ಸನ್ಮಾರ್ಗ ವಾರ್ತೆ
ಗುವಾಹಟಿ: ಪ್ರಮುಖ ಪರಿಸರ ಮತ್ತು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಚಿತ್ರವನ್ನು ಅನುಮತಿಯಿಲ್ಲದೆ ಸರ್ಕಾರಿ ಗೋಡೆಯ ಮೇಲೆ ಚಿತ್ರಿಸಿದ ಇಬ್ಬರು ಯುವಕರನ್ನು ಗುವಾಹಟಿ ಪೊಲೀಸರು ಬಂಧಿಸಿದ್ದಾರೆ. ಗುವಾಹಟಿ ಪೂರ್ವದಲ್ಲಿ ಗಸ್ತು ತಿರುಗುತ್ತಿದ್ದಾಗ ಈ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಜ್ಯೋತಿ ವಿಷ್ಣು ಸಭಾಭವನಕ್ಕೆ ಹೋಗುವ ರಸ್ತೆಯಲ್ಲಿರುವ ಸರ್ಕಾರಿ ಗೋಡೆಯ ಮೇಲೆ ಚಿತ್ರಬಿಡಿಸುತ್ತಿದ್ದಾಗ ಸಿಕ್ಕಿಬಿದ್ದಿರುವ ಇವರು ಅಸ್ಸಾಂನ ಸರಕಾರಿ ಕಲಾ ಮತ್ತು ಕರಕುಶಲ ಕಾಲೇಜಿನ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದು, ಇವರ ಮೇಲೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಆರೋಪವಿದೆ.
ಕೆಲ ದಿನಗಳ ಹಿಂದೆ ನಗರದ ಫ್ಲೈಓವರ್ ಕಂಬವೊಂದರ ಮೇಲೆ ಸೋನಮ್ ವಾಂಗ್ಚುಕ್ ಅವರ ದೊಡ್ಡ ಚಿತ್ರ ಹಾಗೂ “ಸೋನಮ್ ವಾಂಗ್ಚುಕ್ ಅವರನ್ನು ಉಳಿಸಿ” ಎಂಬ ಬರಹ ಕಾಣಿಸಿಕೊಂಡು ಸಾರ್ವಜನಿಕರ ಗಮನ ಸೆಳೆದ ನಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ವಿದ್ಯಾರ್ಥಿಗಳು ಬಂಧನಕ್ಕೊಳಗಾಗಿರುವ ಇದು ಎರಡನೇ ಘಟನೆಯಾಗಿದೆ. ಬಂಧಿತ ಯುವಕರಿಗೆ ಯಾವುದೇ ರಾಜಕೀಯ ಪಕ್ಷ ಅಥವಾ ಇತರ ಸಂಘಟನೆಗಳೊಂದಿಗೆ ಯಾವುದೇ ಸಂಬಂಧವಿಲ್ಲದೆ ಸ್ವತಂತ್ರವಾಗಿ ಚಿತ್ರ ಬಿಡಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಹಿರಣ್ಯ ಕುಮಾರ್ ತಿಳಿಸಿದ್ದು, ಸರ್ಕಾರದ ಅನುಮತಿಯಿಲ್ಲದೆ ಸಾರ್ವಜನಿಕ ಆಸ್ತಿಯನ್ನು ವಿರೂಪಗೊಳಿಸದಂತೆ ಎಚ್ಚರಿಕೆ ನೀಡಿ ನಂತರ ಇವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್ನಲ್ಲಿ ಕಳೆದ 20 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ ನಂತರ ಗುವಾಹಟಿಯಲ್ಲಿ ಈ ಘಟನೆ ನಡೆದಿದೆ.
ಸಾರ್ವಜನಿಕ ಆಸ್ತಿಯ ಅನಧಿಕೃತ ವಿರೂಪಗೊಳಿಸುವಿಕೆಯ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಈಗಾಗಲೇ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು, ಗುವಾಹಟಿಯಲ್ಲಿ ಫ್ಲೈಓವರ್ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಚಿತ್ರಕಲೆಗಳಿಗೆ ಅವಕಾಶ ನೀಡದಂತೆ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗಳಿಗೆ ಸೂಚನೆ ನೀಡಿದ್ದಾರೆ. ನಗರವನ್ನು ಸ್ವಚ್ಛವಾಗಿಡುವ ಭಾಗವಾಗಿ, ಅನುಮತಿಯಿಲ್ಲದೆ ಪೋಸ್ಟರ್ಗಳನ್ನು ಅಂಟಿಸುವವರು ಅಥವಾ ಸಾರ್ವಜನಿಕ ಗೋಡೆಗಳು ಅಥವಾ ವಿದ್ಯುತ್ ಕಂಬಗಳ ಮೇಲೆ ಬರೆಯುವವರಿಗೆ 5,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಗುವಾಹಟಿ ಮಹಾನಗರ ಪಾಲಿಕೆ ಕೂಡ ಎಚ್ಚರಿಕೆ ನೀಡಿದೆ.












