ಅತ್ಯಾಚಾರ: ಕಾರಣಗಳು ಮತ್ತು ಪರಿಹಾರ

0
283

✍️ ಸಬೀಹಾ ಫಾತಿಮಾ
ಸಂಪಾದಕರು, ಅನುಪಮ ಮಹಿಳಾ ಮಾಸಿಕ

ತಿಂಗಳ ಹಸುಳೆಯಿಂದ ಹಿಡಿದು ಅತಿವೃದ್ಧಾಪ್ಯವನ್ನು ತಲುಪಿದ ಸ್ತ್ರೀಯರ ಮೇಲೂ ಅತ್ಯಾಚಾರ ನಡೆಯುವ ಸಮಾಜ ನಮ್ಮದು. ನಿರಂತರ ವಾಗಿ ಹೆಚ್ಚುತ್ತಿರುವ ಪೊಕ್ಸೋ ಪ್ರಕರಣಗಳು. ಅತೀ ವಿಕಾರವಾಗಿ ಅತ್ಯಾ ಚಾರವೆಸಗಿ ಕೊಂದು ಮುಗಿಸುವ ಅತ್ಯಾಚಾರದ ವಿವರಗಳು. ಇನ್ನೊಂದೆಡೆ ನನ್ನ ಪಕ್ಷದವನು ನನ್ನ ಜಾತಿಯವನು ಎಂದು ಅತ್ಯಾಚಾರಿಯನ್ನು ಹೂ ಮಾಲೆ ಹಾಕಿ ಸ್ವಾಗತಿಸುವ ನಿಕೃಷ್ಟ ಸಂಸ್ಕೃತಿ ಇವುಗಳ ಮಧ್ಯೆ ಬದುಕ ಬೇಕಾದ ದುಸ್ಥಿತಿ ನಮ್ಮದು. ಯಾವೊಂದು ದಿನವೂ ಅತ್ಯಾಚಾರದ ಪ್ರಕರ ಣವು ವರದಿಯಾಗದೆ ಬಾಕಿಯಾಗುವುದಿಲ್ಲ.

ಮನುಷ್ಯನಿಗೆ ಬದುಕಲು ಆಹಾರ, ಉಡುಪು, ಮನೆ ಹೇಗೆ ಅಗತ್ಯವೋ ಅದೇ ರೀತಿ ಮಾನಸಿಕ ನೆಮ್ಮದಿ, ಸಮಾಧಾನ, ಶಾಂತಿ ಮತ್ತು ನಿರ್ಭೀತ ಬದುಕು ಅಷ್ಟೇ ಪ್ರಾಮುಖ್ಯವಾದುದು. ಒಂದು ವೇಳೆ ಹೊಟ್ಟೆ ತುಂಬಾ ತಿನ್ನಲು ಕುಡಿಯಲು ಉಡಲು ವಾಸಿಸಲು ಮನೆ ಎಲ್ಲ ಇದ್ದರೂ ಭೀತಿಯಲ್ಲಿ ಬದುಕುವ ವಾತಾವರಣವಿದ್ದರೆ ವ್ಯಕ್ತಿಗೆ ಜೀವನವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಇಂದು ಜಗತ್ತಿನಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಆತಂಕ ಇದು. ಇವೆಲ್ಲವುಗಳಿಗಿಂತ ಮಿಗಿಲಾಗಿ ಹೆಣ್ಣು ಮಗಳು ತನ್ನ ಮಾನವನ್ನು, ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತಾಳೆ ಮತ್ತು ಅದಕ್ಕಾಗಿ ಹೆಣಗಾಡುತ್ತಾಳೆ. ಜಗತ್ತಿನಲ್ಲಿ ಅತಿ ಹೆಚ್ಚು ನೋವು ಅನುಭವವಾಗುವುದು ಹೆಣ್ಣು ಮಗಳು ಅತ್ಯಾಚಾರಕೀಡಾದರೆ ಅವಳಿಗೆ ಮತ್ತು ಅವಳ ಕುಟುಂಬಕ್ಕೆ. ನಿರ್ಭಯ ಪ್ರಕರಣದಲ್ಲಿ ಇಡೀ ಭಾರತ ಒಂದಾಗಿ ಅತ್ಯಾಚಾರಿಗಳ ವಿರುದ್ಧ ಹೋರಾಟಕ್ಕಿಳಿದು ವಿವಿಧ ಕಾನೂನುಗಳನ್ನು ರಚಿಸಲಾಯಿತು. ಆದರೆ ನಿರ್ಭಯ ಪ್ರಕರಣ ಮುನ್ನೆಲೆಗೆ ಬಂದ ಮೇಲೂ ನಿರ್ಭೀತಿಯಿಂದ ಬದುಕ ತಕ್ಕ ವಾತಾವರಣ ನಿರ್ಮಾಣವಾಗಲೇ ಇಲ್ಲ. ಏಕೆ ಹೀಗೆ?

ಹೆಣ್ಣೆಂದರೆ ನಿರಂತರವಾಗಿ ಶೋಷಿಸಲ್ಪಡಲಿಕ್ಕಾಗಿಯೇ ಸೃಷ್ಟಿಸಲ್ಪಟ್ಟವಳೇ? ಹೆಣ್ಣನ್ನು ನಡೆಸಿಕೊಳ್ಳುವ ಮನಸ್ಥಿತಿ ಶತಮಾನಗಳು ಕಳೆದರೂ ಬದಲಾಗುವುದಿಲ್ಲವೇಕೆ? ಯೋಚಿಸಿ ಪರಿಹಾರ ಕಂಡುಕೊಳ್ಳಬೇಕಾದ ವಿಷಯಗಳಿವು. ಹೆಣ್ಣು ಶಿಕ್ಷಿತೆಯಾದರೆ, ತನ್ನ ಕಾಲ ಮೇಲೆ ತಾನು ನಿಂತು ಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡರೆ ಇದಕ್ಕೆ ಪರಿಹಾರ ಸಿಗಬಹುದು ಎಂದು ಭಾವಿಸಲಾಗುತ್ತಿತ್ತು. ಆದರೆ ಅದು ಸುಳ್ಳಾಯಿತು. ಶಿಕ್ಷಣಗಳಿಸಿದ ಹೆಣ್ಣು ಮಗಳು, ಉದ್ಯೋಗವನ್ನು ಮಾಡಿಕೊಳ್ಳುವವರು ನಿರಂತರ ಅತ್ಯಾ ಚಾರಕ್ಕೆ ಈಡಾಗುತ್ತಿದ್ದಾರೆ. ಲೈಂಗಿಕ ಉಪಕರಣಕ್ಕಿಂತ ಆಚೆ ಹೆಣ್ಣನ್ನು ನಡೆಸಿಕೊಳ್ಳಲು ಸಮಾಜ ಇಂದಿಗೂ ಪ್ರಬುದ್ಧತೆ ಗಳಿಸಿಲ್ಲ. ಗಂಭೀರವಾಗಿ ಯೋಚಿಸ ತಕ್ಕ ವಿಚಾರಗಳಿವು.

ಮನುಷ್ಯ ನಿರ್ಮಿತ ಕಾನೂನುಗಳು ಅದೆಷ್ಟೇ ಕಟ್ಟು ನಿಟ್ಟಾಗಿ ಪಾಲನೆಯಾದರೂ ಅದರಲ್ಲಿ ಇರುವಂತಹ ಮನುಷ್ಯನ ಸೀಮಿತ ಆಲೋಚನೆಯ ಕಾರಣ ಅವುಗಳು ನಮ್ಮ ಅಂತರಾತ್ಮ ಬಯಸುವ ಪರಿಹಾರ ಮತ್ತು ಸಮಾಧಾನವನ್ನು ನೀಡಲು ಖಂಡಿತ ಸಾಧ್ಯವಿಲ್ಲ. ಎಲ್ಲ ವಿಷಯಗಳಿಗೂ ಸ್ಪಷ್ಟ, ನಿಖರ ಮತ್ತು ನೇರವಾದ ಮಾರ್ಗದರ್ಶನ ಮತ್ತು ಪರಿಹಾರಗಳನ್ನು ಸೂಚಿಸುವ ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಮುಹಮ್ಮದರ(ಸ) ಜೀವನ ಮತ್ತು ಸಂದೇಶಗಳ ಬೆಳಕಿನಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಇಸ್ಲಾಮ್ ಯಾವ ರೀತಿಯ ಮಾರ್ಗೋಪಾಯಗಳನ್ನು ನಿರ್ದೇಶಿಸುತ್ತದೆ ಎಂಬುದನ್ನು ಸರಳವಾಗಿ ಅರ್ಥೈಸಿಕೊಳ್ಳು ವುದು ಕಾಲದ ಬೇಡಿಕೆ.

ನಮಗೆಲ್ಲರಿಗೂ ತಿಳಿದಿರುವಂತೆ ಇಂದು ಎಲ್ಲಿಯಾದರೂ ಇಂತಹ ಅತ್ಯಾಚಾರ ಕೊಲೆಗಳಂತಹ ಘಟನೆಗಳು ನಡೆದರೆ ಸಾಮಾನ್ಯವಾಗಿ ಕೇಳಿ ಬರುವಂತಹ ಪರಿಹಾರ ಅದು ಪೀಡಿತ ಹೆಣ್ಣು ಮಕ್ಕಳ ಹೆತ್ತವರು, ಒಡಹುಟ್ಟಿ ದವರು ಸೂಚಿಸುವ ಪರಿಹಾರ, ಕೊಂದವನನ್ನು ಅದೇ ರೀತಿ ಕೊಲ್ಲಬೇಕು. ಅತ್ಯಾಚಾರಿಗಳನ್ನು ಬಹಿರಂಗವಾಗಿ ನೇಣಿಗೆ ಹಾಕಬೇಕು ಎಂಬುದಾಗಿರುತ್ತದೆ. ಏಕೆ?

ಸಮಾಜದಲ್ಲಿ ಶಾಂತಿ, ಸುರಕ್ಷೆ, ಸುಭಿಕ್ಷ ನೆಲೆ ನಿಲ್ಲ ಬೇಕಾದರೆ, ಹೆಣ್ಣು ಮಕ್ಕಳ ಮೇಲೆ ನಿರಂತರ ನಡೆಯುತ್ತಿರುವ ಎಲ್ಲ ರೀತಿಯ ಲೈಂಗಿಕ ಶೋಷಣೆಗಳು ಕೊನೆಗೊಳ್ಳಬೇಕಾದರೆ ಕೇವಲ ಅತ್ಯಾಚಾರ ಸಂಭವಿಸಿದ ನಂತರ ಅದಕ್ಕೆ ಯಾವ ಶಿಕ್ಷೆ ನೀಡಬೇಕು ಎಂದು ಬಾಯಿ ಬಡಿದು ಕೊಂಡರೆ ಸಾಲದು. ಯಾವ ರೀತಿಯ ಸಮಾಜವನ್ನು ಅದಕ್ಕೆ ನಿರ್ಮಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ಚಿಂತಿಸ ಬೇಕು. ಪ್ರಿಕಾಶನ್ ಈಸ್ ಬೆಟರ್ ದಾನ್ ಕ್ಯೂರ್ ಎಂಬ ಇಂಗ್ಲಿಷ್ ನಾನುಡಿಯಂತೆ ರೋಗ ಬರುವುದಕ್ಕಿಂತ ಮುನ್ನ ರೋಗ ಬಾರದೆ ಇರುವಂತೆ ಜೀವನ ಶೈಲಿಯನ್ನು ಹೇಗೆ ಬದಲಾಯಿಸುವುದು ಎಂಬುದನ್ನು ತಿಳಿದುಕೊಂಡರೆ ಒಳಿತು.

ವ್ಯಕ್ತಿ ತಾನು ಉತ್ತಮನಾಗಲು ತೀರ್ಮಾನಿಸುವವರೆಗೆ ಜಗತ್ತಿನ ಯಾವ ಕಾನೂನುಗಳಿಂದಲೂ ಮನುಷ್ಯನನ್ನು ಬದಲಾಯಿಸಲು ಸಾಧ್ಯವಿಲ್ಲ. ನನ್ನ ಎಲ್ಲ ಕರ್ಮಗಳು ನನ್ನ ಸೃಷ್ಟಿಕರ್ತನಾದ ಅಲ್ಲಾಹನ ವೀಕ್ಷಣೆಯಲ್ಲಿದೆ. ಮಾತ್ರ ವಲ್ಲ ನನ್ನೆಲ್ಲ ಕರ್ಮಗಳು ಒಂದು ದಿನ ಅವನ ಮುಂದೆ ಸಮರ್ಪಿಸಲ್ಪಡದಲಿಕ್ಕಿದೆ. ಆ ಮೂಲಕ ನನ್ನ ಜೀವನದ ಅಂತಿಮ ಜಯಾಪಜಯಗಳ ತೀರ್ಮಾನವಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿ ಚೆನ್ನಾಗಿ ಅರ್ಥೈಸಿ, ಅದನ್ನು ಹೃದಯದಿಂದ ಸ್ವೀಕರಿಸಿ ಅದಕ್ಕನುಸಾರವಾದ ಜೀವನವನ್ನು ರೂಪಿಸುವವರೆಗೆ ವ್ಯಕ್ತಿ ಬದಲಾಗುವುದಿಲ್ಲ. ಈ ಪ್ರಜ್ಞಾವಂತಿಕೆಯ ಜೀವನದಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಾರೆ.

ಅದಕ್ಕನುಸಾರವಾಗಿ ಉನ್ನತ ನೈತಿಕ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡ ಬೇಕು. ಎಲ್ಲಿಯವರೆಗೆ ಹೆಣ್ಣು ಮಕ್ಕಳು ಗಂಡು ಮಕ್ಕಳಂತೆ ದೇವನ ಸೃಷ್ಟಿಗಳು ಮತ್ತು ಸಮಾನವಾಗಿ ಗೌರವಿಸಲ್ಪಡಬೇಕಾದವರು ಎಂಬ ಪ್ರಜ್ಞೆ ಮೂಡು ವುದಿಲ್ಲವೋ ಅಲ್ಲಿಯವರೆಗೆ ಬದಲಾವಣೆ ಕಾಗದಗಳಲ್ಲಿ ಮಾತ್ರ ಉಳಿದು ಬಿಡುತ್ತದೆ. ಪವಿತ್ರ ಕುರ್‌ಆನ್ ಬಹಳ ಸ್ಪಷ್ಟವಾಗಿ ಕೆಡುಕು ಯಾವುದರಿಂದ ಆರಂಭವಾಗುತ್ತದೆ ಎಂಬುದನ್ನು ಕಲಿಸಿಕೊಟ್ಟಿದೆ. ದೃಷ್ಟಿಯನ್ನು ನಿಯಂತ್ರಿ ಸಲು ಕಲಿಯುವುದು ಎಲ್ಲಕ್ಕಿಂತಲೂ ಮುಖ್ಯವಾದ ವಿಷಯವಾಗಿದೆ. ಪವಿತ್ರ ಕುರ್‌ಆನ್ ಬಹಳ ಸ್ಪಷ್ಟವಾಗಿ ಹೆಣ್ಣು ಮಕ್ಕಳು ಮತ್ತು ಗಂಡು ಇಬ್ಬರಿಗೂ ತಮ್ಮ ದೃಷ್ಟಿಯನ್ನು ನಿಯಂತ್ರಿಸಲು ಕಲಿಸಿದೆ.

ಅಧ್ಯಾಯ 24: ಅನ್ನೂರ್ ಇದರ ಸೂಕ್ತ: 30 ಮತ್ತು 31 ರಲ್ಲಿ ಪೈಗಂಬರರೇ, ಸತ್ಯವಿಶ್ವಾಸಿಗಳೊಡನೆ ತಮ್ಮ ದೃಷ್ಟಿಗಳನ್ನು ಕೆಳಗಿರಿಸಿಕೊಳ್ಳಲಿಕ್ಕೂ ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲಿಕ್ಕೂ ಹೇಳಿರಿ. ಇದು ಅವರ ಪಾಲಿಗೆ ಹೆಚ್ಚು ಪರಿಶುದ್ಧವಾದ ಕ್ರಮವಾಗಿದೆ. ಅಲ್ಲಾಹನು ಅವರು ಮಾಡುವುದೆಲ್ಲವನ್ನೂ ಅರಿಯುವವನಾಗಿದ್ದಾನೆ.

ಪೈಗಂಬರರೇ, ಸತ್ಯವಿಶ್ವಾಸಿನಿಯರೊಡನೆ ಹೇಳಿರಿ – ಅವರು ತಮ್ಮ ದೃಷ್ಟಿಗಳನ್ನು ಕೆಳಗಿರಿಸಿಕೊಳ್ಳಲಿ ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲಿ ಮತ್ತು ತಮ್ಮ ಶೃಂಗಾರಗಳನ್ನು ತೋರಿಸದಿರಲಿ (ಆದರೆ) ಸ್ವಯಂ ಪ್ರಕಟ ವಾಗುವಂತಹವುಗಳನ್ನು ಹೊರತು. ಮತ್ತು ತಮ್ಮ ಎದೆಯ ಮೇಲೆ ತಮ್ಮ ಮೇಲು ಹೊದಿಕೆಯ ಸೆರಗನ್ನು ಹಾಕಿಕೊಂಡಿರಲಿ. ಅವರು ತಮ್ಮ ಶೃಂಗಾರವನ್ನು ಇವರ ಹೊರತು ಇತರರಿಗೆ ತೋರಿಸದಿರಲಿ- ಪತಿಯರು, ತಂದೆ ಯರು, ಪತಿಯ ತಂದೆಯರು, ತಮ್ಮ ಪುತ್ರರು, ಪತಿಯರ ಪುತ್ರರು, ಸಹೋದರರು, ಸಹೋದರ ಪುತ್ರರು, ಸಹೋದರಿಯರ ಪುತ್ರರು, ಆಪ್ತ ಸ್ತ್ರೀಯರು, ತಮ್ಮ ದಾಸಿಯರು, ಯಾವುದೇ ದುರಪೇಕ್ಷೆ ಇಲ್ಲದಂತಹ ಅಧೀನ ಸೇವ ಕರು ಮತ್ತು ಇನ್ನೂ ಸ್ತ್ರೀಯರ ರಹಸ್ಯ ವಿಷಯಗಳನ್ನರಿಯದ ಬಾಲಕರು.

ದೃಷ್ಟಿಯನ್ನು ನಿಯಂತ್ರಿಸುವ ಮೂಲಕ ಮಾತ್ರ ಆತ್ಮ ನಿಯಂತ್ರಣವನ್ನು ಗಳಿಸಲು ಸಾಧ್ಯ. ಆತ್ಮ ನಿಯಂತ್ರಣವಿದ್ದರೆ ಮಾತ್ರ ವ್ಯಕ್ತಿ ಸಭ್ಯ ವ್ಯಕ್ತಿಯಾಗಿ ಮಾರ್ಪಡಬಲ್ಲನು.

ಹೆಣ್ಣಿಗೆ ಇಸ್ಲಾಮ್ ಬಹಳ ಮಹತ್ವಪೂರ್ಣವಾದ ಮತ್ತು ಗೌರವತವಾದ ಸ್ಥಾನವನ್ನು ನೀಡಿದೆ. ತಾಯಿ, ಪತ್ನಿ, ಸಹೋದರಿ, ಮಗಳು ಎಂಬ ನಿಟ್ಟಿನಲ್ಲಿ ಮಾತ್ರವಲ್ಲ ಸಮಾಜದಲ್ಲಿ ಅವಳು ನಿರ್ವಹಿಸುವ ಎಲ್ಲಾ ಪಾತ್ರಗಳಲ್ಲೂ ಅವಳು ಗೌರವಾರ್ಹಳು. ಪ್ರತಿಯೊಬ್ಬರ ಕರ್ತವ್ಯಗಳೇನು? ಹಕ್ಕುಗಳೇನು ಎಂದು ಕಲಿಸಿ ಕೊಡುವುದರೊಂದಿಗೆ ಅವಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಸ್ಪಷ್ಟವಾದ ಮಾರ್ಗದರ್ಶನವನ್ನು ಇಸ್ಲಾಮ್ ನೀಡುತ್ತದೆ. ನಿಮ್ಮ ಪೈಕಿ ಅತ್ಯುತ್ತಮರು ಯಾರು ಎಂದರೆ ನಿಮ್ಮ ಮನೆಯವರ ಪಾಲಿಗೆ ಉತ್ತಮರಾದವರು ಎಂದು ಪ್ರವಾದಿ ವಚನದಲ್ಲಿ ಸ್ಪಷ್ಟಪಡಿಸಲಾಗಿದೆ. ಊರಿಗೆ ಉಪಕಾರಿಯಾಗಿ ಮನೆಗೆ ಮಾರಿಯಾಗುವುದನ್ನು ಇಸ್ಲಾಮ್ ಎಂದಿಗೂ ಪುರಸ್ಕರಿಸುವುದಿಲ್ಲ. ಹೆಣ್ಣಿನೊಂದಿಗೆ ನಿಮ್ಮ ವ್ಯವಹಾರವು ನಿಮ್ಮ ಇಹಪರಗಳ ವಿಜಯವನ್ನು ತೀರ್ಮಾನಿಸುತ್ತದೆ ಎಂಬುದು ಇಸ್ಲಾಮಿನ ಆಶಯ ವಾಗಿದೆ. ಅತ್ಯಾಚಾರಗಳು ಇಷ್ಟರ ಮಟ್ಟಿಗೆ ಅನಿಯಂತ್ರಿತವಾಗಲು ಒಂದು ಕಾರಣ ಹೆಣ್ಣಿನ ಬಗ್ಗೆ ಇರುವ ಕೇವಲ ಭೋಗದ ವಸ್ತು ಎಂಬ ಕೀಳು ಮನೋಭಾವನೆಯಾಗಿದೆ.

ಅನಿಯಂತ್ರಿತ ಲೈಂಗಿಕ ಕಾಮನೆಗಳು ಉದ್ರೇಕವಾಗುವ ರೀತಿಯಲ್ಲಿ ಸಾಮಾಜಿಕ ವ್ಯವಸ್ಥೆಗಳು ಇನ್ನೊಂದು ಮುಖ್ಯ ಕಾರಣವಾಗಿದೆ. ಹಸಿವು ನೀರಡಿಕೆಗಳಂತೆ ಲೈಂಗಿಕ ಕಾಮನೆಗಳು ಮನುಷ್ಯನಲ್ಲಿ ಪ್ರಕೃತಿದತ್ತವಾಗಿ ಇರುವಂತಹದ್ದು. ಇದು ಯಾರಿಂದಲೂ ನಿರಾಕರಿಸಲಾಗದ ಸತ್ಯ. ಅದನ್ನು ನಿಗ್ರಹಿಸುವುದಕ್ಕೆ ಇಸ್ಲಾಮಿನಲ್ಲಿ ಅನುಮತಿ ಇಲ್ಲ. ಅದನ್ನು ನಿಗ್ರಹಿಸುವುದು ಮನುಷ್ಯನ ಪ್ರಕೃತಿಗೂ ವಿರುದ್ಧವಾದದು. ಆದುದರಿಂದಲೇ ಇಸ್ಲಾಮಿನಲ್ಲಿ ಸನ್ಯಾಸವಿಲ್ಲ. ಅನಿಯಂತ್ರಿತವಾಗಿ ಅದನ್ನು ಪ್ರದರ್ಶಿಸುವುದು ಕೆಟ್ಟದು. ಅದೇ ರೀತಿ ನಿಗ್ರಹಿಸುವುದು ಕೂಡ ಮನುಷ್ಯನ ನಿಯಂತ್ರಣದಲ್ಲಿ ಇಲ್ಲದ ಕಾರಣ ಅಪರಾಧಕ್ಕೆ ಕಾರಣವಾಗುತ್ತದೆ.

ಲೈಂಗಿಕ ಅವಶ್ಯಕತೆಗಳನ್ನು ಅದನ್ನು ಸೂಕ್ತವಾದ ರೀತಿಯಲ್ಲಿ ಪೂರ್ತಿ ಗೊಳಿಸುವುದಕ್ಕೆ ಇಸ್ಲಾಮ್ ನಿರ್ದೇಶಿಸಿರುವ ಮಾರ್ಗವೇ ನಿಕಾಹ್ ಎಂಬ ವಿವಾಹದ ವ್ಯವಸ್ಥೆ.

ಇಸ್ಲಾಮ್ ವಿವಾಹವನ್ನು ಮತ್ತು ವಿವಾಹದ ಮೂಲಕ ಲೈಂಗಿಕ ಆಸಕ್ತಿಯ ಪೂರೈಕೆಯನ್ನು ಪ್ರತಿಫಲಾರ್ಹವಾದ ಪುಣ್ಯ ಕರ್ಮವೆಂದು ಹೇಳಿ ಪ್ರೋತ್ಸಾಹಿಸುತ್ತದೆ. ಪ್ರಾಯಪ್ರಬುದ್ಧರಾದ, ಆರ್ಥಿಕ ಹೊಣೆಗಾರಿಕೆಗಳನ್ನು, ವೈವಾಹಿಕ ಜೀವನದ ಜವಾಬ್ದಾರಿಗಳನ್ನು ವಹಿಸಬಲ್ಲ ಸ್ತ್ರೀ-ಪುರುಷರು ಪರಸ್ಪರ ಆದಷ್ಟು ಬೇಗ ವಿವಾಹ ಮಾಡಿಕೊಳ್ಳುವುದನ್ನು ಇಸ್ಲಾಮ್ ಪ್ರೋತ್ಸಾಹಿಸುತ್ತದೆ. ವಿವಾಹ ವಿಚ್ಛೇದಿತರ, ವಿಧವೆಯರ ಮತ್ತು ವಿದುರರ ಮರು ವಿವಾಹವನ್ನು ಪ್ರೋತ್ಸಾಹಿಸಿದೆ. ಒಂದು ವೇಳೆ ಸರಿಯಾದ ರೂಪದಲ್ಲಿ ಮತ್ತು ಸರಿಯಾದ ಸ್ತ್ರೀ-ಪುರುಷರ ವಿವಾಹಕ್ಕೆ ಅವ ಕಾಶ ಮಾಡಿಕೊಟ್ಟರೆ ಅತ್ಯಾಚಾರದ ತಡೆಗೆ ಇದು ಒಂದು ಪರಿಣಾಮಕಾರಿ ಮಾಧ್ಯಮವಾಗಬಲ್ಲದು. ಅದೇ ವೇಳೆ ಲಿವಿಂಗ್ ಟುಗೆದರ್, ಸಲಿಂಗರತಿ, ವೇಶ್ಯಾವಾಟಿಕೆಗಳಂತಹ ಕೃತ್ಯಗಳನ್ನು ಇಸ್ಲಾಮ್ ಕಟುವಾಗಿ ನಿಷೇಧಿಸಿದೆ ಮತ್ತು ಇದನ್ನು ಧರ್ಮಬಾಹಿರ ಕೃತ್ಯವೆಂದು ಘೋಷಿಸಿದೆ.

ಪವಿತ್ರ ಕುರ್‌ಆನ್‌ನಿನ 17ನೇ ಅಧ್ಯಾಯ 32ನೇ ವಚನದಲ್ಲಿ `ವ್ಯಭಿಚಾರದ ಹತ್ತಿರವೂ ಸುಳಿಯಬೇಡಿರಿ. ಅದು ಅತೀ ಹೀನ ಕಾರ್ಯ ಮತ್ತು ಅತ್ಯಂತ ಕೆಟ್ಟ ಮಾರ್ಗ’ ಎಂದು ಹೇಳಲಾಗಿದೆ.

ಹೆಣ್ಣಿನ ದೇಹವನ್ನು ಆಕರ್ಷಕವಾಗಿ ಸೃಷ್ಟಿಸಲಾಗಿದೆ ಮತ್ತು ಹೆಣ್ಣು ಗಂಡುಗಳ ಮಧ್ಯೆ ಪ್ರಕೃತಿದತ್ತವಾಗಿ ಆಕರ್ಷಣೆ ಇದೆ. ಇದು ಹದಿಹರೆಯಕ್ಕೆ ಬಂದಾಗ ಆರಂಭವಾಗಿ ಜೀವನಪೂರ್ತಿ ಮುಂದುವರೆಯುತ್ತದೆ. ಆದುದರಿಂದಲೇ ಇದನ್ನು ನಿಯಂತ್ರಿಸುವುದಕ್ಕಾಗಿ ಮತ್ತು ಕೆಟ್ಟ ದೃಷ್ಟಿಯಿಂದ ಕಾಪಾಡಿಕೊಳ್ಳಲು ಹೆಣ್ಣಿಗೆ ಹಿಜಾಬ್ ಕಡ್ಡಾಯಗೊಳಿಸಲಾಗಿದೆ. ಮುಖ ಮತ್ತು ಮುಂಗೈಗಳನ್ನು ಹೊರತುಪಡಿಸಿ ದೇಹದ ಎಲ್ಲಾ ಅಂಗಾಂಗಗಳನ್ನು ಸಡಿಲವಾದ ಪಾರದರ್ಶಕವಲ್ಲದ ವಸ್ತ್ರದಿಂದ ಸಭ್ಯ ರೀತಿಯಲ್ಲಿ ಮರೆಸಿಕೊಳ್ಳುವ ವಸ್ತ್ರಧಾರಣೆಯ ಹೆಸರೇ ಹಿಜಾಬ್. ಇದೇ ರೀತಿ ಪುರುಷರಿಗೂ ವಸ್ತ್ರ ಸಂಹಿತೆಯನ್ನು ಇಸ್ಲಾಮ್ ನಿರ್ದೇಶಿಸಿದೆ. ಅವರು ಬಿಗಿಯಾದ ತೆಳ್ಳಗಿನ ವಸ್ತ್ರಗಳನ್ನು ಧರಿಸುವಂತಿಲ್ಲ.

ಇದರ ಜೊತೆಗೆ ಒಣಪು ವಯ್ಯಾರದ ಮಾತುಕತೆ, ಶೃಂಗಾರಗಳನ್ನು, ಸರಸ ಸಲ್ಲಾಪಗಳನ್ನು, ತನ್ನ ಪತಿಗೆ ಮಾತ್ರ ಸೀಮಿತಗೊಳಿಸಿಕೊಳ್ಳುವಂತೆ ಇಸ್ಲಾಮ್ ಕಟ್ಟುನಿಟ್ಟಾಗಿ ಆದೇಶಿಸಿದೆ. ಅನ್ಯ ಪುರುಷರೊಂದಿಗೆ ಮಾತನಾಡುವಾಗ ವ್ಯವಹರಿಸುವಾಗ ಇತಿಮಿತಿಗಳನ್ನು ಕಾಪಾಡಿಕೊಳ್ಳುವಂತೆ ಮಿತಿಮೇರೆಗಳನ್ನು ಪಾಲಿಸಿಕೊಳ್ಳುವಂತೆ ಆದೇಶಿಸಲಾಗಿದೆ. ಮೋಹಕ ಧ್ವನಿಯಲ್ಲಿ ಮಾತನಾಡಬಾರದು ಎಂಬ ಸ್ಪಷ್ಟ ಆದೇಶವಿದೆ. (33:32) ಜೊತೆಗೆ ಪುರುಷರಿಗೂ ಈ ಆದೇಶ ಅನ್ವಯಿಸುತ್ತದೆ.

ಸ್ತ್ರೀಯರ ಮತ್ತು ಪುರುಷರ ಅಗತ್ಯವಿಲ್ಲದೆ ಜೊತೆಯಾಗಿರುವುದು, ಅನ್ಯ ಸ್ತ್ರೀ-ಪುರುಷರು ಅನಗತ್ಯ ಮಾತುಕತೆಯಲ್ಲಿ ತೊಡಗುವುದು ಇಸ್ಲಾಮಿನಲ್ಲಿ ನಿಷಿದ್ಧ. ಅದು ಕಾಲೇಜು ಆಗಿ ರಲಿ, ಉದ್ಯೋಗ ಸ್ಥಳವಾಗಿರಲಿ, ಮಾರುಕಟ್ಟೆಯಾಗಿರಲಿ, ಸಭೆ ಸಮಾರಂಭಗಳಾಗಿರಲಿ. ವಿವಾಹ ನಿಷಿದ್ಧ ಪುರುಷ ಜೊತೆಗಿಲ್ಲದೆ ಅನ್ಯ ಪುರುಷನೊಂದಿಗೆ ಏಕಾಂತದಲ್ಲಿಯೂ ಇರಬಾರದು ಎಂಬ ನಿರ್ದೇಶನ ಇಸ್ಲಾಮಿನಲ್ಲಿದೆ. ವಿವಾಹ ನಿಷಿದ್ಧ ಸಂಬಂಧಿಗಳ ಹೊರತಾಗಿ ಪುರುಷರೊಂದಿಗೆ ಒಂಟಿಯಾಗಿ ಪ್ರಯಾಣಿಸಬಾರದು ಎಂಬ ಕಟ್ಟುನಿಟ್ಟಿನ ಆದೇಶವಿದೆ. ಇವುಗಳ ಪಾಲನೆ ಸರಿಯಾಗಿ ನಡೆದರೆ ಖಂಡಿತವಾಗಿಯೂ ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸಲು ಇದು ಸಹಕಾರಿಯಾಗ ಬಲ್ಲದು.

ವಿವಾಹಿತ ಸ್ತ್ರೀ-ಪುರುಷರು ಅನ್ಯಸ್ತ್ರೀ ಪುರುಷರೊಂದಿಗೆ ಅನೈತಿಕ ಸಂಬಂಧವಿರಿಸುವ ಘಟನೆಗಳು ಮತ್ತು ಅದರಿಂದ ಉಂಟಾಗುವ ಅನಾಹುತಗಳು ಸಮಾಜದಲ್ಲಿ ಎಲ್ಲೆಮೀರಿ ನಡೆಯುತ್ತಿದೆ. ಇಸ್ಲಾಮ್ ಇದನ್ನು ಘೋರ ಅಪರಾಧವೆಂದು ಸಾರಿದೆ.

ಎಲ್ಲ ರೀತಿಯ ಅಶ್ಲೀಲತೆಗಳನ್ನು ಇಸ್ಲಾಮ್ ನಿಷೇಧಿಸಿದೆ. ಸಮಾಜದಲ್ಲಿ ಕಾಮ ಪ್ರಚೋದನೆ ಉಂಟುಮಾಡುವ ಅಶ್ಲೀಲ-ಸಾಹಿತ್ಯ, ಸಿನಿಮಾ ಸೌಂದರ್ಯ ಪ್ರದರ್ಶನ ಸ್ಪರ್ಧೆಗಳು, ನೈತಿಕತೆ ಹಾಳು ಮಾಡುವ ಎಲ್ಲ ಮಾಧ್ಯಮಗಳನ್ನು ಇಸ್ಲಾಮ್ ನಿಷೇಧಿಸಿದೆ. ಇವುಗಳು ಹೆಣ್ಣಿನ ಮೇಲಿನ ಅತ್ಯಾಚಾರಕ್ಕೆ ನೇರವಾಗಿ ಕಾರಣವಾಗುವ ಮತ್ತು ಅಪರಾಧ ಪ್ರವೃತ್ತಿಗೆ ಪ್ರೇರಣೆ ನೀಡುವ ವಿಷಯಗಳಾಗಿವೆ ಎಂಬ ಕಾರಣದಿಂದಲೇ ಇವುಗಳನ್ನು ನಿಷೇಧಿಸಲಾಗಿದೆ.

ಇಂತಹ ಸಭ್ಯ ಮತ್ತು ಸುಸಂಸ್ಕೃತ ವಾತಾವರಣನ್ನು ನಿರ್ಮಿಸಿದರೆ ಅಂತಹ ಸಮಾಜದಲ್ಲಿ ಹೆಣ್ಣುಗಳು ಗೌರವಯುತವಾಗಿ ಬದುಕುತ್ತಾಳೆ. ತನ್ನ ಪ್ರತಿಭೆ ಸಾಮರ್ಥ್ಯಕ್ಕೆ ತಕ್ಕಂತೆ ಉನ್ನತಿಗೆ ಏರುತ್ತಾಳೆ. ತನ್ನ ಕುಟುಂಬವನ್ನು ಭಾವಿ ತಲೆಮಾರನ್ನು ಅತ್ಯುತ್ತಮ ರೀತಿಯಲ್ಲಿ ತರಬೇತಿಗೊಳಿಸಿ ಸಮಾಜಕ್ಕೆ ಕೊಡುಗೆ ನೀಡುತ್ತಾಳೆ. ಆದರೆ ದುರದೃಷ್ಟವಶಾತ್ ಇಂತಹ ಪರಿಣಾಮಕಾರಿ ಪರಿಹಾರಗಳನ್ನು ಸ್ತ್ರೀ ವಿರೋಧಿ ನಿಲುವುಗಳೆಂದು ಬಿಂಬಿಸಲಾಗುತ್ತದೆ.

ಮದ್ಯ ಮತ್ತು ಮಾದಕ ವ್ಯಸನಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಹೆಣ್ಣಿನ ಸುರಕ್ಷತೆಗೆ ಅತ್ಯಂತ ಅಗತ್ಯವಾದ ವಿಷಯವಾಗಿದೆ. ಅತ್ಯಾಚಾರ ಪ್ರಕರಣಗಳನ್ನು ನೋಡಿದಾಗ ಅತ್ಯಾಚಾರಿಗಳ ಪೈಕಿ ಗರಿಷ್ಠ ಸಂಖ್ಯೆಯ ವ್ಯಕ್ತಿಗಳು ಪಾನಮತ್ತರಾಗಿರುವುದು, ಮಾದಕ ವಸ್ತುಗಳ ದಾಸರಾಗಿರುವುದು ಕಂಡುಬರುತ್ತದೆ. ಮನುಷ್ಯನ ಮೆದುಳನ್ನು ಮತಿಹೀನಗೊಳಿಸುವ ಮತ್ತು ಕೆಡುಕಿಗೆ ನಿರಂತರ ಪ್ರೇರೇಪಿಸುವ ಎಲ್ಲ ರೀತಿಯ ಇಂತಹ ಅಮಲು ಬರಿಸುವ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಇಸ್ಲಾಮ್ ಬಹಳ ಕಟ್ಟುನಿಟ್ಟಿನ ಕ್ರಮವನ್ನು ಸೂಚಿಸುತ್ತದೆ.

ಅತ್ಯಾಚಾರಕ್ಕೊಳಗಾದ ಹೆಣ್ಣಿನ ಕುಟುಂಬದ ಅಂತರಾತ್ಮವು ಕೂಗಿ ಹೇಳುವ ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಕೂಗು ನಿಜಕ್ಕೂ ಜಾರಿಗೆ ಬರಬೇಕಾದರೆ ಮೊದಲು ಸಮಾಜವನ್ನು ಸ್ವಸ್ಥಗೊಳಿಸಬೇಕಾದ ಅಗತ್ಯವಿದೆ. ಅದರ ಜೊತೆಗೆ ಕಠಿಣ ವಾದ ಕಾನೂನುಗಳನ್ನು ಜಾರಿಗೊಳಿಸಬೇಕಾಗಿದೆ.

ಇಸ್ಲಾಮಿನ ಪ್ರಕಾರ ಒಂದು ಸಭ್ಯ ಮತ್ತು ಇಸ್ಲಾಮಿನ ನಿರ್ದೇಶನಗಳ ಪ್ರಕಾರ ಜೀವಿಸುವ ವ್ಯಕ್ತಿಗಳ ಮಧ್ಯೆ ಇಂತಹ ಅತ್ಯಾಚಾರ ಪ್ರಕರಣ ನಡೆದರೆ ಅತ್ಯಾಚಾರಕ್ಕೊಳಗಾದ ವ್ಯಕ್ತಿ ಅವಿವಾಹಿತನಾಗಿದ್ದರೆ ಅವನಿಗೆ 100 ಛಡಿ ಏಟಿನ ಶಿಕ್ಷೆ ಮತ್ತು ಗಡಿಪಾರಿನ ಶಿಕ್ಷೆ. ಒಂದು ವೇಳೆ ವ್ಯಕ್ತಿ ವಿವಾಹಿತನಾಗಿದ್ದರೆ ಕಲ್ಲೆಸೆದು ಕೊಲ್ಲುವ ಶಿಕ್ಷೆಯನ್ನು ನಿಗದಿಪಡಿಸಲಾಗಿದೆ. ಇದು ಮರಣದಂಡನೆಗೆ ಸಮಾನವಾಗಿದೆ. ಇಸ್ಲಾಮಿನ ಕಾನೂನು ಜಾರಿಯಲ್ಲಿರುವಲ್ಲಿ ಅತ್ಯಾಚಾರದ ಸಂಖ್ಯೆ ಕಡಿಮೆಯಾಗಲು ಇದು ಪ್ರಮುಖ ಕಾರಣವಾಗಿದೆ. ಅತ್ಯಾಚಾರಕ್ಕೆ ಒಳಗಾದ ಸ್ತ್ರೀಯ ಸಂರಕ್ಷಣೆಯ ಹೊಣೆಗಾರಿಕೆ ಸರಕಾರದ್ದಾಗಿದೆ. ಒಂದು ಸಭ್ಯ ಸಮಾಜದಲ್ಲಿ ಹೆಣ್ಣು ಅತ್ಯಾಚಾರಕ್ಕೀಡಾದರೆ ಪ್ರಕೃತಿಗೆ ಪೂರಕವಾಗಿ ಇಸ್ಲಾಮ್ ನಿರ್ದೇಶಿಸುವ ಶಿಕ್ಷೆಯು ಪ್ರತಿಯೊಬ್ಬ ಪೀಡಿತ ವ್ಯಕ್ತಿಯ ಅಂತರಾತ್ಮದ ಬೇಡಿಕೆಯೂ ಆಗಿರುತ್ತದೆ ಎಂಬುದನ್ನು ಮರೆಯುವಂತಿಲ್ಲ.