ದೇಶದ ರಾಜಕಾರಣದ ಭವಿಷ್ಯ: ಒಂದು ನೋಟ

0
190

✍️ ಪಾಚು ಮೆನನ್

ಭಾರತೀಯ ರಾಜಕಾರಣದ ಚಿತ್ರಣವು ಇಲ್ಲಿನ ಬೃಹತ್ ಜನಸಮುದಾಯದ ವೈವಿಧ್ಯತೆ ಹಾಗೂ ಬಹುಪಕ್ಷೀಯ ವ್ಯವಸ್ಥೆಯಿಂದ ರೂಪುಗೊಂಡಿರುವ ಒಂದು ವಿಭಿನ್ನ, ಗೊಂದಲಭರಿತ ಮತ್ತು ಅಚ್ಚರಿಯ ಲೋಕವಾಗಿದೆ. ರಾಷ್ಟ್ರೀಯ ಮೈತ್ರಿಗಳು ಹಾಗೂ ರಾಜ್ಯದ ಪ್ರಾದೇಶಿಕ ಶಕ್ತಿಗಳ ಜೋಡಣೆಯಿಂದ ಆಡಳಿತ ಸಾಗುತ್ತಿದ್ದು, ಸ್ಥಳೀಯ ಕನಸುಗಳು ಹಾಗೂ ರಾಷ್ಟ್ರೀಯ ಆಡಳಿತವನ್ನು ಸರಿದೂಗಿಸಲು ಇಡೀ ದೇಶದ ಮತದಾರರು ತೀವ್ರ ಪೈಪೋಟಿಯ ಚುನಾವಣಾ ಅಖಾಡದಲ್ಲಿ ಧುಮುಕುತ್ತಾರೆ. ಆದರೆ ಚುನಾವಣೆ ಮುಗಿದ ಮೇಲೂ ರಾಜಕಾರಣಿಗಳ ಬಳಿ ಜನ ಸಾಮಾನ್ಯರಿಗೆ ಜಾಗವಿದೆಯೇ ಎಂಬುದು ಯಾರಿಂದಲೂ ಸ್ಪಷ್ಟ ಉತ್ತರ ಸಿಗದ ನಿಗೂಢ ಪ್ರಶ್ನೆಯಾಗಿದೆ. ಜನರನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆಂಬುದು ಸುಳ್ಳಲ್ಲ, ಆದರೆ ಅವರನ್ನು ಕೇವಲ ಅಂಕಿಗಳಂತೆ (ಡೇಟಾ), ಆರ್ಥಿಕತೆಯನ್ನು ಬೆಳೆಸುವ ಸಾಧನಗಳಂತೆ ಮತ್ತು ಸಾರ್ವಜನಿಕ ಅಭಿಪ್ರಾಯ ತಿಳಿಯುವ ಮಾಪಕಗಳಂತೆ ನೋಡುತ್ತಾರೆಯೇ ಹೊರತು, ಗೌರವಾನ್ವಿತ ಪ್ರತ್ಯೇಕ ಪ್ರಜೆಗಳಂತೆ ಪರಿಗಣಿಸುವುದಿಲ್ಲ.

ರಾಜಕೀಯ ಶಾಸ್ತ್ರ ಮತ್ತು ಪ್ರಾಯೋಗಿಕ ಅಧ್ಯಯನಗಳು ಸಾಬೀತುಪಡಿಸಿರುವಂತೆ, ‘ಪ್ರತಿನಿಧಿ ವ್ಯವಸ್ಥೆ’ಯು ವ್ಯಾಪಕವಾಗಿ ಸಾಮಾನ್ಯ ಜನತೆಗಿಂತ ಹೆಚ್ಚು ಸಿರಿವಂತ ವರ್ಗಗಳು ಅಥವಾ ಸಂಘಟಿತ ಹಿತಾಸಕ್ತಿ ಗುಂಪುಗಳ ಕಡೆಗೆ ಒಲವು ತೋರುತ್ತದೆ.

ಸಾಮಾನ್ಯ ಮತದಾರರ ಕಷ್ಟ-ಸುಖಗಳಿಗೆ ನೇರವಾಗಿ ಸ್ಪಂದಿಸುವ ಬದಲು, ಒಪಿನಿಯನ್ ಪೋಲ್‌ಗಳು, ಜನರ ಒಲವು-ನಿಲುವುಗಳು ಹಾಗೂ ಪ್ರಭಾವಿ ಲಾಬಿ ಗುಂಪುಗಳ ಬೆಂಬಲವನ್ನು ಆಧರಿಸಿ ದೇಶದ ಮೂಡನ್ನು ಅಳತೆ ಮಾಡುವುದೇ ತಮ್ಮ ದೊಡ್ಡ ಸಾಧನೆ ಎಂದು ನಮ್ಮ ರಾಜಕಾರಣಿಗಳು ಬೀಗುತ್ತಾರೆ.

ಆದರೆ, ಕಳೆದ ಕೆಲವು ವರ್ಷಗಳಿಂದ ನಮ್ಮ ದೇಶದಲ್ಲಿ ಆಡಳಿತದ ದಿಕ್ಕನ್ನೇ ಬದಲಿಸುತ್ತಿರುವ ಆಳವಾದ ರಾಜಕೀಯ ಧ್ರುವೀಕರಣಗಳು ಮತ್ತು ಸಿದ್ಧಾಂತದ ಬಿರುಕುಗಳು ಕಂಡುಬರುತ್ತಿವೆ. ಇದು ಒಮ್ಮತದ ಆಡಳಿತದ ಹಾದಿಯಲ್ಲಿದ್ದ ನಮ್ಮ ರಾಜಕೀಯ ರಂಗವನ್ನು ತೀವ್ರ ಪಂಥೀಯ ಸ್ಪರ್ಧೆಯತ್ತ ಕೊಂಡೊಯ್ಯುತ್ತಿದೆ.

ನಮ್ಮ ದೇಶದಲ್ಲಿ ರಾಜಕೀಯ ಚಳವಳಿಗಳು ಹಿಂದಿನಿಂದಲೂ ತಳಮಟ್ಟದ ಜನಸಮುದಾಯದ ಒಗ್ಗೂಡುವಿಕೆ, ಸಮಸ್ಯೆ ಆಧಾರಿತ ಸಾಮೂಹಿಕ ಹೋರಾಟಗಳು ಹಾಗೂ ನಾಗರಿಕ ಸಮಾಜದ ಅಭಿಯಾನಗಳನ್ನೇ ನೆಚ್ಚಿಕೊಂಡಿವೆ. ಇತ್ತೀಚಿನ ವರ್ಷಗಳಲ್ಲಿ ಈ ತಳಮಟ್ಟದ ಅಭಿಯಾನಗಳು ಸಾಂಪ್ರದಾಯಿಕ ನೆಲಮಟ್ಟದ ಸಕ್ರಿಯತೆಯನ್ನು ಡಿಜಿಟಲ್ ಸಂಘಟನೆಯೊಂದಿಗೆ ಹೆಚ್ಚು ಹೆಚ್ಚು ಬೆರೆಸಿಕೊಳ್ಳುತ್ತಿವೆ. ಇದರಿಂದಾಗಿ ಸ್ಥಳೀಯ ಮಟ್ಟದ ಪ್ರತಿಭಟನೆಗಳು ಅತ್ಯಂತ ವೇಗವಾಗಿ ರಾಷ್ಟ್ರೀಯ ಮಟ್ಟದ ಗಮನ ಸೆಳೆಯುತ್ತಿದ್ದು, ದೇಶದ ರಾಜಕೀಯ ಚರ್ಚೆಗಳ ದಿಕ್ಕನ್ನೇ ಬದಲಿಸುತ್ತಿವೆ.

ಭಾರತದಲ್ಲಿ ಯುವಜನರ ಆಕ್ರೋಶವು ದಶಕಗಳಷ್ಟು ಆಳವಾಗಿ ಬೇರೂರಿರುವ ವಿದ್ಯಮಾನವಾಗಿದೆ. ವ್ಯವಸ್ಥೆಯ ಅನ್ಯಾಯಗಳು, ಆರ್ಥಿಕ ಹಿಂಜರಿತಗಳು ಮತ್ತು ಅವಕಾಶಗಳ ಕೊರತೆಯಿಂದಾಗಿ ಸುಲಭವಾಗಿ ಜೀವನದಲ್ಲಿ ಮೇಲೆರಬಹುದು ಎಂಬ ಭರವಸೆಯು ಮೊದಲ ಬಾರಿಗೆ ನುಚ್ಚುನೂರಾದ 1970ರ ದಶಕದ ಮಧ್ಯಭಾಗ ಹಾಗೂ 1990ರ ದಶಕದಲ್ಲಿ ಇದು ಹುಟ್ಟಿಕೊಂಡಿತು.

ಭಾರತದಲ್ಲಿ ಯುವಜನರ ಇಂದಿನ ನಿರಾಶೆಯು ಸಂಪೂರ್ಣ ಹೊಸ ಸ್ವರೂಪ ಪಡೆದುಕೊಂಡಿದ್ದು, ಇದು ಯಾವುದೇ ಸಿದ್ಧಾಂತಕ್ಕೆ ಬದ್ಧವಾಗಿಲ್ಲದೆ ಕೇವಲ ಡಿಜಿಟಲ್ ಲೋಕದ ಮೂಲಕವೇ ಬೆಳೆಯುತ್ತಿರುವ ಒಂದು ವಿಶಿಷ್ಟ ವಿದ್ಯಮಾನವಾಗಿದೆ. ಸಾರ್ವಜನಿಕರಂತೆ ಯುವಕರನ್ನೂ ಸಹ ಹಿಂದಿನಿಂದಲೂ ರಾಜಕೀಯದ ಪ್ರಚಾರದ ವಸ್ತುಗಳಂತೆ ನಡೆಸಿಕೊಳ್ಳಲಾಗಿದೆ. ಯುವಕರನ್ನು ನೀತಿ ನಿರೂಪಕರನ್ನಾಗಿ ಕಾಣದೆ, ಕೇವಲ ಚುನಾವಣಾ ಪ್ರಚಾರದ ಸಭೆಗಳನ್ನು ತುಂಬಲು ಹಾಗೂ ಮತಗಳಿಸುವ ಸಾಧನಗಳಾಗಿ ಮಾತ್ರ ಬಳಸಲಾಗಿದೆ. ಈ ರೀತಿಯ ಬೋಗಸ್ ಮನ್ನಣೆಯು ಯುವಕರ ಮನಸ್ಸಿನಲ್ಲಿ ಆಳವಾದ ಅಸಮಾಧಾನವನ್ನು ಮೂಡಿಸಿದ್ದು, ಈಗ ಅದು ಜೆನ್ ಝೀ ತಲೆಮಾರಿನ ಮುಂಚೂಣಿಯಲ್ಲಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ವ್ಯಂಗ್ಯಭರಿತ ಪ್ರತಿಭಟನೆಯಾಗಿ ಹೊರಹೊಮ್ಮಿದೆ.

ರಾಷ್ಟ್ರೀಯ ಪಕ್ಷಗಳಿಂದ ಹಿಡಿದು ಪ್ರಾದೇಶಿಕ ರಂಗಗಳವರೆಗಿನ ಸಾಂಪ್ರದಾಯಿಕ ರಾಜಕಾರಣಿಗಳು ಯಾವಾಗಲೂ ಔಪಚಾರಿಕವಾದ ‘ಯುವ ಘಟಕ’ಗಳನ್ನು ಸ್ಥಾಪಿಸಿದ್ದರೂ, ಹೊಸ ಡಿಜಿಟಲ್ ಅಲೆಯು ಕೇವಲ ರಾಜಕೀಯ ಬ್ರ್ಯಾಂಡ್‌ಗಿಂತ ಹೆಚ್ಚಾಗಿ ನಿಜವಾದ ಹೊಣೆಗಾರಿಕೆಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಸೂಚಿಸುತ್ತದೆ.

ಮತದಾರರಲ್ಲಿ ಜೆನ್ ಝೀ ಗಮನಾರ್ಹ ಪಾಲನ್ನು ಹೊಂದಿರುವುದರಿಂದ, ಅವರ ಬೇಡಿಕೆಗಳು ಪಾರದರ್ಶಕತೆ, ನಿರುದ್ಯೋಗ ಮತ್ತು ನ್ಯಾಯಯುತ ಆಡಳಿತದ ಮೇಲೆ ಕೇಂದ್ರೀಕೃತವಾಗಿವೆ.

ಭಾರತದ ರಾಜಕೀಯ ಪ್ರತಿಭಟನೆಗಳು ಯಾವ ರೀತಿ ಬದಲಾಗುತ್ತಿವೆ ಎಂಬುದಕ್ಕೆ ಕಾಕ್ರೋಚ್ ಜನತಾ ಪಕ್ಷದಂತಹ ಚಳವಳಿಗಳೇ ಸಾಕ್ಷಿ ಮತ್ತು ಇವು ಯುವಜನರ ಅಸಮಾಧಾನವನ್ನು ಅಳೆಯುವ ಕೈಗನ್ನಡಿಯಾಗಿವೆ. ಇವು ದೇಶದ ರಾಜಕೀಯ ಭವಿಷ್ಯವನ್ನು ರೂಪಿಸುತ್ತವೆಯಾ? ಇಲ್ಲವಾ? ಎಂಬುದು, ಡಿಜಿಟಲ್ ಲೋಕದ ಹೋರಾಟದಿಂದ ಗಟ್ಟಿಯಾದ, ದೀರ್ಘಾವಧಿಯ ತಳಮಟ್ಟದ ಹೋರಾಟಕ್ಕೆ ಹೆಜ್ಜೆ ಇಡುವ ಅವುಗಳ ಶಕ್ತಿಯ ಮೇಲೆ ನಿಂತಿದೆ. ಸಿಜೆಪಿ ಬಗ್ಗೆ ಮೂಡಿರುವ ಕುತೂಹಲ ಹಾಗೂ ಅದಕ್ಕೆ ದೊರೆತ ಜನಪ್ರಿಯತೆಯನ್ನು ಗಮನಿಸಿದರೆ, ಭವಿಷ್ಯದಲ್ಲಿ ವರ್ಚುವಲ್ ರಾಜಕಾರಣವೇ ಪ್ರಮುಖವಾಗುವ ಸಾಧ್ಯತೆ ದಟ್ಟವಾಗಿದೆ ಎಂದೆನಿಸುತ್ತದೆ. ಆದರೆ ಭಾರತದಲ್ಲಿ ವ್ಯವಸ್ಥೆಯನ್ನು ತಿದ್ದಿ, ಮತದಾರರಲ್ಲಿ ಜಾಗೃತಿ ಮೂಡಿಸಲು ಬಂದ ಜನಪ್ರಿಯ ಪ್ರತಿಭಟನೆಗಳು ದೊಡ್ಡ ಮಟ್ಟದ ಆಂದೋಲನದಿಂದ ಮುಂದುವರಿದು, ವ್ಯವಸ್ಥೆಯಲ್ಲಿ ಶಾಶ್ವತ ಸುಧಾರಣೆಗಳನ್ನು ತರುವಲ್ಲಿ ವಿಫಲವಾಗಿರುವುದು ವಿಪರ್ಯಾಸವೇ ಸರಿ.

ಇದಲ್ಲದೆ, ನಾಗರಿಕರು ರೂಪಿಸುವ ತಳಮಟ್ಟದ ಆಂದೋಲನಗಳು ಮುಂದೆಂದಾದರೂ ಅಧಿಕೃತ ರಾಜಕೀಯ ಪಕ್ಷಗಳ ಯಂತ್ರೋಪಕರಣಗಳಾಗಿ ಬದಲಾಗುವುದು ಅನಿವಾರ್ಯ ಎಂಬುದು ಗಮನಾರ್ಹ ಸಂಗತಿ. ಈ ರೂಪಾಂತರವು ಭಾರತೀಯ ಪ್ರಜಾಪ್ರಭುತ್ವದ ಒಡಲಿನಲ್ಲಿರುವ ಸಾಂಪ್ರದಾಯಿಕ ಧರ್ಮಸಂಕಟವನ್ನು ಎತ್ತಿ ತೋರಿಸುತ್ತದೆ. ಈ ವ್ಯವಸ್ಥಿತ ತಿರುವಿನ ಕಾರಣದಿಂದ ಹೋರಾಟಗಾರರು ಅನಿವಾರ್ಯ ರಾಜಿಗೆ ಒಳಗಾಗಬೇಕಾಗುತ್ತದೆ, ಅವರ ಬಂಡಾಯದ ತೀವ್ರತೆಯು ತಣ್ಣಗಾಗುತ್ತದೆ ಮತ್ತು ಜಟಿಲವಾದ ಆಡಳಿತಾತ್ಮಕ ತೊಡಕುಗಳು ಹುಟ್ಟಿಕೊಳ್ಳುತ್ತವೆ. ಇದರಿಂದಾಗಿ ಬಹುತೇಕ ಚಳವಳಿಗಳು ಮಧ್ಯದಲ್ಲೇ ಕುಸಿದು ಬೀಳುತ್ತವೆ ಅಥವಾ ಸಂಪೂರ್ಣವಾಗಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ.

ಸಮಾಜದಲ್ಲಿ ಗಟ್ಟಿಯಾದ ಮತ್ತು ಶಾಶ್ವತವಾದ ಸಾಂಸ್ಥಿಕ ಸುಧಾರಣೆಗಳು ಆಗಬೇಕೆಂದರೆ, ನಾಗರಿಕರು ಮುನ್ನಡೆಸುವ ಹೋರಾಟಗಳು ತಾವು ಯಾವ ವ್ಯವಸ್ಥೆಯನ್ನು ತಿದ್ದಲು ಬಂದಿದ್ದರೋ ಅದೇ ರಾಜಕೀಯ ವ್ಯವಸ್ಥೆಯೊಳಗೆ ನೇರವಾಗಿ ಪ್ರವೇಶಿಸಿ ಪಾಲ್ಗೊಳ್ಳುವುದು ಅನಿವಾರ್ಯ ಎಂಬ ಕಹಿ ಸತ್ಯವನ್ನು ಕ್ರಮೇಣ ಮನಗಾಣಬೇಕಾಗುತ್ತದೆ.

ರಾಷ್ಟ್ರೀಯ ಪಕ್ಷಗಳಿಗೆ ಸಾಧ್ಯವಾಗದ ಕಡೆಗಳಲ್ಲಿ ಸ್ಥಳೀಯರ ಆಶೋತ್ತರಗಳನ್ನು, ಸಾಂಸ್ಕೃತಿಕ ಅಸ್ಮಿತೆಗಳನ್ನು ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ಯಶಸ್ವಿಯಾಗಿ ಈಡೇರಿಸುವ ಮೂಲಕ ಪ್ರಾದೇಶಿಕ ಪಕ್ಷಗಳು ಹಿಂದಿನಿಂದಲೂ ರಾಜ್ಯ ರಾಜಕಾರಣದಲ್ಲಿ ಮೆರೆದಿವೆ. ಹಿಂದಿನಿಂದಲೂ ಮುಂಚೂಣಿಯಲ್ಲಿದ್ದ ಈ ಪಕ್ಷಗಳು ಈಗ ಬದಲಾಗುತ್ತಿರುವ ರಾಜಕೀಯ ಗಾಳಿಯ ನಡುವೆ ಹೆಜ್ಜೆ ಇಡಬೇಕಿದೆ. ಪ್ರಾದೇಶಿಕ ಹಕ್ಕುಗಳ ಗಟ್ಟಿಯಾದ ದನಿಯಾಗಿ ಇವು ಗುರುತಿಸಿಕೊಂಡಿದ್ದರೂ, ದಿನೇ ದಿನೇ ಕಠಿಣವಾಗುತ್ತಿರುವ ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ. ಇಂದಿನ ಚುನಾವಣಾ ರಂಗದಲ್ಲಿನ ಅಸ್ಥಿರ ಸಮ್ಮಿಶ್ರ ಸರಕಾರಗಳ ಸರಮಾಲೆಯಲ್ಲಿ, ಈ ಪ್ರಾದೇಶಿಕ ಪಕ್ಷಗಳು ಕೇವಲ ಒಕ್ಕೂಟ ಸರ್ಕಾರಗಳನ್ನು ಹಿಡಿದಿಟ್ಟುಕೊಳ್ಳುವ ಊರುಗೋಲುಗಳಾಗಿ ಮಾತ್ರ ಸೀಮಿತಗೊಳ್ಳುವಂತಾಗಿದೆ.

ಹಾಗಂದ ಮಾತ್ರಕ್ಕೆ ರಾಷ್ಟ್ರೀಯ ಪಕ್ಷಗಳಲ್ಲಿ ಯಾವುದೇ ರೀತಿಯ ದೌರ್ಬಲ್ಯಗಳಿಲ್ಲ ಎಂದರ್ಥವಲ್ಲ. ನಾಯಕತ್ವ ಅಥವಾ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಜಗಳದಿಂದ ಪ್ರಾದೇಶಿಕ ಪಕ್ಷಗಳು ಒಡೆದುಹೋಗಿ ಸುದ್ದಿಯಾಗುವುದು ಸಾಮಾನ್ಯವಾದರೂ, ರಾಷ್ಟ್ರೀಯ ಪಕ್ಷಗಳ ಒಳಗೆಯೇ ಸಾಂಸ್ಥಿಕ ಮತ್ತು ಸಿದ್ಧಾಂತದ ಆಳವಾದ ಮುನಿಸುಗಳಿರುತ್ತವೆ. ಇನ್ನು ಇಂದಿನ ರಾಜಕಾರಣದ ಕಥೆಗೆ ಬಂದರೆ, 2014ರಿಂದ ಸತತವಾಗಿ ಅಧಿಕಾರದಲ್ಲಿರುವ ಬಿಜೆಪಿಯೇ ಈಗ ದೇಶದ ಪ್ರಶ್ನಾತೀತ ಪ್ರಬಲ ರಾಜಕೀಯ ಶಕ್ತಿಯಾಗಿದೆ. ಇಂದಿನ ರಾಜಕೀಯ ಪರಿಸ್ಥಿತಿಯನ್ನು ಹಿಂದೆ ಒಮ್ಮೆ ಕಾಂಗ್ರೆಸ್ ಪಕ್ಷ ಮೆರೆದಿದ್ದ ಸುವರ್ಣ ಯುಗದ ಪ್ರಾಬಲ್ಯಕ್ಕೆ ಸರಳವಾಗಿ ಹೋಲಿಸಬಹುದು. ತಳಮಟ್ಟದಲ್ಲಿ ವಿಚಾರಧಾರೆಯುಳ್ಳ ನಿಷ್ಠಾವಂತ ಕಾರ್ಯಕರ್ತರ ಜಾಲವನ್ನು ಹೊಂದಿರುವ ಜೊತೆಗೆ, ಜನಸಾಮಾನ್ಯರನ್ನು ಆಕರ್ಷಿಸುವ ಚುನಾವಣಾ ತಂತ್ರಗಾರಿಕೆಯನ್ನು ಬೆರೆಸಿರುವ ಬಿಜೆಪಿ, ಒಂದು ವಿಶಿಷ್ಟ ಕೇಡರ್ ಹಾಗೂ ಜನಬೆಂಬಲದ ಮಿಶ್ರ ಪಕ್ಷವಾಗಿ ಮುನ್ನಡೆಯುತ್ತಿದೆ. ಜಗತ್ತಿನಾದ್ಯಂತ ಕೋಟ್ಯಂತರ ಪ್ರಾಥಮಿಕ ಸದಸ್ಯರನ್ನು ಹೊಂದಿರುವ ಈ ಪಕ್ಷವು ಕಟ್ಟುನಿಟ್ಟಾದ ಶ್ರೇಣಿಯ ಅಧಿಕಾರ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಪಕ್ಷದೊಳಗಿನ ಒಡಕುಗಳು ಹಾಗೂ ಗುಂಪು ರಾಜಕಾರಣವು ಕಳೆದ ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ಕಾಡುತ್ತಾ ಬಂದಿದೆ. ಈ ನಿರಂತರ ಬೂದಿ ಮುಚ್ಚಿದ ಕೆಂಡದಂತಹ ಆಂತರಿಕ ಕಲಹಗಳು ಆಗಾಗ್ಗೆ ನಾಯಕತ್ವಕ್ಕಾಗಿ ಭೀಕರ ಪೈಪೋಟಿಗೆ ದಾರಿಮಾಡಿಕೊಡುತ್ತವೆ. ಇದರಿಂದಾಗಿ ರಾಷ್ಟ್ರೀಯ ಮಟ್ಟದಲ್ಲೂ ಹಾಗೂ ರಾಜ್ಯ ಮಟ್ಟದಲ್ಲೂ ಪಕ್ಷದ ಚುನಾವಣಾ ಗೆಲುವಿನ ಸಂಭಾವ್ಯತೆಗೆ ಗಂಭೀರವಾದ ಪೆಟ್ಟು ಬೀಳುತ್ತಿದೆ.

ಇದೇ ವೇಳೆಗೆ, ಬಿಜೆಪಿಯ ವಿವಿಧ ರಾಜ್ಯ ಘಟಕಗಳಲ್ಲೂ ಆಂತರಿಕ ಬಣಗಳು ಹಾಗೂ ಪರಸ್ಪರ ನಂಬಿಕೆಯಿಲ್ಲದಿರುವಿಕೆ ತೀವ್ರವಾಗಿ ಉಲ್ಬಣಿಸುತ್ತಿದೆ ಎಂಬುದು ಎದ್ದು ಕಾಣುವ ಸಂಗತಿ. ಪಕ್ಷದ ವ್ಯಾಪ್ತಿಯನ್ನು ಬಲವಂತವಾಗಿ ದೊಡ್ಡದಾಗಿಸುವ ತವಕ ಮತ್ತು ಇತರ ವಿರೋಧ ಪಕ್ಷಗಳಿಂದ ಬರುವವರನ್ನು ಯದ್ವಾತದ್ವಾ ಸೇರಿಸಿಕೊಳ್ಳುವ ಧಾವಂತವು, ಹಲವು ಕಡೆಗಳಲ್ಲಿ ಪಕ್ಷದ ಮೂಲ ಸಿದ್ಧಾಂತದ ಶಿಸ್ತನ್ನು ಶಿಥಿಲಗೊಳಿಸಿದೆ.

ಇಂದು ದೇಶದ ಮೂಲೆಮೂಲೆಯಲ್ಲಿರುವ ಪ್ರಾದೇಶಿಕ ಹಾಗೂ ರಾಷ್ಟ್ರೀಯ ವಿರೋಧ ಪಕ್ಷಗಳು ಅತ್ಯಂತ ಕಷ್ಟಕರವಾದ ರಾಜಕೀಯ ಸುಳಿಯಲ್ಲಿ ಸಿಲುಕಿಹಾಕಿಕೊಂಡಿವೆ. ದುರ್ಬಲವಾದ ಮೈತ್ರಿಗಳು, ಒಡೆದು ಹೋದ ಬಣಗಳು ಮತ್ತು ಪಕ್ಷ ಬದಲಾಯಿಸುವ ಆಟಗಳು ಈ ಪಕ್ಷಗಳನ್ನು ಹೈರಾಣಾಗಿಸಿವೆ. ಇದರ ಪರಿಣಾಮವಾಗಿ, ಅನೇಕ ರಾಜಕೀಯ ಸಂಘಟನೆಗಳು ಅಧಿಕಾರದಲ್ಲಿ ಮುಂದುವರಿಯುವುದು ಹಾಗಿರಲಿ, ರಾಜಕೀಯ ರಂಗದಲ್ಲಿ ತಮ್ಮ ಅಸ್ತಿತ್ವವನ್ನೇ ಉಳಿಸಿಕೊಳ್ಳಲು ದೆಹಲಿ ಮತ್ತು ರಾಜ್ಯಗಳಲ್ಲಿ ಕಾದಾಡಬೇಕಾದ ದುಸ್ಥಿತಿ ಎದುರಾಗಿದೆ.

ಪಕ್ಷಾಂತರಗಳನ್ನು ವ್ಯವಸ್ಥಿತವಾಗಿ ಪ್ರಾಯೋಜಿಸುವುದು ಇಂದು ಆಡಳಿತ ಪಕ್ಷಗಳು ವಿರೋಧಿಗಳನ್ನು ಮುಗಿಸಲು ಬಳಸುವ ಅತ್ಯಂತ ಆಕ್ರಮಣಕಾರಿ ಅಸ್ತ್ರವಾಗಿದೆ. ನೈತಿಕ-ಅನೈತಿಕ ಎಂಬ ಯಾವ ಸೀಮೆಯೂ ಇಲ್ಲದೆ, ಇಂದಿನ ರಾಜಕಾರಣದಲ್ಲಿ ಯಾವುದು ಬೇಕಾದರೂ ನಡೆಯಬಹುದು ಎಂಬ ಧೋರಣೆ ಬೆಳೆದುಬಂದಿದೆ. ಆದರೂ, ಹಿಂದಿನಿಂದಲೂ ಬೇರೂರಿರುವ ಹಳೆಯ ರಾಜಕೀಯ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ಅಸಮಾಧಾನದಿಂದಾಗಿ, ದೇಶದಲ್ಲಿ ನಿಧಾನವಾಗಿ ಒಂದು ಹೊಸ ರಾಜಕೀಯ ಅಲೆ ರೂಪುಗೊಳ್ಳುತ್ತಿದೆ. ದೇಶದ ಮೂಲೆಮೂಲೆಯಲ್ಲಿ ಹಾಗೂ ರಾಜ್ಯಗಳ ಮಟ್ಟದಲ್ಲಿ ಮತದಾರರು ಹಳೆಯ ಪಕ್ಷಗಳ ಏಕಚಕ್ರಾಧಿಪತ್ಯಕ್ಕೆ ತಿಲಾಂಜಲಿ ಇಡುತ್ತಿದ್ದಾರೆ. ಕೇವಲ ಪಕ್ಷದ ಹೆಸರಿಗಿಂತ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ತಳಮಟ್ಟದ ಹೋರಾಟಗಳಿಂದ ಬಂದ ಪರ್ಯಾಯ ಶಕ್ತಿಗಳ ಕೈಹಿಡಿಯುವ ಮೂಲಕ, ಚುನಾವಣಾ ಕಣದಲ್ಲಿ ಹಾಲಿ ಶಾಸಕರ ಅಧಿಪತ್ಯವನ್ನು ಪ್ರಶ್ನಿಸುತ್ತಿದ್ದಾರೆ.

ಸಾಂಪ್ರದಾಯಿಕ ರಾಜಕೀಯ ಶಕ್ತಿಗಳ ಒಡಕು, ಸಿನಿಮಾರಂಗದ ಪ್ರಖ್ಯಾತ ಮುಖಗಳು ಸೇರಿದಂತೆ ಇತರೆ ಕ್ಷೇತ್ರಗಳ ‘ಹೊರಗಿನ ವ್ಯಕ್ತಿಗಳು’ ತಮ್ಮದೇ ಆದ ಸ್ವತಂತ್ರ ರಾಜಕೀಯ ಪಕ್ಷಗಳನ್ನು ಹುಟ್ಟುಹಾಕಲು ಮುಕ್ತ ಅವಕಾಶ ಕಲ್ಪಿಸಿದೆ. ಇದಕ್ಕೆ ತಮಿಳುನಾಡು ಸಾಕ್ಷಿಯಾಗಿದೆ!

ಇಂದಿನ ಭಾರತದ ರಾಜಕಾರಣದಲ್ಲಿ ‘ವ್ಯಕ್ತಿಗಿಂತ ಪಕ್ಷವೇ ದೊಡ್ಡದು’ ಎಂಬ ಹಳೆಯ ಕಾಲದ ಮಾತು ಈಗ ತನ್ನ ಅರ್ಥ ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಏಕೆಂದರೆ ಎಲ್ಲವೂ ಒಬ್ಬ ವ್ಯಕ್ತಿಯ ವರ್ಚಸ್ಸು ಮತ್ತು ಆಕರ್ಷಕ ನಾಯಕತ್ವದ ಸುತ್ತ ಗಿರಕಿ ಹೊಡೆಯುತ್ತಿದೆ. ಇದರ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿನ ಹಗಲಿರುಳಿನ ಪ್ರಚಾರ ಹಾಗೂ ರಾಜ್ಯ ಚುನಾವಣೆಗಳನ್ನು ಗೆಲ್ಲಲು ರಾಷ್ಟ್ರೀಯ ನಾಯಕರೇ ಗತಿ ಎಂಬ ಪರಿಸ್ಥಿತಿ ಇದಕ್ಕೆ ಮುಖ್ಯ ಕಾರಣವಾಗಿದೆ. “ಆದರೆ ಇಂತಹ ಅತಿಮಾನುಷ ವೈಯಕ್ತಿಕ ಅಧಿಕಾರದ ಅಡಿಯಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳು, ಸಿದ್ಧಾಂತದ ವಿಚಾರ ವಿನಿಮಯಗಳು ಮತ್ತು ಪಕ್ಷದೊಳಗಿನ ಪ್ರಜಾಪ್ರಭುತ್ವವು ಉಳಿದುಕೊಳ್ಳುತ್ತದೆಯೇ ಎಂಬುವುದೇ ಸದ್ಯದ ದೊಡ್ಡ ಸವಾಲು.” (ದಿ ಡಿಪ್ಲೋಮ್ಯಾಟ್)

ಭಾರತದ ರಾಜಕಾರಣವು ಕೇವಲ ಸಿದ್ಧಾಂತಗಳ ಅಬ್ಬರದಿಂದ ಹೊರಬಂದು, ಈಗ ತೀವ್ರ ಪೈಪೋಟಿ ಮತ್ತು ಜನರಿಗೆ ಸೌಲಭ್ಯಗಳನ್ನು ಹಂಚುವುದನ್ನೇ ಗುರಿಯಾಗಿಸಿಕೊಂಡಿರುವ ಕಾಲಘಟ್ಟಕ್ಕೆ ಕಾಲಿಡುತ್ತಿದೆ. ಮುಂದಿನ ದಶಕದಲ್ಲಿ ಈ ಹೊಸ ರಾಜಕೀಯ ಪಯಣವು ದೇಶದ ಕೋಟ್ಯಂತರ ಯುವಜನರ ಬಲ, ಹೊಸದಾಗಿ ಬೇರೂರುತ್ತಿರುವ ಸಮ್ಮಿಶ್ರ ಆಡಳಿತದ ಅನಿವಾರ್ಯತೆ ಹಾಗೂ ಬದಲಾಗುತ್ತಿರುವ ಡಿಜಿಟಲ್ ಹೋರಾಟದ ಅಲೆಯ ಮೂಲಕ ಶಕ್ತಿ ಪಡೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.