ವಿದ್ಯಾರ್ಥಿಗಳ ತಮಾಷೆ ವಿಕೋಪಕ್ಕೆ: ಶಿಕ್ಷಕನ ದುರಂತ ಅಂತ್ಯ

0
660

ಸನ್ಮಾರ್ಗ ವಾರ್ತೆ

ಜಾರ್ಜಿಯಾ: ಅಮೆರಿಕಾದಲ್ಲಿ ವಿದ್ಯಾರ್ಥಿಗಳು ಮಾಡಿದ ತಮಾಷೆಯ ಸಂದರ್ಭದಲ್ಲಿ ವಾಹನ ಡಿಕ್ಕಿಯಾಗಿ ಶಿಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ. ಹೈಸ್ಕೂಲ್ ಶಿಕ್ಷಕ ಜೇಸನ್ ಹ್ಯೂಸ್ (40) ಮೃತಪಟ್ಟವರು. ಈ ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ವಿದ್ಯಾರ್ಥಿಗಳು ಶೌಚಾಲಯದ ಪೇಪರ್ (Toilet paper), ಮೊಟ್ಟೆ ಮತ್ತು ಇತರ ಆಹಾರ ಪದಾರ್ಥಗಳನ್ನು ಬಳಸಿ ಇತರರ ಮನೆಗಳ ಮೇಲೆ ‘ದಾಳಿ’ ಮಾಡುವ ತಮಾಷೆಯಾಟ (Prank) ಪ್ರತಿ ವರ್ಷ ನಡೆಯುತ್ತದೆ. ಇದೇ ಉದ್ದೇಶಕ್ಕಾಗಿ ವಿದ್ಯಾರ್ಥಿಗಳ ಗುಂಪು ಶಿಕ್ಷಕರ ಮನೆಗೆ ಬಂದಿತ್ತು. ರಾತ್ರಿ ಸುಮಾರು 11.40ರ ಸುಮಾರಿಗೆ ಶಿಕ್ಷಕರು ತಮ್ಮ ಮನೆಯ ಹೊರಗೆ ವಿದ್ಯಾರ್ಥಿಗಳನ್ನು ಕಂಡಿದ್ದಾರೆ. ವಿದ್ಯಾರ್ಥಿಗಳು ಮನೆಯ ಸುತ್ತಲೂ ಶೌಚಾಲಯದ ಪೇಪರ್ ಹರಡುತ್ತಿರುವುದನ್ನು ನೋಡಿ, ಜೇಸನ್ ಅವರ ಬಳಿಗೆ ಹೋದರು. ಈ ವೇಳೆ ವಿದ್ಯಾರ್ಥಿಗಳು ವಾಹನದಲ್ಲಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಆ ಸಂದರ್ಭದಲ್ಲಿ ಶಿಕ್ಷಕರಿಗೆ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದಾರೆ. 18 ವರ್ಷದ ಜೇಡನ್ ವ್ಯಾಲೇಸ್ ಚಲಾಯಿಸುತ್ತಿದ್ದ ಪಿಕಪ್ ಟ್ರಕ್ ಶಿಕ್ಷಕರಿಗೆ ಡಿಕ್ಕಿ ಹೊಡೆದಿದೆ. ವಿದ್ಯಾರ್ಥಿಗಳು ಜೇಸನ್ ಹ್ಯೂಸ್ ಅವರನ್ನು ಉಳಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ವಾಹನ ಡಿಕ್ಕಿಯಾಗಿ ಶಿಕ್ಷಕರು ಸಾವನ್ನಪ್ಪಿದ ನಂತರ, ಪೊಲೀಸರು ವಿದ್ಯಾರ್ಥಿಯ ಮೇಲೆ ‘ನರಹತ್ಯೆ’ (Manslaughter) ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ.

ಈ ಘಟನೆ ನಡೆಯುವ ಮೊದಲು, ಮನೆಗಳಿಗೆ ಮತ್ತು ವ್ಯಕ್ತಿಗಳಿಗೆ ಹಾನಿ ಉಂಟುಮಾಡುವ ಇಂತಹ ತಮಾಷೆಗಳನ್ನು ಈ ವರ್ಷದಿಂದ ಅನುಮತಿಸಲಾಗುವುದಿಲ್ಲ ಮತ್ತು ಇಂತಹ ಕೃತ್ಯಗಳಲ್ಲಿ ತೊಡಗಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಲಾ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೆ ವಿದ್ಯಾರ್ಥಿಗಳು ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿ ತಮಾಷೆಯಾಟ ಮುಂದುವರಿಸಿದ್ದರು.