ಬೆಂಗಳೂರು, ಜು. 12: ನಿನ್ನೆ ತನ್ನನ್ನು ಭೇಟಿಯಾದ ಅತೃಪ್ತ ಶಾಸಕರ ರಾಜೀನಾಮೆಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್ ರಮೇಶ್ ಕುಮಾರ್, ಅವರೆಲ್ಲ ನಿನ್ನೆ ಕ್ರಮಬದ್ಧವಾಗಿ ರಾಜೀನಾಮೆ ನೀಡಲು ಬಂದಿದ್ದರು. ಅವರನ್ನು ಕ್ರಮಬದ್ಧವಾಗಿ ಚರ್ಚೆಗೆ ಬರಲು ಕರೆದಿದ್ದೇನೆ. ಅದು ನಡೆದ ನಂತರ ರಾಜೀನಾಮೆ ಇತ್ಯರ್ಥ ಮಾಡುತ್ತೇನೆ ಎಂದು ಅವರು ಹೇಳಿದರು.
ಸ್ಪೀಕರ್ ಸರಕಾರದ ಪರ ವರ್ತಿಸುತ್ತಿದ್ದಾರೆ ಎಂಬ ಬಿಜೆಪಿ ಆರೋಪವನ್ನು ಗಮನಕ್ಕೆ ತಂದಾಗ ತಾನು ಗಾಂಧಿವಾದಿ, ಗಾಂಧಿ ತತ್ವದ ತಳಹದಿಯಲ್ಲಿ ವ್ಯವಹರಿಸುತ್ತೇನೆ. ದೇಶ ಉಳಿಬೇಕಲ್ಲ. ಯಾರೋ ಆರೋಪ ಮಾಡಿದ್ದಾರೆಂದು ಅದನ್ನೆಲ್ಲ ಕ್ಯಾರು ಮಾಡಬೇಕಿಲ್ಲ. ಗಾಂಧಿಯನ್ನೇ ಕೊಂದ ದೇಶ ಇದು. ರಮೇಶ್ ಕುಮಾರ್ ರನ್ನು ಬಿಡ್ತಾರೇನ್ರಿ, ಗಾಂಧಿಯ ಮುಂದೆ ಕೈಜೋಡಿಸಿ ಬಚ್ಚಿಟ್ಟ ಪಿಸ್ತೂಲಿನಿಂದ ಹತ್ಯೆ ಮಾಡಿದರು. ಗಾಂಧಿಯನ್ನು ಕೊಲ್ಲುವುದಕ್ಕೆ ಪಿಸ್ತೂಲು ಬೇಕಿತ್ತೇನ್ರಿ. ದೊಣ್ಣೆಯಿಂದ ಹೊಡೆದಿದ್ದರೂ ಸಾಲುತ್ತಿತ್ತು. ಆದರೆ ಗಾಂಧಿ ಸತ್ತಿದ್ದಾರಾ. ಇಲ್ಲ, ಅವರ ದೇಹ ಮಾತ್ರ ಇಲ್ಲ. ಅವರ ವಿಚಾರ ಈಗಲೂ ಜೀವಂತವಾಗಿದೆ ಎಂದು ಮಾರ್ಮಿಕವಾಗಿ ನುಡಿದರು. ಸ್ಪೀಕರ್ ತನ್ನ ನಿಲುವಿನಿಂದ ಸ್ವಲ್ಪವೂ ವಿಚಿತವಾಗಿಲ್ಲ.
ಸುಪ್ರೀಂಕೋರ್ಟಿನ ತೀರ್ಪು ವ್ಯತಿರಿಕ್ತವಾದರೆ ಅವರ ಸಲಹೆಯಂತೆ ಮುಂದಿನ ಕ್ರಮ ಜರಗಿಸೋಣ ಎಂದು ಸ್ಪೀಕರ್ ರಮೇಶ್ ಕುಮಾರ್ ಪತ್ರಕರ್ತರಿಗೆ ತಿಳಿಸಿದರು.












