ಸನ್ಮಾರ್ಗ ವಾರ್ತೆ
ಹೈದರಾಬಾದ್: ಹೈದರಾಬಾದ್ನ ಹಳೆಯ ನಗರದಲ್ಲಿರುವ ನೂರಿಯಾ ಕೋ-ಆಪ್ ಜೂನಿಯರ್ ಕಾಲೇಜಿನ ಆವರಣಕ್ಕೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಆಂದೇಲ ಶ್ರೀರಾಮುಲು ಯಾದವ್ ನೇತೃತ್ವದ ಗುಂಪೊಂದು ಬುಧವಾರ ದಿಢೀರ್ ಒಳನುಗ್ಗಿ ಹಂಗಾಮಾ ಸೃಷ್ಟಿಸಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ರೋಹಿಂಗ್ಯಾ ಮುಸ್ಲಿಮರ ಮಕ್ಕಳು ಓದುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿಗರು ಸಿಬ್ಬಂದಿಯೊಂದಿಗೆ ವಾದಕ್ಕಿಳಿದಿದ್ದಾರೆ.
ಕಳೆದ 2023 ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮಹೇಶ್ವರಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆಂದೇಲ ಶ್ರೀರಾಮುಲು ಯಾದವ್, ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಬೆಂಬಲದೊಂದಿಗೆ ಈ ಕಾಲೇಜು “ಅಕ್ರಮ ವಲಸಿಗರ” ಮಕ್ಕಳಿಗೆ ಪ್ರವೇಶ ನೀಡುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಲಭ್ಯವಾಗಿರುವ ಕಾಲೇಜಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಯಾದವ್ ಮತ್ತು ಅವರ ಬೆಂಬಲಿಗರ ಗುಂಪು ಆವರಣಕ್ಕೆ ಪ್ರವೇಶಿಸಿ, ವಿದ್ಯಾರ್ಥಿಗಳ ದಾಖಲೆಗಳನ್ನು ಹಾಜರುಪಡಿಸುವಂತೆ ಸಿಬ್ಬಂದಿಯನ್ನು ಒತ್ತಾಯಿಸುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಆದರೆ, ಕಾಲೇಜು ಸಿಬ್ಬಂದಿಯ ಪ್ರಕಾರ, ಆಧಾರ್ ಕಾರ್ಡ್ಗಳು ಸೇರಿದಂತೆ ಭಾರತದಲ್ಲಿ ಸಿಂಧುತ್ವ ಹೊಂದಿರುವ ಅಧಿಕೃತ ದಾಖಲೆಗಳನ್ನು ಬಳಸಿಕೊಂಡೇ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿಗೆ ದಾಖಲಿಸಿಕೊಳ್ಳಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಬಿಜೆಪಿ ನಾಯಕ ಯಾದವ್, “ಬಾಲಾಪುರದಲ್ಲಿ ವಾಸವಿರುವ ಮಗುವೊಂದು ಈ ಕಾಲೇಜಿನಲ್ಲಿ ಓದುತ್ತಿದೆ ಎಂದು ನಮಗೆ ತಿಳಿಯಿತು. ಆದರೆ ಇದು ಕೇವಲ ಒಂದು ಮಗುವಲ್ಲ; ಇಲ್ಲಿ ರೋಹಿಂಗ್ಯಾ ಮುಸ್ಲಿಮರ ಅನೇಕ ಮಕ್ಕಳು ಓದುತ್ತಿದ್ದಾರೆ ಎಂಬುದು ನಮಗೆ ತಿಳಿದುಬಂದಿದೆ. ಎಐಎಂಐಎಂ ಪಕ್ಷವು ನೂರಿಯಾ ಕಾಲೇಜನ್ನು ಬೆಂಬಲಿಸುತ್ತಿದೆ ಮತ್ತು ಅವರು ಕಳ್ಳರನ್ನು ಬೆಂಬಲಿಸುತ್ತಿದ್ದಾರೆ. ಎಂಐಎಂನ ಇಂತಹ ಬೆದರಿಕೆ ತಂತ್ರಗಳಿಗೆ ಬಿಜೆಪಿ ಎಂದಿಗೂ ಹೆದರುವುದಿಲ್ಲ,” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮತ್ತೊಂದೆಡೆ, ಈ ಘಟನೆಯಿಂದ ತೀವ್ರ ಬೇಸತ್ತಿರುವ ನೂರಿಯಾ ಕೋ-ಆಪ್ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಗಾಝಿಯುದ್ದೀನ್ ಅವರು ಸಂತೋಷ್ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ತಾವಿಲ್ಲದ ಸಮಯದಲ್ಲಿ, ಯಾದವ್ ನೇತೃತ್ವದ ಸುಮಾರು 30 ರಿಂದ 40 ಬಿಜೆಪಿ ಕಾರ್ಯಕರ್ತರು ಕಾಲೇಜು ಆವರಣಕ್ಕೆ ಅಕ್ರಮವಾಗಿ ನುಗ್ಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಗುಂಪು ಕಚೇರಿ ಸಿಬ್ಬಂದಿಗೆ ಬೆದರಿಕೆ ಹಾಕಿ, ಅನಧಿಕೃತ ವ್ಯಕ್ತಿಗಳಿಗೆ ತೋರಿಸಲು ಸಾಧ್ಯವಿಲ್ಲದ ವಿದ್ಯಾರ್ಥಿಗಳ ಖಾಸಗಿ ದಾಖಲೆಗಳನ್ನು ಪರಿಶೀಲಿಸಲು ಒತ್ತಾಯಿಸಿದೆ. ಇದಕ್ಕೆ ಸಿಬ್ಬಂದಿ ನಿರಾಕರಿಸಿದಾಗ, ಅವರೊಂದಿಗೆ ವಾದಕ್ಕಿಳಿದು ಕಾಲೇಜಿನ ಒಳಗೆ ವಿಡಿಯೋಗಳನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದೆ. ಸಂಸ್ಥೆಯು “ಅಕ್ರಮ ವಿದ್ಯಾರ್ಥಿಗಳಿಗೆ ಆಶ್ರಯ ನೀಡುತ್ತಿದೆ” ಎಂಬ ಅವರ ಆರೋಪ ಸಂಪೂರ್ಣ ಆಧಾರರಹಿತ ಮತ್ತು ಸುಳ್ಳು ಎಂದು ಕರೆದಿರುವ ಪ್ರಾಂಶುಪಾಲರು, ಯಾದವ್ ಮತ್ತು ದೂರಿನಲ್ಲಿ ಹೆಸರಿಸಲಾದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ವಿನಂತಿಸಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಜ್ಲಿಸ್ ಬಚಾವೋ ತೆಹ್ರೀಕ್ (ಎಂಬಿಟಿ) ವಕ್ತಾರ ಅಮ್ಜದ್ ಉಲ್ಲಾ ಖಾನ್, ಯಾದವ್ ಮತ್ತು ಸುಮಾರು 50 ಬಿಜೆಪಿ ಕಾರ್ಯಕರ್ತರು ಬಾಲಾಪುರದಿಂದ ಎಡಿ ಬಜಾರ್ವರೆಗೆ ಹಲವಾರು ಪೊಲೀಸ್ ವ್ಯಾಪ್ತಿಗಳನ್ನು ದಾಟಿ ಹೇಗೆ ಪ್ರಯಾಣಿಸಲು ಸಾಧ್ಯವಾಯಿತು ಹಾಗೂ ಯಾವುದೇ ತಡೆಯಿಲ್ಲದೆ ಕಾಲೇಜಿಗೆ ಪ್ರವೇಶಿಸಿ ಪ್ರಾಂಶುಪಾಲರು ಮತ್ತು ಸಿಬ್ಬಂದಿಗೆ ಹೇಗೆ ಕಿರುಕುಳ ನೀಡಿದರು ಎಂದು ಪ್ರಶ್ನಿಸಿದ್ದಾರೆ. ಈ ಘಟನೆಯು ಗುಪ್ತಚರ ಇಲಾಖೆ, ಹೈದರಾಬಾದ್ ಪೊಲೀಸರ ವಿಶೇಷ ವಿಭಾಗ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಉತ್ತರಿಸಬೇಕಾದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ. ಶೈಕ್ಷಣಿಕ ಸಂಸ್ಥೆಗಳನ್ನು ಇಂತಹ ಅನಧಿಕೃತ ತಪಾಸಣೆ ಅಥವಾ ರಾಜಕೀಯ ಬೆದರಿಕೆಗೆ ಒಳಪಡಿಸಬಾರದು ಎಂದು ಆಶಿಸಿರುವ ಖಾನ್, ರೋಹಿಂಗ್ಯಾ ನಿರಾಶ್ರಿತರ ಕುರಿತಾದ ಆರೋಪಗಳ ವಿಷಯಗಳು ಭಾರತ ಸರ್ಕಾರ ಮತ್ತು ಸಮರ್ಥ ಅಧಿಕಾರಿಗಳ ವ್ಯಾಪ್ತಿಗೆ ಬರುತ್ತವೆಯೇ ಹೊರತು ರಾಜಕೀಯ ಕಾರ್ಯಕರ್ತರ ವ್ಯಾಪ್ತಿಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾವುದೇ ವ್ಯಕ್ತಿಗೆ ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುವ ಅಧಿಕಾರವಿಲ್ಲ ಎಂದಿರುವ ಎಂಬಿಟಿ ನಾಯಕ, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಜವಾಬ್ದಾರರಾದವರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
https://x.com/AndelaSriramulu/status/2072322401229304251/photo/1












