ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ – ವೆಲ್ಫೇರ್ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಸಮೀಕ್ಷೆ

0
360

ಸನ್ಮಾರ್ಗ ವಾರ್ತೆ

ರಾಷ್ಟ್ರೀಯ ಹೆದ್ದಾರಿ 169 ಬಿಕರ್ನಕಟ್ಟೆಯಿಂದ ಸಾಣೂರುವರೆಗಿನ ಚತುಷ್ಪಥ ಹೆದ್ದಾರಿ ಕಾಮಗಾರಿಯಲ್ಲಿ ನಡೆದಿರುವ ಅವೈಜ್ಞಾನಿಕತೆ ಮತ್ತು ಅಪಾಯಕಾರಿ ರಸ್ತೆ ನಿರ್ಮಾಣದ ವಿಚಾರವಾಗಿ ವೆಲ್ಫೇರ್ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾ ತಂಡ ಸಮೀಕ್ಷೆಯನ್ನು ನಡೆಸಿತು.

ಬೈತುರ್ಲಿ, ಕುಡುಪು, ಕೆತ್ತಿಕಲ್, ಕೈಕಂಬ ಹಾಗೂ ಎಡಪದವು ಪ್ರದೇಶಗಳಲ್ಲಿ ಅಪಾಯಕಾರಿಯಾಗಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಈಗಾಗಲೇ ಗುಡ್ಡ ಜರಿತ ಹಾಗೂ ರಸ್ತೆ ಕುಸಿತದಂತಹ ಅವಘಡಗಳು ಸಂಭವಿಸಿವೆ.

ಇತ್ತೀಚೆಗೆ ಎಡಪದವು ಪ್ರದೇಶದಲ್ಲಿ ಅವೈಜ್ಞಾನಿಕವಾಗಿ 40 ಅಡಿ ಎತ್ತರಕ್ಕೆ ಮಣ್ಣು ಹಾಕಿ ನಿರ್ಮಿಸಲಾದ ರಸ್ತೆ ಜರಿದಿರುವುದರಿಂದ ಪಕ್ಕದಲ್ಲಿರುವ ಕೃಷಿ ಭೂಮಿಗಳಿಗೆ ಅಪಾರ ಹಾನಿ ಸಂಭವಿಸಿದೆ. ಪಕ್ಷದ ನಿಯೋಗ ಕೃಷಿ ಮಾಲಕರು ಹಾಗೂ ಸ್ಥಳೀಯರೊಂದಿಗೆ ಮಾತನಾಡಿ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಂಡು ಹಾನಿಯಾದ ಕೃಷಿ ಭೂಮಿ ಮಾಲಕರಿಗೆ ಪರಿಹಾರ ನೀಡುವಂತೆ ಮತ್ತು ಒಟ್ಟು ಹೆದ್ದಾರಿ ನಿರ್ಮಾಣದಲ್ಲಾದ ಅವೈಜ್ಞಾನಿಕತೆಯ ತನಿಖೆ ನಡೆಸಿ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗುವುದು.

ಪ್ರಾಧಿಕಾರ ಇದಕ್ಕೆ ಸ್ಪಂದಿಸದೇ ಇದ್ದಲ್ಲಿ ಮುಂದಿನ ಕಾನೂನು ಕ್ರಮವಾಗಿ ಉಚ್ಚ ನ್ಯಾಯಾಲಯದಲ್ಲಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರ ವಿರುದ್ಧ ದಾವೆ ಹೂಡಲಾಗುವುದು ಎಂದು ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಎಂ. ದಿವಾಕರ್ ರಾವ್ ತಿಳಿಸಿದರು.

ನಿಯೋಗದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್, ರಾಜ್ಯ ಕೋಶಾಧಿಕಾರಿ ಅಬ್ದಲ್ ಸಲಾಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಪದ್ರೆಂಗಿ, ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಸೈಫ್, ಜಿಲ್ಲಾ ವಕ್ತಾರರಾದ ಎಸ್.ಎಂ ಮುತ್ತಲಿಬ್, ಸುಲೈಮಾನ್ ಕಲ್ಲರ್ಪೆ, ಸದಸ್ಯರಾದ ಸಲೀಂ ಬೋಳಂಗಡಿ, ಮನ್ಸೂರ್, ಮನೋಜ್ ಮುಂತಾದವರಿದ್ದರು.