ಇಬ್ರಾಹೀಮ್ ಜುನೈದ್ ಎಂಬ ಯುವಕನನ್ನು ಭೇಟಿಯಾದೆ…

0
307

✍️ ಹರ್ಷ್ ಮಂದರ್
ಸಾಮಾಜಿಕ ಹೋರಾಟಗಾರರು

18 ಮೇ 2007ರಂದು ಹೈದರಾಬಾದ್‌ನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ ಶುಕ್ರವಾರದ ನಮಾಝ್‌ನ ಸಮಯದಲ್ಲಿ ಬಾಂಬ್ ಸ್ಫೋಟಗೊಂಡಿತು, ಇದರಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದರು ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡರು. ಅಜ್ಮೀರ್ ದರ್ಗಾದ ಮೇಲಿನ ಭಯೋತ್ಪಾದಕ ದಾಳಿಯೊಂದಿಗೆ ಗಮನಾರ್ಹ ಸಾಮ್ಯತೆಯನ್ನು ಹೊಂದಿರುವ ಈ ಪ್ರಕರಣದಲ್ಲಿ, ಮೂರು ದಿನಗಳಲ್ಲಿ ಬಾಂಬ್‌ಗಳನ್ನು ಸ್ಫೋಟಿಸಲು ಬಳಸಿದ ಸಿಮ್ ಕಾರ್ಡ್ ಅನ್ನು ಪೊಲೀಸರು ಪತ್ತೆ ಮಾಡಿದರು. ನಕಲಿ ಚಾಲನಾ ಪರವಾನಗಿಯನ್ನು ಬಳಸಿಕೊಂಡು ಪಶ್ಚಿಮ ಬಂಗಾಳದ ಅಸನ್ಸೋಲ್‌ನ ಬಾಬುಲಾಲ್ ಯಾದವ್ ಎಂಬುವವರ ಹೆಸರಿನಲ್ಲಿ ಅದನ್ನು ಖರೀದಿಸಲಾಗಿದೆ ಎಂದು ಕಂಡುಬAದಿದೆ. ಇದರ ಕುರಿತ ವರದಿಯನ್ನು 21 ಮೇ 2007ರ ‘ದಿ ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟಿಸಲಾಗಿತ್ತು.

ಅಜ್ಮೀರ್ ಶರೀಫ್ ಬಾಂಬ್ ಸ್ಫೋಟದ ಘಟನೆಯಂತೆಯೇ, ಇಲ್ಲಿಯೂ ಪೊಲೀಸರು ತನಿಖೆಯ ಈ ಸುಳಿವನ್ನು ಕಡೆಗಣಿಸಿದರು. ನೂರಕ್ಕೂ ಹೆಚ್ಚು ಮುಸ್ಲಿಂ ಯುವಕರನ್ನು ಬಂಧಿಸಿ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ಪ್ರತಿಭಟಿಸುತ್ತಿದ್ದ ಜನರ ಮೇಲೆ ಗುಂಡು ಹಾರಿಸಿ ಐವರನ್ನು ಬಲಿತೆಗೆದುಕೊಂಡರು. ನಾನು, ಇಬ್ರಾಹೀಮ್ ಜುನೈದ್ ಎಂಬ 25 ವರ್ಷದ ಯುವಕನನ್ನು ಮೊದಲ ಬಾರಿಗೆ ಭೇಟಿಯಾದಾಗ, ಆತ ಭಯೋತ್ಪಾದಕ' ಎಂಬ ಕಳಂಕ ಹೊತ್ತು ಐದು ತಿಂಗಳ ಜೈಲುವಾಸದ ನಂತರ ಜಾಮೀನಿನ ಮೇಲೆ ಹೊರಬಂದಿದ್ದನು. ತನ್ನ ಅಮಾಯಕತೆಯನ್ನು ಜಗತ್ತಿಗೆ ಸಾಬೀತುಪಡಿಸಿ, ವೈದ್ಯಕೀಯ ಶಿಕ್ಷಣವನ್ನು ಪೂರೈಸಲು ಹತಾಶ ಪ್ರಯತ್ನ ನಡೆಸುತ್ತಿದ್ದನು. ಆದರೆ, ಹೈದರಾಬಾದ್‌ನ ಹಳೆಯ ನಗರದಲ್ಲಿದ್ದ ತನ್ನ ವೈದ್ಯಕೀಯ ಕಾಲೇಜಿಗೆ ಮರಳಿ ಸೇರಲು ಮತ್ತು ಅಂತಿಮ ಪರೀಕ್ಷೆಯನ್ನು ಬರೆಯಲು ಆತನಿಗೆ ಅವಕಾಶ ನೀಡದೆ ತಡೆಯೊಡ್ಡಲಾಗಿತ್ತು.

ಎರಡು ವರ್ಷಗಳ ನಂತರ ಆತ ಎಲ್ಲಾ ಆರೋಪಗಳಿಂದ ಮುಕ್ತನಾದನು ಮತ್ತು ವೈದ್ಯಕೀಯ ಶಾಲೆಗೆ ಮರುಸೇರ್ಪಡೆಯಾದನು. ನಾನು ಅವನನ್ನು ಭೇಟಿಯಾದಾಗ, ಚಿತ್ರಹಿಂಸೆ ಮತ್ತು ಜೈಲಿನಲ್ಲಿ ಕಳೆದ ವರ್ಷಗಳಿಂದಾದ ಗಾಯಗಳ ಹೊರತಾಗಿಯೂ, ಇನ್ನೂ ಸಾಮಾನ್ಯ ಜೀವನ ನಡೆಸಲು ಪ್ರಯತ್ನಿಸುತ್ತಿದ್ದನು. ಆ ಸಮಯದಲ್ಲಿ ನಾನು ಹೀಗೆ ಬರೆದಿದ್ದೆ:

18 ಮೇ 2007ರಂದು ಹೈದರಾಬಾದ್‌ನ ಹಳೆಯ ನಗರದಲ್ಲಿರುವ ಐತಿಹಾಸಿಕ ಮೆಕ್ಕಾ ಮಸೀದಿಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಆತ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾದನು. ಆದರೆ ಕೆಲವು ತಿಂಗಳುಗಳ ನಂತರ, ಅವನನ್ನು ಸಿವಿಲ್ ಉಡುಪಿನಲ್ಲಿದ್ದ ಪೊಲೀಸರು ಅಕ್ರಮವಾಗಿ ಅಪಹರಿಸಿ, ಚಿತ್ರಹಿಂಸೆ ನೀಡಿ ಜೈಲಿಗೆ ಹಾಕಿದರು. ಆದರೂ ಆತ ಧೈರ್ಯಗೆಡಲಿಲ್ಲ ಅಥವಾ ಭರವಸೆಯನ್ನು ಕೈಬಿಡಲಿಲ್ಲ. ಇದು ಆತನ ಸಾಕ್ಷ್ಯವಾಗಿದೆ.

ಪ್ರತೀ ಶುಕ್ರವಾರದಂತೆ, ಅಂದೂ ಇಬ್ರಾಹೀಮ್ ಆ ಬಿಸಿಲ ಮಧ್ಯಾಹ್ನ ತನ್ನ ಯುನಾನಿ ಮೆಡಿಕಲ್ ಕಾಲೇಜಿನ ಸ್ನೇಹಿತರೊಂದಿಗೆ ಹತ್ತಿರದ ಮೆಕ್ಕಾ ಮಸೀದಿಗೆ ನಡೆದು ಹೋದನು. ನಮಾಝ್ ಮತ್ತು ವಾರದ ಧರ್ಮೋಪದೇಶ ಮುಗಿದಿತ್ತು. ಭಕ್ತರ ಗುಂಪು ಮಸೀದಿಯ ನಿರ್ಗಮನ ದ್ವಾರದ ಕಡೆಗೆ ತೆರಳುತ್ತಿತ್ತು. ಇದ್ದಕ್ಕಿದ್ದಂತೆ ಇಬ್ರಾಹೀಮ್ ತನ್ನ ಹಿಂದೆ ಭಾರಿ ಸ್ಫೋಟದ ಸದ್ದನ್ನು ಕೇಳಿದನು. ತಿರುಗಿ ನೋಡಿದಾಗ ಮಸೀದಿಯು ದಟ್ಟವಾದ ಹೊಗೆಯಿಂದ ತುಂಬಿರುವುದು ಮತ್ತು ಜನರು ಪ್ರತಿಯೊಂದು ದಿಕ್ಕಿನಲ್ಲಿ ಓಡುತ್ತಾ ಕಿರುಚುತ್ತಿರುವುದು, ರಕ್ತಸಿಕ್ತ ದೇಹಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡಿತು. ಒಬ್ಬ ವ್ಯಕ್ತಿಯ ಅರ್ಧ ತಲೆಬುರುಡೆ ತೆರೆದಿರುವುದು ಮತ್ತು ತುಂಡಾದ ಅನೇಕ ಅಂಗಗಳು ಚದುರಿರುವುದನ್ನು ಇಬ್ರಾಹೀಮ್ ಕಂಡನು. ಇನ್ನಷ್ಟು ಬಾಂಬುಗಳು ಸ್ಫೋಟಗೊಳ್ಳುತ್ತವೆ ಎಂಬ ವದಂತಿಗಳಿಂದ ಜನರು ಮತ್ತಷ್ಟು ಭಯಭೀತರಾದರು. ಹೊರಗೆ ಓಡುತ್ತಿದ್ದಾಗ, ತನ್ನ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಪ್ರಜ್ಞಾಹೀನರಾಗಿ ಬಿದ್ದಿರುವುದು ಮತ್ತು ಅವರ ಕೈಕಾಲುಗಳು ಮುರಿದಿರುವುದನ್ನು ಕಂಡನು. ಆ ಗದ್ದಲದಲ್ಲಿ ಆತ ತನ್ನ ಸ್ನೇಹಿತರನ್ನು ಕರೆದು ಪ್ರಾಧ್ಯಾಪರನ್ನು ಹೆಗಲ ಮೇಲೆ ಹೊತ್ತುಕೊಂಡು, ಪ್ರಾಂಶುಪಾಲರ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಈ ದಾಳಿಯನ್ನು ಇಸ್ಲಾಮಿಕ್ ಭಯೋತ್ಪಾದಕ ಗುಂಪೊAದು ಯೋಜಿಸಿದೆ ಎಂದು ನಗರದ ಪೊಲೀಸರು ಕೆಲವೇ ಗಂಟೆಗಳಲ್ಲಿ ಘೋಷಿಸಿದ್ದನ್ನು ಮತ್ತು ಮಸೀದಿಯ ಮೇಲಿನ ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಭಾವಿಸಿ ಆಕ್ರೋಶಗೊಂಡಿದ್ದ ಮುಸ್ಲಿಂ ಪ್ರತಿಭಟನಾಕಾರರ ಗುಂಪಿನ ಮೇಲೆ ಗುಂಡು ಹಾರಿಸಿದ್ದನ್ನು ಇಬ್ರಾಹೀಮ್ ನಂತರ ತಿಳಿದನು.

ಆ ಬಾಂಬ್ ದಾಳಿಯ ನಂತರದ ಕೆಲವು ದಿನಗಳ ಕಾಲ ಮಸೀದಿಯಲ್ಲಿನ ಆ ಭಯಾನಕ ದೃಶ್ಯಗಳು, ಸತ್ತವರ ಮೃತದೇಹಗಳು ಇಬ್ರಾಹೀಮ್ ಕಣ್ಣೆದುರು ಬಂದು ಆತನನ್ನು ಅತಿಯಾಗಿ ಕಾಡುತ್ತಿದ್ದವು. ಮಂಕಾಗಿ ಮನೆಯಲ್ಲೇ ಉಳಿದು ಬಿಡುತ್ತಿದ್ದನು. ಸ್ಫೋಟದ ಎಂಟನೇ ದಿನ, ಹೈದರಾಬಾದ್ ಪೊಲೀಸರ ವಿಶೇಷ ತನಿಖಾ ವಿಭಾಗದವರು ಆತನನ್ನು ವಿಚಾರಣೆಗೆ ಕರೆಸಿದರು. ದಾಳಿ ನಡೆಸಿದ್ದು ಯಾರು ಎಂದು ಅಧಿಕಾರಿಗಳು ಪ್ರಶ್ನಿಸಿದರು. ತನಗೆ ಗೊತ್ತಿಲ್ಲ ಎಂದು ಇಬ್ರಾಹೀಮ್ ಉತ್ತರಿಸಿದನು. ಅಲ್ಲದೆ,ಭಯೋತ್ಪಾದಕರು ಬೇರೆ ಸಮುದಾಯದವರಲ್ಲ ಎಂದು ಹೇಗೆ ಇಷ್ಟೊಂದು ಖಚಿತವಾಗಿ ಹೇಳಬಲ್ಲರಿ?’ ಎಂದು ಮರುಪ್ರಶ್ನೆ ಮಾಡಿದನು. ಅಂದು ಇಡೀ ದಿನ ಆತನನ್ನು ತೀವ್ರ ವಿಚಾರಣೆ ನಡೆಸಲಾಯಿತು.

ನಂತರದ ಮೂರು ದಿನಗಳ ಕಾಲ ಸತತವಾಗಿ ಮತ್ತು ಆನಂತರವೂ ಆಗಾಗ ವಿಚಾರಣೆಗೆ ಒಳಪಡಿಸಲಾಯಿತು. ಕೊನೆಗೆ, ಆ ಬಾಂಬ್ ನೀನೇ ಇಟ್ಟಿದ್ದೀಯಾ?' ಎಂದು ಕೇಳಲು ಶುರು ಮಾಡಿದರು.

ಬಹುಶಃ ಕಾನೂನಿನೊಂದಿಗಿನ ಆತನ ಆರಂಭಿಕ ಘರ್ಷಣೆಯಿಂದಾಗಿ, 2007ರಲ್ಲಿ ನಗರದಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದಾಗ ಪೊಲೀಸರು ಆತನನ್ನು ಅನು ಮಾನಿಸಿ ವಶಕ್ಕೆ ತೆಗೆದುಕೊಂಡಿರಬಹುದು. ಅಥವಾ ಆತ ಗಡ್ಡ ಬೆಳೆಸಿದ ಮತ್ತು ಧಾರ್ಮಿಕನಾಗಿದ್ದ ಕಾರಣಕ್ಕಾಗಿ ಹೀಗಾಗಿರಬಹುದು. ಆತನ ಪೋಷಕರ ಬಗ್ಗೆ ಹೇಳುವುದಾದರೆ, ಇಬ್ರಾಹಿಂಗೆ 12 ವರ್ಷವಿದ್ದಾಗ ಕ್ರಿಶ್ಚಿಯನ್ ಮಿಷನರಿ ಶಾಲೆಯಲ್ಲಿದ್ದ ಆತನ ಓದನ್ನು ನಿಲ್ಲಿಸಿ, ನಾಲ್ಕು ವರ್ಷಗಳ ಕಾಲ ಸ್ಥಳೀಯ ಮದ್ರಸಾದಲ್ಲಿ ದಿನದ ವಿದ್ಯಾರ್ಥಿಯಾಗಿ ಓದಲು ಕಳುಹಿಸಲು ನಿರ್ಧರಿಸಿದ್ದರು. ತಮಗೆ ಹುಟ್ಟಿದ ಮಕ್ಕಳಲ್ಲಿ ಕನಿಷ್ಠ ಒಬ್ಬನಾದರೂಹಾಫಿಝ್’ (ಸಂಪೂರ್ಣ ಕುರ್‌ಆನ್ ಕಂಠಪಾಠ ಮಾಡಿದವರು) ಆಗಬೇಕೆಂಬುದು ಅವರ ಆಸೆಯಾಗಿತ್ತು. ಇಬ್ರಾಹೀಮ್ ನಾಲ್ಕು ವರ್ಷಗಳಲ್ಲಿ ಮದ್ರಸಾದಲ್ಲಿ ಪದವಿ ಪಡೆದು ಪೋಷಕರ ಆಸೆಯನ್ನು ಪೂರೈಸಿದನು. ಆದರೂ, ವೈದ್ಯ ನಾಗಬೇಕೆಂಬ ಆಸೆ ಇತ್ತು; ಅದಕ್ಕಾಗಿ ಕಷ್ಟಪಟ್ಟು ಮತ್ತೊಂದು ಖಾಸಗಿ ಶಾಲೆಗೆ ಸೇರಿ ಹೈಸ್ಕೂಲ್ ಪರೀಕ್ಷೆಯನ್ನು ಪಾಸು ಮಾಡಲು ಪ್ರಯತ್ನಿಸಿದನು.

ಆದರೆ ಇಬ್ರಾಹೀಮ್, ತಾನು ಮಾನವ ಹಕ್ಕುಗಳ ಕೂಟವಾದ ಸಿವಿಲ್ ಲಿಬರ್ಟೀಸ್ ಮಾನಿಟರಿಂಗ್ ಕಮಿಟಿ'ಗೆ ಸೇರಿದ್ದರಿಂದಲೇ ಪೊಲೀಸರು ತನ್ನನ್ನು ವಿಶೇಷವಾಗಿ ಗುರಿ ಪಡಿಸುತ್ತಿದ್ದಾರೆ ಎಂದು ನಂಬಿದ್ದನು. ಏಕೆಂದರೆ, ಆ ಕೂಟ ಪೊಲೀಸ್ ದೌರ್ಜನ್ಯಗಳ ವಿರುದ್ಧ ಧೈರ್ಯದಿಂದ ಮತ್ತು ಮುಕ್ತವಾಗಿ ಧ್ವನಿ ಎತ್ತುತ್ತಿತ್ತು. ಬಂಧನಕ್ಕೆ ಕೆಲವು ತಿಂಗಳು ಗಳ ಮೊದಲು, ಗುಜರಾತ್ ಪೊಲೀಸರು ಹೈದರಾಬಾದ್ ಪಡೆಯ ಸಕ್ರಿಯ ಸಹಕಾರದೊಂದಿಗೆ ಸೊಹ್ರಾಬುದ್ದೀನ್ ಮತ್ತು ಆತನ ಪತ್ನಿಯನ್ನು ನ್ಯಾಯಾಂಗೇತರ ಹತ್ಯೆಯಲ್ಲಿ (extra-judicial murder) ಕೊಂದಿದ್ದನ್ನು ವಿರೋಧಿಸು ವಲ್ಲಿ ಆತ ಪ್ರಮುಖನಾಗಿದ್ದನು. ಸೊಹ್ರಾಬುದ್ದೀನ್ ಒಬ್ಬ ಅಪರಾಧಿ ಮತ್ತು ಆತ ಸಾವಿಗೆ ಅರ್ಹನಾಗಿದ್ದನು ಎಂದು ಪೊಲೀಸ್ ಅಧಿಕಾರಿ ವಾದಿಸಿದರು. ಇಬ್ರಾಹೀಮ್ ಪಟ್ಟು ಹಿಡಿದು, "ಅವನು ಅಪರಾಧಿಯಾಗಿದ್ದರೂ ಸಹ, ನೀವು ಅವನ ಮೇಲೆ ಆರೋಪ ಹೊರಿಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕಿತ್ತು. ಅವನ ಪತ್ನಿಯ ಬಗ್ಗೆ ಏನು? ಅವಳೂ ಅಪರಾಧಿಯಾಗಿದ್ದಳೇ?" ಎಂದು ಪ್ರಶ್ನಿಸಿದ್ದನು. ಪೊಲೀಸರು ಸಿಟ್ಟಾಗಿ, "ನೀನು ನಾಯಕನಾಗಲು ಹೊರಟಿದ್ದೀಯಾ?" ಎಂದು ಕೇಳಿದ್ದರು.

2007ರಲ್ಲಿ ಹೈದರಾಬಾದ್‌ನಲ್ಲಿ ಎರಡನೇ ಬಾರಿ ಸರಣಿ ಬಾಂಬ್ ದಾಳಿಗಳು ನಡೆದ ಕೆಲವೇ ದಿನಗಳ ನಂತರ, ಇಬ್ರಾಹೀಮ್ ತನ್ನ ಗುರುಗಳು ಮತ್ತು ಗೆಳೆಯರೊಂದಿಗೆ ದೆಹಲಿ ಮತ್ತು ಮಸ್ಸೂರಿಯಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದನು. ಊರಿಗೆ ಮರಳಿ ಬಂದಾಗ, ರೈಲಿನಿಂದ ಇಳಿದು ತನ್ನ ತಮ್ಮ ಬಂದು ಕರೆದೊಯ್ಯಲೆಂದು ಕಾಯುತ್ತಿದ್ದನು. ಅಷ್ಟರಲ್ಲಿ, ಮೂವರು ಅಪರಿಚಿತರು ಆತನನ್ನು ಬಲವಂತವಾಗಿ ಹಿಡಿದು, ಅಲ್ಲೇ ನಿಂತಿದ್ದ ವಾಹನಕ್ಕೆ ಎಳೆದೊಯ್ದರು.ಶಬ್ದ ಮಾಡಬೇಡ, ಇಲ್ಲದಿದ್ದರೆ ಕೊಂದು ಬಿಡುತ್ತೇವೆ’ ಎಂದು ಬೆದರಿಸಿದರು. ವಾಹನ ಪುರಾಣಾಪುಲ್ ಕಡೆಗೆ ಹೊರಟಿತು. ದಾರಿಯಲ್ಲಿ ಆತನ ಕಣ್ಣಿಗೆ ಬಟ್ಟೆ ಕಟ್ಟಿ, ಕೈಗಳನ್ನು ಹಿಂದೆ ಕಟ್ಟಿ ಬಂಧಿಸಲಾಯಿತು. ಸುಮಾರು ಎರಡು ಗಂಟೆಗಳ ಪ್ರಯಾಣದ ನಂತರ, ಒಂದು ಕಟ್ಟ ಡದ ಬಳಿ ಇಳಿದರು. ಅದು ನಗರದ ಗದ್ದಲದಿಂದ ತುಂಬ ದೂರವಿದ್ದ ನಿರ್ಜನ ತಾಣವಾಗಿತ್ತು.

ಕಟ್ಟಡದೊಳಗೆ ಕರೆದೊಯ್ದು ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡರು. ಮಧ್ಯರಾತ್ರಿ ವೇಳೆಗೆ ಬೆತ್ತಲೆ ಗೊಳಿಸಿ, ಕೇವಲ ಒಳಉಡುಪಿನಲ್ಲಿ ನಿಲ್ಲಿಸಿದರು. ಯಾರೋ ಇಬ್ಬರು ಆತನ ಕಾಲುಗಳನ್ನು ಬಲವಾಗಿ ಅಗಲಿಸಿ ಹಿಡಿ ದರು, ಇನ್ನೊಬ್ಬ ಆತನ ಹೆಗಲೇರಿ ಅಸಹ್ಯವಾಗಿ ಹೊಡೆದನು. ಪ್ರಜ್ಞೆ ತಪ್ಪುವವರೆಗೂ ಗುಪ್ತಾಂಗ, ಕಿವಿ, ತುಟಿ, ಮೊಲೆತೊಟ್ಟು, ತಲೆಯ ಭಾಗ ಮತ್ತು ಕೀಲುಗಳ ಮೇಲೆ ಸರದಿಯಲ್ಲಿ ವಿದ್ಯುತ್ ಶಾಕ್ ನೀಡಿದರು. ಪ್ರಜ್ಞೆ ಬಂದ ಕೂಡಲೇ ಮತ್ತೆ ಶುರು ಮಾಡುತ್ತಿದ್ದರು, ರಬ್ಬರ್ ಬೆಲ್ಟ್ ನಿಂದ ಪಾದಗಳಿಗೆ ಬಲವಾಗಿ ಹೊಡೆಯುತ್ತಿದ್ದರು. ಕೋಮು ದ್ವೇಷದ ಮಾತುಗಳನ್ನು ಆಡುತ್ತಲೇ, ಸ್ಫೋಟಕ್ಕೆ ಕಾರಣರು ಯಾರು?' ಎಂದು ಪದೇ ಪದೇ ಪ್ರಶ್ನಿಸುತ್ತಿದ್ದರು. ತನಗೆ ಏನೂ ಗೊತ್ತಿಲ್ಲ, ಆ ಭಯೋತ್ಪಾದಕ ದಾಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಎಷ್ಟು ಬೇಡಿ ಕೊಂಡರೂ ಬಿಡಲಿಲ್ಲ. ಮುಂಜಾನೆ ಮತ್ತೊಮ್ಮೆ ಪ್ರಜ್ಞೆ ತಪ್ಪಿದಾಗ, ಒಬ್ಬ ವ್ಯಕ್ತಿ ಬೂಟುಗಾಲಿನಿಂದ ಮೈಮೇಲೆಲ್ಲಾ ತುಳಿದು ನಡೆದನು. ನಂತರ, ಬೆತ್ತಲಾ ಗಿದ್ದ ಆತನನ್ನು ಎಸಿ(AC)) ಇರುವ ಕೋಣೆಗೆ ಎಳೆದುಕೊಂಡು ಹೋದರು. ನಡುಗುತ್ತಾ, ಅಸಹನೀಯ ನೋವಿನ ನಡುವೆಯೇ ನಿದ್ರಿಸಲು ವಿಫಲ ಪ್ರಯತ್ನ ನಡೆಸಿದನು.

ಹಗಲು ರಾತ್ರಿಗಳೆಲ್ಲಾ ಕಳೆದು ದಿನಗಳು ಉರುಳುತ್ತಿದ್ದವು. ಚಿತ್ರಹಿಂಸೆ ಮತ್ತು ಭಯದ ನಡುವೆ ಕಾಲದ ಅರಿವೇ ಇಬ್ರಾಹೀಮ್‌ಗೆ ಇಲ್ಲದಂತಾಯಿತು. ಒಂದು ಹಂತದಲ್ಲಿ ಮೂತ್ರದಲ್ಲಿ ರಕ್ತ ಹೋಗಲು ಶುರುವಾಯಿತು. ಇತ್ತ ಹೊರಗಡೆ, ಇಬ್ರಾಹೀಮ್ ಸದಸ್ಯರಾಗಿದ್ದ ಮಾನವ ಹಕ್ಕುಗಳ ಸಂಸ್ಥೆಯು ಇತರ ಮಾನವ ಹಕ್ಕುಗಳ ಸಂಘಟನೆಗಳನ್ನು ಮತ್ತು ಅವರ ಕುಟುಂಬದವರನ್ನು ಒಗ್ಗೂಡಿಸಿತು. ಅವರಷ್ಟೇಅಲ್ಲದೆ, ಇದೇ ರೀತಿ ಅಪಹರಣಕ್ಕೊಳಗಾಗಿ ಬಂಧಿಸಲ್ಪಟ್ಟಿದ್ದ ಇತರೆ 20ಕ್ಕೂ ಹೆಚ್ಚು ಯುವಕರ ಕುಟುಂಬಗಳನ್ನೂ ಅದು ಒಂದುಗೂಡಿಸಿತು. ಅವರೆಲ್ಲಾ ಸೇರಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಸಲ್ಲಿಸಿದರು; ರಾಷ್ಟ್ರೀಯ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಅಲ್ಪಸಂಖ್ಯಾತರ ಆಯೋಗಗಳಿಗೆ ದೂರು ನೀಡಿದರು. ಅಷ್ಟೇ ಅಲ್ಲದೆ, ಪ್ರತಿಭಟನಾ ಸಭೆಗಳನ್ನು ಮತ್ತು ಪತ್ರಿಕಾಗೋಷ್ಠಿಗಳನ್ನು ನಡೆಸಿದರು. ಈ ಎಲ್ಲಾ ಪ್ರತಿಭಟನೆಗಳಲ್ಲಿ ಮತ್ತು ಮನವಿ ಸಲ್ಲಿಸುವ ಕಾರ್ಯಗಳಲ್ಲಿ ಇಬ್ರಾಹೀಮ್ ಅವರ ಪೋಷಕರು ಮುಂಚೂಣಿಯಲ್ಲಿದ್ದರು.

ಕೊನೆಗೆ ಪೊಲೀಸರು ಒತ್ತಡಕ್ಕೆ ಮಣಿದು, ಆ ಯುವಕರನ್ನು ಸಿಕಂದರಾಬಾದ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರ ಅಧಿಕೃತ ನಿವಾಸಕ್ಕೆ ಕರೆದೊಯ್ದರು.ಇವರನ್ನು ಕೆಲವೇ ಗಂಟೆಗಳ ಹಿಂದೆ ಬಂಧಿಸಿದ್ದೇವೆ; ಇವರು ಮುಸ್ಲಿಂ ಯುವಕರನ್ನು ದೇಶದ ವಿರುದ್ಧ ಎತ್ತಿಕಟ್ಟುವ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದರು’ ಎಂದು ಪೊಲೀಸರು ಕಥೆ ಕಟ್ಟಿದರು. ಮ್ಯಾಜಿಸ್ಟ್ರೇಟ್ ತಮ್ಮ ಮನೆಯಿಂದ ಸ್ವಲ್ಪ ಹೊತ್ತು ಹೊರಬಂದು, ಇದ್ದ ಯುವಕರನ್ನು ಕೇವಲ ಒಮ್ಮೆ ಎಣಿಸಿ, “ಅವರನ್ನು ಜೈಲಿಗೆ ಕಳುಹಿಸಿ” ಎಂದು ಬಿಟ್ಟರು. ಬಂಧಿತರಾಗಿದ್ದ ಆ ಯುವಕರಿಗೆ ತಮ್ಮ ಮಾತು ಹೇಳಿಕೊಳ್ಳಲು ಒಂದು ಅವಕಾಶವನ್ನೂ ಅವರು ಕೊಡಲಿಲ್ಲ, ಮತ್ತು ಅವರ ಮೈಮೇಲಿದ್ದ ಹಿಂಸೆಯ ಆ ಗಾಯಗಳ ಕಡೆಗೆ ಒಮ್ಮೆಯೂ ಕಣ್ಣೆತ್ತಿ ನೋಡಲಿಲ್ಲ.

ಸೆರೆಮನೆಯಲ್ಲಿ, ಜೈಲು ಸಿಬ್ಬಂದಿ ಹಾಗೂ ಇತರೆ ಕೈದಿಗಳು ಅವರನ್ನು ದೇಶದ್ರೋಹಿಗಳು', 'ಭಯೋತ್ಪಾದಕರು' ಮತ್ತುಐಸಿಸ್ ಏಜೆಂಟ್’ ಎಂದು ನಿಂದಿಸುತ್ತಿದ್ದರು. ಹೆಚ್ಚಿನ ಭದ್ರತೆಯೊಂದಿಗೆ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಇಬ್ರಾಹೀಮ್ ಮತ್ತು ಇತರರು ಪೊಲೀಸರ ವಿರುದ್ಧ ಮಾಡಿದ್ದ ಆರೋಪ ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮಾನವ ಹಕ್ಕುಗಳ ಸಂಘಟನೆಗಳು ರಾಜ್ಯ ಮಾನವ ಹಕ್ಕುಗಳ ಆಯೋಗದೊಂದಿಗೆ ಸಹಕರಿಸಿದವು; ಈ ತನಿಖೆಯಲ್ಲಿ ಆರೋಪಗಳನ್ನು ಸಮರ್ಥಿಸುವ ಸಾಕಷ್ಟು ಪೂರಕ ಸಾಕ್ಷ್ಯಗಳು ದೊರೆ ತವು. ಕೈದಿಗಳು ಜೈಲಿಗೆ ಪ್ರವೇಶಿಸಿದಾಗ ಅವರ ದೇಹದ ಮೇಲಿದ್ದ ಚಿತ್ರ ಹಿಂಸೆಯ ಗುರುತುಗಳನ್ನು ಜೈಲು ಅಧಿಕಾರಿಗಳೇ ದಾಖಲಿಸಿದ್ದರು. ಏಕೆಂದರೆ ಜೈಲಿಗೆ ಬಂದ ನಂತರ ತಾವು ಚಿತ್ರಹಿಂಸೆ ನೀಡಿದ್ದೇವೆ ಎಂಬ ಆರೋಪ ಹೊರುವ ಭಯ ಅವರಿಗಿತ್ತು.

ಬಂಧಿತರಾಗಿದ್ದ ಯುವಕರು ಒಬ್ಬೊಬ್ಬರಾಗಿ ಜಾಮೀನು ಪಡೆದರು. ಇಬ್ರಾಹೀಮ್ ವಿಚಾರದಲ್ಲಿ ಐದು ತಿಂಗಳುಗಳ ಕಾಲಾವ ಕಾಶ ಬೇಕಾಯಿತು, ಜೊತೆಗೆ ಪೊಲೀಸರು ಆತನ ಜಾಮೀನು ಅರ್ಜಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ, ನಾರ್ಕೋ-ಟೆಸ್ಟ್'ಗಾಗಿ ಆತನನ್ನು ಬೆಂಗಳೂರಿನ ಎಫ್‌ಎಸ್‌ಎಲ್ (FSL) ಪ್ರಯೋಗಾಲಯಕ್ಕೆ ಕರೆದೊಯ್ಯಲಾಯಿತು; ಅಲ್ಲಿ ವ್ಯಾಪಕವಾಗಿಟ್ರೂತ್ ಸೀರಮ್’ ಎಂದು ಪರಿಚಿತವಾಗಿರುವ ಔಷಧ ವನ್ನು ಚುಚ್ಚಿ, ಆನಂತರ ವಿಚಾರಣೆಗೆ ಒಳಪಡಿಸಲಾಯಿತು ಎಂದು ಆತ ಸ್ಮರಿಸುತ್ತಾನೆ. ಅಲ್ಲಿ ಸಂಭವಿಸಿದ ಘಟನೆಗಳ ಯಾವುದೇ ನೆನಪು ಆತನಿಗಿಲ್ಲ. ಅಂತಿಮವಾಗಿ 50,000 ರೂಪಾಯಿಗಳ ಜಾಮೀನು ಮಂಜೂರು ಮಾಡಲಾಯಿತು. ಇಷ್ಟೊಂದು ಬೃಹತ್ ಮೊತ್ತವನ್ನು ಪಾವತಿಸಲು ಆತನ ತಾಯಿ ತಮ್ಮ ಆಭರಣಗಳನ್ನು ಮಾರಾಟ ಮಾಡಿದರು.

ಹೈದರಾಬಾದ್ ಪೊಲೀಸರು ಅಂತಿಮವಾಗಿ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ, ಇಬ್ರಾಹೀಮ್ ಅಥವಾ ಅಂದು ಅಪಹರಿಸಲ್ಪಟ್ಟಿದ್ದ ಯುವಕರಿಗೆ ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಗಳೊಂದಿಗೆ ಯಾವುದೇ ನಂಟು ಕಲ್ಪಿಸಲು ಸಾಧ್ಯವಾಗಲಿಲ್ಲ ಎಂಬುದು ಗಮನಾರ್ಹ. ಬದಲಾಗಿ, ಆರೋಪಗಳು ಸಾಮಾನ್ಯ ಸ್ವರೂಪದಲ್ಲಿದ್ದವು; ಪಾಕಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವಂತೆ ಭಾರತವನ್ನು ಆಳಲು' ಭಯೋತ್ಪಾದನೆಯನ್ನು ಆಶ್ರಯಿಸುವ ಜಿಹಾದಿ ಸಿದ್ಧಾಂತದ ಬಗ್ಗೆ ಅವರು ಸಹಾನುಭೂತಿ ಹೊಂದಿದ್ದಾರೆ ಎಂದು ದೂರಲಾಗಿತ್ತು. ರೈಲು ನಿಲ್ದಾಣದಲ್ಲಿ ನಡೆದ ಸಭೆಯೊಂದರಲ್ಲಿ ಅವರನ್ನು ಬಂಧಿಸಲಾಗಿದ್ದು, ಅವರ ವಶದಲ್ಲಿ ದೇಶದ್ರೋಹಿ ಸಾಹಿತ್ಯ ಮತ್ತು ವಿ.ಸಿ.ಡಿ.ಗಳು ಪತ್ತೆಯಾಗಿವೆ ಎಂದು ಹೇಳಲಾಯಿತು. ಆ ವಿ.ಸಿ.ಡಿ.ಗಳು “ಗುಜರಾತ್ ಕೋಮು ಗಲಭೆಗಳ ತುಣುಕುಗಳನ್ನು ಮತ್ತು ಜಿಹಾದಿ ಶಕ್ತಿಗಳಿಂದ ಪಾಶ್ಚಾತ್ಯ ಪಡೆಗಳ ತಲೆ ಕಡಿಯುವ ದೃಶ್ಯಗಳನ್ನು ಪ್ರದರ್ಶಿಸುತ್ತಿದ್ದವು, ಇದರಿಂದಾಗಿ ಮುಸ್ಲಿಂ ಯುವಕರು ಮುಸ್ಲಿಮೇತರ ಸಮುದಾಯಗಳ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಚೋದನೆಗೊಳ್ಳುತ್ತಿದ್ದರು” ಎಂದು ಆರೋಪಿಸಲಾಗಿತ್ತು.

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ, ಇಬ್ರಾಹೀಮ್ ತನ್ನ ವೈದ್ಯಕೀಯ ಕಾಲೇಜಿಗೆ ಮರುಪ್ರವೇಶ ಪಡೆಯಲು ಮತ್ತು ಅಂತಿಮ ಪರೀಕ್ಷೆಗಳಿಗೆ ಹಾಜರಾಗಲು ಪ್ರಯತ್ನಿಸಿದನು. ಹಿಂದೂ ಮತ್ತು ಮುಸ್ಲಿಂ ಸಹಪಾಠಿಗಳು ಆತನನ್ನು ಸ್ವಾಗತಿಸಿದರೂ, ದೇಶದ್ರೋಹ ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡಿದ ಆರೋಪದ ಕಳಂಕದಿAದಾಗಿ ಕಾಲೇಜು ಆಡಳಿತ ಮಂಡಳಿಯು ಅಳುಕುವಂತಾಯಿತು. ಕಾನೂನು ತೊಡಕುಗಳನ್ನು ಎದುರಿಸಲು ಅವರು ಸಿದ್ಧರಿರಲಿಲ್ಲ. ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವೇ ಎಂಬ ಸಂದಿಗ್ಧತೆಯಲ್ಲಿದ್ದ ಇಬ್ರಾಹೀಮ್, ವಿಷಯವನ್ನು ಹೈಕೋರ್ಟ್ ಗಮನಕ್ಕೆ ತಂದನು. ನ್ಯಾಯಾಲಯವು ಆತನನ್ನು ಮರುಸೇರ್ಪಡೆ ಮಾಡಿಕೊಳ್ಳುವಂತೆ ಕಾಲೇಜಿಗೆ ಆದೇಶ ನೀಡಿತು. ಅಂತಿಮವಾಗಿ ಇಬ್ರಾಹೀಮ್ ತನ್ನ ಅಧ್ಯಯನವನ್ನು ಮರುಪ್ರಾರಂಭಿಸಿ, ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿದನು.

ಹೈದರಾಬಾದ್ ಪೊಲೀಸರಿಂದ ಅಪಹರಣಕ್ಕೊಳಗಾಗಿ ಚಿತ್ರಹಿಂಸೆಗೀಡಾದ ಇತರ ಯುವಕರಂತೆಯೇ, ಇಬ್ರಾಹೀಮ್ ಕೂಡ ನನ್ನನ್ನು ಭೇಟಿಯಾದಾಗ ಒಂದು ಕಠಿಣ ಸಂದಿಗ್ಧತೆಯನ್ನು ಎದುರಿಸುತ್ತಿದ್ದನು. ತಾನು ಅನುಭವಿಸಿದ ದೌರ್ಜನ್ಯಗಳ ಕುರಿತು ಬಹಿರಂಗವಾಗಿ ಧ್ವನಿ ಎತ್ತಿದರೆ, ಪೊಲೀಸರಿಂದ ಸೇಡಿನ ಕ್ರಮವನ್ನು ಎದುರಿಸಬೇಕಾದೀತೆಂಬ ಭಯ ಆತನಿಗಿತ್ತು; ಮತ್ತಷ್ಟು ದೇಶದ್ರೋಹ ಹಾಗೂ ಭಯೋತ್ಪಾದನೆಯ ಆರೋಪಗಳನ್ನು ಹೊರಿಸಿ, ಹಿಂಸಿಸಬಹುದು ಅಥವಾ ಹತ್ಯೆ ಮಾಡಬಹುದು. ಆದರೆ, ಪರಿಣಾಮಗಳ ಭೀತಿಯಿಂದ ಮೌನ ವಹಿಸಿದರೂ, ಆತ ಅಪಾಯದಿಂದ ಪಾರಾಗುವ ಸಾಧ್ಯತೆಯಿರಲಿಲ್ಲ. ನಕ್ಸಲರು ಹಾಗೂ ಭಯೋತ್ಪಾದಕರ ವಿರುದ್ಧದ ಹೋರಾಟದ ನೆಪದಲ್ಲಿ ಉತ್ತರದಾಯಿತ್ವವಿಲ್ಲದೆ ವರ್ತಿಸಲು ರೂಢಿಸಿ ಕೊಂಡಿರುವ ಪೊಲೀಸ್ ಪಡೆಯಿಂದ, ಆತ ಭಯಪಡುತ್ತಿದ್ದ ಅನಿಷ್ಟ ಫಲಿತಾಂಶಗಳನ್ನು ಎದುರಿಸುವ ಅಪಾಯ ಜೀವಂತವಾಗಿತ್ತು.

ತನ್ನ ಮುಂದಿನ ದಾರಿ ಏನು ಎಂಬ ಬಗ್ಗೆ ಇಬ್ರಾಹೀಮ್‌ಗೆ ಸ್ಪಷ್ಟ ಕಲ್ಪನೆಯಿತ್ತು. ಅನ್ಯಾಯದ ವಿರುದ್ಧ ತಾನೇ ಮುಂಚೂಣಿಯಲ್ಲಿ ನಿಂತು ಹೋರಾಡುವುದಾಗಿಯೂ, ಅದಕ್ಕೆ ಎಂತಹ ಬೆಲೆ ತೆರಬೇಕಾದರೂ ಸಿದ್ಧ ಎಂದೂ ಆತ ನಿರ್ಧರಿಸಿದ್ದನು. ಅದಕ್ಕಾಗಿಯೇ ನನ್ನ ಜೊತೆ ಮಾತನಾಡಲು ಪಟ್ಟು ಹಿಡಿದನು ಮತ್ತು ನಾನು ಅವರ ಈ ಕಥೆಯನ್ನು ಬರೆಯಬೇಕೆಂದು ಬಯಸಿದನು. ನಾನು ಅವರ ಮಾತಿನಂತೆ ಆ ಕಥೆಯನ್ನು ಬರೆದೆ, ಮತ್ತು ಅದನ್ನುದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟಿಸಿದೆ.

ಆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರತಿಯೊಬ್ಬ ಯುವಕನೂ ಬಿಡುಗಡೆಗೊಂಡಂತೆ, ಇಬ್ರಾಹೀಮ್ ಕೂಡ ಎರಡು ವರ್ಷಗಳ ನಂತರ ಅಂತಿಮವಾಗಿ ಖುಲಾಸೆಗೊಂಡನು.

ನಾನು ಜುನೈದ್‌ನನ್ನು ಭೇಟಿಯಾದಾಗ, ಆತ ಹಳೆಯ ಹೈದರಾಬಾದ್‌ನಲ್ಲಿ ಒಂದು ಸಣ್ಣ ಯುನಾನಿ ಕ್ಲಿನಿಕ್ ನಡೆಸುತ್ತಿದ್ದನು. ಆದರೆ, ತನಗೆ ಮತ್ತು ತನ್ನ ಜೊತೆಗೇ ಬಂಧನಕ್ಕೊಳಗಾಗಿದ್ದ ಇತರ ಯುವಕರಿಗೆ ವರ್ಷಗಳ ಕಾಲ ನಡೆದ ಆ ಚಿತ್ರಹಿಂಸೆ ಮತ್ತು ಅನ್ಯಾಯದ ಬಂಧನಕ್ಕೆ ಪರಿಹಾರ ಕೊಡಿಸಬೇಕೆಂದು ಪಟ್ಟು ಹಿಡಿದಿದ್ದನು. ಅದಕ್ಕಾಗಿ ಕಾನೂನು ಹೋರಾಟ ನಡೆಸಬೇಕು ಎಂದು ದೃಢವಾಗಿ ನಿರ್ಧರಿಸಿದ್ದನು.

ನಾನು ಟೀಸ್ತಾ ಸೆಟಲ್ವಾಡ್ ಅವರೊಂದಿಗೆ ಸೇರಿ ಈ ಪರಿಹಾರಕ್ಕಾಗಿ ನಡೆಯುವ ಹೋರಾಟದಲ್ಲಿ ಭಾಗಿಯಾಗಲು ಮನಃಪೂರ್ವಕವಾಗಿ ಒಪ್ಪಿಕೊಂಡೆ. ಇದು ಕ್ಷಮಿಸಲು ಸಾಧ್ಯವೇ ಇಲ್ಲದಷ್ಟು ದೊಡ್ಡದಾದ ಸಾರ್ವಜನಿಕ ಅಪರಾಧಕ್ಕೆ, ಸಮಾಜವಾಗಿ ನಾವು ಸಲ್ಲಿಸುವ ಒಂದು ರೀತಿಯ ಪ್ರಾಯಶ್ಚಿತ್ತದ ಸಂಕೇತವಾಗಿದೆ.

2011ರ ಡಿಸೆಂಬರ್‌ನಲ್ಲಿ, ಆಂಧ್ರಪ್ರದೇಶ ಸರ್ಕಾರವು ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿತು. 2007ರ ಮೆಕ್ಕಾ ಮಸೀದಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲ್ಪಟ್ಟು, ನ್ಯಾಯಾಲಯದಿಂದ ಮುಕ್ತರಾಗುವ ಮುನ್ನ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆಗೊಳಗಾದ 70 ಮುಸ್ಲಿಂ ಯುವಕ ರಿಗೆ ಸರ್ಕಾರ ಪರಿಹಾರ ಘೋಷಿಸಿತು. ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸಮಿತಿಯೊಂದು ನಡೆಸಿದ ಸತ್ಯಶೋಧನೆಯಲ್ಲಿ, ಪೊಲೀಸರು ಈ ಯುವಕರಿಗೆ ಚಿತ್ರಹಿಂಸೆ ನೀಡಿದ್ದು ನಿಜ ಎಂದು ವರದಿಯಾಗಿತ್ತು. ಅಂದಿನ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು, ತಪ್ಪಾಗಿ ಬಂಧನಕ್ಕೊಳಗಾದ ಈ ಎಲ್ಲ ಯುವಕರಲ್ಲಿ ಕ್ಷಮೆ ಕೋರಿದರು. ಈ ಪ್ರಕರಣದಲ್ಲಿ ಖುಲಾಸೆಯಾದ 15 ಜನರಿಗೆ ತಲಾ 3 ಲಕ್ಷ ರೂಪಾಯಿ, ಮತ್ತು ವಿಚಾರಣೆಯ ನಂತರ ಬಿಡುಗಡೆಯಾದ ಉಳಿದ 46 ಮಂದಿಗೆ ತಲಾ 20,000 ರೂಪಾಯಿಗಳ ಚೆಕ್ ನೀಡಲಾಯಿತು. ಜೊತೆಗೆ, ಅವರ ಮೇಲೆ ಯಾವುದೇ ಅಪರಾಧ ಪ್ರಕರಣವಿಲ್ಲ ಎಂದು ಪ್ರಮಾಣಪತ್ರವನ್ನೂ ನೀಡಿದರು. ಭಯೋತ್ಪಾದ ನೆಯ ಆರೋಪದ ಮೇಲೆ ತಪ್ಪಾಗಿ ಬಂಧಿಸಿ ಹಿಂಸಿಸಿದ ಸಂತ್ರಸ್ತರಿಗೆ ರಾಜ್ಯವೊಂದು ಪರಿಹಾರ ನೀಡಿದ ದೇಶದ ಮೊದಲ ನಿದರ್ಶನ ಇದಾಗಿದೆ.

ಹರ್ಷ್ ಮಂದರ್: `ಕಾರವಾನ್-ಎ-ಮೊಹಬ್ಬತ್’ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಹೈಡೆಲ್ಬರ್ಗ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಕೃಪೆ: maktoobmedia.com