ಭಾವನೆಗಳ ನಿಯಂತ್ರಣ: ಕುರ್‌ಆನಿನ ಬೆಳಕಿನಲ್ಲಿ

0
275

✍️ ಖದೀಜ ನುಸ್ರತ್

ಭಾವನೆಗಳು ಮಾನವನ ಅನುಭವದ ನೈಸರ್ಗಿಕ ಭಾಗಗಳಾಗಿರುತ್ತದೆ. ಇದು ಮಾನವನ ಅಸ್ತಿತ್ವದ ಮೂಲಭೂತ ಅಂಶವಾಗಿದೆ. ಅವು ನಮ್ಮ ಚಿಂತನೆ, ವರ್ತನೆ, ಸಂಬಂಧಗಳ ಮತ್ತು ನಿರ್ಧಾರಗಳ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ನಾವು ನಮ್ಮ ಸಹಜೀವಿಗಳೊಂದಿಗೆ ಸಾಮರಸ್ಯ ಹಾಗೂ ಮಾನಸಿಕವಾಗಿ ಸಮತೋಲನದಿಂದ ಜೀವಿಸಬೇಕಾದರೆ ಸ್ವತಃ ನಮ್ಮ ಹಾಗೂ ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ಮತ್ತು ಅದನ್ನು ನಿಯಂತ್ರಿಸಿಕೊಂಡು ಅಲ್ಲಾಹನ ಸಂತೃಪ್ತಿ ಗಳಿಸಬೇಕಾದುದು ಅನಿವಾರ್ಯವಾಗಿರುತ್ತದೆ.

ಮಾನವನ ಮನಸ್ಸಿನಲ್ಲಿ ಸಂತೋಷದಿಂದ ದುಃಖದವರೆಗೆ, ಭಯದಿಂದ ಕೋಪದವರೆಗಿನ ಭಾವನೆಗಳನ್ನು ಅನುಭವಿಸುವುದು ದೌರ್ಬಲ್ಯವಲ್ಲ. ಆದರೆ ನಮ್ಮ ಭಾವನೆಗಳು ಇನ್ನೊಬ್ಬರ ಮೇಲೆ ನಕಾರಾತ್ಮಕ ಪ್ರಭಾವ ಬೀರದಂತೆ ಜಾಗರೂಕತೆ ವಹಿಸಬೇಕು. ಮಾನವನ ಇಹಪರ ಜೀವನದ ವಿಜಯ ಹಾಗೂ ನಮ್ಮನ್ನು ಸ್ವರ್ಗದವರೆಗೆ ತಲುಪಿಸುವಲ್ಲಿ ಭಾವನೆಗಳ ಪ್ರಜ್ಞಾಪೂರ್ವಕ ನಿಯಂತ್ರಣವು ಪ್ರಮುಖ ಪಾತ್ರ ವಹಿಸುತ್ತದೆ. ಭಾವನೆ ಎಂದರೆ ನಮ್ಮ ಜೀವನದಲ್ಲಿ ನಡೆಯುವ ಆಂತರಿಕ ಮತ್ತು ಬಾಹ್ಯ ಘಟನೆಗಳಿಗೆ ಪ್ರತಿಕ್ರಿಯೆಯಾಗಿ ಉಂಟಾಗುವ ಸಂಕೀರ್ಣವಾದ ದೈಹಿಕ ಮತ್ತು ಮಾನಸಿಕ ಸ್ಥಿತಿಗಳಾಗಿರುತ್ತದೆ.

ಹೃದಯವು ಭಾವನೆ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ. ನಮ್ಮ ಎಲ್ಲಾ ಗಾಢವಾದ ಭಾವನೆಗಳು ಹೃದಯದೊಂದಿಗೆ ಬೆಸೆದುಕೊಂಡಿವೆ. ನಮಗೆ ಅತಿಯಾದ ಸಂತೋಷವಾದಾಗ ಹೃದಯ ಹಗುರಾದಂತೆ ಭಾಸವಾಗುತ್ತದೆ, ಅದೇ ದುಃಖವಾದಾಗ ಹೃದಯ ಭಾರವಾದಂತೆ ಅನ್ನಿಸುತ್ತದೆ. ಯಾವಾಗಲೂ ಆರೋಗ್ಯಕರ ಹೃದಯವು ವಿಶ್ವಾಸ, ಸಹನೆ, ಸಂತೋಷ, ಶಾಂತಿ ಅಲ್ಲಾಹನ ಮೇಲೆ ಭರವಸೆ, ಕೃತಜ್ಞತೆ, ನೆಮ್ಮದಿ, ಪ್ರೇಮ, ಅನುಕಂಪ, ತೃಪ್ತಿ, ಮನಶ್ಶಾಂತಿ, ಕೃಪೆ, ಹೃದಯ ವೈಶಾಲ್ಯ, ಪ್ರಶಾಂತಿಯಿಂದ ಕೂಡಿರುತ್ತದೆ. ಆದರೆ ತೊಂದರೆಗೀಡಾದ ಹೃದಯವು ಭಯ, ಆತಂಕ, ದುಃಖ, ಅಸೂಯೆ, ನಿರಾಶೆ, ಅಪರಾಧ ಪ್ರಜ್ಞೆ, ಕೋಪ, ಆಲಸ್ಯ, ಪ್ರತೀಕಾರ, ಹಗೆತನ, ಅಹಂಕಾರ, ಸಂಕೀರ್ಣ, ದುರಭಿಮಾನವನ್ನು ಹೊಂದಿರುತ್ತದೆ.

ಪವಿತ್ರ ಕುರ್‌ಆನ್ ತೀವ್ರವಾದ ದುಃಖ ಮತ್ತು ಭಯದಿಂದ ಹಿಡಿದು ಆಳವಾದ ಪ್ರೀತಿ, ಸಂತೋಷ ಮತ್ತು ನೆಮ್ಮದಿಯವರೆಗೆ ವ್ಯಾಪಕ ಶ್ರೇಣಿಯ ಮಾನವ ಭಾವನೆಗಳನ್ನು ಉಲ್ಲೇಖಿಸುತ್ತದೆ. ಈ ಭಾವನೆಗಳನ್ನು ಹೆಚ್ಚಾಗಿ ಮಾನವ ಪರೀಕ್ಷೆಗಳು, ಆಧ್ಯಾತ್ಮಿಕ ಬೆಳವಣಿಗೆ, ಮನುಷ್ಯರ ಮಧ್ಯೆ ಮತ್ತು ದೇವರೊಂದಿಗಿನ ಸಂಬಂಧದ ಸಂದ ರ್ಭದಲ್ಲಿ ಚರ್ಚಿಸಲಾಗುತ್ತದೆ. ಜೀವನದಲ್ಲಿ ಕೆಲವೊಮ್ಮೆ ಸಂತೋಷ ಸುಖ, ಕೆಲವೊಮ್ಮೆ ದುಃಖ, ನೋವು, ಕಷ್ಟ ನಷ್ಟ, ಆತಂಕ, ಸಂಕಟ, ತಳಮಳ, ಖೇದ, ಭಯವು ಹೃದಯವನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಹೆಚ್ಚಿನ ಮನೆಗಳು, ಶಾಲಾ-ಕಾಲೇಜು ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ಕಲಿಸುವ ಪಾಠಗಳಲ್ಲಿ ಮಾನವನ ನೋವು, ನಷ್ಟ, ಭಯ, ಕೋಪ, ಆತಂಕ, ನಿರಾಶೆ ಇತ್ಯಾದಿಗಳನ್ನು ಪರಿಹರಿಸುವಲ್ಲಿ ಮತ್ತು ಸರಿಯಾದ ಮಾರ್ಗದರ್ಶನ ಮಾಡುವಲ್ಲಿ ವಿಫಲವಾಗಿವೆ.

ಆದ್ದರಿಂದ ಮಕ್ಕಳು ಮತ್ತು ವಯಸ್ಕರಲ್ಲಿ ಅಮಲು ಪದಾರ್ಥಗಳ ಬಳಕೆ, ಮಾದಕ ದ್ರವ್ಯ ಸೇವನೆ, ಆತ್ಮಹತ್ಯೆಗಳು, ವಂಚನೆ, ಕಳ್ಳತನ ಮತ್ತು ಭ್ರಷ್ಟಾಚಾರದಂತಹ ಅಪರಾಧ ಕೃತ್ಯಗಳು ನಿರಂತರವಾಗಿ ಹೆಚ್ಚುತ್ತಿವೆ. ಭಾವನೆಗಳನ್ನು ನೈತಿಕತೆ, ವಿವೇಚನೆ ಮತ್ತು ಆಧ್ಯಾತ್ಮಿಕತೆಯ ಅಡಿಯಲ್ಲಿ ಒಟ್ಟುಗೂಡಿಸುವುದು ಮಾನವೀಯತೆಗಿದೆ. ಮನುಷ್ಯನಿಗೆ ತನ್ನ ಭಾವನೆಗಳ ಬಗ್ಗೆ ಅರಿವಿಲ್ಲದಿರುವುದು ಭಾವನೆಗಳ ನಿಗ್ರಹಿಸುವಿಕೆಗೆ ಅಥವಾ ಅನಿಯಂತ್ರಿತ ವ್ಯಕ್ತಪಡಿಸುವಿಕೆಗೆ ಕಾರಣ ವಾಗುತ್ತದೆ. ಇನ್ನೊಬ್ಬರ ಭಾವನೆಗಳನ್ನು ಗದರಿಸಿ, ಬೆದರಿಸಿ ಅದುಮಿಡಲು ಪ್ರಯತ್ನಿಸಿದರೆ ಅದು ಅಸ್ವಸ್ಥವಾಗಿ ಮಾರ್ಪಡುತ್ತದೆ.

ಎಲ್ಲಾ ಪ್ರವಾದಿಗಳೂ ಭಯ, ದುಃಖದಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿದ್ದರು. ಪ್ರವಾದಿಗಳ ಚರಿತ್ರೆಯು ನಮ್ಮ ಜೀವನದಲ್ಲಿ ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು ಸಹಕರಿಸುತ್ತದೆ. ಮಾನವೀಯತೆಗೆ ಶ್ರೇಷ್ಠ ಮಾದರಿಯಾದ ಪ್ರವಾದಿ ಮುಹಮ್ಮದ್(ಸ)ರು ಟೀಕೆ, ಹಗೆತನ ಮತ್ತು ಚಿಂತೆಗಳ ನಡುವೆಯೂ ಶಾಂತಿಯನ್ನು ಕಾಪಾಡಿಕೊಳ್ಳುವುದಕ್ಕೆ ಹೆಸರುವಾಸಿಯಾಗಿದ್ದರು. ಅವರು ದುರ್ಬಲರಿಗೆ ಕರುಣೆ, ಅಜ್ಞಾನಿಗಳೊಂದಿಗೆ ತಾಳ್ಮೆ ಮತ್ತು ನಿರಾಶೆಯ ಸಮಯದಲ್ಲಿ ಆಳವಾದ ದುಃಖವನ್ನು ಅನುಭವಿಸಿದರು. ನಾವು ಇತರರ ಪಾಲಿಗೆ ಗೌರವ, ಕರುಣೆ ಹಾಗೂ ದಯೆ ತೋರುವವರಾಗಬೇಕು. ಪವಿತ್ರ ಕುರ್‌ಆನ್‌ನಲ್ಲಿ ಅಲ್ಲಾಹನು ಸ್ವತಃ ದಯಮಾನೂ, ಕರುಣಾನಿಧಿಯೂ ಆಗಿರುತ್ತಾನೆಂದು ನಿರಂತರ ಪ್ರಸ್ತಾಪಿಸಲಾಗಿದೆ.

ಪವಿತ್ರ ಕುರ್‌ಆನ್ ಮನಸ್ಸಿನ ಮತ್ತು ಹೃದಯಗಳ ರೋಗಗಳಿಗೆ ಗುಣೌಷಧಿಯಾಗಿದೆ. ಅಸೂಯೆ, ದ್ವೇಷ, ಕೋಪ, ಹಗೆತನಗಳೆಲ್ಲವೂ ಹೃದಯದ ರೋಗಗಳಾಗಿರುತ್ತದೆ. ಪವಿತ್ರ ಕುರ್‌ಆನ್ ಮಾನವನ ಭಾವನೆಗಳನ್ನು ಹೇಗೆ ಮತ್ತು ಯಾವ ರೀತಿ ನಿಯಂತ್ರಿಸಬೇಕು ಎಂಬುದರ ಕುರಿತಾಗಿ ಸರಿಯಾದ ಮಾರ್ಗದರ್ಶನ ನೀಡುತ್ತದೆ.

ಭಯ, ದುಃಖ, ವ್ಯಥೆ, ಚಿಂತೆ- ಮನುಷ್ಯರಲ್ಲಿ ರೋಗ, ಮರಣ, ಸಂಪತ್ತು ನಷ್ಟವಾಗಬಹುದೇ ಎಂಬ ಭಯವು ಸಾಮಾನ್ಯವಾಗಿರುತ್ತದೆ. ಭಯಾಶಂಕೆ, ಹಸಿವು, ಧನಹಾನಿ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗಳಿಗೊಳಪಡಿಸಿ ಅಲ್ಲಾಹನು ನಮ್ಮನ್ನು ಪರೀಕ್ಷಿಸುವನು ಎಂದು ಪವಿತ್ರ ಕುರ್‌ಆನ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಸತ್ಯವಿಶ್ವಾಸಿಗೆ ಅಲ್ಲಾಹನ ಹೊರತು ಬೇರೆ ಯಾವ ಭಯವಿರಬಾರದು. ಅಲ್ಲಾಹನ ಭಯವೆಂಬುದು ನಮ್ಮನ್ನು ಪಾಪಕಾರ್ಯಗಳಿಂದ ತಡೆಯಬೇಕು ಮತ್ತು ಅಲ್ಲಾಹನೊಂದಿಗೆ ನಿಕಟ ಸಂಪರ್ಕ ಬೆಳೆಸಲು, ಸತ್ಕರ್ಮ ಮಾಡಲು ಪ್ರೇರೇಪಿಸಬೇಕು. ಲೌಖಿಕ ಜೀವನದ ವಿಷಯದಲ್ಲಿ ಅತಿಯಾದ ದುಃಖ, ಭಯ ಮನಸ್ಸು ಮತ್ತು ಆತ್ಮಕ್ಕೆ ಹಾನಿಕರವಾಗಿದೆ. ದೀರ್ಘಕಾಲದ ದುಃಖವು ಮಾನಸಿಕ ಖಿನ್ನತೆಯಾಗಿ ಮಾರ್ಪಡುವುದು.

“ಆದುದರಿಂದ ಇನ್ನು ಮುಂದೆ ನೀವು ಮಾನವರನ್ನು ಭಯಪಡಬಾರದು. ನೀವು ವಾಸ್ತವದಲ್ಲಿ ಸತ್ಯವಿಶ್ವಾಸಿಗಳಾಗಿದ್ದರೆ ನನ್ನನ್ನೇ ಭಯ ಪಡಬೇಕು.” (ಪವಿತ್ರ ಕುರ್‌ಆನ್ 3:175)

“ಖೇದಗೊಳ್ಳಬೇಡಿರಿ. ಅಲ್ಲಾಹ್ ನಮ್ಮ ಜತೆಯಲ್ಲಿದ್ದಾನೆ.” (ಪವಿತ್ರ ಕುರ್‌ಆನ್ 9:40)

ಸಂತೋಷ, ಕೃತಜ್ಞತೆ- ಅಲ್ಲಾಹನು ನೀಡಿದ ಅನುಗ್ರಹಗಳಿಗೆ ಕೃತಜ್ಞರಾಗುವುದು. ಸಂತೋಷವು ದುಂದುವೆಚ್ಚ, ಅತಿರೇಕ ಹಾಗೂ ದೇವಾಜ್ಞೋಲ್ಲಂಘನೆಯ ಕಡೆಗೆ ಕೊಡೊಯ್ಯಬಾರದು.

“ಉಣ್ಣಿರಿ, ಕುಡಿಯಿರಿ ಮತ್ತು ಮಿತಿ ಮೀರಬೇಡಿರಿ.” (ಪವಿತ್ರ ಕುರ್‌ಆನ್- 7:31)

“ನೀವು ಕೃತಜ್ಞರಾಗಿದ್ದರೆ ನಾನು ನಿಮಗೆ ಇನ್ನೂ ಹೆಚ್ಚು ಪ್ರದಾನ ಮಾಡುವೆನು.” (ಪವಿತ್ರ ಕುರ್‌ಆನ್- 14:7)

ಕೋಪ, ಅಸೂಯೆ- ಕೋಪ ಎಂಬುದು ಹತಾಶೆ, ನೋವು, ಅನ್ಯಾಯದ ವಿರುದ್ಧ ಬಲವಾದ ಭಾವನಾತ್ಮಕ ಪ್ರತಿಕ್ರಿಯೆಯಾಗಿರುತ್ತದೆ.

ಅಸೂಯೆ ಎಂದರೆ ಇನ್ನೊಬ್ಬರಲ್ಲಿರುವ ಅನುಗ್ರಹಗಳನ್ನು ಕಂಡು ಮನಸ್ಸಿನಲ್ಲುಂಟಾಗುವ ಅಸಾಮಾಧಾನವಾಗಿರುತ್ತದೆ. ಆದ್ದರಿಂದ ಅಸೂಯೆ, ಕೋಪವು ಸಂಬಂಧಗಳನ್ನು ಕೆಡಿಸುವಂತಹ, ಅನಗತ್ಯ ಮಾತುಗಳನ್ನಾಡುವ, ಇನ್ನೊಬ್ಬರ ಕರ್ಮಗಳ ಬಗ್ಗೆ ಅನಗತ್ಯ ತೀರ್ಪು ನೀಡುವ ಅಥವಾ ನಂತರ ಖೇದವನ್ನುಂಟುಮಾಡುವಂತಹ ಕರ್ಮಗಳಿಗೆ ಪ್ರೇರೇಪಿಸುವಂತಿರಬಾರದು.

“ಅಲ್ಲಾಹನು ನಿಮ್ಮಲ್ಲಿ ಕೆಲವರಿಗೆ ಇನ್ನು ಕೆಲವರಿಗಿಂತ ಅಧಿಕವಾಗಿ ನೀಡಿದ್ದರೆ ಅದಕ್ಕಾಗಿ ಆಶೆ ಪಡಬೇಡಿರಿ.” (ಪವಿತ್ರ ಕುರ್‌ಆನ್- 4:32)
“ಮತ್ತೇನು ಅಲ್ಲಾಹನು ಇತರರಿಗೆ ತನ್ನ ಅನುಗ್ರಹ ದಯ ಪಾಲಿಸಿದುದಕ್ಕಾಗಿ ಇವರು ಅವರ ಬಗ್ಗೆ ಅಸೂಯೆ ಪಡುತ್ತಾರೆಯೇ?” (ಪವಿತ್ರ ಕುರ್‌ಆನ್- 4: 54)

ಸ್ವರ್ಗವಾಸಿಗಳು “ಕೋಪವನ್ನು ನುಂಗಿಕೊಳ್ಳುತ್ತಾರೆ.” (ಪವಿತ್ರ ಕುರ್‌ಆನ್- 3:134)

ಸತ್ಯವಿಶ್ವಾಸಿಗಳು “ಸಿಟ್ಟು ಬಂದಾಗ ಕ್ಷಮಿಸಿ ಬಿಡುವವರೂ ಆಗಿರುತ್ತಾರೆ.” (ಪವಿತ್ರ ಕುರ್‌ಆನ್- 42:37)

ತವಕ್ಕುಲ್ (ಅಲ್ಲಾಹನ ಮೇಲೆ ಭರವಸೆ)- ಭವಿಷ್ಯದ ಬಗ್ಗೆ ಭಯವುಂಟಾಗುವಾಗ ಅತಿಯಾಗಿ ಆಲೋಚನೆ ಮಾಡದೆ ದೈನಂದಿನ ಕೆಲಸದೆಡೆಗೆ ಕೇಂದ್ರೀಕರಿಸುತ್ತಾ, ದೇವಸ್ಮರಣೆ, ಪ್ರಾರ್ಥನೆ ಮಾಡುತ್ತಾ ಅಲ್ಲಾಹನ ಮೇಲೆ ಭರವಸೆಯಿಡಬೇಕು. ಯಾವುದೇ ಕೆಲಸ ಆರಂಭಿಸುವಾಗ, ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವಾಗ, ಅದರ ಹಾನಿ ಅಥವಾ ಲಾಭದ ಬಗ್ಗೆ ನಮಗೆ ತಿಳಿಯದಿರುವಾಗಲೂ ಅಲ್ಲಾಹನ ಯೋಜನೆಯ ಮೇಲೆ ಭರವಸೆಯಿಡುವುದು. ಇನ್ನೊಬ್ಬರಿಂದುಂಟಾಗುವ ಕೇಡು, ಉಪದ್ರಗಳಿಂದ ನಿರಾಶರಾಗದಂತೆ ಯಾವುದೇ ವಿಷಯ, ಪರಿಸ್ಥಿತಿಗಳಿಗೆ ಭಯಭೀತರಾಗದಂತೆ ಕುರ್‌ಆನ್ ಉಪದೇಶಿಸುತ್ತದೆ.

“ಅವರ ಕಿರುಕುಳಗಳನ್ನು ಕಡೆಗಣಿಸಿರಿ. ಅಲ್ಲಾಹನ ಮೇಲೆ ಭರವಸೆ ಇಡಿರಿ. ಮನುಷ್ಯನು ತನ್ನ ವ್ಯವಹಾರಗಳನ್ನು ಒಪ್ಪಿಸಲು ಅಲ್ಲಾಹನೇ ಸಾಕು.”(ಪವಿತ್ರ ಕುರ್‌ಆನ್- 33:48)

ಮೆದುಳು ವಿವಿಧ ಸಂವೇದನೆಗಳು ಮತ್ತು ಪ್ರಚೋದನೆಗಳನ್ನು ಅನುಭವಿಸುವ ಪ್ರಮುಖ ಅಂಗವಾಗಿದೆ. ಮೆದುಳಿಗೆ ಬೆದರಿಕೆ ಅಥವಾ ಪ್ರತಿಫಲದ ಅನುಭವವಾದಾಗ, ಅದು ಶರೀರಕ್ಕೆ ಕಳುಹಿಸುವ ಸಂದೇಶಗಳೇ ಭಾವನೆಗಳಾಗಿರುತ್ತವೆ. ಬೆದರಿಕೆಯ ಅನುಭವವಾದಾಗ, ಒತ್ತಡದ ಹಾರ್ಮೋನ್ ಗಳಾದ ಕಾರ್ಟಿಸಾಲ್ ಮತ್ತು ಅಡ್ರಿನಾಲಿನ್ ಬಿಡುಗಡೆಯಾಗಿ ‘ಹೋರಾಟ ಅಥವಾ ಪಲಾಯನ’ (Fight or Flight) ಕ್ರಿಯೆಯನ್ನು ಪ್ರಚೋದಿಸುತ್ತವೆ. ಇದು ಕೋಪ ಮತ್ತು ಅಸೂಯೆಯಂತಹ ಭಾವನೆಗಳನ್ನು ಉಂಟು ಮಾಡಬಹುದು.

ಇದಕ್ಕೆ ವಿರುದ್ಧವಾಗಿ, ಉತ್ತಮ ಅನುಭವಗಳು ಮತ್ತು ಸತ್ಕರ್ಮಗಳಲ್ಲಿ ತೊಡಗಿದಾಗ ‘ಸಂತೋಷದ ಹಾರ್ಮೋನ್‌ಗಳು’ ಬಿಡುಗಡೆಯಾಗುತ್ತವೆ. ನಮ್ಮ ಚಿಂತನೆಗಳು, ಆಲೋಚನೆಗಳು ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ, ನಮ್ಮ ವರ್ತನೆ ಮತ್ತು ನಡವಳಿಕೆಗಳ ಮೇಲೂ ಸಕಾರಾತ್ಮಕ ಅಥವಾ ನಕಾರಾತ್ಮಕ ಪ್ರಭಾವ ಬೀರುತ್ತವೆ. ಆದುದರಿಂದ ಪ್ರಜ್ಞಾಪೂರ್ವಕ ಚಿಂತನೆಗಳಿಂದ ನಮ್ಮ ಭಾವನೆಗಳನ್ನು ನಿಯಂತ್ರಿಸುವ ಮೂಲಕ ಮೆದುಳಿನ ಸಮಗ್ರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.