ಸನ್ಮಾರ್ಗ ವಾರ್ತೆ
ಕೇರಳದಲ್ಲಿ ಅಸೆಂಬ್ಲಿ ಚುನಾವಣೆ ಹತ್ತಿರವಾಗಿದ್ದು ಮುಸ್ಲಿಮರು ಮತ್ತು ಕ್ರೈಸ್ತರನ್ನು ತಲುಪುವ ಮತ್ತು ಅವರೊಂದಿಗೆ ಸಂಬಂಧವನ್ನು ಸ್ಥಾಪಿಸುವ ಯೋಜನೆಯನ್ನು ಆರ್ಎಸ್ಎಸ್ ಬಹಿರಂಗಪಡಿಸಿದೆ. ಆರ್ಎಸ್ಎಸ್ನ ರಾಷ್ಟ್ರೀಯ ಪ್ರತಿನಿಧಿ ಸಭೆಯು ಹರಿಯಾಣದಲ್ಲಿ ನಡೆಯುತ್ತಿದ್ದು ಡಾ. ಮೋಹನ್ ಭಾಗವತ್ ಅವರು ಸಭೆಯನ್ನು ಉದ್ಘಾಟಿಸಿದ್ದಾರೆ.
ಕೇರಳದಲ್ಲಿ ಸಾವಿರಾರು ಮುಸ್ಲಿಮರು ಮತ್ತು ಕ್ರೈಸ್ತದೊಂದಿಗೆ ಆರ್ಎಸ್ಎಸ್ ಸಂಬಂಧವನ್ನು ಹೊಂದಿದ್ದು ಅವರು ಆರ್ ಎಸ್ ಎಸ್ನ ಈ ನಡೆಯನ್ನು ಸ್ವಾಗತಿಸಿದ್ದಾರೆ ಎಂದು ಆರ್ಎಸ್ಎಸ್ ಹೇಳಿದೆ.
ಆರ್ ಎಸ್ ಎಸ್ ಸ್ಥಾಪನೆಯಾಗಿ ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಮನೆ ಮನೆಗೆ ಭೇಟಿ ಎಂಬ ಕಾರ್ಯಕ್ರಮದ ಫಲಿತಾಂಶವನ್ನು ಮಾಧ್ಯಮದ ಜೊತೆ ಆರ್ಎಸ್ ಎಸ್ ವಕ್ತಾರ ಸಿಆರ್ ಮುಕುಂದ ಹಂಚಿಕೊಂಡಿದ್ದಾರೆ.
ಈವರೆಗೆ 10 ಕೋಟಿ ಮನೆಗೆ ಭೇಟಿ ನೀಡಲಾಗಿದ್ದು ಸುಮಾರು ನಾಲ್ಕು ಲಕ್ಷದಷ್ಟು ಗ್ರಾಮಗಳನ್ನು ಸಂದರ್ಶಿಸಲಾಗಿದೆ ಎಂದವರು ಹೇಳಿದ್ದಾರೆ. ಕೇವಲ ಕೇರಳ ಒಂದರಲ್ಲಿ 55000 ಮುಸ್ಲಿಮರನ್ನು ಭೇಟಿಯಾಗಿದ್ದು 54,000 ಕ್ರೈಸ್ತರನ್ನು ಭೇಟಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶಾದ್ಯಂತ ಹಿಂದೂ ಸಮಾಜೋತ್ಸವದಂತಹ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು ಸುಮಾರು 36,000 ಕಡೆಗಳಲ್ಲಿ ಈ ಸಭೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.












