ಸನ್ಮಾರ್ಗ ವಾರ್ತೆ
ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರಿ ಶಾಲೆಗಳ ಶೋಚನೀಯ ಸ್ಥಿತಿ ಮತ್ತು ಅಸಮರ್ಪಕ ಮೂಲಭೂತ ಸೌಕರ್ಯಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಸಂಚಾಲಕ ಅಭಿಜಿತ್ ದೀಪ್ಕೆ ತೀವ್ರವಾಗಿ ಟೀಕಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಪ್ರಾಣಿಗಳಿಗಿಂತಲೂ ಕೇವಲವಾದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಮತ್ತು ಮಂತ್ರಿಗಳ ಸಾಕು ನಾಯಿಗಳಿಗೂ ಮಕ್ಕಳಿಗಿಂತ ಉತ್ತಮ ಸೌಲಭ್ಯಗಳು ಸಿಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ರಾಜ್ಯ ಶಾಲಾ ಶಿಕ್ಷಣ ಸಚಿವ ದಾದಾ ಭುಸೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ‘ಶಾಲೆಗಳನ್ನು ಸರಿಪಡಿಸಿ’ (ಸ್ಕೂಲ್ ಟೀಕ್ ಕರೋ) ಅಭಿಯಾನದ ಭಾಗವಾಗಿ ಲಾತೂರ್ನ ಔಸಾ ತಾಲ್ಲೂಕಿನಲ್ಲಿರುವ ಉಜಾನಿ ಜಿಲ್ಲಾ ಪರಿಷತ್ ಶಾಲೆಗೆ ಭೇಟಿ ನೀಡಿದ ನಂತರ ದೀಪ್ಕೆ ಈ ಪ್ರತಿಕ್ರಿಯೆ ನೀಡಿದ್ದಾರೆ. ಶಾಲೆಯಲ್ಲಿ ಸೋರುವ ಮೇಲ್ಚಾವಣಿಗಳು, ಸಾಕಷ್ಟು ಬೆಂಚ್ಗಳು ಅಥವಾ ಶೌಚಾಲಯಗಳ ಕೊರತೆ ಹಾಗೂ ಸುರಕ್ಷಿತ ರಸ್ತೆಗಳಿಲ್ಲದಿರುವುದನ್ನು ಅವರು ಎತ್ತಿ ತೋರಿಸಿದ್ದು, ಇದಕ್ಕೆ ಜನಪ್ರತಿನಿಧಿಗಳು ಮತ್ತು ಸಚಿವರು ಉತ್ತರಿಸಬೇಕಾಗಿದೆ ಎಂದು ಹೇಳಿದರು.
ಬಡ ವಿದ್ಯಾರ್ಥಿಗಳು ಎದುರಿಸುತ್ತಿರುವ ನೈಜ ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಸಚಿವರು ಮತ್ತು ಶಾಸಕರು ತಮ್ಮ ಸ್ವಂತ ಮಕ್ಕಳನ್ನು ಕನಿಷ್ಠ ಒಂದು ದಿನವಾದರೂ ಇಂತಹ ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು ಎಂದು ಅವರು ಆಗ್ರಹಿಸಿದರು. ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಶಾಲೆಗಳಲ್ಲಿ ಮೂಲಭೂತ ಸಮಸ್ಯೆಗಳನ್ನೂ ಪರಿಹರಿಸಲು ಸಾಧ್ಯವಾಗದಿದ್ದರೆ ತಮ್ಮ ಸಾಧನೆಗಳೇನು ಎಂಬುದನ್ನು ವಿವರಿಸುವಂತೆ ಅವರು ಸರ್ಕಾರಕ್ಕೆ ಸವಾಲು ಹಾಕಿದರು.
ಶಾಲೆಗಳ ಬಳಿ ಬಿದ್ದಿರುವ ಕಸದ ರಾಶಿಗಳು ಮತ್ತು ಮಕ್ಕಳು ಹಾವು ಕಚ್ಚಿ ಸಾವನ್ನಪ್ಪುವಂತಹ ಪರಿಸ್ಥಿತಿಗಳು ಸರ್ಕಾರದ ದೊಡ್ಡ ವೈಫಲ್ಯವಾಗಿದೆ ಎಂದು ಬೊಟ್ಟು ಮಾಡಿದ ದೀಪ್ಕೆ, ರಾಜಕೀಯ ಲಾಭಕ್ಕಾಗಿ ಜಾತಿ ಮತ್ತು ಧರ್ಮದ ಚಿಹ್ನೆಗಳನ್ನು ಎತ್ತುವ ಬದಲು ಜನರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಮತ್ತು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಧ್ವನಿ ಎತ್ತಲು ಮುಂದೆ ಬರಬೇಕು ಎಂದು ಕರೆ ನೀಡಿದರು.












