ಸನ್ಮಾರ್ಗ ವಾರ್ತೆ
ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷರಾದ ಸೈಯದ್ ಸಾದತುಲ್ಲಾ ಹುಸೈನಿ ರವರು ಮಾರ್ಚ್ 7ರಂದು ಐಎನ್ಎಸ್ ಮಾಧ್ಯಮಕ್ಕೆ ನೀಡಿರುವ ಹೇಳಿಕೆಯನ್ನು ಕೆಲವೊಂದು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿ, ಜನರಲ್ಲಿ ಸಂಶಯಗಳನ್ನು ಹುಟ್ಟುಹಾಕಲು ಪ್ರಯತ್ನಿಸಿದ್ದವು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಈ ಬಗ್ಗೆ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ಈ ಬಗ್ಗೆ ಜೆ.ಐ.ಎಚ್ ಅಧ್ಯಕ್ಷರು ಮೀಡಿಯಾ ಒನ್ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಇರಾನ್ ಯುದ್ಧದ ಹಿನ್ನೆಲೆಯಲ್ಲಿ ವರದಿಗಾರನು ಕೇಳಿರುವ ಪ್ರಶ್ನೆಗೆ ತಾನು ಉತ್ತರ ನೀಡಿದ್ದು, ಹೇಳಿಕೆಯನ್ನು ಪೂರ್ತಿಯಾಗಿ ಗಮನಿಸದೆ, ಅರ್ಧಬರ್ಧ ಪ್ರಚಾರ ಮಾಡುವುದು ಸಮಾಜದಲ್ಲಿ ಗೊಂದಲವನ್ನು ಉಂಟುಮಾಡುತ್ತದೆ ಮತ್ತು ಅದು ತಪ್ಪಾದ ಪ್ರವೃತ್ತಿಯಾಗಿದೆ ಎಂದು ತಿಳಿಸಿದ್ದಾರೆ.
ಸಾದತುಲ್ಲಾ ಹುಸೈನಿ ಅವರು ಮೀಡಿಯಾ ಒನ್ಗೆ ಈ ಕುರಿತು ಪ್ರತಿಕ್ರಿಯೆ ನೀಡುತ್ತಾ ಹೀಗೆ ಹೇಳಿದ್ದಾರೆ:
“ಐಎನ್ಎಸ್ ಚಾನೆಲ್ನ ರಿಪೋರ್ಟರ್ಗೆ ನಾನು ನೀಡಿರುವ ಒಂದು ಹೇಳಿಕೆಯನ್ನು ಕೆಲವು ಮಾಧ್ಯಮಗಳಲ್ಲಿ ತಪ್ಪಾಗಿ ಉಲ್ಲೇಖಿಸಿ, ವರದಿ ಮಾಡಲಾಗುತ್ತಿದೆ. ನನಗೆ ಪ್ರಸಕ್ತ ಯುದ್ಧದ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಯುದ್ಧವು ಜಗತ್ತಿನಾದ್ಯಂತ ಏರುಪೇರುಗಳನ್ನು ಉಂಟುಮಾಡುತ್ತಿದೆ ಮತ್ತು ಎಲ್ಲಾ ಕಡೆ ಮುಸ್ಲಿಮರು ಯುದ್ಧ, ಸಂಕಷ್ಟ, ಸರ್ವಾಧಿಕಾರ ಮುಂತಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ‘ಆದರೆ, ಭಾರತದಲ್ಲಿ ಸೆಕ್ಯೂಲರ್ ಮೌಲ್ಯಗಳು ಮತ್ತು ಸೆಕ್ಯೂಲರ್ ಸಂವಿಧಾನ ಇರುವುದರಿಂದ ಮುಸ್ಲಿಮರು ಸುರಕ್ಷಿತರಾಗಿದ್ದಾರಲ್ಲವೇ?’ ಎಂದು ವರದಿಗಾರನು ಪ್ರಶ್ನೆ ಮಾಡಿದ್ದನು.
ಈ ಪ್ರಶ್ನೆಗೆ ಉತ್ತರವಾಗಿ, ‘ಹೌದು, ನಮ್ಮಲ್ಲಿ ಉತ್ತಮ ಸಂವಿಧಾನವಿದೆ. ನಾವು ಜಾತ್ಯಾತೀತ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭಾರತದಲ್ಲಿ ಹೊಂದಿದ್ದೇವೆ. ಅದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಆದರೆ, ದುರಾದೃಷ್ಟವಶಾತ್ ಕೆಲವೊಂದು ಫ್ಯಾಸಿಸ್ಟ್ ಶಕ್ತಿಗಳು ಪರಿಸ್ಥಿತಿಯನ್ನು ಬಿಗಡಾಯಿಸಲು ಪ್ರಯತ್ನಿಸುತ್ತಿವೆ, ಸಂವಿಧಾನಿಕ ಮೌಲ್ಯಗಳ ಹರಣ ಮಾಡಲು ಯತ್ನಿಸುತ್ತಿವೆ. ನಾವು ಈ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ ಮತ್ತು ಭಾರತವನ್ನು ಆ ದಿಕ್ಕಿಗೆ ಹೋಗದಂತೆ ತಡೆಯಬೇಕಿದೆ’ ಎಂದು ಹೇಳಿದ್ದೆ. ಇದು ನನ್ನ ಪೂರ್ತಿ ಪ್ರತಿಕ್ರಿಯೆಯಾಗಿತ್ತು. ಆದರೆ, ದುರಾದೃಷ್ಟವಶಾತ್ ಇದರ ಕೆಲವೊಂದು ಭಾಗವನ್ನು ಕೈಬಿಟ್ಟು ಕೆಲವೊಂದು ಮಾಧ್ಯಮಗಳು ವರದಿ ಮಾಡುತ್ತಿವೆ.”
ಈ ರೀತಿಯಾಗಿ ವಿಷಯವನ್ನು ವಕ್ರಗೊಳಿಸುವುದರಿಂದ ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ ಎಂದು ಸಾದತುಲ್ಲಾ ಹುಸೈನಿ ಅವರು ಅಭಿಪ್ರಾಯಪಟ್ಟಿದ್ದಾರೆ.












