✍️ ಅರಫಾ ಮಂಚಿ
ಹಿಂದೂ ರಾಷ್ಟ್ರಕ್ಕೆ ಇತರರು ಹೆದರ ಬೇಕಿಲ್ಲ ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.
ಜೊತೆಗೆ, ಹಿಂದೂ ರಾಷ್ಟ್ರ ಬಂದರೆ ಮುಸ್ಲಿಮರು ಮತ್ತು ಕ್ರೈಸ್ತರು ಅವರ ಪೂರ್ವಿಕರ ಪರಂಪರೆಯನ್ನು ಅನುಸರಿಸ ಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ. 2009ರಲ್ಲಿ ದಯೂಬಂದ್ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡು ಮೇಲಿನ ಹೇಳಿಕೆ ನೀಡಿದ್ದಾರೆ. ಬುದ್ಧಿ ಉಂಟಾ? ಹಿಂದೆ ಮೇಲು-ಕೀಳು, ಜಾತಿ, ಸ್ಪೃಶ್ಯ-ಅಸ್ಪೃಶ್ಯತೆಗಳನ್ನು ತೊರೆದು ಮುಸ್ಲಿಮರು ಮತ್ತು ಕ್ರೈಸ್ತರಾದವರು; ನಾವು ಹಿಂದೂ ರಾಷ್ಟ್ರ ಮಾಡ್ತೇವೆ, ನೀವೆಲ್ಲ ಪುನಃ ಅದೇ ತಾರತಮ್ಯದ ಕ್ಲೀಷೆಯನ್ನು ಒಪ್ಪಿಕೊಂಡು ತೆಪ್ಪಗಿರಿ ಎಂಬ ಗೊಡ್ಡು ಎಚ್ಚರಿಕೆಗಳಿಗೆ ಹೆದರಿ ಬಾಗುತ್ತಾರಾ? ಇಲ್ಲ. ಈಗಂತೂ ಬಿಜೆಪಿ, ಆರೆಸ್ಸೆಸ್ ಪ್ರಾಯೋಜಿತ ಹಿಂದುತ್ವ ರಾಷ್ಟ್ರದಲ್ಲಿ ಶಾಂತಿ, ನೆಮ್ಮದಿಯಿಲ್ಲದ ಉದ್ವಿಗ್ನ ಸ್ಥಿತಿಯಿದೆ.
ಹೊಸ ಹಿಂದುತ್ವ ದೇಶದೊಳಗೆ:
ನೋಡಿ, ಪಶ್ಚಿಮ ಬಂಗಾಳವು ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಸಂಘಿಗಳ ಹಿಂದುತ್ವ ರಾಜ್ಯಕ್ಕೆ ಹೊಸತೊಂದು ಸೇರ್ಪಡೆಯಾಯಿತು.
ನಿಜಕ್ಕಾದರೆ ವಂಗ ಮಣ್ಣಿನಲ್ಲಿ ಅಧಿಕಾರ ಹಿಡಿದ ಸಂಘಪರಿವಾರ, ಅಧಿಕಾರವನ್ನು ಅತಿಕ್ರಮಗಳ ಹಬ್ಬವನ್ನಾಗಿ ಪರಿವರ್ತಿಸಿದೆ. ಸುವೇಂದು ಅಧಿಕಾರಿ ಅಲ್ಲಿನ ಮೊಟ್ಟ ಮೊದಲ ಬಿಜೆಪಿ ಮುಖ್ಯಮಂತ್ರಿ (ಮಾಜಿ ತೃಣಮೂಲ ಕಾಂಗ್ರೆಸ್ಸಿಗ). ವಾಸ್ತವದಲ್ಲಿ ಬಿಜೆಪಿ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಮುಸ್ಲಿಂ ಬೇಟೆ ಆರಂಭವಾಯಿತು. ಮಸೀದಿಗೆ ಹೋಗಲು ಬಿಡದ್ದು ಇತ್ತೀಚಿನ ವಿವಾದ. ಬಂಗಾಳದ ಚುನಾವಣಾ ಪ್ರಚಾರ ಹೇಗಿತ್ತು ನಿಮ್ಗೆ ಗೊತ್ತಿಲ್ವಾ? ಕೋಮು ಪ್ರಚೋದಕ ದ್ವೇಷ ತುಂಬಿತ್ತು. ಮುಸ್ಲಿಮರಿರುವುದೇ ನಾಡಿಗೆ ಅಪಾಯಕಾರಿ, ಅವರು ಅನವಶ್ಯಕ ಎಂದು ಅವರು ಪ್ರತಿಪಾದಿಸುತ್ತಿದ್ದರು. ಹೇಗಿದೆ ಇವರ ಹಿಂದುತ್ವ ದೇಶ. ಬಾಬಾ ಹೇಳಲಿ, ಈ ಪ್ರಚಾರಗಳು ಹೆದರುವುದೋ ಅಥವಾ ಹೆದರದಿರುವ ವಿಚಾರವೋ? ಹಿಂದುತ್ವ ಇಂಡಿಯಾದ ಸಾಧನೆಗೆ ಬುಲ್ಡೋಜರ್ ಹತ್ತಿ ಕೇಕೆ ಹಾಕಿದ್ದು ಅವರ ಕಾರ್ಯಕರ್ತರು. ಮುಸ್ಲಿಂ ಅಲ್ಪಸಂಖ್ಯಾತರ ವ್ಯಾಪಾರ ಮಳಿಗೆಗಳು, ಮನೆಗಳು ಪುಡಿಪುಡಿ ಮಾಡಿದರು. ಮಸೀದಿಗೂ ದಾಳಿ ಮಾಡಿದರು. ಹಿಂಸೆ ರಾರಾಜಿಸುತ್ತಿದೆ. ಸಾಮಾನ್ಯ ಮುಸ್ಲಿಮರ ಮೇಲೆ ಹಲ್ಲೆ ನಡೆಯಿತು. ಇವೆಲ್ಲ ಘಟನೆಗಳು ಎರಡೇ ತಿಂಗಳಲ್ಲಿ ಬಂಗಾಳದ ಜನ ಜೀವನವನ್ನೇ ವಿಭಜಿಸಿತೆಂದು ಹೇಳಬಹುದು. ಈ ರೀತಿ ವಿಭಜನಾ ಆಕ್ರಮಣ ಸಿದ್ಧಾಂತಿಗಳು ಹಿಂದುತ್ವ ರಾಷ್ಟ್ರ ಕಟ್ಟುವುದು. ರಾಮ್ದೇವ್ರಂಥ ಪೋಸ್ಟರ್ ಬಾಯ್ಗಳು ಹೆದರಬೇಕಿಲ್ಲ ಎನ್ನುವುದು! ಢೀಂ ಢೀಂ.
ಇತ್ತೀಚಿನ ಸುದ್ದಿ:
ಮುಖ್ಯಮಂತ್ರಿ ಸುವೇಂದು ಅಧಿಕಾರಿಯ ಸರ್ಕಾರ ನೂರ ಮೂವತ್ತಾರು ವರ್ಷ ಹಳೆಯ ಮಸೀದಿಯ ಬಾಗಿಲು ಮುಸ್ಲಿಮರಿಗೆ ಬಂದ್ ಮಾಡಿದೆ. ಮುಸ್ಲಿಮರು ಸರ್ಕಾರದ ಈ ಕ್ರಮದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಹೆದರಿಲ್ಲ. ನೇತಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ವಿಮಾನ ನಿಲ್ದಾಣ ನಂತರ ಬಂದದ್ದು) ಇರುವ ಜುಮಾ ಮಸೀದಿಯದು. ವಿಮಾನ ನಿಲ್ದಾಣದ ಸುರಕ್ಷೆ ಮುಖ್ಯ, ಉಳಿದೆದ್ದೆಲ್ಲ ಮತ್ತೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸಮರ್ಥಿಸಿ ಕೊಂಡಿದ್ದಾರೆ. ಈ ಸುವೇಂದು, ಮಮತಾ ದೀದಿ ಸಂಪುಟದಲ್ಲಿ ಮಿನಿಸ್ಟರ್ ಇದ್ದಾಗ ಈ ಸುರಕ್ಷೆಯ ವಿಚಾರ ಎಲ್ಲಿ ಹೋಗಿತ್ತು? ಆಗಲೂ ಆ ವಿಮಾನ ನಿಲ್ದಾಣ ಇತ್ತು, ಮಸೀದಿಯೂ ಇತ್ತು. ಈಗ ಅವರು ಬಿಜೆಪಿಯಿಂದ ಮುಖ್ಯಮಂತ್ರಿಯಾಗಿ ಹಿಂದುತ್ವ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಮಸೀದಿಯಲ್ಲಿ ಕೂಡ ಸುರಕ್ಷೆ ಭೀತಿ ಉಂಟಾಗುತ್ತಿದೆ. ಇವೆಲ್ಲ ಏನನ್ನು ತೋರಿಸುತ್ತಿದೆ? ಹಿಂದುತ್ವ ರಾಷ್ಟ್ರೀಯತೆಯ ಮಿಥ್ಯವಾದಿಗಳ ಆಳದಲ್ಲಿ ಭೀತಿ ತುಂಬಿಕೊಂಡಿದೆ ಎಂಬುದನ್ನೇ ಅಲ್ಲವೇ? ನೋಡಿ,
ಹಿಂದುತ್ವ ರಾಷ್ಟ್ರದಲ್ಲಿ ಮುಸ್ಲಿಮರ ಹಳೆಯ ಪ್ರಾಚೀನ ಮಸೀದಿ ಸಹಿತ ಇತರ ಕಟ್ಟಡಗಳನ್ನು ಕೆಡಹುವುದು, ದೇಶದಲ್ಲೇ ಮುಸ್ಲಿಮರಿಲ್ಲ ಎಂಬ ಹೊಸ ಇತಿಹಾಸ ಬರೆಯುವುದು! ಇತರರಿಗೆ ನೋವು ಕೊಟ್ಟು ಅವರ ಗೋರಿ ಮೇಲೆ ಇವರು ಹಿಂದುತ್ವ ರಾಷ್ಟ್ರ ಕಟ್ಟುವುದು! ಯಾವತ್ತಾದರೂ ಹೀಗಾಗುತ್ತಾ? ಇವರದ್ದು ಬರೇ ತಿರುಕನ ಕನಸು.
ಈಗ ಕ್ರೈಸ್ತ ಬೇಟೆ ಶುರು:
ಮುಸ್ಲಿಮರ ಮೇಲೆ ಏರಿ ಹೋಗಿದ್ದಾಯಿತು. ಈಗ ಕ್ರೈಸ್ತರನ್ನು ಹುಡುಕಿ ಹೋಗುತ್ತಿದ್ದಾರೆ ಎಂದು ವರದಿಗಳು ತಿಳಿಸುತ್ತಿವೆ. ಸರ್ಕಾರ ಬದಲಾಗಿದ್ದ ಮೇ ತಿಂಗಳಲ್ಲೇ ಕ್ರೈಸ್ತ ವಿರೋಧ ತಲೆ ಎತ್ತಿತು. ದಾಳಿಗಳೂ ಆದವು. ಬಂಗಾಳದ ಪಶ್ಚಿಮದಲ್ಲಿ ಬರುವ ಬಾಂಕುರದ ಒಂದು ಮನೆಯಲ್ಲಿ ಕ್ರೆöÊಸ್ತರು ಪ್ರಾರ್ಥನಾ ಸಭೆ ನಡೆಸುತ್ತಿದ್ದರು. ಮಹಿಳೆಯರಿದ್ದರು, ಮಕ್ಕಳೂ ಇದ್ದರು. ಅವರನ್ನೆಲ್ಲ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಲಾಯಿತು ಎಂದು ವರದಿ ಆಗಿದೆ.
ಮುರ್ಷಿದಾಬಾದಿನಲ್ಲಿ ದೇವಸ್ಥಾನ ಕಟ್ಟುವುದಕ್ಕೆ ಒಬ್ಬ ವಿಧವೆಯ ಮನೆಯನ್ನು ಆಕ್ರಮಿಸಿದ್ದು ಕೂಡ ನಡೆದಿದೆ. ಇವೆಲ್ಲ ಚಿಂತೆಗೆ ಹಚ್ಚುವ ಗಂಭೀರ ಘಟನೆಗಳು. ಇತ್ತೀಚೆಗೆ ಸೋನಾರ್ಪುರದ ಸುಭಾಶ್ ಗ್ರಾಮದಲ್ಲಿ ರವಿವಾರದ ಪ್ರಾರ್ಥನೆಗೆ ಬಂದವರನ್ನು ಪುಡಿಪುಡಿಯಾಗಿರುವ ಚರ್ಚ್ ಸ್ವಾಗತಿಸಿತ್ತು. ಚರ್ಚಿನ ಸಂಗೀತೋಪಕರಣಗಳು ಚಪ್ಪಡಿ ಮಾಡಿ ಹಾಕಲಾಗಿತ್ತು. ಪೂರ್ವ ಬರ್ದಾನ್ ಜಿಲ್ಲೆಯ ಫರೀದ್ಪುರ ಗ್ರೇಸ್ ಚರ್ಚಿನಲ್ಲಿ ಆರಾಧನೆಯ ವೇಳೆ ದುಷ್ಕರ್ಮಿಗಳು ಪಾಸ್ಟರ್ ಮತ್ತು ಭಕ್ತ ರನ್ನು ಹೊಡೆದರು. ವಿಷಯ ಏನು? ಸಾಮೂಹಿಕ ಮತಾಂತರಕ್ಕೆ ಯತ್ನ ನಡೆಯುತ್ತಿದೆ ಎಂಬ ಸುಳ್ಳಾರೋಪ. ಈಗ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಅಂದ್ರೆ ಕ್ರೈಸ್ತ ಮ್ಯಾನೇಜ್ಮೆಂಟಿನ ಶಿಕ್ಷ ಕರು ಮತ್ತು ಮಕ್ಕಳನ್ನು ಸಂದೇಹದ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಸುವೇಂದು ಸರ್ಕಾರ ರಾಜ್ಯದ ಮಧ್ಯಾಹ್ನದೂಟದ ವ್ಯವಸ್ಥೆಯನ್ನು ಹರೇ ಕೃಷ್ಣ ಪಂಥಕ್ಕೊಪ್ಪಿಸಿತು. ಸ್ಕೂಲ್ ಮೆನುವಿನಿಂದ ಮೊಟ್ಟೆ ಮಾಯವಾಗಿದೆ. ಅಯ್ಯೋ ಹಿಂದುತ್ವವೇ. ಮಕ್ಕಳ ಪೌಷ್ಠಿಕಾಹಾರ ಮೊಟ್ಟೆಗೂ ಇವರ ಹಿಂದುತ್ವ ಕೈಹಾಕಿ ಕಿತ್ತುಕೊಂಡಿತು! ಯಾರಲ್ಲೂ ರೇಜಿಗೆ ಹುಟ್ಟುವಂತೆ ಇದೆ.
ಲಕ್ನೊ ಈದ್ಗಾಹ್ ಇಮಾಮ್ ಉತ್ತರ:
ಮತ್ತೆ ರಾಮ್ದೇವ್ರ ವಿಷಯಕ್ಕೆ ಬರುವುದಾದರೆ ಅವರಿಗೆ ಲಕ್ನೊ ಈದ್ಗಾಹ್ ಮೌಲಾನಾರು ಟೀಕು ಟಾಕದ ಉತ್ತರವನ್ನೇ ನೀಡಿದ್ದಾರೆ.
ಅಂದ್ರೆ ಅಲ್ಲಾಹನನ್ನು ಆರಾಧಿಸುವ ಮುಸ್ಲಿಮರು ಇತರ ಯಾರಿಗೂ ಹೆದರುವುದಿಲ್ಲ ಎಂದಿದ್ದಾರೆ. ಎಲ್ಲರೂ ಪರಸ್ಪರ ಗೌರವದಿಂದ ನಡೆದುಕೊಳ್ಳಬೇಕು. ಧಾರ್ಮಿಕ ಧ್ರುವೀಕರಣ ಮಾಡಬಾರದೆಂದಿದ್ದಾರೆ. ರಾಮ್ದೇವ್ ಅವರೇ ಇದುವೇ ಭಾರತದ ಅಖಂಡ ಸತ್ಯ.
ಫಿರಂಗಿ ಮಹಲಿಯವರು ಉತ್ತರಖಂಡದಲ್ಲಿ ಸರ್ಕಾರ ಮದ್ರಸಾ ಬೋರ್ಡ್ ವಿಸರ್ಜಿಸಿದ್ದನ್ನು ವಿರೋಧಿಸಿದ್ದಾರೆ. ಉತ್ತರಖಂಡದ ಆಡಳಿತಯಂತ್ರ ಮುಸ್ಲಿಮರ ಮಸೀದಿ ಗಳನ್ನು ಕೆಡಹುವುದು ಸಮಾಜದಲ್ಲಿ ಆತಂಕವನ್ನು ಹುಟ್ಟುಹಾಕುತ್ತದೆ ಎಂದು ಫಿರಂಗಿ ಮಹಲಿ ಹೇಳಿದ್ದಾರೆ. ಬಲಿಷ್ಠ ಸರ್ಕಾರವೊಂದರ ವಿರುದ್ಧ ಹೆದರಿಕೆಯಿಲ್ಲದೆ ಧ್ವನಿ ಎತ್ತುವುದೇ ಶಕ್ತಿ, ಪುಕ್ಕಲುತನ ಅಲ್ಲ. ಹೌದು, ಈ ಹಿಂದುತ್ವ ರಾಷ್ಟ್ರ ವಾದವು ನೂರಾರು ವರ್ಷ ಹಳೆಯದ್ದು. ಅದು ಆರೆಸ್ಸೆಸ್ಸಿನಿಂದ ಶುರು ಆಗಿದ್ದು. ಎಲ್ಲರನ್ನು ಸನಾತನಕ್ಕೆ ಸೇರಿಸುವ ಲೇಪ ಹಚ್ಚುತ್ತಿರುವ ರಾಮ್ದೇವ್ರು ಆರೆಸ್ಸೆಸ್ಸಿನ ಹಳೆಯ ಆ ಘರ್ವಾಪಸಿಯನ್ನು ತೆರೆಯುತ್ತಿದ್ದಾರೆ. ಉತ್ತರ ಪ್ರದೇಶ, ಉತ್ತರಖಂಡ ಸಹಿತ ಬಿಜೆಪಿ ಆಡಳಿತದಲ್ಲಿ ಇರುವಲ್ಲೆಲ್ಲ ಹಿಂದುತ್ವ ಹೂಂಕರಿಸುತ್ತಿದೆ. ಮುಸ್ಲಿಮರು ಹೆದರಬೇಕಿಲ್ಲ ಎಂದು ಹೇಳುವ ಬಾಬಾ, ಬಿಬಿಗಳು ಎದ್ದು ನಿಲ್ತಿದ್ದಾರೆ.
ನಮ್ಮ ದೇಶಕ್ಕೆ ವಿವಿಧತೆಯಲ್ಲಿ ಏಕತೆಯನ್ನು ಒಪ್ಪಿ ಕೊಂಡ ಜಾತ್ಯತೀತ, ಧರ್ಮ ನಿರಪೇಕ್ಷ ಸಂವಿಧಾನ ಇದೆ. ಭಾರತ ನಮ್ಮದು, ನಮ್ಮೆಲ್ಲರದ್ದೂ. ಹಿಂದೂ, ಮುಸ್ಲಿಂ, ಇಸಾಯಿ, ಸಿಖ್, ಬೌದ್ಧ, ಪಾರಸಿಗಳ ಉದ್ಯಾನ. ಅಲ್ಲ ಹಿಂದುತ್ವದವರು ಬಂದು ನೀವು ಸನಾತನಿಗಳಾಗಿ ಅಂದ್ರೆ ಯಾರು ಒಪ್ಪಿಕೊಳ್ತಾರೆ? ಆದರೆ, ಹಿಂದುತ್ವದವರ ಈ ಎಲ್ಲ ಚೇಷ್ಠೆಗಳನ್ನು ಮುಸ್ಲಿಮರು ಸಂವಿಧಾನ ಒಪ್ಪಿಕೊಂಡು ಸಹಿಸುತ್ತಿದ್ದಾರೆ. ಅದರರ್ಥ ಇವರಿಗೆ ಹೆದರಿಲ್ಲ, ಎದುರಿಸುತ್ತಿದ್ದಾರೆ ಎಂದಾಗಿದೆ.
ಬಾಬಾ ವಿವಾದ ಹೇಳಿಕೆ ನೀಡುವುದು ಮೊದಲ ಸಲ ಅಲ್ಲ:
ಪತಂಜಲಿ ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತಿಗೂ ಸುಪ್ರೀಂಕೋರ್ಟಿನಿಂದ ಬಾಬಾ ರಾಮ್ದೇವ್ ಛೀಮಾರಿ ಹಾಕಿಸಿಕೊಂಡಿದ್ದಾರೆ. ದಿಲ್ಲಿ ಹೈಕೋರ್ಟು ಕಟು ವಾದ ಎಚ್ಚರಿಕೆ ನೀಡಿತ್ತು. ಈಗಿನ ಹೇಳಿಕೆಗೆ ವಿರೋಧ ಇದೆ. ಎಲ್ಲರೂ ಸನಾತನಿಗಳೆಂದಾದರೆ ಜನರ ನಡುವೆ ಒಡಕು ಮೂಡಿಸಲು ಪ್ರಯತ್ನಿಸುವುದು ಯಾಕೆ ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಶಿದ್ ಪ್ರಶ್ನಿಸಿದ್ದು ಸರಿ ಇದೆ. ನಮ್ಮ ದೇಶದಲ್ಲಿ ಸಂವಿಧಾನ ಇದೆ, ಅದು ಧರ್ಮ ನಿರಪೇಕ್ಷೆಯನ್ನು ಪ್ರತಿಪಾದಿಸುತ್ತಿದೆ. ಆರೆಸ್ಸೆಸ್ಸಿಗೂ ನೂರು ವರ್ಷ ಆಗಿಯೂ ದೇಶದ ಬಹುತೇಕ ಎಲ್ಲಾ ಕಡೆ ಸರ್ಕಾರ ಹೊಂದಿಯೂ ಹಿಂದೂ ರಾಷ್ಟ್ರ ಅಧಿಕೃತ ಘೋಷಣೆ ಹೊರಡಿಸಲು ಸಾಧ್ಯವಾಗಿಲ್ಲ. ರಾಮ್ದೇವ್ ತರದವರು ಪೋಸ್ಟರ್ ಬಾಯ್ಗಳ ತರ ಹಿಂದುತ್ವ ಗೋಡೆಗೆ ಸನಾತನದ ಪೋಸ್ಟರ್ ಹಚ್ಚಿ ದೇಶದ ಮುಂದಿಡುತ್ತಾರೆ. ಯಾಕೆಂದರೆ ಹಿಂದುತ್ವವಾದಿಗಳ ವಿಫಲ ನೀತಿ, ಆಡಳಿತ ವೈಫಲ್ಯಗಳಿಂದ ಮತ್ತು ದೇಶದ ನಿಜ ವಾದ ಸಮಸ್ಯೆಗಳಿಂದ ಬೇರೆಡೆಗೆ ಜನರ ಗಮನ ಸೆಳೆಯುವ ತಂತ್ರಕ್ಕೆ ಇವರದ್ದು ಬಣ್ಣ ತುಂಬುವ ಕೆಲಸ.
ಭಾರತ ಸಂವಿಧಾನವನ್ನು ಬಿಟ್ಟು ಬೇರೆಯದೇ ಬರೆದರೆ ಮತ್ತು ಒಂದು ವೇಳೆ ಹಾಗೆ ಸಂಭವಿಸಿದರೆ ಇಲ್ಲಿನ ದಲಿತರು, ಬೌದ್ಧರು, ಸಿಖ್ಖರು ಮಾತ್ರವಲ್ಲ ಒಬಿಸಿಗಳು ಸಿಡಿದೆದ್ದಾರು. ಸಂಘಿಗಳು ಹೆದರುವುದು ಇದಕ್ಕೆ. ಯಾಕೆ ಗೊತ್ತೆ? ಈ ವಿಭಾಗಗಳ ಹಿರಿ ತಲೆಮಾರಿಗೆ ಅಂದು ಬಾಬಾ ರಾಮ್ದೇವ್ ಪ್ರತಿಪಾದಿಸುವ ಸನಾತನ ಕೊಟ್ಟ ಯಾತನೆ, ಅವಮಾನದ ಅಂಥದ್ದು. ಡಾ. ಭೀಮ್ರಾವ್ ಅಂಬೇಡ್ಕರ್ ಜೀವನ ಚರಿತ್ರೆ ಓದಿದವರು ಬಹಳಷ್ಟು ಮಂದಿ ಭಾರತದಲ್ಲಿ ಇದ್ದಾರೆ. ಅವರು ಹಿರಿಯರು ಎದುರಿಸಿದ ನೋವು, ಅನ್ಯಾಯ, ಅಕ್ರಮ, ದೌರ್ಜನ್ಯಗಳನ್ನು ಮರೆಯುವುದಿಲ್ಲ. ಆದ್ದರಿಂದ ರಾಮ್ದೇವ್ ತರದವರು ಆಗಾಗ ಹಿಂದುತ್ವ ರಾಷ್ಟ್ರ ಅಂತ ಗುಡಾ-ಗುಂಡಗೆ ತಿರುಗಾಡಬಹುದು. ಅಂತದ್ದು ಜಾರಿಗೆ ತರುವ ಕೆಚ್ಚು, ಧೈರ್ಯ ಬಿಜೆಪಿ, ಆರೆಸ್ಸೆಸ್ಸಿಗಿಲ್ಲ. ಇಲ್ಲ ಅಂದರೆ ನಮ್ಮ ಭಾರತದ ಧರ್ಮ ನಿರಪೇಕ್ಷತೆಯನ್ನು ಪ್ರತಿಪಾದಿಸುವ ಸಂವಿಧಾನ ಜನಮನದೊಳಗೆ ಅಷ್ಟು ಬಲಿಷ್ಠವಾಗಿ ಇನ್ನೂ ಇದೆ ಅಂತರ್ಥ. ಯಾವುದೇ ಹಿಂದುತ್ವ ರಾಷ್ಟ್ರವಾದವೂ ನಮ್ಮ ಸಂವಿಧಾನಕ್ಕೆ, ಅದರ ನ್ಯಾಯವಾದಕ್ಕೆ ಹೆದರ ಬೇಕು. ಹೌದು, ಅಂಥ ಸಮರ್ಥ ಸಂವಿಧಾನ ಈ ದೇಶಕ್ಕೆ ಬಾಬಾ ಸಾಹೇಬ್ ಭೀಮ್ರಾವ್ ಅಂಬೇಡ್ಕರ್ ಕಟ್ಟಿಕೊಟ್ಟಿದ್ದಾರೆ.












