ದಿಲ್ಲಿಯಲ್ಲಿ ಸೋನಿಯಾ ಗಾಂಧಿ-ರಾಜ್‍ಠಾಕ್ರೆ ಭೇಟಿ; ಹಲವು ಊಹಾಪೋಹ

0
774

ಹೊಸದಿಲ್ಲಿ, ಜು. 11: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ಅಧ್ಯಕ್ಷ ರಾಜ್ ಠಾಕ್ರೆ ದಿಲ್ಲಿಯಲ್ಲಿ ಭೇಟಿಯಾಗಿದ್ದಾರೆ. ಇಬ್ಬರು ನಾಯಕರ ಅನಿರೀಕ್ಷಿತ ಭೇಟಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳಿಗೆ ದಾರಿಮಾಡಿಕೊಟ್ಟಿದೆ. ಸಮಾಲೋಚನೆಯ ಕುರಿತು ಹೆಚ್ಚೇನು ತಿಳಿದಿಲ್ಲ ಎಂದು ಕಾಂಗ್ರೆಸ್ ಮತ್ತು ಎಂಎನ್‍ಎಸ್ ನಾಯಕರು ಹೇಳಿದರು.

ಸಮಾಲೋಚನೆ ಎಂಎನ್‍ಎಸ್ ನಾಯಕರನ್ನೂ ಚಕಿತಗೊಳಿಸಿದೆ ಎಂದು ಎಂಎನ್‍ಎಸ್ ನಾಯಕ ಸಂದೀಪ್ ದೇಶಪಾಂಡೆ ಹೇಳಿದರು. ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಲು ರಾಜ್ ಠಾಕ್ರೆ ದಿಲ್ಲಿಗೆ ಬಂದಿದ್ದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಿಕಟವಾಗಿದ್ದು ಮತಯಂತ್ರವನ್ನು ಹೊರತುಪಡಿಸಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕೆಂದು ರಾಜ್‍ಠಾಕ್ರೆ ಆಗ್ರಹಿಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಸೊನಿಯಾ ಗಾಂಧಿಯವರೊಡನೆ ಚರ್ಚಿಸಿದ್ದಾರೆಯೇ ಎಂದು ತಿಳಿದಿಲ್ಲ. ಇದಕ್ಕೆ ಸಂಬಂಧಿಸಿ ರಾಜ್‍ಠಾಕ್ರೆ ಯಾವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಇದೇ ವೇಳೆ, ಎನ್‍ಸಿಪಿ ನಾಯಕ ಶರದ್ ಪವಾರ್ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಸಮಾಲೋಚನೆಯ ವ್ಯವಸ್ಥೆ ಮಾಡಿದ್ದಾರೆ ಎನ್ನುವ ಊಹಾಪೋಹ ಕೇಳಿ ಬಂದಿದೆ. ಆದರೆ ಎನ್‍ಸಿಪಿ ಇದನ್ನು ನಿರಾಕರಿಸಿದೆ.