21 ಕಾಂಗ್ರೆಸ್ ಸಚಿವರ ರಾಜೀನಾಮೆ: ಮೈತ್ರಿ ಸರಕಾರ ಡೋಲಾಯಮಾನ

0
662

ಬೆಂಗಳೂರು, ಜು. 8: ರಾಜಕೀಯ ಅನಿಶ್ಚಿತತೆ ಮುಂದುವರಿದಿದ್ದು ಕಾಂಗ್ರೆಸ್‍ನ 21 ಸಚಿವರು ರಾಜೀನಾಮೆ ನೀಡಿದ್ದಾರೆ. ಸಚಿವರು ಸ್ವಯಂ ಪ್ರೇರಿತವಾಗಿ ರಾಜೀನಾಮೆಗೆ ಸಿದ್ಧರು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು. ಸಚಿವರು ಪಾರ್ಟಿಗೆ ರಾಜೀನಾಮೆ ಪತ್ರವನ್ನು ನೀಡಿದರು. ಭಿನ್ನಮತೀಯ ಶಾಸಕರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಸರಕಾರವನ್ನು ಉಳಿಸುವ ಯೋಜನೆಯಡಿ ಸಚಿವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಸಚಿವರು ಕೂಡ ಶೀಘ್ರ ರಾಜೀನಾಮೆ ನೀಡಲಿದ್ದಾರೆ.

ಬಹುಮತ ಕಳಕೊಂಡಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ ರಾಜೀನಾಮೆ ಸಲ್ಲಿಸಿ ಹೊಸ ಸರಕಾರಕ್ಕೆ ಅನುವು ಮಾಡಿಕೊಡಬೇಕೆಂದು ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಶಾಸಕರ ರಾಜೀನಾಮೆಯ ಹಿಂದೆ ಬಿಜೆಪಿ ಕಾರ್ಯವೆಸಗಿಲ್ಲ. ಕಾಂಗ್ರೆಸ್ ಜೆಡಿಎಸ್ ಪರಸ್ಪರ ಅಧಿಕಾರ ಹಗ್ಗ ಜಗ್ಗಾಟ ರಾಜೀನಾಮೆಗೆ ದಾರಿಯೊದಗಿಸಿದೆ ಎಂದು ಶೋಭಾ ಹೇಳಿದರು. ಈ ಇದಕ್ಕಿಂತ ಮುಂಚೆ ಸಚಿವ ಎಚ್.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ದೋಸ್ತಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. 13 ಮಂದಿ ಶಾಸಕರ ರಾಜೀನಾಮೆಯಿಂದಾಗಿ ಕಾಂಗ್ರೆಸ್ -ಜೆಡಿಎಸ್ ಸರಕಾರದ ಅಸ್ತಿತ್ವ ಡೋಲಾಯಮಾನವಾಗಿದೆ. ಇದರ ಹಿಂದೆ ಸಚಿವರ ರಾಜೀನಾಮೆ ಕೂಡ ಬಂದಿದೆ. ಈಗ ಸರಕಾರದ ಸದಸ್ಯಬಲ 105ಕ್ಕೆ ಇಳಿಕೆಯಾಗಿದೆ. ನಾಗೇಶ್ ಬೆಂಬಲ ನೀಡಿದರೆ ಬಿಜೆಪಿಯ ಸದಸ್ಯ ಬಲ 106 ಆಗಲಿದೆ. 224 ಸದಸ್ಯರ ವಿಧಾನಸಭೆಯಲಿ 113 ಸ್ಥಾನಗಳು ಬಹುಮತಕ್ಕೆ ಅಗತ್ಯವಿದೆ. ಏಳು ಶಾಸಕರ ಬೆಂಬಲ ಸಿಕ್ಕಿದರೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ.