ಧರ್ಮವನ್ನು ಅರಿಯೋಣ

0
276

✍️ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಜೈನಕಾಶಿ, ಮೂಡುಬಿದ್ರಿ

ನಾವು ಪರಸ್ಪರ ಕಲೆತು ಬೆರೆತಾಗ ಅಖಂಡ ಭಾರತದ ಕನಸು ಸಾಕಾರಗೊಳ್ಳುತ್ತದೆ. ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಬಂದು ಇಷ್ಟೊಂದು ವರ್ಷಗಳು ಸಂದರೂ ನಾವು ನಮ್ಮ ಅಕ್ಕಪಕ್ಕದ ಮನೆಯವರನ್ನು ಪರಕೀಯರಂತೆ ನೋಡುವುದನ್ನು ಯಾವಾಗ ಬಿಡುತ್ತೇವೆಯೋ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಯಾವಾಗ ಪ್ರಾರಂಭಿಸುತ್ತೇವೆಯೋ, ಆಗ ಈ ಭಾರತ ಜಗತ್ತಿನ ಅತಿ ದೊಡ್ಡ ಶ್ರೀಮಂತ ರಾಷ್ಟ್ರವಾಗಿ ಮೂಡಿ ಬರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ನಮ್ಮ ಭಾರತ ಎಷ್ಟೊಂದು ವಿಶಾಲವಾಗಿದೆ ಎಂದರೆ ಮ್ಯಾನ್‌ಮಾರ್, ಬಾಂಗ್ಲಾ, ಪಾಕಿಸ್ತಾನ ಎಲ್ಲವನ್ನು ಒಳಗೊಂಡು ವಿಶಾಲವಾಗಿತ್ತು. ನಮ್ಮಲ್ಲಿ ಐಕ್ಯತೆಯ, ಸಮಾನತೆಯ ಕೊರತೆಯಿಂದಾಗಿ ಅದರ ರಾಜಕೀಯ ಲಾಭ ಪಡೆದು ದೇಶವು ಎರಡು, ಮೂರು ಭಾಗವಾಯಿತು. ಇನ್ನು ಹೆಚ್ಚಿನ ಭಾಗವಾಗುವುದಕ್ಕಿಂತ ಮೊದಲೇ ಸೌಹಾರ್ದ ಸಮ್ಮೇಳನಗಳ ಮೂಲಕ ನಾವು ಈ ದೇಶದಲ್ಲಿ ಸಹೋದರರಾಗಿ ಬದುಕಿ ಜಾಗೃತಿಯ ಸಮಾಜವನ್ನು ಶಾಂತಿ ನೆಮ್ಮದಿಯ ಉಸಿರಾಗಿಸಿ ಸುಮಧುರ ಬದುಕನ್ನಾಗಿಸುವ ಉದ್ದೇಶ ಹೊಂದೋಣ.

ಈ ದೇಶಕ್ಕೆ ಸರ್ವಧರ್ಮ ಸಮನ್ವಯತೆ ಮತ್ತು ಸಹಿಷ್ಣುತೆಯ ಅಗತ್ಯವಿದೆ. ಇನ್ನೊಂದು ಧರ್ಮವನ್ನು ಆಲಿಸುವ
ವ್ಯವಧಾನ, ತಾಳ್ಮೆ, ಸೈರಣೆ ಎಲ್ಲಿಯ ತನಕ ಇರುವುದಿಲ್ಲವೋ ಸಂವಿಧಾನವನ್ನು ಅನುಸರಿಸುವ ವ್ಯವಧಾನ ಎಲ್ಲಿಯ ತನಕ ಇರುವುದಿಲ್ಲವೋ ಅಲ್ಲಿಯ ತನಕ ನಮ್ಮ ಉದ್ಧಾರ ಸಾಧ್ಯವಿಲ್ಲ.

ನಾವು ಇಂಜಿನಿಯರ್, ಡಾಕ್ಟರ್ ಮುಂತಾದ ಉನ್ನತ ಪದವಿಗಳನ್ನು ಪಡೆಯಬಹುದು. ನಾವು ನಮ್ಮ ಮೌಲ್ಯದಲ್ಲಿ ಸರ್ವ ಧರ್ಮ ಸಂದೇಶವನ್ನು ಅರಿಯುವ ಭಾವನೆಯಲ್ಲಿ ಡಿಗ್ರಿ ಪಡೆಯುವವರಾಗೋಣ. ಇಂತಹ ಭಾವನೆ ನಮ್ಮ ತುಳುನಾಡಿನಲ್ಲಿ (ಕರಾವಳಿ ಕರ್ನಾಟಕ) ಇರುವ ಕಾರಣದಿಂದಲೇ ನಮ್ಮ ತುಳುನಾಡು ಭಾರತದಲ್ಲಿ ಸರ್ವಧರ್ಮ ಸಮನ್ವಯತೆಯನ್ನು ಸಾಧಿಸಿದ ಕೇಂದ್ರ ಎಂದರೆ ತಪ್ಪಾಗಲಾರದು. ಸಾವಿರಾರು ವರ್ಷಗಳ ಹಿಂದೆ ಪೋರ್ಚುಗೀಸರು ದಾಳಿ ಮಾಡಿದಾಗ ಅವರನ್ನು ಎದುರಿಸಲು ಅಬ್ಬಕ್ಕರಾಣಿಯವರು ಹಿಂದುಗಳು ಮಾತ್ರ ಇದ್ದರೆ ಸಾಲದು ಕೇರಳದ ಮಾಪಿಳ್ಳೆಗಳು ಅಥವಾ ಮುಸ್ಲಿಮರು ಸೇರಿದರೆ ಮಾತ್ರ ನಮ್ಮ ರಕ್ಷಣೆಯನ್ನು ಮಾಡಿಕೊಳ್ಳಬಹುದು ಎಂಬ ಸತ್ಯವನ್ನು ಅರಿತುಕೊಂಡಿದ್ದರು. ಹಿಂದುಗಳು ಮುಸ್ಲಿಮರು ಸೇರಿ ಜೈನ ರಾಣಿಯ ಜೊತೆ ನಿಂತು ಪೋರ್ಚುಗೀಸರನ್ನು ಕೆಚ್ಚೆದೆಯಿಂದ ಎದುರಿಸಿದ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದ ಇತಿಹಾಸ ನಮ್ಮ ತುಳುನಾಡಿಗೆ ಇದೆ. ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು.

ರಾಣಿಗೆ ತೊಂದರೆಗಳನ್ನುಂಟು ಮಾಡಿದಾಗ ರಾಣಿಯನ್ನು ಬಚ್ಚಿಟ್ಟು ಕೇರಳದ ಅನೇಕ ಮುಸ್ಲಿಂ ಬಾಂಧವರು ಸಹಾಯ ಮಾಡಿದ್ದಾರೆ. ಇದು ಇತಿಹಾಸದಲ್ಲಿ ದಾಖಲಾಗಿದೆ. ಅದೇ ರೀತಿ ನಮ್ಮ ಅಜಿಲ ವಂಶಸ್ಥರಾದ ತಿಮ್ಮಣ್ಣ ಅಜಿಲರಲ್ಲಿ ಆಗ ಹೈದರಾಲಿಗೆ ತಿಳಿಯದಂತೆ ಶೇಕ್ ಅಲಿ ಎಂಬವರು ಕೆಟ್ಟ ರೀತಿಯಲ್ಲಿ ತೆರಿಗೆಯನ್ನು 7,000 ದಿಂದ ಒಮ್ಮೆಲೇ 11,000 ಕ್ಕೆ ಏರಿಸಿದಾಗ ಅದನ್ನು ನೀಡಲು ಅಜಿಲರಿಗೆ ಸಾಧ್ಯವಾಗಲಿಲ್ಲ. ಆಗ ಅವರಿಗೆ ಜೈಲು ಶಿಕ್ಷೆ ಆಯಿತು. ಆಗ ತಿಮ್ಮಣ್ಣ ಅಜಿಲರಿಗೆ ಶಿಕ್ಷೆ ನೀಡಬಾರದು ಎಂದೂ ಅವರು ಓರ್ವ ಗೌರವಸ್ಥ ರಾಜ, ಮೌಲ್ಯಯುತ ವಂಶಸ್ಥ ಎಂದು ಹೇಳಿ ಅವರನ್ನು ಪಾರು ಮಾಡಿದ ಕೀರ್ತಿ ಲಾಲ್ ಸಾಹೇಬ್ ಎಂಬ ಮುಸ್ಲಿಂ ಬಂಧುವಿಗೆ ಸಲ್ಲಬೇಕು. ಅವರು ಸ್ವತಃ 11,000 ತೆರಿಗೆಯನ್ನು ಕಟ್ಟಿ ಹೈದರಾಲಿಗೆ ತಿಳಿಸಿ ಅವರನ್ನು ಬಂಧಿಸದಂತೆ ರಕ್ಷಿಸಿದರು. ಇದು 1767 ರಲ್ಲಿ ನಡೆದ ಘಟನೆ.

ಹಾಗೆಯೇ ನಮ್ಮ ಮಿರ್ಜಾ ಇಸ್ಮಾಈಲ್‌ರು ಮೈಸೂರು ಒಡೆಯರ ಕಾಲದಲ್ಲಿ ಉತ್ತಮ ಕೆಲಸ ಮಾಡಿದರು. ಹಾಗೆಯೇ ನಮ್ಮ ಶಾಂತಿ ಸಾಗರ ದಿಗಂಬರ ಮುನಿಗಳು ವಿಹಾರ ಮಾಡು ವುದಕ್ಕೆ ಹೋಗಿದ್ದ ಸಂದರ್ಭದಲ್ಲಿ ನಿಜಾಮರು ಉರ್ದುವಿನಲ್ಲಿ ಒಂದು ಸಂದೇಶ ಕಳುಹಿಸಿ ಈ ದಿಗಂಬರ ಸಾಧುಗಳಿಗೆ ಯಾವುದೇ ರೀತಿಯ ತೊಂದರೆ ಕೊಡಬಾರದು ಎಂದು ಹೇಳಿದರು ಎಂಬುದು ಸ್ಮರಣೀಯ. ಅಕ್ಬರನ ಆಸ್ಥಾನದಲ್ಲಿ ಬೀರಬಲ್ಲ ಎಂಬ ಹಿಂದೂ ಮಂತ್ರಿ ಇದ್ದರು. ತೋಡಾರ್ ಮಲ್ಲ ಎಂಬ ಕೋಶಾಧಿಕಾರಿಯನ್ನು ಮುಸ್ಲಿಂ ರಾಜರು ಇಟ್ಟುಕೊಂಡಿದ್ದರು. ಇದು ನಮಗೆ ಆದರ್ಶವಾಗಿದೆ. ಇದನ್ನು ಮುಂದುವರಿಸೋಣ. ಹಿಂದು ಮುಸ್ಲಿಂ ಜೈನರು ಕ್ರೆöÊಸ್ತರು ಎಲ್ಲರೂ ಸೇರಿ ಜೊತೆ ಯಾಗಿರಬೇಕು. ಯೇಸುಕ್ರಿಸ್ತರ ದಯೆ, ಗೀತೆಯಲ್ಲಿರುವ ಕೃಷ್ಣನ ಸಂದೇಶ, ಜಿನೇಂದ್ರ ಭಗವಂತರ ವಿಶೇಷ ಸಂದೇಶ, ಮಹಮ್ಮದ್ ಪೈಗಂಬರರ ಸಂದೇಶ ಹಾಗೂ ಕುರ್‌ಆನ್ ಸೂಕ್ತಗಳು ಇವೆಲ್ಲವನ್ನು ಸ್ಪಷ್ಟವಾಗಿ ಅರಿತು ಉತ್ತಮ ವಿಚಾರವನ್ನು ತಿಳಿಯುವ ಭಾವನೆ ನಮ್ಮಲ್ಲಿ ಬೆಳೆದು ಬರಬೇಕು. ದೇವಸ್ಥಾನಗಳಿಗೆ ನೆರವಾದಂತೆ ಮಸೀದಿ ನಿರ್ಮಾಣಗಳಿಗೆ ರಾಜರುಗಳು ದಾನ ಧರ್ಮ ಮಾಡಿದ್ದಾರೆ ಖರ್ಜೂರ, ಸುಗಂಧದ್ರವ್ಯ ಮತ್ತು ನಮಾಝ್ ಇದಕ್ಕೆಲ್ಲ ಎಷ್ಟು ಮನ್ನಣೆ ನೀಡುತ್ತೇವೆಯೋ ಹಾಗೆಯೇ ಪರಸ್ಪರ ಅರಿತು ಹೃದಯವನ್ನು ಸ್ವಚ್ಛಗೊಳಿಸುವಲ್ಲಿ ನಿರತರಾಗೋಣ, ಧರ್ಮವನ್ನು ಅರಿಯೋಣ.

(ಸೀರತ್ ಸಮಾವೇಶದಲ್ಲಿ ಮಾಡಿರುವ ಭಾಷಣದ ಬರಹ ರೂಪ)
ನಿರೂಪಣೆ: ಸಲೀಮ್ ಬೋಳಂಗಡಿ