ಸನ್ಮಾರ್ಗ ವಾರ್ತೆ
ರಿಯಾದ್: ಉಮ್ರಾ ಯಾತ್ರಿಕರು ಪುನರಾವರ್ತಿತವಾಗಿ ಉಮ್ರಾ ನಿರ್ವಹಿಸಲು ಅನುಕೂಲವಾಗುವಂತೆ ಸೌದಿಯ ಹಜ್ ಮತ್ತು ಉಮ್ರಾ ಸಚಿವಾಲಯವು ಹೊಸ ಯೋಜನೆಯನ್ನು ಆರಂಭಿಸಿದ್ದು, ಒಂದು ವರ್ಷದ ಸಿಂಧುತ್ವವಿರುವ ಬಹು-ಪ್ರವೇಶ ಉಮ್ರಾ ವೀಸಾವನ್ನು ಘೋಷಿಸಿದೆ. ಈ ವೀಸಾದ ಮೂಲಕ ದೇಶಕ್ಕೆ ಹಲವು ಬಾರಿ ಪ್ರವೇಶಿಸಲು ಮತ್ತು ವೀಸಾ ಅವಧಿಯಲ್ಲಿ ಒಟ್ಟು 90 ದಿನಗಳವರೆಗೆ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಜಾರಿಯಾದ ದಿನಾಂಕದಿಂದ ಒಂದು ವರ್ಷದವರೆಗೆ ಮಾನ್ಯವಾಗಿರುವ ಈ ವೀಸಾದಲ್ಲಿ ನೀವು ಸೌದಿ ಅರೇಬಿಯಾದಲ್ಲಿ ಒಟ್ಟು 90 ದಿನಗಳವರೆಗೆ ನೆಲೆಸಬಹುದಾಗಿದ್ದು, ಬಂದು ಹೋಗುವ ಪ್ರತಿ ಬಾರಿಯೂ ನೀವು ಉಳಿದುಕೊಂಡ ದಿನಗಳು ಈ 90 ದಿನಗಳ ಅವಧಿಯಿಂದ ಕಡಿತಗೊಳ್ಳುತ್ತವೆ.
ಆದರೆ ಈ ವೀಸ ವು ಹಜ್ ಅವಧಿಯ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ದುಲ್-ಕಅದಾ ತಿಂಗಳ 1 ರಿಂದ ದುಲ್-ಹಿಜ್ಜಾ ತಿಂಗಳ 13 ರವರೆಗಿನ ಹಜ್ ಸೀಸನ್ನಲ್ಲಿ ಈ ವೀಸಾವನ್ನು ಬಳಸಿ ಸೌದಿ ಅರೇಬಿಯಾಗೆ ಪ್ರವೇಶಿಸಲು ಅನುಮತಿ ಇರುವುದಿಲ್ಲ. ಈ ವೀಸಾದಲ್ಲಿ ಬರುವವರು ಪ್ರತಿ ಭೇಟಿಗೂ ‘ನುಸುಕ್’ ಪ್ಲಾಟ್ಫಾರ್ಮ್ ಮೂಲಕ ಅನುಮೋದಿತ ಕಂಪನಿಗಳಿಂದ ಉಮ್ರಾ ಪ್ಯಾಕೇಜ್ ಅನ್ನು ಖರೀದಿಸಬೇಕಾಗುತ್ತದೆ. ಪ್ಯಾಕೇಜ್ನ ಮಾನ್ಯತೆಯು ವೀಸಾದಲ್ಲಿ ಉಳಿದಿರುವ ದಿನಗಳನ್ನು ಮೀರಿರಬಾರದು ಮತ್ತು ಸೌದಿ ಅರೇಬಿಯಾಕ್ಕೆ ಮರಳುವ ಮೊದಲು ‘ನುಸುಕ್’ ಆ್ಯಪ್ ಮೂಲಕ ಉಮ್ರಾ ಪರವಾನಗಿಯನ್ನು ಪಡೆಯಬೇಕು. ಯಾತ್ರಿಕರು ಮೊದಲ ಬಾರಿ ಬರುವಾಗ ನುಸುಕ್ ಮೂಲಕ ಪ್ಯಾಕೇಜ್ ಪಡೆದು ವೀಸಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನಂತರ ಅದೇ ವೀಸಾದಲ್ಲಿ ವಾಪಸ್ ಬರುವಾಗ, ಹೊಸ ಪ್ಯಾಕೇಜ್ ಅನ್ನು ಪಡೆದುಕೊಂಡು ನುಸುಕ್ ಆ್ಯಪ್ ಮೂಲಕ ಮತ್ತೊಮ್ಮೆ ಪರವಾನಗಿ ಪಡೆಯಬೇಕಿದ್ದು, ವಿಮಾನ ನಿಲ್ದಾಣಕ್ಕೆ ಬಂದಾಗ ಮತ್ತು ವಾಪಸ್ ಹೋಗುವಾಗ ವೀಸಾದಲ್ಲಿ ಉಳಿದಿರುವ ದಿನಗಳು ಸಿಸ್ಟಮ್ನಲ್ಲಿ ಅಪ್ಡೇಟ್ ಆಗುತ್ತವೆ.












