✍️ ಸಮೀನಾ ಅಫ್ಶಾನ್
ಪ್ರಧಾನ ಸಂಪಾದಕರು, ಔರಾ ಇಂಗ್ಲಿಷ್ ಆನ್ಲೈನ್ ಮ್ಯಾಗಝೀನ್ ಮತ್ತು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು
ಭಾರತದ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ನಿರೂಪಿಸುವಾಗ ಹೆಚ್ಚಾಗಿ ಮಹೋನ್ನತರಾದ ಹಲವಾರು ಪುರುಷ ನಾಯಕರು ಮತ್ತು ಬೆರಳೆಣಿಕೆಯಷ್ಟು ಪ್ರತಿಷ್ಠಿತ ಮಹಿಳೆಯರ ಜೀವನದ ಸುತ್ತ ನಿರೂಪಿಸಲಾಗುತ್ತದೆ. ಆದರೆ ಸ್ವಾತಂತ್ರ್ಯ ಹೋರಾಟದ ವಿಶಾಲ ವ್ಯಾಪ್ತಿಯಲ್ಲಿ ಹಲವಾರು ಮುಸ್ಲಿಂ ಮಹಿಳೆಯರ ಅನನ್ಯ ಕೊಡುಗೆಗಳ ಪರಂಪರೆ ಅಡಗಿದೆ ಎಂಬುದು ಗಮನಾರ್ಹವಾದ ಸತ್ಯ. ಅಂದಿನ ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಹೋರಾಟದಲ್ಲಿ ಅವರು ಮೆರೆದ ಧೈರ್ಯ, ಮಾಡಿದ ತ್ಯಾಗಗಳು ಮತ್ತು ಪ್ರದರ್ಶಿಸಿದ ನಾಯಕತ್ವವನ್ನು ಮರೆಯಲು ಸಾಧ್ಯವೇ ಇಲ್ಲ. ರಾಣಿಯರು, ತಾಯಂದಿರು, ಶಿಕ್ಷಕಿಯರು, ಸುಧಾರಕರು ಮತ್ತು ರಾಜಕೀಯ ಕಾರ್ಯಕರ್ತರು ಎಂಬಿತ್ಯಾದಿ ವೈವಿಧ್ಯಮಯ ಹಿನ್ನೆಲೆಗಳಿಂದ ಬಂದ ಮುಸ್ಲಿಂ ಮಹಿಳೆಯರು, ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಯಲ್ಲಿ ಹೋರಾಡುವ, ಅದರ ಘನತೆಯನ್ನು ಕಾಪಾಡುವ ಮತ್ತು ಸಾಮಾಜಿಕ ನ್ಯಾಯವನ್ನು ಪುನರ್ಸ್ಥಾಪಿಸುವ ಅಚಲವಾದ ಬದ್ಧತೆಯೊಂದಿಗೆ ಒಂದಾಗಿದ್ದರು.
ರಾಣಿ ಬೇಗಂ ಹಝ್ರತ್ ಮಹಲ್
ಅವಧ್ನ ಧೀರ ರಾಣಿ ಬೇಗಂ ಹಝ್ರತ್ ಮಹಲ್ ಸ್ವಾತಂತ್ರ್ಯ ಹೋರಾಟದ ಆರಂಭಿಕ ಕಾಲದಲ್ಲಿ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. 1857ರ ದಂಗೆಯ ಸಮಯದಲ್ಲಿ, ಬ್ರಿಟಿಷರು ಅವರ ರಾಜ್ಯವನ್ನು ಸ್ವಾಧೀನಪಡಿಸಿಕೊಂಡು ಅವರ ಪತಿ ನವಾಬ್ ವಾಜಿದ್ ಅಲಿ ಷಾ ಅವರನ್ನು ಗಡಿಪಾರು ಮಾಡಿದರು. ಆ ಸಂದಿಗ್ದ ಸಮಯದಲ್ಲಿ ಬೇಗಂ ಹಝ್ರತ್ ಮಹಲ್ ಅಸಾಧಾರಣವಾದ ದೃಢನಿಶ್ಚಯದಿಂದ ರಾಜಕೀಯ ಮತ್ತು ಸೈನಿಕ ನಾಯಕತ್ವವನ್ನು ವಹಿಸಿಕೊಂಡರು. ತಮ್ಮ ಚಿಕ್ಕ ಮಗ ಬಿರ್ಜಿಸ್ ಖಾದರ್ ಅವರನ್ನು ಆಡಳಿತಗಾರ ಎಂದು ಘೋಷಿಸಿದ ಅವರು, ಬ್ರಿಟಿಷ್ ಆಕ್ರಮಣವನ್ನು ವಿರೋಧಿಸಲು ಸೈನಿಕರು ಮತ್ತು ನಾಗರಿಕರನ್ನು ಒಟ್ಟುಗೂಡಿಸಿದರು.
ಅವರು ಮಾಡಿದ ಅತಿಮುಖ್ಯ ಕಾರ್ಯವೆಂದರೆ, ವಸಾಹತುಶಾಹಿ ಪ್ರಾಬಲ್ಯಕ್ಕೆ ಭಾರತದ ಜನಸಾಮಾನ್ಯರಲ್ಲಿ ತೀವ್ರ ಪ್ರತಿರೋಧವಿದೆ ಹಾಗಾಗಿ ಸಾಮಾಜಿಕ ಐಕ್ಯತೆ ಬಹಳ ಅಗತ್ಯ ಎಂದು ಗುರುತಿಸಿ, ಹಿಂದೂಗಳು ಮತ್ತು ಮುಸ್ಲಿಮರನ್ನು ಈ ಹೋರಾಟದಲ್ಲಿ ಅವರು ಒಗ್ಗೂಡಿಸಲು ಪ್ರಯತ್ನಿಸಿದರು. ಸಾರ್ವಜನಿಕರನ್ನು ಬ್ರಿಟಿಷರ ವಿರುದ್ಧ ದಂಗೆ ಏಳುವಂತೆ ಪ್ರೇರೇಪಿಸಿದರು. ಆ ದಂಗೆಯನ್ನು ನಂತರ ಹತ್ತಿಕ್ಕಲಾಗಿದ್ದರೂ, ಬೇಗಂ ಹಝ್ರತ್ ಮಹಲ್ ಶರಣಾಗಲು ನಿರಾಕರಿಸಿದರು. ಅವರನ್ನು ನೇಪಾಳಕ್ಕೆ ಗಡಿಪಾರು ಮಾಡಲಾಯಿತು. ವಿದೇಶಿ ಆಳ್ವಿಕೆಗೆ ಶರಣಾಗಿ ಅವರ ಗುಲಾಮಗಿರಿಯನ್ನು ಸ್ವೀಕರಿಸುವ ಬದಲು ಅವರು ತಮ್ಮ ಸಿಂಹಾಸನ, ತಾಯ್ನಾಡು ಮತ್ತು ವೈಯಕ್ತಿಕ ಸ್ವತ್ತುಗಳನ್ನೆಲ್ಲಾ ತ್ಯಾಗ ಮಾಡಿ ತಮ್ಮ ಉಳಿದ ಜೀವನವನ್ನು ನೇಪಾಳದಲ್ಲಿ ಕಳೆದರು. ಅವರ ಜೀವನಗಾಥೆ ಭಾರತದ ಸ್ವಾತಂತ್ರ್ಯ ಚಳವಳಿಯ ನಿರ್ಭೀತ ಮಹಿಳಾ ನಾಯಕತ್ವದ ಆರಂಭಿಕ ಉದಾಹರಣೆಗಳಲ್ಲಿ ಒಂದಾಗಿದೆ.
ಅಬಾದಿ ಬಾನು ಬೇಗಂ
ಇಪ್ಪತ್ತನೇ ಶತಮಾನದ ಆರಂಭದಲ್ಲಿ ಭಾರತದ ಮುಸ್ಲಿಂ ಮಹಿಳೆಯರ ರಾಜಕೀಯ ಭಾಗವಹಿಸುವಿಕೆಗೆ ಉತ್ತೇಜನ ನೀಡಿದ ಮತ್ತೊಬ್ಬ ಮಹಾನ್ ವ್ಯಕ್ತಿಯಾಗಿದ್ದರು ಬೀ ಅಮ್ಮ ಎಂದು ಗುರುತಿಸಲ್ಪಟ್ಟಿದ್ದ ಅಬಾದಿ ಬಾನು ಬೇಗಂ. ಸ್ವಾತಂತ್ರ್ಯ ಹೋರಾಟದ ನಾಯಕರಾದ ಮೊಹಮ್ಮದ್ ಅಲಿ ಮತ್ತು ಶೌಕತ್ ಅಲಿ ಅವರ ತಾಯಿಯಾಗಿ, ಅವರು ಈಗಾಗಲೇ ಸಾರ್ವಜನಿಕ ವ್ಯವಹಾರಗಳಲ್ಲಿ ಸದಾ ಕಾರ್ಯಪ್ರವರ್ತರಾಗಿದ್ದರು. ಖಿಲಾಫತ್ ಮತ್ತು ಅಸಹಕಾರ ಚಳುವಳಿಗಳ ಸಮಯದಲ್ಲಿ, ಅವರ ಸಕ್ರಿಯತೆ ರಾಷ್ಟ್ರ ಮಟ್ಟದಲ್ಲೇ ಗಮನ ಸೆಳೆಯಿತು. ಪ್ರಚಲಿತ ಸಾಂಪ್ರದಾಯಿಕ ನಿರ್ಬಂಧಗಳನೆಲ್ಲಾ ಕಡೆಗಣಿಸಿ, ಅವರು ವ್ಯಾಪಕವಾಗಿ ದೇಶಾದ್ಯಂತ ಪ್ರಯಾಣಿಸಿದರು, ಬೃಹತ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು, ರಾಷ್ಟ್ರೀಯ ಉದ್ದೇಶಕ್ಕಾಗಿ ಮಹಿಳೆಯರು ತಮ್ಮ ಆಭರಣಗಳನ್ನು ದಾನ ಮಾಡಲು ಪ್ರೇರೇಪಿಸಿದರು ಮತ್ತು ಕುಟುಂಬಗಳು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಂತೆ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಒತ್ತಾಯಿಸಿದರು. ಸಮಾಜದ ಅನೇಕ ವಿಭಾಗಗಳಲ್ಲಿ ಮಹಿಳೆಯರಿಂದ ಸಾರ್ವಜನಿಕ ಭಾಷಣ ಇನ್ನೂ ಅಸಾಮಾನ್ಯವಾಗಿದ್ದ ಸಮಯದಲ್ಲಿ, ಬೀ ಅಮ್ಮ ಅವರ ಧ್ವನಿ, ಧೈರ್ಯ ಮತ್ತು ಜಾಗೃತಿಯ ಸಂಕೇತವಾಯಿತು.
ರುಕಿಯಾ ಸಖಾವತ್ ಹುಸೈನಿ
ಸ್ವಾತಂತ್ರ್ಯ ಹೋರಾಟವು ಕೇವಲ ಪ್ರತಿರೋಧಗಳು, ಯುದ್ಧಗಳು ಮತ್ತು ರಾಜಕೀಯ ಭಾಷಣಗಳ ಮೂಲಕ ನಡೆಯಲಿಲ್ಲ. ಶಿಕ್ಷಣವು ಈ ವಿಮೋಚನೆಯ ಹೋರಾಟದ ಮಾರ್ಗದಲ್ಲಿ ಒಂದು ಪ್ರಬಲ ಸಾಧನವಾಗಿದೆ ಎಂಬುದನ್ನು ಕೆಲವರು ಅರಿತಿದ್ದರು. ಆ ನಿಟ್ಟಿನಲ್ಲಿ ಹೋರಾಟದ ಮೈದಾನಕ್ಕೆ ಕಾಲಿಟ್ಟ ಶ್ರೇಷ್ಠ ಮುಸ್ಲಿಂ ಶಿಕ್ಷಣತಜ್ಞೆ ಮತ್ತು ಸಮಾಜ ಸುಧಾರಕಿಯರಲ್ಲಿ ಒಬ್ಬರಾಗಿದ್ದರು ರುಕಿಯಾ ಸಖಾವತ್ ಹುಸೈನಿ. ವಿದ್ಯಾವಂತ ಮಹಿಳೆಯರು ತಮ್ಮ ಕುಟುಂಬ ಮತ್ತು ರಾಷ್ಟ್ರ ಎರಡನ್ನೂ ಪರಿವರ್ತಿಸಬಹುದು ಎಂದು ಅವರು ಬಲವಾಗಿ ನಂಬಿದ್ದರು. ಮುಸ್ಲಿಂ ಹೆಣ್ಮಕ್ಕಳಿಗಾಗಿ ಶಾಲೆಗಳ ಸ್ಥಾಪನೆ ಮತ್ತು ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯನ್ನು ಪ್ರತಿಪಾದಿಸುವ ಪ್ರಬಲ ಬರಹಗಳ ಮೂಲಕ, ಅವರು ಅಂದಿನ ಸಮಾಜದಲ್ಲಿ ಆಳವಾಗಿ ಬೇರೂರಿರುವ ಪೂರ್ವಗ್ರಹಗಳನ್ನು ಪ್ರಶ್ನಿಸಿದರು. ಅವರ ಕೆಲಸವು ಆಗ ಬ್ರಿಟಿಷ್ ಭಾರತದ ಭಾಗವಾಗಿದ್ದ ಬಂಗಾಳದಲ್ಲಿ ಕೇಂದ್ರೀಕೃತವಾಗಿದ್ದರೂ, ಅದರ ಪ್ರಭಾವ ಉಪಖಂಡದಾದ್ಯಂತ ವಿಸ್ತರಿಸಿತು. ಶಿಕ್ಷಣದಿಂದ ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ, ರುಕಿಯಾ, ಭವಿಷ್ಯದ ಪೀಳಿಗೆಗಳು ಸಾರ್ವಜನಿಕ ಜೀವನ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಆತ್ಮವಿಶ್ವಾಸದೊಂದಿಗೆ ಭಾಗವಹಿಸಲು ಸಿದ್ಧಪಡಿಸುವಲ್ಲಿ ಮಹತ್ವವಾದ ಪಾತ್ರ ವಹಿಸಿದರು.
ಆಮಿನಾ ತಯ್ಯಬ್ಜಿ ಮತ್ತು ಕುಲ್ಸುಮ್ ಸಯಾನಿ
ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ರಾಜಕೀಯ ಸಂಘಟನೆ ಮತ್ತು ಸಮಾಜದ ತಳಮಟ್ಟದಿಂದಲೇ ಹೋರಾಟಗಾರರನ್ನು ಸಜ್ಜುಗೊಳಿಸುವಿಕೆಯ ಕಾರ್ಯದಲ್ಲೂ ಮುಸ್ಲಿಂ ಮಹಿಳೆಯರ ಕೊಡುಗೆ ಬಹಳಷ್ಟಿತ್ತು. ಆಮಿನಾ ತಯ್ಯಬ್ಜಿ ಎಂಬ ಮಹಾನ್ ಮಹಿಳೆ ಮಹಾತ್ಮ ಗಾಂಧಿಯವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಖಾದಿ ನೇಯುವುದು, ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವುದು, ಅಸಹಕಾರ ಚಳವಳಿ ಮತ್ತು ಕಾನೂನು ಭಂಗ ಚಳವಳಿಗಳಲ್ಲಿ ಭಾಗವಹಿಸುವಂತಹ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಮಹಿಳೆಯರು ಸೇರುವಂತೆ ಅವರು ಅನೇಕ ರೀತಿಯಲ್ಲಿ ಪ್ರೋತ್ಸಾಹಿಸಿದರು. ಅದೇ ರೀತಿ, ಕುಲ್ಸುಮ್ ಸಯಾನಿ ಎಂಬ ಸಮಾಜ ಸೇವಕಿ ವಯಸ್ಕರ ಸಾಕ್ಷರತೆ ಮತ್ತು ಮಹಿಳಾ ಶಿಕ್ಷಣಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸಾಮಾಜಿಕ ಮತ್ತು ಬೌದ್ಧಿಕ ಸಬಲೀಕರಣವಿಲ್ಲದೆ ರಾಜಕೀಯ ಸ್ವಾತಂತ್ರ್ಯ ಅಪೂರ್ಣವಾಗಿರುತ್ತದೆ ಎಂದು ಮನವರಿಕೆ ಮಾಡಿಕೊಂಡ ಅವರು ಸಮುದಾಯ ಸುಧಾರಣೆ, ಸಾಕ್ಷರತಾ ಅಭಿಯಾನಗಳು ಮತ್ತು ಕೋಮು ಸಾಮರಸ್ಯದ ಪ್ರಚಾರದ ಮೂಲಕ, ಈ ಮಹಿಳೆಯರು ರಾಷ್ಟ್ರೀಯತಾವಾದಿ ಚಳವಳಿಯ ಸಾಮಾಜಿಕ ಅಡಿಪಾಯವನ್ನು ಬಲಪಡಿಸುವಲ್ಲಿ ಪಾತ್ರ ವಹಿಸುವಂತೆ ಮಾಡಿದರು.
ಬೀಬಿ ಅಮ್ತುಸ್ಸಲಾಮ್
ಇನ್ನೊಬ್ಬರು ಮಹಾತ್ಮ ಗಾಂಧಿಯವರ ನಿಕಟವರ್ತಿಯಾಗಿದ್ದ ಬೀಬಿ ಅಮ್ತುಸ್ಸಲಾಮ್. ಆಕೆ ಒಬ್ಬ ಸಾಮಾಜಿಕ ಕಾರ್ಯಕರ್ತೆ ಮತ್ತು ಧೈರ್ಯವಂತ ಸ್ವಾತಂತ್ರ್ಯ ಹೋರಾಟಗಾರ್ತಿ. ಅಪಹರಿಸಲ್ಪಟ್ಟ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ರಾಜ್ಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರತಿಭಟಿಸಲು ಅವರು ಬಹವಾಲ್ಪುರದ ಡೇರಾ ನವಾಬ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಕುಳಿತಿದ್ದರು. ನೊಹಾಲಿ ಗಲಭೆಯ ನಂತರವೂ ಅವರು ಗಾಂಧೀಜಿ ಮತ್ತು ಅವರ ಶಿಷ್ಯರೊಂದಿಗೆ ಸೇರಿ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಕೋರಿ ಇಪ್ಪತ್ತೈದು ದಿವಸಗಳ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ವಿಭಜನೆಯ ನಂತರ ಕೋಮು ಹಿಂಸಾಚಾರವನ್ನು ಎದುರಿಸುವಲ್ಲಿ ಮತ್ತು ಆ ಸಮಯದಲ್ಲಿ ಭಾರತಕ್ಕೆ ಬಂದ ನಿರಾಶ್ರಿತರ ಪುನರ್ವಸತಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಬೀಬಿ ಅಮ್ತುಸ್ಸಲಾಮ್, ಕೊಲ್ಕತ್ತಾ, ದೆಹಲಿ ಮತ್ತು ಡೆಕ್ಕನ್ನಲ್ಲಿ ನಡೆದ ಕೋಮು ಗಲಭೆಗಳ ಸಮಯದಲ್ಲಿ ಸೂಕ್ಷ್ಮ ಪ್ರದೇಶಗಳಿಗೆ ಧಾವಿಸಿ ತಮ್ಮ ಜೀವನವನ್ನು ಪಣಕ್ಕಿಟ್ಟು ಸೇವೆಸಲ್ಲಿಸಿದ ಹಲವಾರು ಸಂದರ್ಭಗಳಿದ್ದವು.
ಬೇಗಮ್ ನಿಶಾತುನ್ನಿಸಾ ಮೋಹಾನಿ
1884 ರಲ್ಲಿ ಉತ್ತರ ಪ್ರದೇಶದ ಅವಧ್ನಲ್ಲಿ ಜನಿಸಿದ ಬೇಗಮ್ ನಿಶಾತುನ್ನಿಸಾ ಮೋಹಾನಿ ಯವ್ವನಕ್ಕೆ ಕಾಲಿಡುತ್ತಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. Ultimate Freedom (ಸಂಪೂರ್ಣ ಸ್ವಾತಂತ್ರ್ಯ) ಎಂಬ ಪ್ರಸಿದ್ಧಿ ಪಡೆದ ಅವರ ಸ್ವಾತಂತ್ರ್ಯದ ಪರಿಕಲ್ಪನೆಯಿಂದ ಗಾಂಧೀಜಿಯವರು ಪ್ರೇರಿತರಾಗಿದ್ದರು. ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಮತ್ತು “ಇನ್ಕಿಲಾಬ್ ಜಿಂದಾಬಾದ್” ಎಂಬ ಘೋಷಣೆಯನ್ನು ಹುಟ್ಟುಹಾಕಿದ ಮೌಲಾನಾ ಹಸ್ರತ್ ಮೋಹಾನಿ ಅವರ ಪತ್ನಿಯಾಗಿದ್ದ ನಿಶಾತುನ್ನಿಸಾ, ಬ್ರಿಟಿಷ್ ಅಧಿಕಾರದ ಉಗ್ರ ವಿರೋಧಿಯಾಗಿದ್ದ ಬಾಲ ಗಂಗಾಧರ ತಿಲಕ್ ಅವರನ್ನು ಬೆಂಬಲಿಸಿದರು. ಬ್ರಿಟಿಷ್ ವಿರೋಧಿ ಕೃತಿಯನ್ನು ಪ್ರಕಟಿಸಿದ್ದಕ್ಕಾಗಿ ಜೈಲು ಶಿಕ್ಷೆಗೊಳಗಾದ ಪತಿ ಹಸ್ರತ್ ಮೋಹಾನಿಗೆ ಪತ್ರ ಬರೆದು ಅವರಿಗೆ ಧೈರ್ಯ ನೀಡುತ್ತಾ “ನಿಮ್ಮ ಮೇಲೆ ಬಂದಿರುವ ಅಪಾಯಗಳನ್ನು ಧೈರ್ಯದಿಂದ ಎದುರಿಸಿರಿ, ನನ್ನ ಮತ್ತು ಕುಟುಂಬದ ಬಗ್ಗೆ ಯಾವುದೇ ಆಲೋಚನೆ ಮಾಡಬೇಡಿರಿ, ನಿಮ್ಮಲ್ಲಿ ಯಾವುದೇ ದೌರ್ಬಲ್ಯದ ಲಕ್ಷಣ ಕಾಣದಿರಲಿ, ಜಾಗರೂಕರಾಗಿರಿ” ಎಂದು ಬರೆದು ಅವರಲ್ಲಿ ಧೈರ್ಯ ಮತ್ತು ಪ್ರೇರಣೆಯನ್ನು ತುಂಬುವ ಕೆಲಸ ಮಾಡಿದರು. ಪತಿಯ ಜೈಲುವಾಸದ ಅವಧಿಯಲ್ಲಿ, ಅವರು ಪ್ರಕಟಿಸುತ್ತಿದ್ದ ಉರ್ದು-ಎ-ಮುಅಲ್ಲಾ ಎಂಬ ದಿನಪತ್ರಿಕೆಯ ಪ್ರಕಟಣೆಯ ಹೊಣೆ ವಹಿಸಿಕೊಂಡರು ಮತ್ತು ಅದರೊಂದಿಗೆ ವಿವಿಧ ಕಾನೂನು ವಿವಾದಗಳಲ್ಲಿ ತೊಡಗಿದರು.
ಹೀಗೆ ಅನೇಕ ಮುಸ್ಲಿಂ ಮಹಿಳೆಯರು ನಿರ್ದಿಷ್ಟ ಅಪಾಯಗಳ ಹೊರತಾಗಿಯೂ ರಾಜಕೀಯ ಪ್ರತಿಭಟನೆಗಳಲ್ಲಿ ನೇರವಾಗಿ ಭಾಗವಹಿಸಿದರು. ಫಾತಿಮಾ ಇಸ್ಮಾಯಿಲ್ ಎಂಬವರು ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಸೇರಿದವರಲ್ಲಿ ಒಬ್ಬರು. ಅವರು ಮಹಿಳಾ ಸ್ವಯಂಸೇವಕರನ್ನು ಸಂಘಟಿಸಿದರು, ವಿದೇಶಿ ಸರಕುಗಳ ಬಹಿಷ್ಕಾರವನ್ನು ಪ್ರೋತ್ಸಾಹಿಸಿದರು ಮತ್ತು ರಾಷ್ಟ್ರೀಯತಾವಾದಿ ಚಟುವಟಿಕೆಗಳಿಗಾಗಿ ಜೈಲು ಶಿಕ್ಷೆಯನ್ನು ಕೂಡಾ ಅನುಭವಿಸಿದರು.
ಈ ವೀರ ಮಹಿಳೆಯರ ಮತ್ತು ಇವರಂಥ ಅನೇಕ ಕಡಿಮೆ ಪರಿಚಿತ ಮುಸ್ಲಿಂ ಮಹಿಳೆಯರ ತ್ಯಾಗ ಮನೋಭಾವ ಮತ್ತು ದೇಶಪ್ರೇಮವು ಲಿಂಗ, ವರ್ಗ ಮತ್ತು ಸಾಮಾಜಿಕ ಅಡೆತಡೆಗಳನ್ನು ಮೀರಿ ನಿಂತಿತ್ತು. ಇವರ ತ್ಯಾಗಗಳು ಯುದ್ಧಭೂಮಿ ವೀರರಿಗಿಂತ ಕಡಿಮೆ ಮಹತ್ವದ್ದಾಗಿರಲಿಲ್ಲ. ವೈಯಕ್ತಿಕ ಭದ್ರತೆಗಿಂತ ಹೆಚ್ಚಾಗಿ ಪ್ರತಿರೋಧದ ಮಾರ್ಗವನ್ನು ಅವರು ಆರಿಸಿಕೊಂಡಾಗ ಬಂಧನಗಳು, ಬ್ರಿಟಿಷರ ಕಣ್ಗಾವಲು, ಆರ್ಥಿಕ ಸಂಕಷ್ಟ, ಸಾಮಾಜಿಕ ಟೀಕೆ ಮತ್ತು ಕುಟುಂಬದ ವಿರೋಧ ಇತ್ಯಾದಿಗಳು ಅವರ ಜೀವನದ ಭಾಗವಾದವು. ಇವರು ಮಾಡಿದ ಸೇವೆಗಳು ಬಹು ಆಯಾಮಗಳಿಂದ ಕೂಡಿದ್ದವು. ಕೆಲವರು ರಾಜ್ಯಗಳು ಮತ್ತು ರಾಜಕೀಯ ಅಧಿಕಾರವನ್ನು ಕಳೆದುಕೊಂಡರು, ಇತರರು ಸೆರೆವಾಸ, ಗಡಿಪಾರು, ಆರ್ಥಿಕ ನಷ್ಟ ಅಥವಾ ಸಾಮಾಜಿಕ ಬಹಿಷ್ಕಾರವನ್ನು ಸಹಿಸಿಕೊಂಡರು. ಇವರಲ್ಲಿ ಅನೇಕರು ವಸಾಹತುಶಾಹಿ ಅಧಿಕಾರವನ್ನು ಮಾತ್ರ ಪ್ರತಿರೋಧಿಸಿದ್ದಲ್ಲ ಬದಲಾಗಿ ಮಹಿಳೆಯರು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುವುದನ್ನು ನಿರುತ್ಸಾಹಗೊಳಿಸುವ ನಿರ್ಬಂಧಿತ ಸಾಮಾಜಿಕ ಸಂಪ್ರದಾಯಗಳನ್ನು ಸಹ ಪ್ರಶ್ನಿಸಿದರು. ಸಾರ್ವಜನಿಕ ವೇದಿಕೆಗಳಲ್ಲಿ ಸಕ್ರಿಯರಾಗಿ, ಪ್ರತಿಭಟನೆಗಳನ್ನು ಮುನ್ನಡೆಸಿ, ಸಮುದಾಯಗಳನ್ನು ಸಂಘಟಿಸಿ, ಶೈಕ್ಷಣಿಕ ಸಬಲೀಕರಣವನ್ನು ಪ್ರತಿಪಾದಿಸುವ ಮೂಲಕ, ಅವರು ಭಾರತೀಯ ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ವಿಸ್ತರಿಸಿದರು ಮತ್ತು ಬ್ರಿಟಿಷ್ ಆಳ್ವಿಕೆಯ ವಿರುದ್ಧದ ಹೋರಾಟಕ್ಕೆ ಮಹತ್ವವಾದ ಕೊಡುಗೆಗಳನ್ನು ನೀಡಿದರು.
ಈ ಅಪಾರ ಕೊಡುಗೆಗಳ ಹೊರತಾಗಿಯೂ, ಅನೇಕ ಮುಸ್ಲಿಂ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಮುಖ್ಯವಾಹಿನಿಯ ಐತಿಹಾಸಿಕ ದಾಖಲೆಗಳಲ್ಲಿ ಸರಿಯಾದ ಪ್ರಾತಿನಿಧ್ಯದಿಂದ ವಂಚಿತರಾಗಿದ್ದಾರೆ. ಇತಿಹಾಸದ ಪುಟಗಳು ಹೆಚ್ಚಾಗಿ ಪುರುಷ ಹೋರಾಟಗಾರರನ್ನೇ ಸ್ಮರಿಸುತ್ತವೆ. ಮಹಿಳೆಯರ ಕೊಡುಗೆಗಳು, ವಿಶೇಷವಾಗಿ ಶಿಕ್ಷಣ, ಸಮುದಾಯಿಕ ಸಂಘಟನೆ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ತೊಡಗಿರುವವರು, ತುಲನಾತ್ಮಕವಾಗಿ ಕಡಿಮೆ ಗಮನವನ್ನು ಪಡೆದಿವೆ. ಇದಲ್ಲದೆ, ಭಾರತದ ವಿಭಜನೆಯ ಸುತ್ತಲಿನ ಚರ್ಚೆಗಳು ಕೆಲವೊಮ್ಮೆ ವಿಶಾಲ ರಾಷ್ಟ್ರೀಯತಾವಾದಿ ಚಳವಳಿಯಲ್ಲಿ ಅನೇಕ ಮುಸ್ಲಿಮರು ವಹಿಸಿದ ಮಹತ್ವದ ಪಾತ್ರವನ್ನು ಮರೆಮಾಡಿವೆ. ಈ ಇತಿಹಾಸಗಳನ್ನು ಪುನರ್ವಿಮರ್ಶಿಸಬೇಕು, ಆಗ ಮಾತ್ರ ಭಾರತದ ಇತಿಹಾಸದ ತಿಳುವಳಿಕೆಯಲ್ಲಿ ಸಮತೋಲನೆ ಬರುತ್ತದೆ ಮತ್ತು ಸ್ವಾತಂತ್ರ್ಯ ಹೋರಾಟವು ವಾಸ್ತವದಲ್ಲಿ ಒಂದು ಸಾಮೂಹಿಕ ಪ್ರಯತ್ನವಾಗಿತ್ತು ಎಂದು ನಮಗೆ ನೆನಪಿಸುತ್ತದೆ.
ಇಂದು ದೇಶ ತನ್ನ ಸ್ವಾತಂತ್ರ್ಯದ ಸಂಭ್ರಮಾಚರಣೆಯಲ್ಲಿ ತೊಡಗಿರುವಾಗ, ಈ ಗಮನಾರ್ಹ ಮಹಿಳೆಯರನ್ನು ನೆನಪಿಸಿಕೊಳ್ಳುವುದು ಬಹಳ ಮುಖ್ಯ. ಈ ಸ್ವಾತಂತ್ರ್ಯದ ಗಳಿಕೆಯಲ್ಲಿ ಪ್ರತಿಯೊಂದು ಸಮುದಾಯದ ಜನರ ತ್ಯಾಗ ಅಡಗಿದೆ ಎಂಬ ಮನವರಿಕೆ ಮೂಡಿಸಬೇಕು. ಅದರಲ್ಲೂ ಈ ನಿಟ್ಟಿನಲ್ಲಿ ಮುಸ್ಲಿಂ ಮಹಿಳೆಯರು ಸಲ್ಲಿಸಿದ ಸೇವೆ ಮತ್ತು ತೋರಿದ ಅಚಲವಾದ ಬದ್ಧತೆ ಸಾರ್ವಜನಿಕ ತಿಳುವಳಿಕೆಗೆ ಬರಬೇಕು. ಇಂದು ದೇಶದಲ್ಲಿ ರಾಷ್ಟ್ರೋತ್ಥಾನದ ಪಣತೊಟ್ಟು ನಮ್ಮ ಜೆನ್-ಝಿ ಎದ್ದು ನಿಂತಿರುವಾಗ ಇಂತಹ ಪ್ರೇರಣಾಭರಿತ ಪರಂಪರೆ ಅವರಲ್ಲಿ ಇನ್ನಷ್ಟು ಧೈರ್ಯ ತುಂಬಬಹುದು.












