ಸನ್ಮಾರ್ಗ ವಾರ್ತೆ
ಜೂನ್ 20: ಹಿರಾ ಮಹಿಳಾ ಸಂಯುಕ್ತ ಪಿಯು ಕಾಲೇಜಿನಲ್ಲಿ 2026–27ನೇ ಸಾಲಿನ ವಿದ್ಯಾರ್ಥಿ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಹಾಗೂ ಫ್ರೆಶರ್ಸ್ ಡೇ ಕಾರ್ಯಕ್ರಮವು ಎಂಎಸ್ಎಚ್ಎಂ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಪವಿತ್ರ ಕುರ್ಆನ್ ಪಠಣದೊಂದಿಗೆ ಆರಂಭಿಸಲಾಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಮಸಿರಾ ಶೇಕ್ ಮತ್ತು ಆಯೇಶಾ ಮನ್ನಾಲ್ ಕಾರ್ಯಕ್ರಮ ನಿರೂಪಿಸಿದರು. ಅಲೀಮಾ ಶಝಾ ಸ್ವಾಗತ ಭಾಷಣ ಮಾಡಿದರು.
ಪ್ರಾಂಶುಪಾಲರಾದ ಶ್ರೀಮತಿ ಆಯಿಷಾ ಅಫ್ರೀನಾ ಹಾಗೂ ಉಪ ಪ್ರಾಂಶುಪಾಲರಾದ ಶ್ರೀಮತಿ ವಿಜಯಲಕ್ಷ್ಮಿ ಅವರು ನೂತನ ಸಚಿವ ಸಂಪುಟ ಸದಸ್ಯರಿಗೆ ಸ್ಯಾಶ್ ಮತ್ತು ಬ್ಯಾಡ್ಜ್ ವಿತರಿಸಿದರು. ನಂತರ ವಿದ್ಯಾರ್ಥಿ ಪರಿಷತ್ ಅಧ್ಯಕ್ಷೆಯಾದ ಆಯೇಶಾ ಸಿದ್ದೀಖಾ ಅವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದೆಹಲಿ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳ ವಕೀಲರಾದ ಜೇ.ಬಿ. ನಿಹಾಲ್ ಮೊಹಮ್ಮದ್ ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿ, ನಾಯಕತ್ವ, ಜವಾಬ್ದಾರಿ ಹಾಗೂ ಶಿಸ್ತುಬದ್ಧ ಜೀವನದ ಮಹತ್ವವನ್ನು ತಿಳಿಸಿದರು.
ವಿದ್ಯಾರ್ಥಿ ಪರಿಷತ್ ಅಧ್ಯಕ್ಷೆ ಆಯೇಶಾ ಸಿದ್ದೀಖಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಹಿರಾ ಸಂಸ್ಥೆಗಳ ಕರಸ್ಪಾಂಡೆಂಟ್ ಜೇ.ಬಿ. ರಹ್ಮತುಲ್ಲಾ ಅವರು ಅಧ್ಯಕ್ಷೀಯ ಭಾಷಣ ಮಾಡಿ ವಿದ್ಯಾರ್ಥಿನಿಯರು ಶಿಕ್ಷಣದೊಂದಿಗೆ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಾಲಿ ಫಾತಿಮಾ ವಂದನಾರ್ಪಣೆ ಸಲ್ಲಿಸಿದರು. ನೂರಾ ಹಾಗೂ ಖದೀಜಾ ಅಫ್ರೀನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಿದರು. ನಂತರ ನಡೆದ ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು. ಕಾರ್ಯಕ್ರಮವು ಸಂತೋಷ ಮತ್ತು ಉಲ್ಲಾಸದ ವಾತಾವರಣದಲ್ಲಿ ನೆರವೇರಿತು.












