ಸನ್ಮಾರ್ಗ ವಾರ್ತೆ
ಗಾಝಾ: ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 15 ಅಂಶಗಳ ಶಾಂತಿ ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸಲು ತಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ಹಮಾಸ್ನ ಹಿರಿಯ ಮುಖಂಡ ಬಾಸಿಮ್ ನಯೀಮ್ ತಿಳಿಸಿದ್ದಾರೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ‘ಶಾಂತಿ ಮಂಡಳಿ’ (ಬೋರ್ಡ್ ಆಫ್ ಪೀಸ್) ಹಾಗೂ ಅಧ್ಯಕ್ಷ ಟ್ರಂಪ್ ನೇತೃತ್ವದ ಮಧ್ಯವರ್ತಿಗಳು ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ನಯೀಮ್ ಕರೆ ನೀಡಿದ್ದಾರೆ.
ಸಿಎನ್ಎನ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಬಾಸಿಮ್ ನಯೀಮ್, ಗಾಝಾದ ಜನರ ಜೀವನವನ್ನು ಚೇತರಿಸುವ ಪ್ರಯತ್ನಗಳನ್ನು ಮುಂದುವರಿಸಲು ಮತ್ತು ಈ ಪ್ರದೇಶದಲ್ಲಿ ಕನಿಷ್ಠ ಮಟ್ಟದ ನೆಮ್ಮದಿ ಹಾಗೂ ಶಾಂತಿಯನ್ನು ಸಾಧಿಸಲು ತಾವು ಸಿದ್ಧವಿರುವುದಾಗಿ ಹೇಳಿದ್ದಾರೆ.
ಇದೇ ವೇಳೆ, ಮುಂಬರುವ ಇಸ್ರೇಲ್ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ರಾಜಕೀಯ ಪರಿಸ್ಥಿತಿಯ ಬಗ್ಗೆ “ಸಹಾನುಭೂತಿ” ತೋರುವಂತೆ ಯುಎಸ್ ಸಲಹೆಗಾರ ಜೇರೆಡ್ ಕುಶ್ನರ್ ಮತ್ತು ಶಾಂತಿ ಮಂಡಳಿಯ ಪ್ರತಿನಿಧಿಗಳು ಹಮಾಸ್ಗೆ ಒತ್ತಾಯಿಸಿದ್ದಾರೆ ಎಂದು ನಯೀಮ್ ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ಒಬ್ಬ ಫೆಲೆಸ್ತೀನಿಯರಾಗಿ ನಾವು ನೆತನ್ಯಾಹು ಅವರ ಚುನಾವಣಾ ರಾಜಕೀಯಕ್ಕೆ ಬೆಲೆ ತೆರಬೇಕಾಗಿಲ್ಲ ಮತ್ತು ನೆತನ್ಯಾಹು ಅವರ ಚುನಾವಣಾ ಗೆಲುವಿಗಾಗಿ ಫೆಲೆಸ್ತೀನ್ ಜನರ ರಕ್ತ ಹಾಗೂ ಜೀವಗಳ ಬೆಲೆಯನ್ನು ತೆರಲು ನಾವು ಸಿದ್ಧರಿಲ್ಲ ಎಂದು ಬಾಸಿಮ್ ನಯೀಮ್ ಸ್ಪಷ್ಟಪಡಿಸಿದ್ದಾರೆ.
ಕದನ ವಿರಾಮ ಒಪ್ಪಂದದ ಯಾವುದೇ ನಿಯಮಗಳನ್ನು ಇಸ್ರೇಲ್ ಪಾಲಿಸಿಲ್ಲ ಎಂದು ಹಮಾಸ್ ಬೆಟ್ಟು ಮಾಡಿದೆ. ಮಾನವೀಯ ನೆರವನ್ನು ತಡೆಯುತ್ತಿದೆ ಮತ್ತು ಗಾಝಾ ಮೇಲಿನ ದಾಳಿಯನ್ನು ತೀವ್ರಗೊಳಿಸುತ್ತಿದೆ ಎಂದು ಇಸ್ರೇಲ್ ವಿರುದ್ಧ ಹಮಾಸ್ ನಾಯಕತ್ವವು ಆರೋಪಿಸಿದೆ.












