ಭಯೋತ್ಪಾದನೆ ವಿರುದ್ಧದ ಯುದ್ಧವೋ ಅಥವಾ ಇಸ್ಲಾಮ್‌ ವಿರೋಧಿ ಭಯೋತ್ಪಾದನೆಯೋ?

0
368

✍️ ವಿ.ಎ. ಕಬೀರ್

ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್‌ನ ಅವಳಿ ಗೋಪುರಗಳನ್ನು ‘ಅಪರಿಚಿತ’ ವೈಮಾನಿಕ ದಾಳಿಯಿಂದ ನಾಶಪಡಿಸಲಾದ 2001ರ ಸೆಪ್ಟೆಂಬರ್ 11ರಂದು ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಾರಂಭಿಸಿದ ‘ಭಯೋತ್ಪಾದನೆ ವಿರುದ್ಧದ ಯುದ್ಧ’ಕ್ಕೆ ಕಾಲು ಶತಮಾನ ಕಳೆದಿದೆ. ಇದು ವಿಶ್ವಯುದ್ಧದ ಸಂದರ್ಭದಲ್ಲಿ ಜಪಾನ್ ನಡೆಸಿದ ಪರ್ಲ್ ಹಾರ್ಬರ್ ದಾಳಿಗೆ ಸಮನಾದ ಹೊಡೆತವಾಗಿತ್ತು. ಆ ಘಟನೆಗೆ ಪ್ರತಿಯಾಗಿ ಅಮೆರಿಕವು ಜಪಾನ್ ಮೇಲೆ ಪರಮಾಣು ಬಾಂಬ್ ಹಾಕಿತ್ತು. ಪರ್ಲ್ ಹಾರ್ಬರ್ ದಾಳಿಯು ಅಮೆರಿಕ ಎಂದಿಗೂ ಮರೆಯದ ಘಟನೆಯಾಗಿದೆ. ಇಂದಿಗೂ ಅಮೇರಿಕನ್ನರು ಅದರ ವಾರ್ಷಿಕ ಸ್ಮರಣಾರ್ಥ ಸಮಾರಂಭವನ್ನು ನಡೆಸುತ್ತಾರೆ. ಪ್ರತೀಕಾರದ ಮೂರ್ತರೂಪವಾದ ಅಮೆರಿಕವನ್ನು ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲೂ ನಾವು ನೋಡುತ್ತೇವೆ. ಇದರಲ್ಲಿ ಅವರ ಗೆಲುವು ಏನೆಂದರೆ, ಕೇವಲ ಅವರಿಗೆ ಮಾತ್ರ ಬಾಧಿಸಿದ ಸಮಸ್ಯೆಯನ್ನು ಇಡೀ ಪ್ರಪಂಚದ ಹೆಗಲ ಮೇಲೆ ಹೊರಿಸುವಲ್ಲಿ ಅವರು ಯಶಸ್ವಿಯಾದರು. ‘ನಮ್ಮೊಂದಿಗೆ ಇರಿ ಅಥವಾ ನಮ್ಮ ವಿರುದ್ಧ ಇರಿ’ ಎಂಬುದು ಆ ಸಮಯದಲ್ಲಿ ಬುಶ್‌ ಜೂನಿಯರ್ ಬಾಯಿಯಿಂದ ಬಂದ ಆದೇಶವಾಗಿತ್ತು.

ಹೀಗೆ, ಭಯೋತ್ಪಾದನೆಯ ಬೆದರಿಕೆ ಇಲ್ಲದ ದೇಶಗಳನ್ನು ಈ ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಭಾಗವಹಿಸಲು ಬಲವಂತಪಡಿಸಲಾಯಿತು. ಇದರ ಪರಿಣಾಮಗಳಲ್ಲಿ ಒಂದೆಂದರೆ, ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ದೇಶಗಳಲ್ಲಿ ಹೊಸ ಮಾನವ ಹಕ್ಕುಗಳ ಉಲ್ಲಂಘನೆಯ ಕಾನೂನುಗಳ ಸರಣಿಯನ್ನೇ ಜಾರಿಗೆ ತರಲಾಯಿತು. ಇದು ವಿರೋಧ ಪಕ್ಷಗಳನ್ನು ಮೌನಗೊಳಿಸಿತು ಮತ್ತು ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು ಮರೆಮಾಚಿತು. ಒಬ್ಬ ಆರೋಪಿಯು ತಪ್ಪಿತಸ್ಥನೆಂದು ಸಾಬೀತಾಗುವವರೆಗೆ ನಿರಪರಾಧಿ ಎಂಬ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಕಾನೂನು ನ್ಯಾಯವನ್ನು ಬುಡಮೇಲು ಮಾಡಲಾಯಿತು. ಆರೋಪಿಯು ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸುವುದು ಅವನ ಜವಾಬ್ದಾರಿಯಾಯಿತು. ಜಾಮೀನು ನೀಡುವುದು ಕೂಡ ಕಾನೂನು – ಎಂಬ ಪದ್ಧತಿಯೇ ಕಣ್ಮರೆಯಾಯಿತು. ತಾನು ತಪ್ಪಿತಸ್ಥನೆಂದು ಸಾಬೀತಾಗಿದ್ದರೆ ಅನುಭವಿಸಬೇಕಾಗಿದ್ದ ಶಿಕ್ಷೆಯ ಅವಧಿ ಮುಗಿದ ನಂತರವೂ, ಆರೋಪಿಗಳು ಜಾಮೀನು ಇಲ್ಲದ ವಿಚಾರಣಾಧೀನ ಕೈದಿಗಳಾಗಿ ಉಳಿದರು ಮತ್ತು ತಮ್ಮ ಜೀವನವನ್ನು ಜೈಲಿನಲ್ಲಿ ಕಳೆಯಬೇಕಾಯಿತು. ಪೊಲೀಸರು ಹೆಚ್ಚೆಚ್ಚು ಶಕ್ತಿಯುಳ್ಳವರಾದಂತೆ, ದೇಶವೇ ಪರಿಣಾಮಕಾರಿಯಾಗಿ ಪೊಲೀಸ್ ರಾಜ್ಯವಾಯಿತು. ಅತಿಯಾದ ಅಧಿಕಾರ ಹೊಂದಿರುವ ಕಾನೂನುಗಳು ರಾಷ್ಟ್ರದ ಕೈಯಲ್ಲಿ ರಾಜಕೀಯ ದುರುಪಯೋಗದ ಅಸ್ತ್ರಗಳಾದವು. ನೈಜ ಭಯೋತ್ಪಾದನೆಯನ್ನು ಮರೆಮಾಚಲಾಯಿತು ಮತ್ತು ನಿರಂಕುಶ ಆಡಳಿತಗಳು ತಮ್ಮ ಅಸ್ತಿತ್ವಕ್ಕೆ ಬೆದರಿಕೆ ಎಂದು ಪರಿಗಣಿಸಿದ ವಿರೋಧ ಪಕ್ಷದ ಧ್ವನಿಗಳು ಮತ್ತು ರಾಜಕೀಯ ಚಟುವಟಿಕೆಗಳನ್ನು ದಮನಕ್ಕೆ ಒಳಪಡಿಸಲಾಯಿತು.

ಪ್ರಪಂಚದ ಎಲ್ಲೆಲ್ಲಿಯೂ, ಅಮೆರಿಕ ಸಹಿ ಹಾಕಿದ ‘ಭಯೋತ್ಪಾದನೆ ವಿರುದ್ಧದ ಯುದ್ಧ’ವು ಹೆಚ್ಚಾಗಿ ಇಸ್ಲಾಮ್‌ ಮತ್ತು ಮುಸ್ಲಿಮರ ಮೇಲೆ ಪರಿಣಾಮ ಬೀರಿದೆ. ವಿಪರ್ಯಾಸವೆಂದರೆ, ಭಾರತದಲ್ಲಿ ಈ ಯುದ್ಧಭೂಮಿಯಲ್ಲಿರುವ ಸೈನಿಕರು ಗುಜರಾತ್‌ನಲ್ಲಿ ನರಮೇಧವನ್ನು ಎಸಗಿದ ಅದೇ ಜನರಾಗಿದ್ದಾರೆ.

ದುರುಪಯೋಗದ ರಾಜಕೀಯ ಆಟಗಳು

ಭಯೋತ್ಪಾದನೆ ವಿರುದ್ಧದ ಯುದ್ಧ ಮತ್ತು ಅದಕ್ಕೆ ಸಂಬಂಧಿಸಿದಂತೆ ರೂಪಿಸಲಾದ ಕಾನೂನುಗಳು ಭಾರತದ ಒಳಗೆ ಮತ್ತು ಹೊರಗೆ ವ್ಯಾಪಕವಾಗಿ ದುರುಪಯೋಗವಾಗಿವೆ. ಅವೆಲ್ಲವನ್ನೂ ಇಸ್ಲಾಮ್‌ ಮತ್ತು ಮುಸ್ಲಿಮರ ಮೇಲೆ ಹೊರಿಸಲಾಯಿತು. ಶ್ರೀಲಂಕಾದ ಕ್ರಿಶ್ಚಿಯನ್ ಚರ್ಚಿನಲ್ಲಿ 2019ರ ಈಸ್ಟರ್ ದಿನದಂದು ನಡೆದ ಬಾಂಬ್ ಸ್ಫೋಟಗಳು, ರಾಜಕೀಯ ಲಾಭ ಪಡೆಯಲು ಕಾನೂನು ಜಾರಿ ಅಧಿಕಾರಿಗಳೇ ಬಾಂಬ್ ದಾಳಿ ಮತ್ತು ಹತ್ಯೆಗಳನ್ನು ನಡೆಸಿ ಅದನ್ನು ‘ಮುಸ್ಲಿಂ ಭಯೋತ್ಪಾದಕರ’ ಮೇಲೆ ಹೊರಿಸಿದ್ದಕ್ಕೆ ಕೇವಲ ಒಂದು ಉದಾಹರಣೆಯಾಗಿದೆ. 279 ಜನರ ಸಾವಿಗೆ ಕಾರಣವಾದ ಈ ಸರಣಿ ಸ್ಫೋಟಗಳನ್ನು ಆಗಿನ ಮಿಲಿಟರಿ ಗುಪ್ತಚರ ಅಧಿಕಾರಿಯಾದ ಮತ್ತು ನಂತರ ಗುಪ್ತಚರ ಇಲಾಖೆಯ ಮುಖ್ಯಸ್ಥರಾದ ಮೇಜರ್ ಜನರಲ್ ಸುರೇಶ್ ಸಲ್ಲೆ ಯೋಜಿಸಿ ನಿಯಂತ್ರಿಸಿದ್ದರು ಎಂದು ಶ್ರೀಲಂಕಾ ಸರ್ಕಾರವೇ 2026ರ ಜೂನ್‌ನಲ್ಲಿ ಸಂಸತ್ತಿನಲ್ಲಿ ಬಹಿರಂಗಪಡಿಸಿತು. ಇದರ ಹಿಂದಿನ ಗುರಿ ದೇಶದಲ್ಲಿ ವ್ಯಾಪಕ ಅವ್ಯವಸ್ಥೆ ಮತ್ತು ಭಯವನ್ನು ಸೃಷ್ಟಿಸುವುದಾಗಿತ್ತು. ಇದು ಆಗಿನ ಪ್ರಬಲ ರಾಜಕೀಯ ನಾಯಕ ಮತ್ತು ಮಾಜಿ ಮಿಲಿಟರಿ ಅಧಿಕಾರಿಯಾದ ಗೊಟಬಯ ರಾಜಪಕ್ಸ ಅಧಿಕಾರ ಹಿಡಿಯಲು ದಾರಿ ಮಾಡಿಕೊಟ್ಟಿತು. 2024ರಲ್ಲಿ ಅಧಿಕಾರಕ್ಕೆ ಬಂದ ಅನುರ ಕುಮಾರ ದಿಸನಾಯಕೆ ಅವರ ಆದೇಶದ ಮೇರೆಗೆ ನಡೆಸಿದ ವಿಶೇಷ ತನಿಖೆಯ ಸಂದರ್ಭದಲ್ಲಿ ಈ ಆಘಾತಕಾರಿ ಸಂಚು ಬಹಿರಂಗವಾಯಿತು.

ಇದೇ ರೀತಿಯ ಘಟನೆಗಳು ಭಾರತದಲ್ಲಿ ಅನೇಕ ರೂಪಗಳಲ್ಲಿ ಕಂಡುಬಂದಿವೆ. ಮುಸ್ಲಿಮರ ಪ್ರಾರ್ಥನಾ ಸ್ಥಳಗಳ ಮೇಲೆ ಬಾಂಬ್ ಹಾಕಿ ನಾಶಪಡಿಸಲಾಯಿತು, ಭಕ್ತರನ್ನು ಕೊಲ್ಲಲಾಯಿತು ಮತ್ತು ನಂತರ ಅದರ ಆಪಾದನೆಯನ್ನು ‘ಮುಸ್ಲಿಂ ಭಯೋತ್ಪಾದಕರ’ ಮೇಲೆ ಹಾಕಲಾಯಿತು. ಇದಕ್ಕೆ ಉದಾಹರಣೆಯೆಂದರೆ, 2007ರ ಮೇ 8ರಂದು ಹೈದರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ನಡೆದ ಬಾಂಬ್ ಸ್ಫೋಟ. ಈ ಘಟನೆಯಲ್ಲಿ 9 ಜನರು ಸಾವನ್ನಪ್ಪಿದರು ಮತ್ತು 58ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡರು. ಆರಂಭದಲ್ಲಿ, ಪೋಲೀಸರು ಈ ಸಂಬಂಧ ಮುಸ್ಲಿಂ ಯುವಕರನ್ನು ಬಂಧಿಸಿ ಚಿತ್ರಹಿಂಸೆ ನೀಡಿದರು. ನಂತರ, ಪ್ರಕರಣವನ್ನು ವಹಿಸಿಕೊಂಡ ಎನ್.ಐ.ಎ (NIA), ‘ಅಭಿನವ ಭಾರತ’ ಎಂಬ ಹಿಂದೂತ್ವ ತೀವ್ರಗಾಮಿ ಸಂಘಟನೆ ಇದರ ಹಿಂದೆ ಇದೆ ಎಂದು ಪತ್ತೆಹಚ್ಚಿತು. ಆಡಳಿತ ಬದಲಾದಂತೆ ಪ್ರಕರಣ ದುರ್ಬಲಗೊಂಡಿತು ಮತ್ತು 64 ಪ್ರಮುಖ ಸಾಕ್ಷಿಗಳು ಮಾತು ಬದಲಿಸಿದರು. ಹೀಗಾಗಿ, 2018ರ ಏಪ್ರಿಲ್ 16ರಂದು ಹೈದರಾಬಾದ್‌ನ ವಿಶೇಷ ಎನ್.ಐ.ಎ ನ್ಯಾಯಾಲಯವು ಅಸೀಮಾನಂದ ಎಂಬ ಸಾಧು ಸೇರಿದಂತೆ ಆರೋಪಿಗಳನ್ನು ಖುಲಾಸೆಗೊಳಿಸಿತು. ತೀರ್ಪು ನೀಡಿದ ಕೆಲವೇ ಗಂಟೆಗಳಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ. ರವೀಂದರ್ ರೆಡ್ಡಿ ರಾಜೀನಾಮೆ ನೀಡಿದ್ದು ಆ ಸಮಯದಲ್ಲಿ ದೊಡ್ಡ ವಿವಾದವಾಯಿತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಎನ್.ಐ.ಎ ಈ ತೀರ್ಪಿನ ವಿರುದ್ಧ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲಿಲ್ಲ ಎಂಬುದು ಅರ್ಥವಾಗುವಂತಹದ್ದೇ. ಸಂತ್ರಸ್ತರಿಗೆ ಅಥವಾ ಅವರ ಕುಟುಂಬಗಳಿಗೆ ನಿಜವಾದ ನ್ಯಾಯ ಸಿಗಲಿಲ್ಲ. ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಸಮಾಜ ಸೇವಕರು ಮಾತ್ರ ಇದಕ್ಕಾಗಿ ಧ್ವನಿ ಎತ್ತಿದರು. 

ಮತ್ತೊಂದು ಘಟನೆಯೆಂದರೆ 2005ರ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ನ ಪ್ರಕರಣ. ಇದರಲ್ಲಿ ಮುಖ್ಯ ಸಾಕ್ಷಿಯಾದ ಆತನ ಪತ್ನಿ ಕೌಸರ್‌ಬಿಯನ್ನು ಅಪಹರಿಸಿ ಕೊಲ್ಲಲಾಯಿತು. ಮತ್ತೊಬ್ಬ ಸಾಕ್ಷಿ ತುಳಸಿರಾಮ್ ಪ್ರಜಾಪತಿಯನ್ನೂ ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು. ಈ ಮೂರು ಹತ್ಯೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅಂದು ಸಿ.ಬಿ.ಐ (CBI) ಅಮಿತ್ ಶಾ ಅವರನ್ನು ಬಂಧಿಸಿತ್ತು. 2014ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಿಶೇಷ ಸಿ.ಬಿ.ಐ ನ್ಯಾಯಾಧೀಶ ಬಿ.ಎಚ್. ಲೋಯಾ ಅವರ ನಿಗೂಢ ಸಾವಿನ ನಂತರ ಮುಂಬೈ ಸಿ.ಬಿ.ಐ ವಿಶೇಷ ನ್ಯಾಯಾಲಯದಿಂದ ಅಮಿತ್ ಶಾ ಅವರು ಖುಲಾಸೆಗೊಂಡರು. ಅಷ್ಟೊತ್ತಿಗೆ ಕೇಂದ್ರದಲ್ಲಿ ಸರ್ಕಾರ ಬದಲಾಗಿತ್ತು.

ನರೇಂದ್ರ ಮೋದಿಯನ್ನು ಹತ್ಯೆ ಮಾಡಲು ಬಂದ ಲಷ್ಕರ್-ಎ-ತೈಬಾ ಕಾರ್ಯಕರ್ತರು ಎಂದು ಶಂಕಿಸಲಾದ ಜಾವೇದ್ ಶೇಖ್ ಮತ್ತು ಇಶ್ರತ್ ಜಹಾನ್ ಸೇರಿದಂತೆ ನಾಲ್ವರನ್ನು ಪೊಲೀಸರು ಗುಂಡಿಕ್ಕಿ ಕೊಂದ ನಕಲಿ ಎನ್‌ಕೌಂಟರ್‌ ಕೂಡ ನೆನಪಿಸಿಕೊಳ್ಳುವಂತಹದ್ದು. ಕೇರಳದ ಪತ್ತನಂತಿಟ್ಟ ಮೂಲದ ಗೋಪಿನಾಥನ್ ಪಿಳ್ಳೈ ಅವರ ಮಗ ಪ್ರಣೇಶ್ ಕುಮಾರ್ ಮುಂಬೈನಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಇಸ್ಲಾಮ್‌ ಧರ್ಮಕ್ಕೆ ಮತಾಂತರಗೊಂಡು ಜಾವೇದ್ ಶೇಖ್ ಎಂಬ ಹೆಸರನ್ನು ಸ್ವೀಕರಿಸಿದ್ದನು. ಗೋಪಿನಾಥನ್ ಪಿಳ್ಳೈ ಅವರು ಕಾರು ಅಪಘಾತದಲ್ಲಿ ಸಾಯುವವರೆಗೂ ತಮ್ಮ ಮಗನಿಗಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದರು. ಈ ಪ್ರಕರಣವು ನಂತರ ಸಿ.ಬಿ.ಐ ತನಿಖೆಯಲ್ಲಿ ನಕಲಿ ಎನ್‌ಕೌಂಟರ್‌ ಎಂದು ಸಾಬೀತಾಯಿತು. ಈ ಪಟ್ಟಿಯಲ್ಲಿ ಗುಜರಾತ್ ನರಮೇಧದ ಬಗ್ಗೆ ಸತ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಚಿತ್ರಹಿಂಸೆಗೆ ಒಳಗಾದ ಸಂಜೀವ್ ಭಟ್ ಮತ್ತು ಕನ್ನಡಿಗರಾದ ಆರ್.ಬಿ. ಶ್ರೀಕುಮಾರ್ ಸೇರಿದಂತೆ ಕಾನೂನು ದುರುಪಯೋಗಕ್ಕೆ ಬಲಿಯಾದ ಉನ್ನತ ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ; ತಮ್ಮ ಜೀವನದ ದೊಡ್ಡ ಭಾಗವನ್ನು ವಿಚಾರಣಾಧೀನ ಬಂಧನದಲ್ಲಿ ಕಳೆದ ಮುಗ್ಧ ಜನರು ಈ ಭಯೋತ್ಪಾದನೆ ವಿರುದ್ಧದ ಯುದ್ಧದ ಬಲಿಪಶುಗಳಾಗಿದ್ದಾರೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ವರ್ಷಗಳ ವಿಚಾರಣೆಯ ನಂತರ ಖುಲಾಸೆಗೊಂಡವರಲ್ಲಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದಾರೆ. ‘ಭಯೋತ್ಪಾದನೆ’ಯನ್ನು ಎದುರಿಸಲು ಅಮೆರಿಕ ಪ್ಯಾಟ್ರಿಯಾಟ್ ಕಾಯಿದೆಯನ್ನು ಪರಿಚಯಿಸಿದರೆ, ಭಾರತದಲ್ಲಿ ಅದು ಯು.ಎ.ಪಿ.ಎ (UAPA) ಆಯಿತು.

ಬುಶ್‌ ಈ ಯುದ್ಧವನ್ನು ಪ್ರಾರಂಭಿಸಿದಾಗ, ನಮ್ಮೊಂದಿಗೆ ಇರುವುದು ಅಥವಾ ವಿರುದ್ಧವಾಗಿರುವುದು ಎಂಬ ಬೈನರಿಯನ್ನು ಸೃಷ್ಟಿಸಿದ್ದು ಬರೇ ನಾಲಿಗೆಯ ಎಡವಿನ ವಿಷಯವಾಗಿರಲಿಲ್ಲ. ಬದಲಾಗಿ ಅದು ಕ್ರುಸೇಡ್ (ಧರ್ಮಯುದ್ಧ) ಆಗಿತ್ತು. ಧರ್ಮದ ಆಧಾರದ ಮೇಲಿನ ಈ ಪದವು ವ್ಯಾಪಕವಾಗಿ ಟೀಕಿಸಲ್ಪಟ್ಟಿತು. ಬುಶ್‌ ಅವರ ಭಾಷೆಯಲ್ಲಿ, ಇದು ನ್ಯಾಯವನ್ನು ಸ್ಥಾಪಿಸುವ ದೈವಿಕ ಮಿಷನ್‌ನ ಕ್ರುಸೇಡ್ ಆಗಿತ್ತು. ಐತಿಹಾಸಿಕ ಹಿನ್ನೆಲೆ ತಿಳಿದವರಿಗೆ ಈ ಕ್ರುಸೇಡ್ ಯಾರ ವಿರುದ್ಧವಾಗಿತ್ತು ಎಂಬುದು ತಿಳಿದಿದೆ. ಅರುಂಧತಿ ರಾಯ್ ಅವರು ಈ ಬಗ್ಗೆ ದಿ ಗಾರ್ಡಿಯನ್ ಪತ್ರಿಕೆಯಲ್ಲಿ ‘ದಿ ಆಲ್ಜೆಬ್ರಾ ಆಫ್ ಇನ್ಫೈನೈಟ್ ಜಸ್ಟಿಸ್’ ಎಂಬ ಶೀರ್ಷಿಕೆಯಲ್ಲಿ ಆಳ ಲೇಖನ ಬರೆದರು. (ಗಾರ್ಡಿಯನ್, ಸೆಪ್ಟೆಂಬರ್ 29, 2001). ಎಲ್ಲಾ ಕಡೆಯಿಂದ ಟೀಕೆಗಳು ಬಂದ ಪರಿಣಾಮವಾಗಿ, ಅದನ್ನು ನಂತರ ‘ಆಪರೇಷನ್ ಎಂಡ್ಯೂರಿಂಗ್ ಫ್ರೀಡಂ’ ಎಂದು ಅಮೇರಿಕಾ ಬದಲಾಯಿಸಿತು. ಮೂಲ ಪದವು ಕೇವಲ ನಾಲಿಗೆ ಎಡವು ಎಂದು ಅವರು ವಿವರಿಸಿದರು. ವಾಸ್ತವವಾಗಿ, ಅದು ನಾಲಿಗೆ ಎಡವಿದ ವಿಷಯವಾಗಿರಲಿಲ್ಲ. ಸುಪ್ತವಾಗಿದ್ದ ಇಸ್ಲಾಮ್‌ ವಿರೋಧವು ಪ್ರವಾಹದಂತೆ ಮೇಲ್ಮೈಗೆ ಬರುತ್ತಿತ್ತು. ಪರಿಣಾಮವಾಗಿ, ಇದರ ಪೂರ್ಣ ಪರಿಣಾಮ ಇಸ್ಲಾಮಿನ ಮೇಲೆ ಬಿತ್ತು. ಇಸ್ಲಾಮಿನ ಚಟುವಟಿಕೆಗಳಿಗೆ ಮತ್ತು ಫೆಲೆಸ್ತೀನ್ ಜನರ ವಿಮೋಚನಾ ಚಳವಳಿಗಳಿಗೆ ಹಣಕಾಸಿನ ನೆರವು ಪಡೆಯುವುದೂ ಕೂಡ ದೊಡ್ಡ ಅಡೆತಡೆಗಳನ್ನು ಎದುರಿಸಿತು. ಅರಬ್ ಮತ್ತು ಮುಸ್ಲಿಂ ದೇಶಗಳಲ್ಲಿನ ಹಣಕಾಸು ಸಂಸ್ಥೆಗಳು ಮಾತ್ರವಲ್ಲದೆ, ಸರ್ಕಾರಗಳು ಕೂಡ ಇಸ್ಲಾಮ್‌ ಎಂಬ ಹೆಸರು ಬಂದರೆ ಆರ್ಥಿಕ ಸಹಾಯ ನೀಡಲು ಹಿಂಜರಿಯುತ್ತಿದ್ದವು. ಇದು ಮುಸ್ಲಿಮರು ನಡೆಸುವ ಪರಿಹಾರ ಕಾರ್ಯಗಳು ಮತ್ತು ಕಲ್ಯಾಣ ಕ್ರಮಗಳ ಮೇಲೆ ಗಂಭೀರವಾಗಿ ಪರಿಣಾಮ ಬೀರಿತು.

ಅಮೆರಿಕದ ಇರಾನ್-ವಿರೋಧಿ ತಂತ್ರ

ಭಯೋತ್ಪಾದನೆ ವಿರುದ್ಧದ ಯುದ್ಧವು 2001ರ ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಯೊಂದಿಗೆ ಪ್ರಾರಂಭವಾಯಿತು ಎಂದು ತೋರಬಹುದು. ಆದರೆ, ಇದರ ಬೇರುಗಳು ವಾಸ್ತವವಾಗಿ 1979ರ ಫೆಬ್ರವರಿ 11ರಂದು ಖೊಮೇನಿ ನೇತೃತ್ವದ ಜನಪ್ರಿಯ ದಂಗೆಯ ಪರಿಣಾಮವಾಗಿ ಇರಾನ್‌ನಲ್ಲಿ ಚಕ್ರವರ್ತಿ ರೆಜಾ ಶಾ ಅವರ ಪಹ್ಲವಿ ಆಡಳಿತದ ಪತನದ ಹಿಂದಿವೆ. ಅಂದಿನಿಂದಲೇ ಅಮೆರಿಕದ ನವ-ವಸಾಹತುಶಾಹಿಯು, ಸುಮಾರು ಎಲ್ಲಾ ಅರಬ್ ಆಡಳಿತಗಳನ್ನು ಮಣಿಸಿದ್ದರೂ, ಮೊದಲ ಬಾರಿಗೆ ಮುಸ್ಲಿಂ ರಾಷ್ಟ್ರವೊಂದರ ಮುಂದೆ ಬಾಗಿತು. ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುವುದು, ರಾಯಭಾರ ಕಚೇರಿಯ ಕಟ್ಟಡವನ್ನು ಪಿ.ಎಲ್.ಒ (PLO) ಗೆ ಹಸ್ತಾಂತರಿಸುವುದು ಮತ್ತು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಬೇಹುಗಾರಿಕಾ ಕೇಂದ್ರವಾದ ಅಮೆರಿಕದ ರಾಯಭಾರ ಕಚೇರಿಯನ್ನು ಮುತ್ತಿಗೆ ಹಾಕಿದ್ದು, ಪರ್ಲ್ ಹಾರ್ಬರ್ ದಾಳಿಯಂತೆ ಅಮೆರಿಕ ಎಂದಿಗೂ ಮರೆಯಲಾಗದ ಮುಜುಗರವಾಗಿತ್ತು. ರಾಯಭಾರ ಕಚೇರಿಯ ಸಿಬ್ಬಂದಿಯನ್ನು ರಕ್ಷಿಸುವ ಮಿಷನ್‌ನಲ್ಲಿ ಹಾರಾಟ ನಡೆಸಿದ್ದ ಮಿಲಿಟರಿ ವಿಮಾನವು ತಬಾಸ್ ಮರುಭೂಮಿಯಲ್ಲಿ ಪತನಗೊಂಡಾಗ ಅದು ಎರಡರಷ್ಟು ಮುಜುಗರವಾಗಿತ್ತು. ಕ್ರಾಂತಿಕಾರಿ ಸರ್ಕಾರವನ್ನು ಉರುಳಿಸಲು ಮತ್ತು ಆಡಳಿತ ಬದಲಾವಣೆಯನ್ನು ತರಲು ಟ್ರಂಪ್ ನಡೆಸಿದ ದಾಳಿಯು ಈ ಪ್ರಯತ್ನಗಳ ಸರಪಳಿಯ ಕೊನೆಯ ಕೊಂಡಿಯಾಗಿತ್ತು. ಕ್ರಾಂತಿಯ ಆರಂಭಿಕ ಹಂತಗಳಲ್ಲಿ, ಮೊಹಮ್ಮದ್ ಅಲಿ ರಾಜೈ, ಬಹೇಶಿ ಮತ್ತು ಮುತಹರಿ ಮುಂತಾದ ಅನೇಕ ಸಚಿವರು ಮತ್ತು ಚಿಂತಕರು ಸ್ಫೋಟಗಳಲ್ಲಿ ಕೊಲ್ಲಲ್ಪಟ್ಟರು. ಇರಾನ್ ಸಂಸತ್ತಿನ ಅಧಿವೇಶನದಲ್ಲೂ, ಅಮೆರಿಕದ ಏಜೆಂಟರು ಬಾಂಬ್ ದಾಳಿ ನಡೆಸಿ ಅನೇಕ ಪ್ರಮುಖ ಕ್ರಾಂತಿಕಾರಿ ನಾಯಕರನ್ನು ಹತ್ಯೆ ಮಾಡಿದರು. ಪಾಶ್ಚಿಮಾತ್ಯ ಮಾಧ್ಯಮಗಳು, ವಿಶೇಷವಾಗಿ ಅಮೆರಿಕದ ಮಾಧ್ಯಮಗಳು ಆ ಸಮಯದಲ್ಲಿ ಇದನ್ನು ಭಯೋತ್ಪಾದನೆ ಎಂದು ಪರಿಗಣಿಸಲಿಲ್ಲ. ಆದಾಗ್ಯೂ, ಇರಾನ್ ಇನ್ನೂ ಗಟ್ಟಿಯಾಗಿ ನಿಂತಿತು. ಅಮೆರಿಕ ನಂತರ ಸದ್ದಾಂ ಹುಸೇನ್ ಮೂಲಕ ಅರಬ್ ರಾಷ್ಟ್ರೀಯತಾವಾದದ ಸತ್ತ ಕುದುರೆಯನ್ನು ಪುನರುಜ್ಜೀವನಗೊಳಿಸಿತು ಮತ್ತು ಇರಾನ್ ವಿರುದ್ಧ ವರ್ಷಗಳ ಕಾಲ ನಡೆದ ಯುದ್ಧಕ್ಕೆ ಅದನ್ನು ಬಿಟ್ಟಿತು. ಸಿರಿಯಾವನ್ನು ಹೊರತುಪಡಿಸಿ, ಇರಾಕ್‌ಗೆ ಶಸ್ತ್ರಾಸ್ತ್ರ ಮತ್ತು ಹಣ ನೀಡಿ ಸಹಾಯ ಮಾಡಲು ಬಹುತೇಕ ಎಲ್ಲಾ ಅರಬ್ ದೇಶಗಳು ಮುಂದಾದವು. ಇರಾನ್ ಬಗ್ಗೆ ಅರಬ್ ಆಡಳಿತಗಾರರ ಮನಸ್ಸಿನಲ್ಲಿ ಅಮೆರಿಕ ಸೃಷ್ಟಿಸಿದ ಚಿತ್ರಣವೆಂದರೆ, ಅದು ಯಾವುದೇ ಕ್ಷಣದಲ್ಲಿ ಅವರನ್ನು ನುಂಗಲು ಕಾಯುತ್ತಿರುವ ರಾಕ್ಷಸ. ಇಸ್ರೇಲ್ ಇರಾಕ್‌ನ ಪರಮಾಣು ಪರೀಕ್ಷಾ ಕೇಂದ್ರಗಳ ಮೇಲೆ ಬಾಂಬ್ ದಾಳಿ ಮಾಡುವ ಮೂಲಕ ಮುಸ್ಲಿಂ ಶಕ್ತಿಯನ್ನು ನಾಶಪಡಿಸಿದಂತೆಯೇ ಅಮೆರಿಕವೂ ಮುಸ್ಲಿಂ ಶಕ್ತಿಯನ್ನು ನಾಶಪಡಿಸಲು ಉದ್ದೇಶಿಸಿತ್ತು.

ಇರಾಕ್-ಅಫ್ಘಾನ್ ಆಕ್ರಮಣ

ಸರಪಳಿಯ ಇತರ ಎರಡು ಕೊಂಡಿಗಳೆಂದರೆ 2001ರಲ್ಲಿ ಅಮೆರಿಕದ ಅಫ್ಘಾನಿಸ್ತಾನದ ಆಕ್ರಮಣ ಮತ್ತು 2003ರಲ್ಲಿ ಇರಾಕ್‌ನ ಆಕ್ರಮಣ. ಇರಾನ್ ವಿರುದ್ಧ ತಾವು ಸಹಾಯ ಮಾಡಿದ್ದ ಸದ್ದಾಂ ಹುಸೇನ್ ತಮ್ಮ ವಿರುದ್ಧವೇ ತಿರುಗುತ್ತಾರೆ ಎಂದು ಗಲ್ಫ್ ದೇಶಗಳು ಎಂದಿಗೂ ಊಹಿಸಿರಲಿಲ್ಲ. 1990ರಲ್ಲಿ ಇರಾಕ್ ದೇಶವು ಕುವೈತ್ ಅನ್ನು ಆಕ್ರಮಿಸಿದ್ದು ಗಲ್ಫ್ ದೇಶಗಳಿಗೆ ಅನಿರೀಕ್ಷಿತವಾಗಿತ್ತು. ಬೆಳಗಾಗುವುದರೊಳಗೆ ಒಂದು ದೇಶವೇ ಇಲ್ಲದಂತಾಯಿತು. ಇರಾಕ್‌ನ ಅಂದಿನ ಅಮೆರಿಕದ ರಾಯಭಾರಿಯಾಗಿದ್ದ ಮಿಸ್ ಏಪ್ರಿಲ್ ಗ್ಲಾಸ್ಪಿ ಅವರೊಂದಿಗೆ ಸದ್ದಾಂ ನಿಗೂಢ ಭೇಟಿಯನ್ನು ನಡೆಸಿದ ಸ್ವಲ್ಪ ಸಮಯದ ನಂತರ ಈ ಆಕ್ರಮಣ ಸಂಭವಿಸಿತು. ಕುವೈತ್ ಅನ್ನು ವಿಮೋಚನೆಗೊಳಿಸಲು ಅಮೆರಿಕದ ಮಿಲಿಟರಿ ಸಹಾಯಕ್ಕಾಗಿ ಮಾಡಿದ ಮನವಿಯು ಅರಬ್ ದೇಶಗಳ ನಡುವೆ ಬಿರುಕು ಉಂಟುಮಾಡಿತು. ಜೋರ್ಡಾನ್ ಮತ್ತು ಸುಡಾನ್ ಈ ನಿಲುವಿನ ವಿರುದ್ಧವಾಗಿದ್ದವು. ಇದು ಅಂತಿಮವಾಗಿ ಅಮೆರಿಕದ ಮಿಲಿಟರಿಯಿಂದ ಇರಾಕ್‌ನ ಆಕ್ರಮಣಕ್ಕೆ ಮತ್ತು ಸಾರ್ವಭೌಮ ದೇಶದ ಆಡಳಿತಗಾರನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವುದಕ್ಕೆ ಕಾರಣವಾಯಿತು. ಇದು ಅರಬ್ ಪ್ರತಿಷ್ಠೆಗೆ ಮಾಡಿದ ಅಪಮಾನವಾಗಿದೆ. ಓಸ್ಲೋ ಒಪ್ಪಂದಗಳು ಮತ್ತು ಇಸ್ರೇಲ್-ಗಲ್ಫ್ ಹನಿಮೂನ್, ಅಬ್ರಹಾಂ ಒಪ್ಪಂದಗಳನ್ನು ಈ ಸರಪಳಿಯ ಪ್ರಮುಖ ಕೊಂಡಿಗಳಾಗಿ ನೋಡಬೇಕು. ಶಾಂತಿಗಾಗಿ ಭೂಮಿ ಎಂಬ ಘೋಷಣೆಯೊಂದಿಗೆ ಸಹಿ ಹಾಕಲಾದ ಓಸ್ಲೋ ಒಪ್ಪಂದಗಳು ಫೆಲೆಸ್ತೀನ್ ರಾಜ್ಯದ ಭರವಸೆಯನ್ನು ನೀಡಿದವು, ಅದು ಇಂದಿಗೂ ದೂರದ ಕನಸಾಗಿಯೇ ಉಳಿದಿದೆ. ಅರಾಫತ್ ಅವರು ಬೆಗಿನ್ ಅವರೊಂದಿಗೆ ಹಂಚಿಕೊಂಡ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹೊರತುಪಡಿಸಿ, ಫೆಲೆಸ್ತೀನಿಯರು ಇನ್ನೂ ಶಾಂತಿಯನ್ನು ಪಡೆದಿಲ್ಲ.

2010ರ ಕೊನೆಯಲ್ಲಿ ಟುನೀಶಿಯಾ, ಈಜಿಪ್ಟ್, ಯೆಮೆನ್, ಸಿರಿಯಾ ಮತ್ತು ಲಿಬ್ಯಾದಲ್ಲಿ ಬೀಸಿದ ಅರಬ್ ವಸಂತವು ಮುಸ್ಲಿಂ ಜಗತ್ತಿನಲ್ಲಿ ದಶಕಗಳಿಂದ ಇದ್ದ ಸರ್ವಾಧಿಕಾರ ಮತ್ತು ರಾಜಪ್ರಭುತ್ವಗಳ ಅಂತ್ಯದ ಮುನ್ಸೂಚನೆಯಾಗಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ, ಈ ದೇಶಗಳಲ್ಲಿ ಮುಕ್ತ ಚುನಾವಣೆಗಳು ನಡೆದಾಗ, ದಮನಿತ ಇಸ್ಲಾಮಿಕ್ ಆಂದೋಲನಗಳು ವಿಜಯಶಾಲಿಯಾದವು. ಇದು ಅಮೆರಿಕದ ಭದ್ರತೆಯ ನೆರಳಿನಲ್ಲಿದ್ದ ಕೆಲವು ಅರಬ್ ದೇಶಗಳನ್ನು ಎಚ್ಚರಗೊಳಿಸಿದ ವಿದ್ಯಮಾನವಾಗಿತ್ತು. ಈ ಹೊಸ ಜಾಗೃತ ಶಕ್ತಿಯನ್ನು ತಮ್ಮ ಅಸ್ತಿತ್ವಕ್ಕೆ ಬೆದರಿಕೆ ಎಂದು ಅವರು ಕಂಡರು. ಆ ವಸಂತವನ್ನು ಯಾವುದೇ ಬೆಲೆ ತೆತ್ತಾದರೂ ನಂದಿಸುವುದು ತಮ್ಮ ಭವಿಷ್ಯಕ್ಕೆ ಅಗತ್ಯ ಎಂದು ಅವರು ಅರ್ಥಮಾಡಿಕೊಂಡರು. ನಂತರ ಆ ದೇಶಗಳಲ್ಲಿನ ಐದನೇ ದಳ ಮತ್ತು ಖಾಕಿ ಶಿಬಿರಗಳಿಗೆ ಪೆಟ್ರೋಡಾಲರ್ ಹರಿವು ಪ್ರಾರಂಭವಾಯಿತು. ಪೆಟ್ರೋಡಾಲರ್ ಶಕ್ತಿಯನ್ನು ಬಳಸಿ ಪ್ರತಿಕ್ರಿಯಾತ್ಮಕ ಶಕ್ತಿಗಳನ್ನು ಮತ್ತು ಇಸ್ಲಾಮೋಫೋಬ್ ಆಗಿದ್ದ ಜಾತ್ಯತೀತ ಚಿಂತಕರನ್ನು ಪ್ರತಿ-ಕ್ರಾಂತಿಯತ್ತ ತಳ್ಳಲು ಅವರು ಸುಲಭವಾಗಿ ಶಕ್ತರಾದರು.

ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡ ಇಸ್ಲಾಮೋಫೋಬ್ ಆದ ಟ್ರಂಪ್ ಅಧಿಕಾರಕ್ಕೆ ಬಂದಿದ್ದು, ಇಸ್ಲಾಮಿಕ್ ಆಂದೋಲನಗಳು ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಸಿಲುಕಿಕೊಳ್ಳುವುದನ್ನು ಸುಲಭಗೊಳಿಸಿತು. ಹೀಗಾಗಿ ಭಯೋತ್ಪಾದನೆ ವಿರುದ್ಧದ ಯುದ್ಧವು ಇಸ್ಲಾಮಿನ ವಿರುದ್ಧದ ಯುದ್ಧವಾಗಿದೆ. ಕೆಲವು ಅರಬ್ ದೇಶಗಳಲ್ಲಿ, ಒಂದು ಕಾಲದಲ್ಲಿ ಇಸ್ರೇಲ್ ಹೆಸರನ್ನೂ ಹೇಳುತ್ತಿರಲಿಲ್ಲ, ಕೇವಲ ‘ಅದುವ್’ (ಶತ್ರು) ಎಂದು ಹೇಳುತ್ತಿದ್ದರು. ಆದರೆ, ಇಂದು ಫೆಲೆಸ್ತೀನ್ ಹೆಸರನ್ನು ಹೇಳುವುದೂ ಅಪರಾಧವಾಗಿದೆ. ಇದರೊಂದಿಗೆ, ಇತರ ಮುಸ್ಲಿಂ ದೇಶಗಳಲ್ಲಿ ಒಡಕಿನ ರಾಜಕೀಯ ಆಡುವ ಮೂಲಕ ಆಂತರಿಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವ ಕಾರ್ಯಕ್ರಮ ಚಾಲ್ತಿಯಲ್ಲಿದೆ. ಲಿಬಿಯಾ ಕ್ರಾಂತಿಯನ್ನು ಅಪಹರಿಸಿದ ಜನರಲ್ ಖಲೀಫಾ ಹಫ್ತಾರ್ ಅವರ ಹಿಂದೆ ಮತ್ತು ಸುಡಾನ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸಿದ ರಾಪಿಡ್ ಫೋರ್ಸ್‌ನ ಹಿಂದೆ ಅವರ ನಿಗೂಢ ಕೈಗಳನ್ನು ನೋಡಬಹುದು.

ಅರಬ್ ಪ್ರಪಂಚವು ಆಂತರಿಕ ವಸಾಹತುಶಾಹಿಯ ಅಸಾಮಾನ್ಯ ವಾತಾವರಣದಲ್ಲಿ ಬದುಕುತ್ತಿದೆ ಎಂದು ಅರಬ್ ರಾಜಕೀಯ ವಿಶ್ಲೇಷಕ ಹಸನ್ ಅಬು ಹನಿಯಾ ಹೇಳುವುದು 100% ಸತ್ಯ. ವಸಾಹತುಶಾಹಿಯ ನಂತರದ ಜಗತ್ತಿನಲ್ಲಿ ಅರಬ್ ಜಗತ್ತನ್ನು ಆಳುವವರಿಗೆ ತಮ್ಮದೇ ಜನರ ಬೆಂಬಲವಿಲ್ಲ ಎಂದು ಅವರು ಸೂಚಿಸುತ್ತಾರೆ. ಅರಬ್‌ ನಾಯಕರು ತಮ್ಮ ಅಸ್ತಿತ್ವದ ‘ಮಾನ್ಯತೆಯನ್ನು’ ವಿದೇಶಿ ಶಕ್ತಿಗಳಿಂದ ಖರೀದಿಸುವ ಮೂಲಕ ನವೀಕರಿಸುತ್ತಿದ್ದಾರೆ. ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದಕ್ಕೆ ಈ ಕೂಟ ನಿಟ್ಟುಸಿರು ಬಿಡುತ್ತಿವೆ. ಭಯೋತ್ಪಾದನೆಯ ಕೊಡಲಿಯ ಸಹಾಯದಿಂದ ಇಸ್ಲಾಮಿನ ಸಾಮಾಜಿಕ ಇರುವಿಕೆಯನ್ನು ನಿರ್ಮೂಲನೆ ಮಾಡುವ ಹತಾಶ ಪ್ರಯತ್ನದಲ್ಲಿದ್ದಾರೆ. ಈ ಕತ್ತಲೆಯಲ್ಲಿ, ಅರಬ್ ಜಗತ್ತಿನ ಹೊರಗೆ ಕನಿಷ್ಠ ಸ್ವಲ್ಪ ಬೆಳಕು ಬೀರುತ್ತಿತ್ತು. ಅಮೆರಿಕದ ಪ್ರಾಬಲ್ಯವನ್ನು ಸವಾಲು ಮಾಡಲು ಟರ್ಕಿ, ಮಲೇಷ್ಯಾ ಮತ್ತು ಪಾಕಿಸ್ತಾನದ ಹೊಸ ಅಕ್ಷವು ಹೊರಹೊಮ್ಮುತ್ತಿತ್ತು. ಅದರಲ್ಲಿ, ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರನ್ನು ಸೋಲಿಸಿ ಜೈಲಿಗಟ್ಟಿದ ಮಿಲಿಟರಿ ಪಡೆ ಟ್ರಂಪ್‌ಗೆ ನೆಚ್ಚಿನದಾಗಿದೆ. ಟ್ರಂಪ್ ಅವರ ಇರಾನ್ ಮಿಷನ್ ಯಶಸ್ವಿಯಾಗಿದ್ದರೆ, ಟರ್ಕಿ ಮುಂದಿನ ಬಲಿಯಾಗುತ್ತಿತ್ತು. ಏಕೈಕ ಸಮಾಧಾನವೆಂದರೆ, ದೇವನ ಕೃಪೆಯಿಂದ ಅದು ವಿಫಲವಾಯಿತು.