ಸನ್ಮಾರ್ಗ ಸಂಪಾದಕೀಯ
ಉತ್ತರ ಪ್ರದೇಶದ ಆಯುಷ್ ಮಲಿಕ್ ಮತ್ತು ಮಧ್ಯಪ್ರದೇಶದ ಬಿಲಾಲ್- ಪ್ರಭುತ್ವದ ಧರ್ಮದ್ವೇಷಕ್ಕೆ ತಾಜಾ ಉದಾಹರಣೆಯಾಗಿ ಇವರಿಬ್ಬರೂ ದೇಶದ ಮುಂದಿದ್ದಾರೆ. ಇವರಿಬ್ಬರಲ್ಲಿ ಆಯುಷ್ ಮಲಿಕ್ ಸುತ್ತ ಹುಟ್ಟಿಕೊಂಡಿರುವ ಚರ್ಚೆಗೆ ಇನ್ನೂ ತೆರೆ ಬಿದ್ದಿಲ್ಲ. ಆದರೆ, ಬಿಲಾಲ್ ಸುತ್ತ ಚರ್ಚೆಯೇ ಆಗುತ್ತಿಲ್ಲ.
ಆಯುಷ್ ಮಲಿಕ್ ಉತ್ತರ ಪ್ರದೇಶದವರು. ಈಗ ಮುಹಮ್ಮದ್ ಅಲಿ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇವರ ತಂದೆ ಶಾಮ್ಲಿ ಜಿಲ್ಲೆಯ ಪ್ರಸಿದ್ಧ ಔಷಧ ವ್ಯಾಪಾರಿಯಾಗಿರುವ ದೇವರಾಜ್ ಮಲಿಕ್. ಕಳೆದ ಈದ್ನ ಸಮಯದಲ್ಲಿ ಮಸೀದಿಯಲ್ಲಿ ಈ ಆಯುಷ್ ಮಲಿಕ್ ನಮಾಝ್ ಮಾಡುತ್ತಿರುವ ಚಿತ್ರವನ್ನು ಯಾರೋ ಹಂಚಿಕೊಂಡಿದ್ದರು. ಅದರ ಆಧಾರದಲ್ಲಿ ತಂದೆ ದೇವರಾಜ್ ಮಲಿಕ್ ಅವರು ಮಗನನ್ನು ಬಲವಂತದಿಂದ ಮತಾಂತರ ಮಾಡಲಾಗಿದೆ ಎಂದು ದೂರು ಕೊಟ್ಟಿದ್ದಾರೆ. ತನ್ನ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಮತಾಂತರ ಸಂಚು ನಡೆಸಲಾಗಿದೆ ಎಂದೂ ದೂರಿನಲ್ಲಿ ಹೇಳಿದ್ದಾರೆ. ಈ ದೂರಿನ ಆಧಾರದಲ್ಲಿ ಈ ಆಯುಷ್ ಮಲಿಕ್ರ ಪತ್ನಿ ಚಾಂದ್ನಿ ಖುರೇಶಿ ಮತ್ತು ಆಕೆಯ ತಂದೆ ಇಸ್ಲಾಮ್ ಖುರೇಶಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತನಿಖೆಗೆ ತಂಡವನ್ನು ರಚಿಸಿದ್ದಾರೆ. ಪಾಕಿಸ್ತಾನದ ಧರ್ಮ ಪಂಡಿತ ಇಸ್ರಾರ್ ಅಹ್ಮದ್ರ ಉಪನ್ಯಾಸವನ್ನು ಯೂಟ್ಯೂಬ್ನಲ್ಲಿ ಈ ಮಲಿಕ್ ವೀಕ್ಷಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಹಾಗೆಯೇ, ತನ್ನ ಮಗನ ಬದಲಾದ ವಿಚಾರಧಾರೆ ತನಗೆ ಗೊತ್ತಿತ್ತು ಎಂದು ತಂದೆ ಹೇಳಿದ್ದಾರೆ. ಇದೇವೇಳೆ,
ಟಿವಿ ಮೀಡಿಯಾಗಳು ಈ ಆಯುಷ್ ಮಲಿಕ್ ಮೇಲೆ ಮುಗಿಬಿದ್ದಿವೆ. ತರತರದ ಪ್ರಶ್ನೆಗಳನ್ನು ಕೇಳಿವೆ. ಬಲವಂತದ ಮತಾಂತರ ಎಂದು ಅವರ ಬಾಯಿಯಿಂದ ಹೇಳಿಸುವುದಕ್ಕೆ ತೀವ್ರವಾಗಿ ಶ್ರಮಿಸಿವೆ. ಆದರೆ, ತಾನು ಸ್ವಇಚ್ಛೆಯಿಂದಲೇ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ್ದಾನೆ ಎಂದು ಈ ಆಯುಷ್ ಮಲಿಕ್ ಉದ್ದಕ್ಕೂ ಹೇಳುತ್ತಲೇ ಬಂದಿದ್ದಾರೆ. ‘ತನ್ನ ಬ್ರೈನ್ ವಾಶ್ ಮಾಡಲಾಗಿಲ್ಲ, ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ, ತಾನು ಯೌವನದಲ್ಲಿ ಇಸ್ಲಾಮ್ನ ಮೇಲೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದೆ, ಆನ್ಲೈನ್ನಲ್ಲಿ ಮುಖ್ಯವಾಗಿ ಯೂಟ್ಯೂಬ್ನಲ್ಲಿ ಇಸ್ಲಾಮ್ಗೆ ಸಂಬಂಧಿಸಿದ ಉಪನ್ಯಾಸಗಳನ್ನು ವೀಕ್ಷಿಸುತ್ತಿದ್ದೆ, ಧಾರ್ಮಿಕ ಸಾಹಿತ್ಯಗಳ ಮೂಲಕ ಇಸ್ಲಾಮ್ ಧರ್ಮದ ಅಧ್ಯಯನ ಮಾಡಿದೆ, ವರ್ಷಗಳಿಂದ ಈ ಅಧ್ಯಯನ ಮಾಡಿ ಹಿಂದೂ ಧರ್ಮವನ್ನು ತ್ಯಜಿಸಿದೆ..’ ಎಂದವರು ಹೇಳಿದ್ದಾರೆ. ಇದೇವೇಳೆ,
‘ತಾನು ತನ್ನ ಪೂರ್ವಜರ ಆಸ್ತಿಯ ಮೇಲೆ ಕಣ್ಣಿಟ್ಟಿಲ್ಲ ಎಂದೂ ಅವರು ಹೇಳಿದ್ದಾರೆ. ನನ್ನ ತಾಯಿ ಮತ್ತು ಸಹೋದರಿಗಾಗಿ ನನ್ನ ಸಂಪೂರ್ಣ ಆಸ್ತಿಯನ್ನು ತ್ಯಜಿಸುವೆ, ನನಗೆ ಯಾವ ಆಸ್ತಿಯೂ ಬೇಡ’ ಎಂದೂ ಅವರು ಹೇಳಿದ್ದಾರೆ. ನಾನು ಈಗ ಮುಸ್ಲಿಮ್, ಮುಂದೆಯೂ ಮುಸ್ಲಿಮ್ ಎಂದೂ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಇಷ್ಟೆಲ್ಲಾ ಇದ್ದರೂ
ತನಿಖೆ ನಡೆಸುವುದಕ್ಕಿಂತ ಮೊದಲೇ ಇವರ ಪತ್ನಿ ಮತ್ತು ಮಾವನನ್ನು ಉತ್ತರ ಪ್ರದೇಶ ಪೊಲೀಸರು ಜೈಲಿಗಟ್ಟಿದ್ದಾರೆ. ಮತಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಂದಹಾಗೆ,
ಇದಕ್ಕಿಂತ ಹತ್ತು ದಿನ ಮೊದಲು ಮಧ್ಯಪ್ರದೇಶದಲ್ಲಿ ಆನ್ ಕ್ಯಾಮರಾದ ಮುಂದೆ ಮತಾಂತರ ಪ್ರಕ್ರಿಯೆ ಯೊಂದು ನಡೆದಿದೆ. ಇಲ್ಲಿನ ಖಾಂಡ್ವಾ ಜಿಲ್ಲೆಯ ಖಿಡ್ಕಿಯಾ ಎಂಬಲ್ಲಿಯ ಬಿಲಾಲ್ ಎಂಬವರು ವಿಶಾಲ್ ಆಗಿ ಪರಿವರ್ತನೆಯಾಗಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರವಾಗುವ ಪ್ರಕ್ರಿಯೆಯ ಭಾಗವಾಗಿ ತಲೆ ಬೋಳಿಸುವ ದೃಶ್ಯವನ್ನು ಟಿವಿ ಚಾನೆಲ್ಗಳು ಹಂಚಿಕೊಂಡಿವೆ. ಶಿವಪೂಜೆ, ಯಜ್ಞ ಹವನ, ಗಂಗಾಜಲ, ಪಂಚಾಮೃತ ಮತ್ತು ಗೋಮೂತ್ರ ಇತ್ಯಾದಿಗಳಿಂದ ಸ್ನಾನ ಮಾಡಿಸಲಾಗಿದೆ. ಬಕ್ರೀದ್ ದಿನದಂದು ಪ್ರಾಣಿಬಲಿಯನ್ನು ನೋಡಿ ಮನಸ್ಸು ನೊಂದು ಸ್ವಯಂಪ್ರೇರಿತವಾಗಿ ಹಿಂದೂ ಧರ್ಮ ಸ್ವೀಕರಿಸಿದ್ದಾನೆ ಎಂದು ಬಿಲಾಲ್ ಹೇಳಿದ್ದಾರೆ. ಬಿಲಾಲ್ ಚಿಕ್ಕಂದಿನಿಂದಲೇ ರಾಜೇಶ್ ಸಾರಂಗ್ ಎಂಬವರ ಬಳಿ ಬಸ್ ಆಪರೇಟರ್ ಆಗಿ ದುಡಿಯುತ್ತಿದ್ದರು. ಆ ಕುಟುಂಬದ ಪ್ರೀತಿ ಮತ್ತು ಅವರ ಆಚರಣೆಯಿಂದ ಪ್ರಭಾವಿತರಾಗಿ ಮತಾಂತರವಾಗಿದ್ದಾರೆ ಎಂದು ಸಮರ್ಥನೆ ನೀಡಲಾಗುತ್ತಿದೆ. ಆದರೆ,
ಆನ್ ಕ್ಯಾಮರಾದ ಮುಂದೆ ಮತಾಂತರ ನಡೆದಿದ್ದರೂ ಮತ್ತು ದೃಶ್ಯಗಳ ಸಾಕ್ಷಿ ಇದ್ದರೂ ಈ ಬಿಲಾಲ್ ಮೇಲಾಗಲಿ, ಅವರ ಮೇಲೆ ಪ್ರಭಾವ ಬೀರಿದ ರಾಜೇಶ್ ಸಾರಂಗ್ ಮೇಲಾಗಲಿ ಯಾವ ಪ್ರಕರಣವನ್ನೂ ದಾಖಲಿಸಲಾಗಿಲ್ಲ. ಹಿಂದೂ ಧರ್ಮ ಸ್ವೀಕಾರದ ಹಿಂದೆ ಸಂಚು ನಡೆದಿತ್ತಾ, ಬಲವಂತದಿಂದ ಮತಾಂತರ ಮಾಡಲಾಗಿದೆಯಾ, ಆಮಿಷ ಒಡ್ಡಲಾಗಿದೆಯಾ, ಬಡತನವನ್ನು ದುರುಪಯೋಗಪಡಿಸಲಾಗಿದೆಯಾ.. ಎಂಬಿತ್ಯಾದಿಗಳ ಸುತ್ತ ತನಿಖೆಗೆ ಆದೇಶಿಸಲಾಗಿಲ್ಲ. ಮತಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿಲ್ಲ. ಪೊಲೀಸ್ ಅಧಿಕಾರಿಗಳೂ ಅಷ್ಟೇ, ಈ ಬಿಲಾಲ್ ಯಾರ ಸಂಪರ್ಕದಲ್ಲಿದ್ದರು, ಯಾರ ಉಪನ್ಯಾಸವನ್ನು ಆಲಿಸುತ್ತಿದ್ದರು.. ಇತ್ಯಾದಿಗಳ ಬಗ್ಗೆ ಒಂದು ಗೆರೆಯ ಹೇಳಿಕೆಯನ್ನೂ ಕೊಟ್ಟಿಲ್ಲ. ಅಷ್ಟಕ್ಕೂ,
ಬಿಲಾಲ್, ಹಿಂದೂ ಧರ್ಮಕ್ಕೆ ಮತಾಂತರಗೊಂಡು ವಿಶಾಲ್ ಆಗಬಹುದಾದರೆ, ಆಯುಷ ಮಲಿಕ್ ಯಾಕೆ ಮುಹಮ್ಮದ್ ಅಲಿ ಆಗಬಾರದು? ಮಲಿಕ್ ಮತಾಂತರವನ್ನು ತನಿಖಿಸುವುದಾದರೆ, ಬಿಲಾಲ್ ಮತಾಂತರವನ್ನು ಯಾಕೆ ತನಿಖಿಸಬಾರದು? ಮಲಿಕ್ನ ಪತ್ನಿ ಮತ್ತು ಮಾವನನ್ನು ಜೈಲಿಗಟ್ಟಬಹುದಾದರೆ, ರಾಜೇಶ್ ಸಾರಂಗ್ ಮತ್ತು ಅವರ ಕುಟುಂಬವನ್ನು ಯಾಕೆ ಜೈಲಿಗಟ್ಟಬಾರದು? ಮಲಿಕ್ನ ಪತ್ನಿ ಮತ್ತು ಮಾವನ ವಿರುದ್ಧ ಮತಾಂತರ ನಿಷೇಧ ಕಾಯ್ದೆಯನ್ನು ಹೇರಬಹುದಾದರೆ, ಬಿಲಾಲ್ ಮೇಲೆ ಪ್ರಭಾವ ಬೀರಿರುವ ರಾಜೇಶ್ ಸಾರಂಗ್ ಮತ್ತು ಕುಟುಂಬದ ಮೇಲೆ ಯಾಕೆ ಮತಾಂತರ ನಿಷೇಧ ಕಾಯ್ದೆಯನ್ನು ಹೇರಬಾರದು? ಅಂದಹಾಗೆ,
ಇವು ಬರೇ ಪ್ರಶ್ನೆಗಳಲ್ಲ. ಪ್ರಭುತ್ವವೊಂದು ಪ್ರಕರಣವನ್ನು ಹೇಗೆ ಧರ್ಮದ ಕನ್ನಡಕದಿಂದ ನೋಡುತ್ತದೆ ಮತ್ತು ಪಕ್ಷಪಾತಿಯಾಗಿ ನಡೆದುಕೊಳ್ಳುತ್ತದೆ ಎಂಬುದನ್ನು ಸಾಬೀತುಪಡಿಸುವ ಅಂಶಗಳೂ ಆಗಿವೆ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ಬಿಜೆಪಿ ಸರಕಾರ ಇದೆ. ಮತಾಂತರದಿಂದ ಸಾಮಾಜಿಕ ಶಾಂತಿ ಮತ್ತು ಸಮತೋಲನಕ್ಕೆ ಅಡ್ಡಿಯಾಗುತ್ತದೆ ಎಂದಾದರೆ ಎರಡೂ ಪ್ರಕರಣಗಳನ್ನು ಸಮಾನ ದೃಷ್ಟಿಯಿಂದ ನೋಡಬೇಕಿತ್ತು. ವಿಶಾಲ್ ಆದ ಬಿಲಾಲ್ನನ್ನೂ ಮುಹಮ್ಮದ್ ಅಲಿ ಆದ ಆಯುಷ್ ಮಲಿಕ್ನನ್ನೂ ಒಂದೇ ತಟ್ಟೆಯಲ್ಲಿಟ್ಟು ತೂಗಬೇಕಿತ್ತು. ಸಿಬಿಐನಿಂದಲೋ ರಾಷ್ಟ್ರೀಯ ಭದ್ರತಾ ಸಂಸ್ಥೆಯಿಂದಲೋ ತನಿಖೆಗೆ ಆದೇಶಿಸಬೇಕಿತ್ತು. ಆದರೆ,
ಈ ಎರಡೂ ಪ್ರಕರಣಗಳಲ್ಲಿ ಪ್ರಭುತ್ವ ಅತ್ಯಂತ ಪಕ್ಷಪಾತಿತನದಿಂದ ನಡೆದುಕೊಂಡಿದೆ. ಇಸ್ಲಾಮ್ಗೆ ಮತಾಂತರವಾಗುವುದನ್ನು ಅಪರಾಧವಾಗಿ ಬಿಂಬಿಸಲಾಗಿದೆ. ಅಂಥ ಧೈರ್ಯವನ್ನು ತೋರುವವರು ಜೈಲುಕಂಬಿ ಎಣಿಸಬೇಕಾಗುತ್ತದೆ ಮತ್ತು ತನಿಖೆಗೆ ವಿಧೇಯವಾಗಬೇಕಾಗುತ್ತದೆ ಎಂಬ ಬೆದರಿಕೆಯ ಸಂದೇಶವನ್ನು ರವಾನಿಸಲಾಗಿದೆ. ಇದೇವೇಳೆ, ಹಿಂದೂ ಧರ್ಮಕ್ಕೆ ಮತಾಂತರವಾಗುವುದನ್ನು ಸ್ವಾಗತಿಸಲಾಗಿದೆ. ಅಂಥವರಿಗೆ ಯಾವ ತೊಂದರೆಯೂ ಆಗದಂತೆ ಸರಕಾರವೇ ಕಾವಲಿಗೆ ನಿಂತಿದೆ. ನಿಜವಾಗಿ,
ತಮಗಿಷ್ಟ ಬಂದ ಧರ್ಮವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಸ್ವಾತಂತ್ರ್ಯವನ್ನು ಸಂವಿಧಾನವೇ ನೀಡಿದೆ. ವಿಚಾರ ಸ್ಥಾವರವಲ್ಲ, ಜಂಗಮ. ಅದು ಬದಲಾಗುತ್ತಲೇ ಇರುತ್ತದೆ. ಇವತ್ತು ಸರಿ ಅನಿಸಿದ್ದು ನಾಳೆ ಹಾಗೆ ಅನಿಸಬೇಕಿಲ್ಲ. ವಿಚಾರ ಮಂಥನ ನೈಸರ್ಗಿಕವಾದದ್ದು. ಮನುಷ್ಯ ಬುದ್ಧಿಜೀವಿ ಮಾತ್ರ ಅಲ್ಲ, ತರ್ಕ ಜೀವಿ. ಪ್ರತಿಯೊಂದನ್ನೂ ತನ್ನ ಸಾಮರ್ಥ್ಯಕ್ಕನುಸಾರ ತರ್ಕಕ್ಕೆ ಒಡ್ಡುತ್ತಲೇ ಇರುವುದು ಆತನ ಪ್ರಕೃತಿ. ಹೀಗೆ ತರ್ಕಕ್ಕೆ ಒಡ್ಡುವವರಲ್ಲಿ ಸಾಮಾನ್ಯರಿಂದ ಹಿಡಿದು ಅಸಾಮಾನ್ಯರ ವರೆಗೆ ಎಲ್ಲರೂ ಇದ್ದಾರೆ. ಕೆಲವರು ತಮ್ಮ ತರ್ಕ ಮತ್ತು ಅಧ್ಯಯನದನುಸಾರ ವಿಚಾರವನ್ನು ಬದಲಿಸಿಕೊಳ್ಳುತ್ತಾರೆ. ವೈಚಾರಿಕವಾಗಿ ಆಗುವ ಈ ಪಲ್ಲಟಗಳಲ್ಲಿ ಒಂದನ್ನು ಮಾತ್ರ ಅಪರಾಧವಾಗಿಯೂ ಇನ್ನೊಂದನ್ನು ಸಹಜವಾಗಿಯೂ ನೋಡುವುದು ಧರ್ಮದ್ವೇಷವಲ್ಲದೇ ಇನ್ನೇನೂ ಅಲ್ಲ.












