ಬಳ್ಳಾರಿ: ಖಾಸಗಿ ವಸತಿ ಶಾಲೆಯಲ್ಲಿ ಸಹಪಾಠಿಗಳ ಮೇಲೆ ವಿದ್ಯಾರ್ಥಿಯಿಂದ ಮಾರಣಾಂತಿಕ ದಾಳಿ, ಓರ್ವ ಸಾವು

0
678

ಸನ್ಮಾರ್ಗ ವಾರ್ತೆ

ಬಳ್ಳಾರಿ: ನಗರದ ತಾಳೂರು ರಸ್ತೆಯಲ್ಲಿರುವ ಖಾಸಗಿ ವಸತಿ ಶಾಲೆಯಲ್ಲಿ ಶನಿವಾರ ತಡರಾತ್ರಿ ಭೀಕರ ಘಟನೆಯೊಂದು ನಡೆದಿದ್ದು, 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ. ಈ ಘಟನೆಯಲ್ಲಿ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಸಮ್ಮತಗೇರಿ ಗ್ರಾಮದ ಡಿ.ಹೇಮಂತ್ ಎಂಬ ಬಾಲಕ ಮೃತಪಟ್ಟಿದ್ದು, ಓರ್ವ ಬಾಲಕಿ ಸೇರಿದಂತೆ ಏಳು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ ಒಬ್ಬ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದ್ದು, ಎಲ್ಲರಿಗೂ ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಬಾಲಕ ಬಳ್ಳಾರಿಯ ಗೋನಾಳು ಗ್ರಾಮದವನಾಗಿದ್ದು, ಕೃತ್ಯದ ಬಳಿಕ ಪರಾರಿಯಾಗಿದ್ದಾನೆ. ಈತ ರಾಡ್, ಚಾಕು ಮತ್ತು ತೆಂಗಿನಕಾಯಿ ಸುಲಿಯುವ ಸಾಧನದಿಂದ ಏಕಾಏಕಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ವಿವರ: ಶನಿವಾರ ರಾತ್ರಿ 10.15ರ ಸುಮಾರಿಗೆ ಹಾಸ್ಟೆಲ್‌ನಲ್ಲಿ ಎಲ್ಲರೂ ಊಟ ಮುಗಿಸಿ ಮಲಗಿದ್ದಾಗ ಈ ಕ್ರೌರ್ಯ ನಡೆದಿದೆ. ಹೇಮಂತ್, ಆರೋಪಿ ಬಾಲಕ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳು ಒಂದೇ ಕಡೆ ಮಲಗಿದ್ದರು. ಈ ವೇಳೆ ಆರೋಪಿ ಏಕಾಏಕಿ ದಾಳಿ ನಡೆಸಿದ್ದು, ಅಡ್ಡ ಬಂದ ವಾರ್ಡನ್ ಬ್ಲೆಸಿ ಅವರ ಮೇಲೂ ಹಲ್ಲೆ ಮಾಡಿದ್ದಾನೆ. ಹಾಸ್ಟೆಲ್ ಒಳಗೆ ಸಿಸಿಟಿವಿ ಕೆಮರಾಗಳು ಇಲ್ಲದ ಕಾರಣ ಘಟನೆಯ ನಿಖರ ದೃಶ್ಯಗಳು ಲಭ್ಯವಿಲ್ಲ, ಆದರೆ ಆರೋಪಿ ಪರಾರಿಯಾಗುತ್ತಿರುವುದು ಹೊರಗಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆಡಳಿತ ಮಂಡಳಿಯ ವೈಫಲ್ಯ: ಮೃತ ಬಾಲಕನ ತಂದೆ ಹಾಗೂ ವಕೀಲ ಲಕ್ಷ್ಮೀಕಾಂತ ಅವರು ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “15 ವರ್ಷದ ಬಾಲಕ ಇಷ್ಟು ಕ್ರೂರವಾಗಿ ದಾಳಿ ಮಾಡಲು ಆತ ಮಾದಕ ವ್ಯಸನಿಯಾಗಿರಬಹುದು ಎಂಬ ಅನುಮಾನವಿದೆ. ಇಷ್ಟು ಮಾರಕಾಸ್ತ್ರಗಳು ಆತನಿಗೆ ಸಿಕ್ಕಿರುವುದು ಶಾಲಾ ಆಡಳಿತ ಮಂಡಳಿಯ ದೊಡ್ಡ ವೈಫಲ್ಯ” ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಸದರಿ ವಸತಿ ಶಾಲೆಗೆ ಶಿಕ್ಷಣ ಇಲಾಖೆಯ ಅನುಮತಿ ಇರಲಿಲ್ಲ ಎಂದು ಡಿಡಿಪಿಐ ಉಮಾದೇವಿ ಹೇಳಿರುವುದಾಗಿ ವರದಿಯಾಗಿದೆ.

ಮೃತ ಬಾಲಕನ ತಂದೆಯ ದೂರಿನನ್ವಯ ಆರೋಪಿ ಬಾಲಕ ಮತ್ತು ಶಾಲಾ ಆಡಳಿತ ಮಂಡಳಿಯ ವಿರುದ್ಧ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗೆ ಐವರು ಇನ್ಸ್‌ಪೆಕ್ಟರ್‌ಗಳು ಹಾಗೂ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳನ್ನೊಳಗೊಂಡ 7 ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ ತಿಳಿಸಿರುವುದಾಗಿ ವರದಿಯಾಗಿದೆ.