ಸನ್ಮಾರ್ಗ ವಾರ್ತೆ
ದೆಹಲಿ ಮತ್ತು ಬಿಹಾರದಲ್ಲಿ ವಿದ್ಯಾರ್ಥಿ ಪ್ರತಿಭಟನೆಯ ಸಮಯದಲ್ಲಿ ಪೊಲೀಸರು ಕಾನೂನುಬಾಹಿರವಾಗಿ ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ಆರೋಪಿಸಿದೆ. ಈ ಕ್ರೌರ್ಯ ನಡೆದು ಒಂದು ತಿಂಗಳಾದರೂ ಯಾವುದೇ ಪೋಲಿಸ್ ಅಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗಿಲ್ಲ ಎಂದು ಅದು ಹೇಳಿದೆ.
ಜುಲೈ 20 ಮತ್ತು ಜುಲೈ 24ರ ನಡುವೆ ಪ್ರತಿಭಟನೆಗಳ ವಿರುದ್ಧ ಪೆಲೆಟ್ ಗನ್ ಪ್ರಯೋಗಿಸಲಾಗಿದೆ. ಗ್ರನೇಡ್‌ಗಳನ್ನು ಎಸೆಯಲಾಗಿದೆ. ಲಾಠಿ ಮತ್ತು ವಿದ್ಯುತ್ ಆಘಾತ ಸಾಧನಗಳನ್ನು ಬಳಸಲಾಗಿದೆ ಎಂದು ಅದು ಹೇಳಿದೆ.
ಜುಲೈ 20ರಂದು ದೆಹಲಿಯಲ್ಲಿ ಚಿತ್ರಿಸಲಾದ 17 ವಿಡಿಯೋಗಳನ್ನು ಮತ್ತು ಜುಲೈ 24ರಂದು ಬಿಹಾರದ ಶಿವಾನಿಂದ ಚಿತ್ರರಿಕರಿಸಲಾದ ಎರಡು ವಿಡಿಯೋಗಳನ್ನು ಆಮ್ನೆಸ್ಟಿ ಪರಿಶೀಲಿಸಿದೆ.
ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಗಳು ಆರಂಭದಲ್ಲಿ ಅಶ್ರುವಾಯು ಸಿಡಿಸಿದರು. ನಂತರ ಯಾವುದೇ ಎಚ್ಚರಿಕೆ ನೀಡದೆ ಪೆಲೆಟ್ ಗುಂಡು ಹಾರಿಸಿದರು ಎಂದು ಗಾಯಗೊಂಡ ಪ್ರತಿಭಟನಾಕಾರರೋರ್ವರು ಹೇಳಿರುವುದನ್ನು ಅದು ದಾಖಲಿಸಿದೆ.
ನಾನು ವಿರುದ್ಧ ದಿಕ್ಕಿನಲ್ಲಿ ಓಡಲು ಪ್ರಾರಂಭಿಸಿದೆ ಮತ್ತು ಆಗ ನನ್ನ ಬೆನ್ನಿಗೆ ಪೆಟ್ಟು ಬಿದ್ದಿತ್ತು ಎಂದು ಪ್ರತಿಭಟನಾಕಾರ ಹೇಳಿದ್ದಾರೆ. ಅವರಿಗೆ ಸುಮಾರು 25 ರಿಂದ 30 ಗಾಯಗಳಾಗಿವೆ ಮತ್ತು ನಂತರ ವೈದ್ಯರು ಅವು ಪೆಲೆಟ್ ಗುಂಡೇಟಿನ ಗಾಯಗಳಾಗಿವೆ ಎಂದು ಹೇಳಿದ್ದಾರೆ.












