ಸನ್ಮಾರ್ಗ ಸಂಪಾದಕೀಯ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೆಳವಣಿಗೆಗಳನ್ನು ಬಿಜೆಪಿ ಹದ್ದಿನ ಕಣ್ಣಿನಿಂದ ವೀಕ್ಷಿಸುತ್ತಾ ಇದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಇಡೀ ದಾವಣಗೆರೆ ಜಿಲ್ಲೆಯೇ ಬಿಜೆಪಿಗೆ ಕೈಕೊಟ್ಟಿತ್ತು. ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ನ ಶ್ಯಾಮನೂರು ಶಿವಶಂಕರಪ್ಪ ಅವರು ಆರನೇ ಬಾರಿ ಆರಿಸಿ ಬಂದರು. ಉತ್ತರ ಕ್ಷೇತ್ರದಿಂದ ಇವರ ಮಗ ಎಸ್.ಎಸ್. ಮಲ್ಲಿಕಾರ್ಜುನ ಆಯ್ಕೆಯಾದರು.
ಹೀಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಳ್ಳುವಲ್ಲಿ ದಾವಣಗೆರೆ ಪ್ರಮುಖ ಪಾತ್ರವನ್ನು ವಹಿಸಿತ್ತು. ಈ ಸಂದರ್ಭದಲ್ಲಿ ದಾವಣಗೆರೆಯ ಸಂಸದರಾಗಿದ್ದುದು ಬಿಜೆಪಿಯ ಜಿ.ಎಂ. ಸಿದ್ದೇಶ್ವರ್. ಇವರನ್ನು ದಾವಣಗೆರೆಯ ಮತದಾರರು 2004ರಿಂದಲೇ ಸತತವಾಗಿ ಗೆಲ್ಲಿಸುತ್ತಾ ಬಂದಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸನ್ನು ಬೆಂಬಲಿಸುವುದು ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದು ಎಂಬ ಅಲಿಖಿತ ನೀತಿಯನ್ನು ದಾವಣಗೆರೆ ಜಿಲ್ಲೆಯ ಮತದಾರರು ಪಾಲಿಸಿಕೊಂಡು ಬರುತ್ತಿರುವುದನ್ನು ಈ ಫಲಿತಾಂಶವೇ ಹೇಳುತ್ತಿತ್ತು. 2013 ಮತ್ತು 2018ರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲೂ ಇದುವೇ ವ್ಯಕ್ತವಾಗಿತ್ತು.
ಒಟ್ಟು 8 ಸ್ಥಾನಗಳ ಪೈಕಿ ಕಾಂಗ್ರೆಸ್ ಆರು ಸ್ಥಾನಗಳನ್ನು ಗೆದ್ದರೆ, ಬಿಜೆಪಿಗೆ ಕೇವಲ 2 ಸ್ಥಾನಗಳಷ್ಟೇ ದೊರೆತಿತ್ತು. ಈ ನಡುವೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿಯವರನ್ನೇ ಮತದಾರರು ಸೋಲಿಸಿದರು ಮತ್ತು ಶ್ಯಾಮನೂರು ಶಿವಶಂಕರಪ್ಪ ಅವರ ಸೊಸೆ ಅಥವಾ ಸಚಿವನಾಗಿರುವ ಮಗ ಮಲ್ಲಿಕಾರ್ಜುನ ಅವರ ಪತ್ನಿ ಡಾ| ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಿದರು. ಹೀಗೆ 1999ರಿಂದ ಬಿಜೆಪಿಯ ಭದ್ರ ಕೋಟೆಯಂತಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರ ಮೊದಲ ಬಾರಿ ಕಾಂಗ್ರೆಸ್ನ ಪಾಲಾಯಿತು. ಸದ್ಯ,
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಕನಸನ್ನು ಕಾಣತೊಡಗಿದೆ. ಕಳೆದ 3 ದಶಕಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಬಂದ ಶ್ಯಾಮನೂರು ಶಿವಶಂಕರಪ್ಪ ಅವರ ನಿಧನ ಮತ್ತು ಆ ಬಳಿಕದ ಬೆಳವಣಿಗೆಗಳು ಬಿಜೆಪಿಯಲ್ಲಿ ಆಶಾಭಾವನೆಯನ್ನು ಮೂಡಿಸಿದೆ. ಎಪ್ರಿಲ್ 9ರಂದು ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿ ತಮ್ಮ ಅಭ್ಯರ್ಥಿ ಶ್ರೀನಿವಾಸ್ ಬಿ. ದಾಸಕರಿಯಪ್ಪ ಅವರನ್ನು ಗೆಲ್ಲಿಸಿಕೊಳ್ಳುವ ಹಠಕ್ಕೆ ಬಿದ್ದಿದೆ. ಬಿಜೆಪಿಯ ಈ ಆಶಾಭಾವನೆಗೆ ಕಾರಣ ಏನೆಂದರೆ, ಸಮರ್ಥ್ ಮಲ್ಲಿಕಾರ್ಜುನ ಎಂಬ 27 ವರ್ಷದ ಯುವಕನಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿರುವುದು.
ಶ್ಯಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಅಥವಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರ ಪುತ್ರ ಎಂಬ ಅರ್ಹತೆಯನ್ನು ಬಿಟ್ಟರೆ ಉಳಿದಂತೆ ಇವರಿಗೆ ರಾಜಕಾರಣಿಯಾಗಿ ಯಾವ ಅನುಭವವೂ ಇಲ್ಲ. ಬ್ರಿಟನ್ನಿನ ಯುನಿವರ್ಸಿಟಿ ಆಫ್ ಎಕ್ಸೆಟರ್ನಲ್ಲಿ ಬಿಸಿನೆಸ್ಗೆ ಸಂಬಂಧಿಸಿ ಶಿಕ್ಷಣವನ್ನು ಮುಗಿಸಿರುವ ಈ ಸಮರ್ಥ್ಗೆ ತಳಮಟ್ಟದ ಕಾರ್ಯಕರ್ತನಾಗಿ ಅಥವಾ ರಾಜಕೀಯ ವಿಷಯಗಳಲ್ಲಿ ಸಕ್ರಿಯ ಭಾಗೀದಾರನಾಗಿ ಏನೇನೂ ಗೊತ್ತಿಲ್ಲ. ಶ್ಯಾಮನೂರು ಶಿವಶಂಕರಪ್ಪ ಅವರು ನಿಧನ ರಾಗುವವರೆಗೆ ಇವರ ಹೆಸರು ಕಾರ್ಯಕರ್ತರ ಬಾಯಲ್ಲಿ ಹರಿದಾಡುತ್ತಲೂ ಇರಲಿಲ್ಲ. ಅಂದಹಾಗೆ,
ಈ ಕ್ಷೇತ್ರದಲ್ಲಿ ಕಾಂಗ್ರೆಸ್ನ ಗೆಲುವಿಗೆ ತನ್ನ ಆಯುಸ್ಸನ್ನೇ ಮುಡಿಪಾಗಿಟ್ಟ ನಿಷ್ಠಾವಂತ ಕಾರ್ಯಕರ್ತರು ಧಾರಾಳ ಇದ್ದಾರೆ. ಅದರಲ್ಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಗಾಗಿ ಹಗಲೂ ಇರುಳೂ ದುಡಿದ ಮತ್ತು ದುಡಿಯುತ್ತಿರುವ ಮುಸ್ಲಿಮ್ ಮುಖಂಡರು ಸಾಕಷ್ಟಿದ್ದಾರೆ. ಯಾಕೆ ಮುಸ್ಲಿಮರು ವಿಶೇಷ ಉಲ್ಲೇಖಕ್ಕೆ ಅರ್ಹರೆಂದರೆ, ಈ ಕ್ಷೇತ್ರದಲ್ಲಿ ಸುಮಾರು 80 ಸಾವಿರದಷ್ಟು ಮುಸ್ಲಿಮ್ ಮತದಾರರಿದ್ದಾರೆ. ಒಟ್ಟು 2 ಲಕ್ಷದ 32 ಸಾವಿರಕ್ಕಿಂತಲೂ ಅಧಿಕ ಮತದಾರರಿರುವ ಈ ಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರ ಸಂಖ್ಯೆ ಭಾರೀ ಪ್ರಮಾಣದಲ್ಲಿರುವುದನ್ನು ಮತ್ತು ಕಾಂಗ್ರೆಸ್ ಗೆಲುವಿನಲ್ಲಿ ಅವರ ಅಪಾರ ಕೊಡುಗೆಯನ್ನು ಶ್ಯಾಮನೂರು ಶಿವಶಂಕರಪ್ಪ ಗುರುತಿಸಿದ್ದರು. ಮಾತ್ರವಲ್ಲ,
ಮುಸ್ಲಿಮ್ ವ್ಯಕ್ತಿಯನ್ನು ಈ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿಸುವುದಕ್ಕೆ ಒಲವು ವ್ಯಕ್ತಪಡಿಸಿದ್ದರು. ಆದರೆ, ಇದೀಗ ಈ ಕ್ಷೇತ್ರವನ್ನು ಇದೇ ಶ್ಯಾಮನೂರು ಕುಟುಂಬದ ಸುಪರ್ದಿಗೆ ಕಾಂಗ್ರೆಸ್ ಒಪ್ಪಿಸಿರುವುದು ಮುಸ್ಲಿಮರನ್ನು ಕೆರಳಿಸಿದೆ. ಕಾಂಗ್ರೆಸ್ಗೆ ಪದೇ ಪದೇ ನಿಷ್ಠೆಯನ್ನು ತೋರ್ಪಡಿಸಿರುವುದರ ಹೊರತಾಗಿಯೂ ಮುಸ್ಲಿಮ್ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಲಭ್ಯವಾಗುತ್ತಿಲ್ಲ ಎಂಬ ಅಸಮಾಧಾನ ನಿಧಾನಕ್ಕೆ ಒಕ್ಕೊರಳ ಧ್ವನಿಯಾಗಿ ಮಾರ್ಪಡುತ್ತಿದೆ. ಒಂದುಕಡೆ,
ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯವನ್ನೇ ಕೊಡುವುದಿಲ್ಲ ಎಂದು ಬಿಜೆಪಿ ಘಂಟಾಘೋಷವಾಗಿ ಸಾರಿದೆ. ಇನ್ನೊಂದು ಕಡೆ, ಹೀಗೆ ಸಾರದೆಯೇ ಬಿಜೆಪಿಯ ಮನಸ್ಥಿತಿಯನ್ನೇ ಕಾಂಗ್ರೆಸ್ ಕೂಡಾ ಅಳವಡಿಸಿಕೊಳ್ಳುತ್ತಿದೆ ಎಂಬ ಭಾವನೆ ಮುಸ್ಲಿಮ್ ಸಮುದಾಯದಲ್ಲಿ ಬಲ ಪಡೆಯುತ್ತಿದೆ. ಮುಸ್ಲಿಮ್ ಅಭ್ಯರ್ಥಿ ಗೆಲ್ಲುವುದಿಲ್ಲ ಎಂಬ ವಾದಕ್ಕೆ ಕಾಂಗ್ರೆಸ್ ಪಡಸಾಲೆಯಲ್ಲೂ ಮಹತ್ವ ಲಭ್ಯವಾಗುತ್ತಿದೆ. ನಿಜವಾಗಿ, ಇದು ಮುಸ್ಲಿಮ್ ವಿರೋಧಿ ಮನಸ್ಥಿತಿಗಳು ಅತ್ಯಂತ ಯೋಜಿತವಾಗಿ ಹುಟ್ಟುಹಾಕಿರುವ ಪ್ರೊಪಗಾಂಡಾ. 80 ಸಾವಿರ ಮುಸ್ಲಿಮ್ ಮತದಾರರಿರುವ ಕ್ಷೇತ್ರದಲ್ಲಿ ಶ್ಯಾಮನೂರು ಶಿವಶಂಕರಪ್ಪ ಎಂಬ ಲಿಂಗಾಯಿತ-ವೀರಶೈವ ವ್ಯಕ್ತಿ ಕಾಂಗ್ರೆಸ್ನಿಂದ ಗೆಲ್ಲಬಹುದಾದರೆ ಅದೇ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿ ಯಾಕೆ ಗೆಲ್ಲಲಾರ? ಕಾಂಗ್ರೆಸ್ನ ಹಿಂದೂ ಅಭ್ಯರ್ಥಿಗೆ ಮುಸ್ಲಿಮರು ಮತ ಚಲಾಯಿಸುವರಾದರೆ, ಯಾಕೆ ಕಾಂಗ್ರೆಸ್ನ ಮುಸ್ಲಿಮ್ ಅಭ್ಯರ್ಥಿಗೆ ಹಿಂದೂಗಳು ಮತ ಚಲಾಯಿಸಲಾರರು?
ಕಳೆದ ವಿಧಾನಸಭಾ ಚುನಾವಣೆಯಲ್ಲಿ 130ಕ್ಕಿಂತಲೂ ಅಧಿಕ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿರುವು ದಾದರೆ, ಅದರ ಹಿಂದೆ ಮುಸ್ಲಿಮ್ ಸಮುದಾಯದ ಬೆವರು ಮತ್ತು ಬದ್ಧತೆ ಇತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ 15 ಮಂದಿ ಮುಸ್ಲಿಮರನ್ನು ಕಣಕ್ಕಿಳಿಸಿತ್ತು. ರಾಜ್ಯದಲ್ಲಿ ಸುಮಾರು 90 ಲಕ್ಷದಷ್ಟು ಮುಸ್ಲಿಮ್ ಜನಸಂಖ್ಯೆ ಇದೆ. ಶೇಕಡಾವಾರು ಲೆಕ್ಕ ಪ್ರಕಾರ ನೋಡಿದರೆ, ಇದು ಕನಿಷ್ಠ ಪರಿಗಣನೆ. ಆದರೆ ಇವರಲ್ಲಿ 9 ಮಂದಿಯನ್ನೂ ಮತದಾರರು ಗೆಲ್ಲಿಸಿದ್ದರು. ನಿಜವಾಗಿ, ಮುಸ್ಲಿಮ್ ಅಭ್ಯರ್ಥಿಗೆ ಹಿಂದೂಗಳು ಮತ ಚಲಾಯಿಸುವುದಿಲ್ಲ ಎಂಬ ಪ್ರಚಾರವನ್ನು ಸುಳ್ಳು ಮಾಡಿದ ಫಲಿತಾಂಶ ಇದು. ಆದರೂ, ಈ ಪ್ರಚಾರ ಬಲ ಪಡೆಯುತ್ತಲೇ ಇದೆ. ಮಾತ್ರವಲ್ಲ, ಚುನಾವಣೆಯಿಂದ ಚುನಾವಣೆಗೆ ಮುಸ್ಲಿಮರಿಗೆ ಟಿಕೆಟ್ ನೀಡುವುದನ್ನು ಕಾಂಗ್ರೆಸ್ ಕಡಿಮೆಗೊಳಿಸುತ್ತಲೂ ಬರುತ್ತಿದೆ. ಒಂದುವೇಳೆ, ಈ ವಾದವೇ ನಿಜ ಎಂದಾದರೆ, ಕಾಂಗ್ರೆಸ್ನ ಹಿಂದೂ ಮತದಾರರು ದಿನೇದಿನೇ ಕೋಮುವಾದಿಗಳಾಗುತ್ತಾ ಬರುತ್ತಿದ್ದಾರೆ ಎಂದೇ ಹೇಳಿದಂತಾಗುತ್ತದೆ. ನಿಜವಾಗಿ,
ಕೋಮುವಾದಿಗಳಾಗಿರುವುದು ಮತದಾರರಲ್ಲ. ಕಾಂಗ್ರೆಸ್ನಲ್ಲಿರುವ ನಿರ್ದಿಷ್ಟ ನಾಯಕರು ಮತ್ತು ನೀತಿ ನಿರೂಪಕರು. ಅವರು ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯದಂತೆ ತೆರೆಯ ಹಿಂದೆ ನಿಂತು ಶ್ರಮಿಸುತ್ತಿದ್ದಾರೆ. ರಾಜಕೀಯವಾಗಿ ಮುಸ್ಲಿಮ್ ನಾಯಕರು ಬೆಳೆಯದಂತೆ ತಡೆಯುತ್ತಿದ್ದಾರೆ. ಅದಕ್ಕೆ ಪೂರಕ ನರೇಟಿವ್ಗಳನ್ನು ಸೃಷ್ಟಿಸುತ್ತಿದ್ದಾರೆ. ಮುಸ್ಲಿಮ್ ಅಭ್ಯರ್ಥಿಗೆ ಹಿಂದೂಗಳು ಮತ ಚಲಾಯಿಸುವುದಿಲ್ಲ ಎಂಬುದೂ ಇಂಥ ನರೇಟಿವ್ಗಳಲ್ಲಿ ಒಂದು. ಈ ವಾದವು ಮುಸ್ಲಿಮರಿಗೆ ಟಿಕೆಟ್ ತಪ್ಪಿಸುವಲ್ಲಿ ಬಹಳ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತಿದೆ. ಹಾಗಂತ, `ಕಾಂಗ್ರೆಸ್ನ ಹಿಂದೂ ಅಭ್ಯರ್ಥಿಗಳಿಗೆ ಮುಸ್ಲಿಮರು ಯಾವ ತಕರಾರೂ ಇಲ್ಲದೇ ಮತ ಚಲಾಯಿಸುತ್ತಿರುವಾಗ ಮುಸ್ಲಿಮ್ ಅಭ್ಯರ್ಥಿಗೆ ಕಾಂಗ್ರೆಸ್ನ ಹಿಂದೂ ಮತದಾರರು ಯಾಕೆ ಮತ ಚಲಾಯಿಸುವುದಿಲ್ಲ, ಇದಕ್ಕೆ ಯಾರು ಕಾರಣ…’ ಎಂಬ ಮರುಪ್ರಶ್ನೆಯ ಬದಲು ಇವರು ಹೇಳಿದ್ದನ್ನೇ ಒಪ್ಪಿಕೊಂಡು ಮುಸ್ಲಿಮರನ್ನು ನಿರ್ಲಕ್ಷಿಸುವ ತಪ್ಪು ಕಾಂಗ್ರೆಸ್ನಿಂದ ನಡೆಯುತ್ತಲೂ ಇದೆ. ದಾವಣಗೆರೆಯಲ್ಲಿ ನಡೆದಿರುವುದೂ ಇಂಥದ್ದೇ ತಪ್ಪು.
80 ಸಾವಿರ ಮತಗಳನ್ನು ಹೊಂದಿರುವ ಸಮುದಾಯವನ್ನು ನಿರ್ಲಕ್ಷಿಸಿ ಶ್ಯಾಮನೂರು ಶಿವಶಂಕರಪ್ಪ ಅವರ ಮೂರನೇ ತಲೆಮಾರಿಗೆ ಟಿಕೆಟ್ ಕೊಡುವುದೆಂದರೆ, ಇದರ ಹಿಂದೆ ‘ಗೆಲ್ಲುವ ಅಭ್ಯರ್ಥಿ’ ಎಂಬ ಲೆಕ್ಕಾಚಾರವಷ್ಟೇ ಇರುವುದಲ್ಲ. ಅದರ ಆಚೆಗಿನ ಪ್ರೊಪಗಾಂಡಗಳೂ ಕೆಲಸ ಮಾಡಿವೆ. ಸತತ 6 ಬಾರಿ ಶ್ಯಾಮನೂರು ಶಿವಶಂಕರಪ್ಪರನ್ನು ಗೆಲ್ಲಿಸಿದ ಕಾಂಗ್ರೆಸ್ ಮತದಾರರು ಈ ಬಾರಿ ಅಭ್ಯರ್ಥಿಯ ಧರ್ಮ ನೋಡಿ ಮತ ಚಲಾಯಿಸುತ್ತಾರೆ ಎಂದು ವಾದಿಸುವುದಕ್ಕೆ ಅರ್ಥವೇ ಇಲ್ಲ. ಮತದಾರರನ್ನು ಹೀಗೆ ಸಾರಾಸಗಟು ಕೋಮುವಾದಿಗಳನ್ನಾಗಿಸುವುದನ್ನು ಒಪ್ಪಲಾಗದು. ಕಾಂಗ್ರೆಸ್ ಮುಖಂಡರ ಕೋಮುವಾದಿ ಮನಸ್ಥಿತಿಯನ್ನು ಮತದಾರರಿಗೆ ವರ್ಗಾಯಿಸುವುದು ಖಂಡನೀಯ.












