✍️ ಟಿ.ಆರ್. ಭಟ್
ಸಾಹಿತಿ ಮತ್ತು ಚಿಂತಕರು, ಮಂಗಳೂರು
ವಿವಿಧತೆಯಲ್ಲಿನ ಏಕತೆ:
ಸಾರ್ವಜನಾಂಗದ ಶಾಂತಿಯ ತೋಟವೆಂದು ರಾಷ್ಟ್ರಕವಿ ಕುವೆಂಪು ಚಿತ್ರಿಸಿದ ಭಾರತದಲ್ಲಿಂದು ದೇಶದ ಪ್ರಮುಖ ಅಲ್ಪಸಂಖ್ಯಾಕರಾದ ಮುಸ್ಲಿಂ ಬಾಂಧವರ ಬಗ್ಗೆ ಬೆಳೆಯುತ್ತಿರುವ ಅಸಹಿಷ್ಣುತೆ ಆತಂಕಕಾರಿ. ರಾಜಕೀಯ ನಾಯಕರು ಬಳಸುವ ಭಾಷೆಯಲ್ಲಿ, ಅವರ ಅನುಯಾಯಿಗಳ ವರ್ತನೆಗಳಲ್ಲಿ, ಕೆಲವು ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಮತ್ತು ಬಹುಮತೀಯ ಸಮಾಜದ ಸಾಮಾಜಿಕ/ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಸ್ಲಿಮರ ದೇಶಪ್ರೇಮದ ಬಗ್ಗೆ ಸಂಶಯವನ್ನು ಬಿತ್ತುವ ಸಂಘಟಿತ ಪ್ರಯತ್ನವನ್ನು ಗಮನಿಸಬಹುದು. ಅವರು ಅನ್ಯರೆಂದು ಬಿಂಬಿಸುವ ಕಾರ್ಯವೂ ನಡೆಯುತ್ತಿದೆ. ಸರಕಾರದ ನೀತಿಗಳನ್ನು ತಾತ್ತ್ವಿಕ ನೆಲೆಯಲ್ಲಿ ಪ್ರಶ್ನಿಸುವ ಮುಸಲ್ಮಾನರನ್ನು `ನೀವು ಪಾಕಿಸ್ತಾನಕ್ಕೆ ಹೋಗಿʼ ಎಂದು ಹೀನೈಸುವ ಘಟನೆಗಳು ಸಂಭವಿಸಿವೆ.
ಈ ಹಿನ್ನೆಲೆಯಲ್ಲಿ ಆಧುನಿಕ ಭಾರತವನ್ನು ಕಟ್ಟುವಲ್ಲಿ ಮುಸಲ್ಮಾನರ ಕೊಡುಗೆಯನ್ನು ಮತ್ತೊಮ್ಮೆ ಸ್ಮರಿಸುವ ಅಗತ್ಯ ನಮ್ಮ ಮುಂದಿದೆ. ಹೋದ ಶತಮಾನದ ಪೂರ್ವಾರ್ಧದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ, ಉದಯೋನ್ಮುಖವಾದ ಕೈಗಾರಿಕಾ ರಂಗದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಕಲೆಯಲ್ಲಿ, ಸಾಹಿತ್ಯದಲ್ಲಿ ಮುಸಲ್ಮಾನರ ಕೊಡುಗೆ ಮಹತ್ವಪೂರ್ಣವಾಗಿತ್ತು. ಧರ್ಮದ ಆಧಾರವಾಗಿ 1947ರಲ್ಲಿ ದೇಶದ ವಿಭಜನೆಯಾದಾಗ ಸಂಭವಿಸಿದ ಅಪರಿಮಿತ ಕ್ಷೋಭೆಯ ಹೊರತಾಗಿಯೂ ಕೋಟ್ಯಂತರ ಮುಸ್ಲಿಮರು ಭಾರತವೇ ತಮ್ಮ ದೇಶವೆಂದು ನಂಬಿ ಇಲ್ಲಿಯೇ ಉಳಿದರು. ಮಾತ್ರವಲ್ಲ ಈ ದೇಶದ ಸರ್ವಾಂಗೀಣ ಪ್ರಗತಿಯಲ್ಲಿ ಪಾತ್ರವಹಿಸಿದರು. ಕಳೆದ 79 ವರ್ಷಗಳಲ್ಲಿ ರಾಜಕೀಯರಂಗ, ನಾಗರಿಕ ಸೇವೆ, ದೇಶದ ರಕ್ಷಣೆ, ಉದ್ಯಮ ಕ್ಷೇತ್ರ, ಹಣಕಾಸು, ಕಲೆ, ಸಾಹಿತ್ಯ-ಹೀಗೆ ಅನೇಕ ಕ್ಷೇತ್ರಗಳಲ್ಲಿ ಭಾರತಕ್ಕಾಗಿ ಜೀವನ ಪರ್ಯಂತ ನಿಸ್ಪೃಹತೆಯಿಂದ ದುಡಿದ ಮಹನೀಯರು ನಮ್ಮ ಮುಂದೆ ಆಗಿ ಹೋಗಿದ್ದಾರೆ; ಎರಡನೇ ಮತ್ತು ಮೂರನೇ ಪೀಳಿಗೆಯ ಮುಸಲ್ಮಾನರೂ ಅದೇ ದಾರಿಯಲ್ಲಿ ದೇಶದ ಪ್ರಗತಿಯಲ್ಲಿ ಭಾಗಿಯಾಗಿದ್ದಾರೆ.
ಭಾರತದ ಅನನ್ಯ ಸಂಸ್ಕೃತಿ:
ಪ್ರತಿಯೊಬ್ಬ ನಾಗರಿಕನಿಗೂ ತನ್ನ ಧರ್ಮವು ಶ್ರೇಷ್ಠವೆಂದು ನಂಬಿಕೊಳ್ಳುವ ಸ್ವಾತಂತ್ರ್ಯವಿದೆ; ಹಾಗೆಂದು ಇನ್ನೊಂದನ್ನು ಕೀಳು ಎನ್ನುವ ಹಕ್ಕು ಇಲ್ಲ. ನಾಗರಿಕತೆಯು ಬೆಳೆಯುತ್ತಿದ್ದಂತೆ ಜನರ ಅರಿವಿನ ವಿಸ್ತಾರ ಹೆಚ್ಚುತ್ತಾ ಹೋಗಿ ತಾವು ಅನುಸರಿಸುತ್ತಿದ್ದ ಧರ್ಮದಲ್ಲಿ ಕಂಡ ಕೊರತೆಗಳಿಗೆ ಪರಿಹಾರವನ್ನು ಶೋಧಿಸುವ ಪ್ರಯತ್ನವಾಗಿ ಹೊಸ ಧರ್ಮಗಳು ಹುಟ್ಟಿಕೊಂಡವು. ಪ್ರತಿಯೊಂದು ಧರ್ಮದ ಮೂಲ ಉದ್ದೇಶ ಮನುಷ್ಯನ ಬೌದ್ಧಿಕ ಉತ್ಕರ್ಷಕ್ಕೆ ಸೂಕ್ತವಾದ ಮಾರ್ಗವನ್ನು ತೋರಿಸಿಕೊಡುವುದು. ಆ ದಾರಿ ಎಲ್ಲರಿಗೂ ಸಮ್ಮತವಾಗಬೇಕಿಲ್ಲ. ಯಾವುದೇ ಧಾರ್ಮಿಕ ಆಚಾರಗಳಲ್ಲಿ ನಂಬಿಕೆಯಿಲ್ಲದೆ ಜೀವಿಸಿ ಸಮಾಜದ ಏಳಿಗೆಗೆ ತಮ್ಮ ಜೀವನವನ್ನು ಮುಡಿಪಾಗಿಸಿದವರ ಉದಾಹರಣೆಗಳು ಬೇಕಾದಷ್ಟಿವೆ. ಈ ದೃಷ್ಟಿಯಿಂದ ಭಾರತದಲ್ಲಿ ಹುಟ್ಟಿ ಇಲ್ಲಿಯೇ ಬದುಕನ್ನು ಕಂಡುಕೊಂಡ ವಿಭಿನ್ನ ಧರ್ಮದವರೂ ಯಾವುದೇ ಧರ್ಮದಲ್ಲಿ ನಂಬಿಕೆ ಇಲ್ಲದವರೂ ಭಾರತೀಯರೇ. ಅನಾದಿಕಾಲದಿಂದ ದೇಶವು ಈ ಸಂಸ್ಕೃತಿಯನ್ನು ಪೋಷಿಸುತ್ತಾ ಬಂದಿತ್ತು.
ಗಡಿನಾಡಿನ ಧೀಮಂತ ಕವಿ ಕಯ್ಯಾರ ಕಿಞ್ಞಣ್ಣ ರೈಗಳ ʻಶ್ರೀಮುಖʼ ಕವನದ ಈ ಕೆಳಗಿನ ಸಾಲುಗಳು ಭಾರತದ ಅನನ್ಯ ಸಂಸ್ಕೃತಿಯನ್ನು ಮನೋಜ್ಞವಾಗಿ ಬಿಂಬಿಸುತ್ತವೆ:
“ಆರ್ಯರೋ ಮೊಗಲರೋ ಕ್ರೈಸ್ತರೋ ತಡೆಯೇನು
ಎಲ್ಲರೂ ಬರಲೆಂದು ಸ್ವಾಗತಿಸಿದೆ
ಜಾತಿಮತ ಬೇರೆನದೆ ಬಣ್ಣನುಡಿ ಬದಲೆನದೆ
ಭೇದವೆಣಿಸದೆ ತಾಯಿ ನೀ ಸಲಹಿದೆ”
ಏನು ಮಾಡಬೇಕು?
ಪ್ರಸಕ್ತ ಸನ್ನಿವೇಶದಲ್ಲಿ ಈಗ ಬೀಸುತ್ತಿರುವ ವಿಷಗಾಳಿಯನ್ನು ತಡೆಯಲು ಏನು ಮಾಡಬೇಕು? ನನಗೆ ತೋರಿದಂತೆ ಮುಸಲ್ಮಾನ ಹಾಗೂ ಹಿಂದೂ ಸಮಾಜಗಳಲ್ಲಿರುವ ಪ್ರಜ್ಞಾವಂತರಾದ ನಾಗರಿಕರು ನಾಲ್ಕು ನೆಲೆಗಳಲ್ಲಿ ಕಾರ್ಯಪ್ರವೃತ್ತರಾಗಬೇಕು:
1. ವ್ಯಕ್ತಿ ಮತ್ತು ಕುಟುಂಬಗಳ ನೆಲೆ:
ವ್ಯಕ್ತಿ ಮತ್ತು ಕೌಟುಂಬಿಕ ನೆಲೆಯಲ್ಲಿ ಧರ್ಮದ ಮಿತಿ ದಾಟಿ ಬೆಳೆಸುವ ಸೌಹಾರ್ದ ಹಾಗೂ ಸಂಬಂಧಗಳು ಸಮಾಜದ ಬಾಂಧವ್ಯಕ್ಕೆ ಬುನಾದಿಯಾಗುತ್ತವೆ. ನಾನು ಸ್ವತಃ ಗಮನಿಸಿದ ಒಂದೆರಡು ಘಟನೆಗಳನ್ನು ಇದಕ್ಕೆ ಪೂರಕವಾಗಿ ಉದ್ಧರಿಸಬಯಸುತ್ತೇನೆ. ಅನೇಕ ವರ್ಷ ಜೊತೆಯಾಗಿ ಕೆಲಸ ಮಾಡಿದ್ದ ಈಗ ದೂರದ ಊರಿನಲ್ಲಿರುವ ನನ್ನ ಮುಸ್ಲಿಂ ಸಹೋದ್ಯೋಗಿ ಮತ್ತವರ ಪತ್ನಿ ಮಂಗಳೂರಿಗೆ ಬಂದಾಗಲೆಲ್ಲ ನಮ್ಮ ಮನೆಗೆ ಬಂದು ಸುಖದುಃಖ ಮಾತನಾಡಿಸಿಯೇ ಹೋಗುತ್ತಾರೆ. ಅವರು ಮಂಗಳೂರಿನಲ್ಲಿ ದುಡಿಯುತ್ತಿದ್ದಾಗ ನಾವೂ ಮಕ್ಕಳ ಜೊತೆ ಅವರ ಮನೆಗೆ ಭೇಟಿ ನೀಡುವ ಪರಿಪಾಠ ಬೆಳೆಸಿಕೊಂಡಿದ್ದೆವು.
ನನ್ನ ಮಗ ಶಾಲೆಗೆ ಹೋಗುತ್ತಿದ್ದಾಗ ಒಂದು ದಿನ ಅವನ ಮುಸ್ಲಿಂ ಸಹಪಾಠಿ ಹುಡುಗಿಯೊಬ್ಬಳ ಅಮ್ಮನಿಂದ (ಆಕೆ ಪೋಷಕ-ಅಧ್ಯಾಪಕರ ಸಭೆಯಲ್ಲಿ ಭೇಟಿಯಾಗಿದ್ದಳು) ನನ್ನ ಹೆಂಡತಿಗೆ ಫೋನು; `ಮೇಡಂ, ನಾಳೆ ಸಂಜೆ ನಮ್ಮ ಮನೆಯಲ್ಲಿ ನಮ್ಮ ಮಗಳ ಹುಟ್ಟುಹಬ್ಬದ ಪ್ರಯುಕ್ತ ಸಂತೋಷಕೂಟ ಏರ್ಪಡಿಸಿದ್ದೇವೆ. ನಿಮ್ಮ ಮಗನನ್ನು ಆಮಂತ್ರಿಸಬೇಕೆಂದು ಅವಳು ತಿಳಿಸಿದ್ದಾಳೆ. ನಿಮಗೆ ಆಕ್ಷೇಪವಿಲ್ಲದಿದ್ದರೆ ಅವನನ್ನು ಕಳುಹಿಸಬಹುದೆ?ʼ ಕಾರ್ಯಕ್ರಮ ಮುಗಿದ ಬಳಿಕ ಮಗನನ್ನು ಅವರ ಮನೆಯ ಹಿರಿಯರು ನಮ್ಮ ಮನೆಗೆ ಕರಕೊಂಡು ಬಂದು ಬಿಟ್ಟಿದ್ದರು.
ನನ್ನ ಹಿರಿಯ ಮುಸಲ್ಮಾನ ಸಹೋದ್ಯೋಗಿಯೊಬ್ಬರಿಗೆ ನನ್ನ ಮೇಲೆ ಬಹಳಷ್ಟು ಆದರವಿತ್ತು. ಅವರು ನಿವೃತ್ತರಾಗಿ ಉಡುಪಿಯಲ್ಲಿ ವಾಸಿಸುತ್ತಿದ್ದಾಗ ಫೋನಾಯಿಸಿ ಮಾತನಾಡುವುದಲ್ಲದೆ, ತಮ್ಮ ಮನೆಗೆ ಬರಬೇಕೆಂದು ಅನೇಕ ಬಾರಿ ಆಮಂತ್ರಿಸಿದ್ದರು. ಅವರ ಮನೆಗೆ ಹೋದಾಗ ಅವರ ಮತ್ತು ಅವರ ಪತ್ನಿಯವರು ಮಾಡಿದ ಉಪಚಾರ ಮತ್ತು ಆತ್ಮೀಯತೆಯನ್ನು ಮರೆಯಲು ಸಾಧ್ಯವಿಲ್ಲ.
ಹತ್ತಿರದ ಬಂಧುವೊಬ್ಬರ ಮಗಳ ಮದುವೆಯ ಹಿಂದಿನ ದಿನ ಹೆಣ್ಣು ಮಕ್ಕಳಿಗೆ ʻಮೆಹಂದಿʼ ಹಾಕಲು ಅವರ ಮನೆಗೆ ಬಂದಿದ್ದ ಹಿಜಾಬ್ ಧರಿಸಿದ್ದ ಯುವತಿಯೊಬ್ಬಳ ಕರಕೌಶಲವನ್ನು ಮನೆಯವರೆಲ್ಲರೂ ಶ್ಲಾಘಿಸಿದ್ದರು. ಕೆಲಸ ಮುಗಿದು ಮನೆಗೆ ಮರಳುವ ಸಂದರ್ಭದಲ್ಲಿ ಮನೆಯ ಹಿರಿಯರು ಆಕೆ ಒಬ್ಬಳನ್ನೇ ಮನೆಗೆ ಕಳುಹಿಸಬಾರದೆಂದು ಮನೆಯ ಇನ್ನೊಬ್ಬ ಹೆಣ್ಣುಮಗಳ ಜೊತೆಗೆ ಕಳುಹಿಸಿಕೊಟ್ಟದ್ದು ಕಂಡು ಮೆಚ್ಚಿದ್ದೆ.
ಈ ಘಟನೆಗಳನ್ನು ಉಲ್ಲೇಖಿಸುವ ಉದ್ದೇಶ ಇಷ್ಟೆ: ವ್ಯಕ್ತಿ ಮತ್ತು ಕೌಟುಂಬಿಕ ನೆಲೆಯಲ್ಲಿ ನಿರಂತರ ಸಂವಹನ ಮತ್ತು ಸಂಪರ್ಕವಿದ್ದಾಗ ಸಂಶಯಗಳಿಗೆ ಅವಕಾಶ ಇರುವುದಿಲ್ಲ.
2. ವೃತ್ತಿ ಮತ್ತು ಉದ್ಯೋಗದ ನೆಲೆ:
ವೃತ್ತಿ ಮತ್ತು ಉದ್ಯೋಗದ ನೆಲೆಯಲ್ಲಿಯೂ ನಿಸ್ಪೃಹತೆ, ಶಿಸ್ತು ಹಾಗೂ ದಕ್ಷತೆಯಿಂದ ಕೆಲಸಮಾಡುವ ಯಾವುದೇ ವ್ಯಕ್ತಿಯನ್ನು ಅವರವರ ಬಳಗದಲ್ಲಿ ಸಹೋದ್ಯೋಗಿಗಳು ಸ್ವಾಭಾವಿಕವಾಗಿ ಗೌರವಿಸುತ್ತಾರೆ. ಇದನ್ನು ಬ್ಯಾಂಕಿನಲ್ಲಿ ಸೇವೆ ಸಲ್ಲಿಸುವಾಗ ಮತ್ತು ಕಾರ್ಮಿಕ ಸಂಘದಲ್ಲಿ ಕಾರ್ಯ ನಿರ್ವಹಿಸುವಾಗ ಗಮನಿಸಿದ್ದೇನೆ.
3. ಸಮಾಜದ ನೆಲೆಯಲ್ಲಿ:
ಸಮಾಜದ ನೆಲೆಯಲ್ಲಿಯೂ ಇಂದು ಸಂಸ್ಥೆಗಳ ಮುಖ್ಯಸ್ಥರು, ಸಾಮಾಜಿಕ ಕಾರ್ಯಕರ್ತರು, ಸಮಾಜದ ಗಣ್ಯವ್ಯಕ್ತಿಗಳು ಸಮಾನತೆಯ ಭಾವನೆಗೆ ಒತ್ತು ಕೊಡುವ ಅಗತ್ಯವಿದೆ. ಹಿಂದಿನವರ ಕೊಡುಗೆಯನ್ನು ಸ್ಮರಿಸಿ ಅವರ ದಾರಿ ನಮಗೆ ಹೇಗೆ ದಾರಿದೀಪವಾಗಬಹುದು ಎಂಬುದರ ಬಗ್ಗೆ ಗಣ್ಯರ ಮಾತಿಗೆ ಹೆಚ್ಚು ಬೆಲೆಯಿರುತ್ತದೆ.
2006ರಲ್ಲಿ ಅಂದಿನ ಕಾರ್ಪೊರೇಶನ್ ಬ್ಯಾಂಕಿನ ಶತಮಾನೋತ್ಸವದ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿ ಸಂಘಟನೆಯು ಉಡುಪಿಯಲ್ಲಿ ಆಯೋಜಿಸಿದ ಕಾರ್ಯಕ್ರಮ ಒಂದರಲ್ಲಿ ಪೇಜಾವರ ಮಠದ ಸ್ವಾಮೀಜಿ, ಶ್ರೀ ವಿಶ್ವೇಶ ತೀರ್ಥರು ಭಾಗವಹಿಸಿದ್ದರು. ಬ್ಯಾಂಕಿನ ಸ್ಥಾಪಕರಾದ ಹಾಜಿ ಅಬ್ದುಲ್ಲಾ ಸಾಹೇಬರು ಬ್ಯಾಂಕನ್ನು ಸ್ಥಾಪಿಸಿದ್ದೂ ಅಲ್ಲದೆ ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದನ್ನು ಸ್ವಾಮೀಜಿ ಅವರು ಸ್ಮರಿಸುತ್ತಾ ಅಬ್ದುಲ್ಲಾ ಸಾಹೇಬರು ಪ್ರಾತಃಸ್ಮರಣೀಯರೆಂದು ನುಡಿನಮನ ಸಲ್ಲಿಸಿದ್ದರು. (ಆ ಕಾರ್ಯಕ್ರಮದ ಆತಿಥೇಯ ಸಂಘದ ಅಧ್ಯಕ್ಷನ ನೆಲೆಯಲ್ಲಿ ನಾನು ವೇದಿಕೆಯಲ್ಲಿದ್ದೆ). ಸಮಾಜದ ಗಣ್ಯರು ಆಗಿಹೋದ ಮಹನೀಯರನ್ನು ಸಾರ್ವಜನಿಕವಾಗಿ ಸ್ಮರಿಸಿದಾಗ ಅದು ಬಹಳ ಪರಿಣಾಮಕಾರಿಯಾಗಿರುತ್ತದೆ.
ಪ್ರಾಕೃತಿಕ ವಿಕೋಪ ಮತ್ತು ಅವಘಡಗಳು ಸಂಭವಿಸಿ ಜನರು ನೋವಿಗೀಡಾದಾಗ ಮತಭೇದವಿಲ್ಲದೆ ಮಾನವೀಯತೆಯಿಂದ ಸ್ಪಂದಿಸುವ ಅನೇಕ ನೈಜ ಘಟನೆಗಳು ಆಗಾಗ ಆಗುತ್ತಿರುತ್ತವೆ. ನೇತ್ರಾವತಿಯಲ್ಲಿ ಮುಳುಗುವವರನ್ನು ಜೀವಭಯ ತೊರೆದು ನೀರಿಗೆ ಹಾರಿ ಬದುಕಿಸಿದ ಧೀರ ಮುಸಲ್ಮಾನ ಯುವಕರ ವೃತ್ತಾಂತಗಳಿವೆ. ರಸ್ತೆ ಅಪಘಾತಗಳಲ್ಲಿ ಸಿಲುಕಿದವರ ಬಗ್ಗೆ ಮಾನವೀಯತೆಯನ್ನು ಮೆರೆಸಿ ಸಹಾಯ ಹಸ್ತ ನೀಡಿದವರು ಸಮಾಜದಲ್ಲಿ ಇದ್ದಾರೆ. ಇವುಗಳಲ್ಲಿ ಧರ್ಮವು ಅಡ್ಡಿ ಬಂದೇ ಇಲ್ಲ. ಇಂತಹ ಘಟನೆಗಳನ್ನು ಹೆಚ್ಚು ಹೆಚ್ಚು ಬೆಳಕಿಗೆ ತರುವ ಅಗತ್ಯವು ಇಂದು ಸಮಾಜದ ಮುಂದಿದೆ. ಇದು ಯಾಕೆ ಅಗತ್ಯ ಅಂದರೆ ಸಮಾಜದಲ್ಲಿ ಬೇರೆ ಬೇರೆ ಮನೋಭಾವದ ನಾಗರಿಕರಿರುತ್ತಾರೆ. ಅವರಲ್ಲಿ ಸಂಗದೋಷದಿಂದ, ಪರಿಸರದ ಪ್ರಭಾವದಿಂದ ಸಹ ಧರ್ಮದವರ ಬಗ್ಗೆ ಒಂದು ಅಭಿಪ್ರಾಯ ಬೇರುಬಿಟ್ಟಿರುತ್ತದೆ; ಅದನ್ನು ನಿವಾರಿಸುವ ಒಂದು ದಾರಿ ವಾಸ್ತವದ ಘಟನೆಗಳನ್ನು ಅವರ ಮುಂದಿಡುವುದು.
4. ರಾಜಕೀಯ ನೆಲೆ:
ಕೊನೆಯದಾಗಿ, ರಾಜಕೀಯ ನೆಲೆಯಲ್ಲಿಯೂ ನಿರಂತರ ಜನರನ್ನು ಬೆಸೆಯುವ ಪ್ರಯತ್ನ ಆಗಬೇಕಿದೆ. ವಿವಿಧ ಪಕ್ಷಗಳ ನಾಯಕರು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತಮ್ಮ ಮಾತು ಮತ್ತು ವರ್ತನೆಗಳ ಮೂಲಕ ಜನರಲ್ಲಿ ಹೆಚ್ಚಿನ ಅರಿವನ್ನು ಉಂಟುಮಾಡಬೇಕಿದೆ. ಅದರಲ್ಲಿಯೂ ಪ್ರಮುಖವಾಗಿ ತಮ್ಮ ಬೆಂಬಲಿಗರ ದೃಷ್ಟಿಕೋನವನ್ನು ತಿದ್ದುವ ನಿಟ್ಟಿನಲ್ಲಿ ಪ್ರಯತ್ನ ಆಗಬೇಕಿದೆ. ಕಾನೂನನ್ನು ಕಡೆಗಣಿಸಿ ಅಲ್ಪಸಂಖ್ಯಾಕರ ವಿರುದ್ಧ ಹಿಂಸಾಚಾರದಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜವಾಬ್ದಾರಿ ಅಧಿಕಾರದಲ್ಲಿರುವ ರಾಜಕೀಯ ಧುರೀಣರದ್ದು.












