ಹರಪನಹಳ್ಳಿ | ಎಸ್‌ಐಆರ್‌ನ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ: ಡಾ.‌ನಸೀಂ ಅಹ್ಮದ್

0
188

ಸನ್ಮಾರ್ಗ ವಾರ್ತೆ

ಎಸ್‌ಐಆ‌ರ್ ಪ್ರಕ್ರಿಯೆಯಿಂದ ಮತದಾರರ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಮತದಾರರ ಪಟ್ಟಿಯಲ್ಲಿನ ಅರ್ಹರ ಹೆಸರು ಉಳಿಯಬೇಕು. ಕಾರ್ಯಕರ್ತರು ಮುಂದಿನ ಮೂರು ತಿಂಗಳ ಕಾಲ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡಬೇಕಾಗಿದೆ ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ.‌ನಸೀಂ‌ ಅಹ್ಮದ್
ಕರೆ ನೀಡಿದರು.

ವಿಜಯ ನಗರ ಜಿಲ್ಲೆಯ ಹರಪನಹಳ್ಳಿಯ ಅಂಜುಮನ್ ಶಾದಿ ಮಹಲ್‌ನಲ್ಲಿ ಹರಪನಹಳ್ಳಿ ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಎಸ್‌ಐಆರ್‌ ಅರಿವು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಎಸ್‌ಐಆ‌ರ್ ಪ್ರಕ್ರಿಯೆಯಿಂದ ಮತದಾರರ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಮತದಾರರ ಪಟ್ಟಿಯಲ್ಲಿನ ಅರ್ಹರ ಹೆಸರು ಉಳಿಯಬೇಕು. ಮುಂದಿನ ಮೂರು ತಿಂಗಳ ಕಾಲ ಸಾಮಾಜಿಕ ಸಂಘಟನೆಗಳು ಹಾಗೂ ಕಾರ್ಯಕರ್ತರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಎಸ್‌ಐಆರ್‌ ಪ್ರಕ್ರಿಯೆಯ ಬಗ್ಗೆ

ನಿರ್ಲಕ್ಷ್ಯ ವಹಿಸಿದರೆ ಮತ ಹಾಕುವ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ಯಾರೂ ಕೂಡ ಮತದಾನದ ಹಕ್ಕು ಕಳೆದುಕೊಳ್ಳುವಂತಾಗಬಾರದು. ಜನರಿಗೆ ಸರಿಯಾದ ಮಾಹಿತಿ ಮತ್ತು ದಾಖಲೆಗಳನ್ನು ತಯಾರಿಸಿಕೊಟ್ಟು ಅವರ ಮತ ಕಾಪಾಡಬೇಕು” ಎಂದು ಡಾ. ನಸೀಂ ತಿಳಿಸಿದರು.

ಎಸ್‌ಐಆರ್‌ ಕಾರ್ಯಾಗಾರದಲ್ಲಿ ಎನ್ಯುಮರೇಷನ್ ಫಾರಂ ಅಂದರೆ ಏನು, ಅದನ್ನು ಹೇಗೆ ಭರ್ತಿ ಮಾಡಬೇಕು ಹಾಗೂ ಬಿಎಲ್ಓ, ಬಿಎಲ್‌ಎಗಳ ಜೊತೆಗೆ ಯಾವ ರೀತಿಯ ಸಹಕಾರ ನೀಡಬೇಕು, ನೋಟಿಸ್ ಬಂದಲ್ಲಿ ಯಾವ ದಾಖಲೆಗಳನ್ನು ಒದಗಿಸಬೇಕು ಎಂಬುದರ ಬಗ್ಗೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯ ಮಾಧ್ಯಮ ಕಾರ್ಯದರ್ಶಿ ಇರ್ಷಾದ್ ವೇಣೂರು ಮಾಹಿತಿ ಒದಗಿಸಿದರು.

ಕಾರ್ಯಕ್ರಮದಲ್ಲಿ ಹರಪನಹಳ್ಳಿಯ ವಕೀಲರಾದ ಸಿರಾಜ್, ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಹರಪನಹಳ್ಳಿ ಶಾಖೆಯ ಅಧ್ಯಕ್ಷರಾದ ಮುಝಮ್ಮಿಲ್, ಸ್ಥಳೀಯ ಬಿಎಲ್‌ಓ ಹುಸೇನ್ ಅಹ್ಮದ್, ವಕೀಲರಾದ ಮೆಹಬೂಬ್ ಹರಪನಹಳ್ಳಿ, ಸೋಲಿಡಾರಿಟಿ ಮುಖಂಡರಾದ ಖಲೀಮುಲ್ಲಾ ಖಾನ್, ಝಮೀರ್ ಅಹ್ಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇಮ್ತಿಯಾಝ್ ದಾವಣಗೆರೆ ಕಾರ್ಯಕ್ರಮ ನಿರೂಪಿಸಿದರು. ಮೌಲಾನಾ ರಹಮತ್ ಅವರು ಕಿರಾಅತ್ ಪಠಿಸಿದರು.