಲ್ಲಿ ಎಸ್.ಐ.ಓ ವಿದ್ಯಾರ್ಥಿ ಸಂಘಟನೆಯ ಆರಂಭಿಕ ಹಂತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ, ಅವರ ಭಾಷಣಗಳು ನನ್ನಂತಹ ಅನೇಕ ಯುವಕರನ್ನು ರೂಪಿಸಿದವು. ಅವರು ಮಾತನಾಡುವಾಗ ಗಂಭೀರ ಚಿಂತನೆಗಳನ್ನು ಹಾಸ್ಯದ ಸೊಗಡಿನಲ್ಲಿ ಹೇಳುತ್ತಿದ್ದರು. ಯುವಕರ ಮನಸ್ಸಿಗೆ ತಲುಪುವ ಭಾಷೆ ಅವರಿಗಿತ್ತು. ಅವರು ತರಬೇತುಗೊಳಿಸಿದ ವಿದ್ಯಾರ್ಥಿಗಳು ಕೇವಲ ಸಂಘಟನೆಯ ಕಾರ್ಯಕರ್ತರಾಗಲಿಲ್ಲ; ಸಮಾಜದ ಹೊಣೆಗಾರ ನಾಗರಿಕರಾಗಲು ಪ್ರೇರಿತರಾದರು.

“ಗುರು” ಮನೆತನವೆಂದು ಖ್ಯಾತಿಯಲ್ಲಿದ್ದ ಅವರ ಕುಟುಂಬ ಪರಂಪರೆಯಲ್ಲಿ ಅನೇಕ ಔಲಿಯಾಗಳು ಆಗಿಹೋಗಿದ್ದಾರೆ. ದರ್ಗಾ ಸಂಸ್ಕೃತಿಯಲ್ಲಿ ಬೆಳೆದ ಅವರು, ಜಮಾಅತ್ ಸಾಹಿತ್ಯ ಮತ್ತು ದಿವಂಗತ ಮೌಲಾನ ಸಿರಾಜುಲ್ ಹಸನ್ ಸಾಹೇಬರ ಚಿಂತನೆಗಳಿಂದ ಪ್ರಭಾವಿತರಾಗಿ, ತಮ್ಮ ಮನೆತನದ ಅನೇಕ ಆಚರಣೆಗಳನ್ನು ಹಿಂದೆ ಬಿಟ್ಟು ಜಮಾಅತ್ ವಲಯಕ್ಕೆ ಸೇರ್ಪಡೆಯಾದರು. ಅದು ಸುಲಭದ ನಿರ್ಧಾರವಾಗಿರಲಿಲ್ಲ. ತಮ್ಮ ಜಮಾಅತ್ ಪ್ರವೇಶದಿಂದ ಕುಟುಂಬ ಮತ್ತು ಮನೆತನದ ತೀವ್ರ ವಿರೋಧವನ್ನು ಎದುರಿಸಬೇಕಾಯಿತು ಎಂದು ಅವರು ಸ್ವತಃ ಹೇಳಿಕೊಂಡಿರುವುದು ನನಗೆ ಇನ್ನೂ ಸ್ಪಷ್ಟವಾಗಿ ನೆನಪಿದೆ. ಆದರೆ ಸತ್ಯವೆಂದು ನಂಬಿದ ಮಾರ್ಗದಲ್ಲಿ ನಿಲ್ಲುವ ಧೈರ್ಯ ಅವರಿಗಿತ್ತು.

ಅವರ ಜಮಾಅತ್ ಪ್ರವೇಶವು ಮಾನ್ವಿ ನಗರದಲ್ಲಿ ಸಂಘಟನೆಗೆ ನೂರು ಆನೆಯ ಬಲ ನೀಡಿದಂತಾಯಿತು ಎಂಬ ಮಾತು ಅತಿಶಯೋಕ್ತಿಯಲ್ಲ. ಸಂಘಟನೆಯನ್ನು ತಾಲೂಕು ಮಟ್ಟದಲ್ಲಿ ಬೇರೂರಿಸಿ ಬೆಳೆಸಿದ ಶ್ರೇಯಸ್ಸು ಬಹುಮಟ್ಟಿಗೆ ಅವರಿಗೆ ಸಲ್ಲುತ್ತದೆ. ಅವರು ಹುದ್ದೆಗೆ ಗೌರವ ತಂದವರು; ಹುದ್ದೆಯಿಂದ ಗೌರವ ಪಡೆದವರು ಅಲ್ಲ.

ಇಂದು ಅವರು ನಮ್ಮ ನಡುವೆ ಇಲ್ಲ. ಆದರೆ ಅವರು ಬಿತ್ತಿದ ಮೌಲ್ಯಗಳು, ರೂಪಿಸಿದ ಕಾರ್ಯಕರ್ತರು ಮತ್ತು ಬಲಪಡಿಸಿದ ಸಂಘಟನೆ ಅವರ ಸ್ಮೃತಿಯನ್ನು ಜೀವಂತವಾಗಿಟ್ಟುಕೊಳ್ಳುತ್ತವೆ. ಅವರ ಜೀವನ ನಮಗೆ ತ್ಯಾಗದ ಪಾಠ ಹೇಳುತ್ತದೆ; ನಿಷ್ಠೆಯ ಮಹತ್ವ ತಿಳಿಸುತ್ತದೆ; ಸತ್ಯಕ್ಕಾಗಿ ನಿಲ್ಲುವ ಧೈರ್ಯ ಕಲಿಸುತ್ತದೆ.

ಅಲ್ಲಾಹನು ಅವರ ದೀರ್ಘಕಾಲದ ಸೇವೆಯನ್ನು ಸ್ವೀಕರಿಸಲಿ. ಅವರಿಗೆ ಜನ್ನತುಲ್ ಫಿರ್ದೌಸ್‌ನಲ್ಲಿ ಉನ್ನತ ಸ್ಥಾನ ನೀಡಲಿ. ಅವರ ಕುಟುಂಬದವರಿಗೆ ಮತ್ತು ಅವರನ್ನು ಪ್ರೀತಿಸಿದ ಎಲ್ಲರಿಗೂ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಇನ್ನಾ ಲಿಲ್ಲಾಹಿ ವ ಇನ್ನಾ ಇಹಿ ರಾಜಿವೂನ್.