‘ಮೋದಿ ಏಕೆ ಮೌನವಾಗಿದ್ದಾರೆ, ಬಿಜೆಪಿಯ ಇಬ್ಬಂದಿ ನೀತಿ ಸ್ಪಷ್ಟವಾಗಿದೆ’: ರಾಮ ಮಂದಿರ ಲೂಟಿ ಕುರಿತು ಕಾಂಗ್ರೆಸ್ ಆಕ್ರೋಶ

0
228

ಸನ್ಮಾರ್ಗ ವಾರ್ತೆ

ನವದೆಹಲಿ: ರಾಮ ಮಂದಿರದ ಖಜಾನೆ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಪ್ರಧಾನಿಯವರ ಮೌನವನ್ನು ಪ್ರಶ್ನಿಸಿರುವ ಪಕ್ಷವು, ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ವಿಶೇಷ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.

ಅಯೋಧ್ಯೆಯಲ್ಲಿ ನಡೆದಿರುವ ಲೂಟಿಯು ಕೋಟ್ಯಂತರ ರೂಪಾಯಿ ಮೌಲ್ಯದ್ದಾಗಿದ್ದು, ಇದು ಕೋಟ್ಯಂತರ ಭಕ್ತರ ನಂಬಿಕೆಗೆ ಬಗೆದ ದ್ರೋಹವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ರಾಮ ಮಂದಿರ ಚಳವಳಿಯ ಹೆಸರಿನಲ್ಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಮಂದಿರದ ನಿಧಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಲೂಟಿ ನಡೆದಿದ್ದರೂ ಪ್ರಧಾನಿಯವರು ಮೌನ ವಹಿಸಿರುವುದು ಬಿಜೆಪಿಯ ಇಬ್ಬಂದಿ ನೀತಿಯನ್ನು ಬಯಲು ಮಾಡುತ್ತದೆ ಎಂದು ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಮಂದಿರದ ಉಸ್ತುವಾರಿ ನೋಡಿಕೊಳ್ಳುವ ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಅನ್ನು ಕೇಂದ್ರ ಸರ್ಕಾರವೇ ರಚಿಸಿರುವುದರಿಂದ, ಯುಪಿ ಸರ್ಕಾರದ ಅಡಿಯಲ್ಲಿನ ಎಸ್‌ಐಟಿ (SIT) ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಪ್ರಧಾನಿಯವರು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಸುಪ್ರೀಂ ಕೋರ್ಟ್‌ನ ನೇರ ಉಸ್ತುವಾರಿಯಲ್ಲಿ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ವಿಷಯವನ್ನು ಪ್ರಸ್ತಾಪಿಸಿ ಪ್ರಧಾನಿಯವರಿಗೆ ಪತ್ರವನ್ನೂ ಬರೆಯಲಾಗಿದೆ.

ಈ ನಡುವೆ, ಅಯೋಧ್ಯಾ ರಾಮ ಮಂದಿರದ ಖಜಾನೆ ಲೂಟಿಗೆ ಸಂಬಂಧಿಸಿದಂತೆ ತನಿಖಾ ತಂಡಕ್ಕೆ ಮತ್ತಷ್ಟು ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ಕಾಣಿಕೆಗಳನ್ನು ಐವರು ಆರೋಪಿಗಳು ದುರುಪಯೋಗಪಡಿಸಿ ಕೊಳ್ಳುತ್ತಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಇದರೊಂದಿಗೆ, ಪ್ರಕರಣದಲ್ಲಿ ಬಂಧಿತನಾಗಿರುವ ಅವಿನಾಶ್ ಶುಕ್ಲಾನನ್ನು ವಿವರವಾಗಿ ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ನಿರ್ಧರಿಸಿದೆ. ಪೊಲೀಸರು ಈ ಹಿಂದೆ ಅವಿನಾಶ್‌ನಿಂದ 20 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದರು. ಆರೋಪಿಗಳಿಂದ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಐಟಿ ಹೇಳಿದೆ. ತನಿಖಾ ತಂಡವು ಆರೋಪಿಗಳ ಬ್ಯಾಂಕ್ ವಹಿವಾಟುಗಳ ಬಗ್ಗೆಯೂ ಮಾಹಿತಿಯನ್ನು ಕೋರಿದೆ.