✍️ ಏ.ಕೆ. ಕುಕ್ಕಿಲ
ರಾಜಕೀಯ
ಸಾಮಾಜಿಕ
ಆರ್ಥಿಕ
ಈ ಮೂರೂ ಕ್ಷೇತ್ರಗಳಲ್ಲಿ ಭಾರತೀಯ ಮುಸ್ಲಿಮರು ಸವಾಲು ಗಳನ್ನು ಎದುರಿಸುತ್ತಿದ್ದಾರೆ. ರಾಜಕೀಯವಾಗಿ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ. ಸಾಮಾಜಿಕವಾಗಿ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ಆರ್ಥಿಕವಾಗಿ ಶೋಷಣೆಗೆ ಗುರಿಯಾಗುತ್ತಿದ್ದಾರೆ. ಸರ್ವರೂ ಸಮಾನರು ಮತ್ತು ಸರ್ವರಿಗೂ ಸಮಾನ ಹಕ್ಕುಗಳು ಎಂಬ ಘೋಷಣೆಯೊಂದಿಗೆ ಜಾರಿಗೊಂಡ ಸಂವಿಧಾನಕ್ಕೆ 7 ದಶಕಗಳು ಕಳೆದ ಬಳಿಕದ ಪರಿಸ್ಥಿತಿ ಇದು. ವರ್ಷದಿಂದ ವರ್ಷಕ್ಕೆ ಮುಸ್ಲಿಮರ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಶೋಷಣೆ ಸಹಜವಾಗುತ್ತಿದೆ. ದೌರ್ಜನ್ಯ ಮಾಮೂಲು ಅನ್ನಿಸಿಕೊಳ್ಳುತ್ತಿದೆ. 1500 ವರ್ಷಗಳ ಹಿಂದೆ ಮಕ್ಕಾ ಹೇಗಿತ್ತು? ಪ್ರವಾದಿ(ಸ) ಎದುರಿಸಿದ್ದ ಸವಾಲುಗಳು ಏನಾಗಿದ್ದುವು? ಅವರು ಕಂಡುಕೊAಡ ಪರಿಹಾರಗಳು ಏನಿದ್ದುವು? ಈ ಬಗ್ಗೆ ವಿಶ್ಲೇಷಣೆ ನಡೆಸಿದರೆ, ಈಗಿನ ದುರಿತ ಕಾಲವನ್ನು ಮೀರಿ ನಿಲ್ಲಲು ಮುಸ್ಲಿಮರಿಗೆ ಚೇತೋಹಾರಿ ಪಾಠಗಳು ಸಿಗಬಹುದು.
ಬಹುವಿಧ ಜನರನ್ನು ಒಳಗೊಂಡ ವಿಸ್ತಾರ ಸಮಾಜದಲ್ಲಿ ಒಂದು ಸಮುದಾಯ ಅಲ್ಪಸಂಖ್ಯೆಯಲ್ಲಿರುವುದು ಮತ್ತು ಶೋಷಣೆಗೆ ಒಳಗಾಗುವುದೆಲ್ಲ ವರ್ತಮಾನ ಭಾರತದಲ್ಲಿ ಮಾತ್ರ ಕಾಣಸಿಗುವ ಮತ್ತು ಈ ಹಿಂದೆಂದೂ ಕಂಡು ಕೇಳರಿಯದ ಅಭೂತಪೂರ್ವ ಸಂಗತಿ ಏನಲ್ಲ.
ತನ್ನ ಜೀವನದ ಅಮೂಲ್ಯ 53 ವರ್ಷಗಳನ್ನು ಮಕ್ಕಾದಲ್ಲಿ ಮತ್ತು 10 ವರ್ಷಗಳನ್ನು ಮದೀನಾದಲ್ಲಿ ಕಳೆದ ಪ್ರವಾದಿಯವರು(ಸ) ಈ ಶೋಷಿತ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದರು. ಭಾರತದಲ್ಲಿ ಇವತ್ತಿಗೂ ಅಸ್ತಿತ್ವ ಉಳಿಸಿಕೊಂಡಿರುವ ವರ್ಣ ವ್ಯವಸ್ಥೆಯ ತದ್ರೂಪು ಸ್ಥಿತಿ ಮಕ್ಕಾ ಮತ್ತು ಮದೀನಾದಲ್ಲಿ ಇದ್ದಿಲ್ಲವಾದರೂ ಇವೇ ಶೋಷಕ ವ್ಯವಸ್ಥೆಗೆ ಹೋಲುವ ಕ್ರಮವೊಂದು ಅರೇಬಿಯಾದಲ್ಲಿತ್ತು. ಅಲ್ಲಿ ಸಾಮಾಜಿಕ ಸ್ಥಾನಮಾನವು ವಂಶಾವಳಿಯ ಮೂಲಕ ನಿರ್ಧಾರವಾಗುತ್ತಿತ್ತು. ಪ್ರತಿಯೊಬ್ಬರೂ ತಮ್ಮ ಬುಡಕಟ್ಟಿನ ಐಡೆಂಟಿಟಿಯನ್ನು ಹೊಂದಿರುತ್ತಿದ್ದರು. ಬುಡಕಟ್ಟಿನ ಗುರುತು ಇಲ್ಲದ ವ್ಯಕ್ತಿಗೆ ರಕ್ಷಣೆ ಇರುತ್ತಿರಲಿಲ್ಲ. ಬುಡಕಟ್ಟು ಅಹಂ ಅತ್ಯಂತ ಪ್ರಬಲವಾಗಿತ್ತು. ಬುಡ ಕಟ್ಟಿಗೆ ನಿಷ್ಠೆ ಎಂಬುದು ಹೇಗಿರುತ್ತಿತ್ತೆಂದರೆ, ತನ್ನ ಬುಡಕಟ್ಟು ಸರಿಯಾದರೂ ತಪ್ಪಾ ದರೂ ತನ್ನ ಬುಡಕಟ್ಟನ್ನೇ ಬೆಂಬಲಿಸಬೇಕು ಎಂಬ ನಿಯಮ ಇತ್ತು. ಸಾಮಾನ್ಯವಾಗಿ,
ಅಂದಿನ ಸಮಾಜವನ್ನು ಮೂರು ರೀತಿಯಲ್ಲಿ ವರ್ಗೀಕರಿಸಲಾಗುತ್ತದೆ.
- ಬುಡಕಟ್ಟು ನಾಯಕರು, ಶ್ರೀಮಂತ ವ್ಯಾಪಾರಿಗಳು ಮತ್ತು ಕುಲೀನರು ಸೇರಿರುವ ಉನ್ನತ ವರ್ಗ. ಸಂಪತ್ತು, ಅಧಿಕಾರ ಮತ್ತು ಸಾಮಾಜಿಕ ಗೌರವ ಇವರಿಗೆ ಮೀಸ ಲಾಗಿತ್ತು.
- ಜೀತದಿಂದ ಮುಕ್ತಗೊಳಿಸಲಾದ ಸಾಮಾನ್ಯ ಬುಡಕಟ್ಟಿನ ಗುಲಾಮರು ಮಧ್ಯಮ ವರ್ಗವಾಗಿ ಗುರುತಿಸಿಕೊಂಡಿದ್ದರು.
- ಕೆಳ ವರ್ಗ. ಕಪ್ಪು ಬಣ್ಣದ ಜನರು, ಯುದ್ಧಕೈದಿಗಳು ಮತ್ತು ಗುಲಾಮ ತಾಯಿಗೆ ಹುಟ್ಟಿದವರು ಮುಂತಾದವರು ಮೂರನೇ ಮತ್ತು ಅತೀ ಕೆಳಗಿನ ವರ್ಗವಾಗಿ ಗುರುತಿಸಿ ಕೊಂಡಿದ್ದರು.
ಗುಲಾಮರಿಗೆ ಯಾವುದೇ ಕಾನೂನು ರಕ್ಷಣೆ ಇರಲಿಲ್ಲ. ಮಾಲಿಕರು ಅವರನ್ನು ಮಾರಾಟ ಮಾಡಬಹುದು, ಥಳಿಸ ಬಹುದು ಮತ್ತು ಹತ್ಯೆ ಮಾಡಬಹುದು. ಗುಲಾಮರನ್ನು ಜೀತ ಮುಕ್ತಗೊಳಿಸಿದರೂ ಅವರು ಇತರರಿಗೆ ಸಮಾನ ಸ್ಥಾನಮಾನ ಪಡೆಯುತ್ತಿರಲಿಲ್ಲ. ಅಂದಿನ ಕಾಲದ ಸಮಾಜದ ಇನ್ನೂ ಒಂದು ದೊಡ್ಡ ಕೊರತೆ ಏನೆಂದರೆ, ಮಹಿಳಾ ಸ್ಥಾನಮಾನ. ಆಕೆಗೆ ಆಸ್ತಿಯಲ್ಲಿ ಹಕ್ಕು ಇರಲಿಲ್ಲ. ಕೆಲವು ಬುಡಕಟ್ಟುಗಳಲ್ಲಿ ಹೆಣ್ಣು ಮಕ್ಕಳನ್ನು ಜೀವಂತ ಹೂಳುವ ಕ್ರಮ ಇತ್ತು. ಹಾಗಂತ,
ಪ್ರವಾದಿ ಮುಹಮ್ಮದ್(ಸ) ರಾತ್ರಿಯಿಂದ ಬೆಳಗಾಗುವುದರ ನಡುವೆ ಈ ಸ್ಥಿತಿಯನ್ನು ಬದಲಿಸಿಯೂ ಇರಲಿಲ್ಲ. ತಾನು ಪ್ರವಾದಿಯಾಗಿದ್ದಾನೆ ಎಂದು ಅವರು 40ನೇ ಪ್ರಾಯದಲ್ಲಿ ಘೋಷಿಸಿದರು. ಮಾತ್ರವಲ್ಲ, ಕಣ್ಣೆದುರಿನ ಈ ಎಲ್ಲ ಶೋಷಣೆ ಮತ್ತು ಅಸಮಾನತೆಗಳನ್ನು ಅವರು ಪ್ರಶ್ನಿಸಿದರು. ಹೀಗೆ ಮಕ್ಕಾದಲ್ಲಿ 13 ವರ್ಷಗಳ ಕಾಲ ಅವರು ಈ ಸುಧಾರಣೆಯ ಮಹಾನ್ ಪ್ರಯತ್ನ ನಡೆಸಿದರು. ಇದು ಸಲೀಸಿನದ್ದೇನೂ ಆಗಿರಲಿಲ್ಲ. ಸವಾಲುಗಳು ಮತ್ತು ಪಂಥಾಹ್ವಾನಗಳು ಇದ್ದೇ ಇದ್ದುವು. 53ನೇ ವಯಸ್ಸಿನಲ್ಲಿ ಅವರು ಮಕ್ಕಾದಿಂದ ಮದೀನಾಕ್ಕೆ ಹೋದರು.
ಮದೀನಾದಲ್ಲಿ ಔಸ್ ಮತ್ತು ಖಝ್ರತ್ ಎಂಬ ಬುಡಕಟ್ಟುಗಳ ನಡುವೆ ದೀರ್ಘ ಕಾಲದಿಂದ ಸಂಘರ್ಷ ನಡೆಯುತ್ತಿತ್ತು. ಜೊತೆಗೇ ಬನೂಕೈನುಕಾ, ಬನೂ ನಝೀರ್, ಬನೂ ಕುರೈಝಾ ಮತ್ತಿತರ ಯಹೂದಿ ಬುಡಕಟ್ಟುಗಳೂ ಸುಖವಾಗಿರಲಿಲ್ಲ. ಇದನ್ನು ಗಮನಿಸಿದ ಪ್ರವಾದಿಯವರು, ಈ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮತ್ತು ಮಾನವ ಸಮಾಜದ ಅತ್ಯುತ್ತಮ ಸಮುದಾಯವೊಂದನ್ನು ಸ್ಥಾಪಿಸುವ ಉದ್ದೇಶದಿಂದ ಇವರೆಲ್ಲರನ್ನೂ ಒಟ್ಟುಗೂಡಿಸಿ ಲಿಖಿತ ಸಂವಿಧಾನಕ್ಕೆ ಸಾಕ್ಷಿಯಾಗಿಸಿದರು. ಈ ಸಂವಿಧಾನವು 47ರಿಂದ 52ರಷ್ಟು ಷರತ್ತುಗಳನ್ನು ಒಳಗೊಂಡಿರುವುದಾಗಿ ಹೇಳಲಾಗುತ್ತದೆ. ಬುಡಕಟ್ಟು ಜನಾಂಗ ಅಥವಾ ಧರ್ಮದ ಆಧಾರದ ಬದಲು ರಾಜಕೀಯ ಮತ್ತು ಭದ್ರತಾ ಒಪ್ಪಂದದ ಆಧಾರದ ಮೇಲೆ ಒಂದು ಹೊಸ ಸಮಾಜವನ್ನು ನಿರ್ಮಿಸಲಾಯಿತು. ಎಲ್ಲರೂ ಸಮಾನವಾಗಿರುವ ಒಂದೇ ಸಮಾಜವಾಗಿ ಯಹೂದಿಯರು, ಮುಸ್ಲಿಮರು ಮತ್ತು ಇತರರನ್ನು ಈ ಸಂವಿಧಾನವು ಒಟ್ಟುಗೂಡಿಸಿತು. ಯಹೂದಿಯರು ಅವರ ಧರ್ಮದಂತೆ ಮತ್ತು ಮುಸ್ಲಿಮರು ತಮ್ಮ ಧರ್ಮದಂತೆ ಬದುಕುವುದಕ್ಕೆ ಈ ಲಿಖಿತ ಸಂವಿಧಾನ ಷರಾ ಬರೆಯಿತು. ಯಾರೂ ಇನ್ನೊಂದು ಧರ್ಮದಲ್ಲಿ ಹಸ್ತಕ್ಷೇಪ ನಡೆಸಬಾರದು ಎಂದೂ ಫರ್ಮಾನು ಹೊರಡಿಸಲಾಯಿತು. ರಕ್ತ ಸಂಬAಧ ಅಥವಾ ಬುಡಕಟ್ಟು ಆಧಾರದ ಮೇಲೆ ಅನ್ಯಾಯ ಮಾಡಬಾರದು, ಎಲ್ಲರೂ ನ್ಯಾಯಕ್ಕೆ ನಿಷ್ಠರಾಗಿರಬೇಕೇ ಹೊರತು ಬುಡಕಟ್ಟಿಗಲ್ಲ ಎಂದು ನಿರ್ಧರಿಸಲಾಯಿತು. ಹೀಗೆ ಬುಡಕಟ್ಟುತನವನ್ನು ಮೀರಿ ಸಮಾನವಾಗಿ ಬದುಕುವ ಸಮುದಾಯವನ್ನು ಈ ಸಂವಿಧಾನದ ಮೂಲಕ ಸಾಧಿಸಲಾಯಿತು. ಒಂದುರೀತಿಯಲ್ಲಿ,
ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಹಬಾಳ್ವೆಗೆ ಸಂಬಂಧಿಸಿ ಮೊದಲ ಲಿಖಿತ ಸಂವಿಧಾನವಾಗಿ ಈ ಮದೀನಾ ಸಂವಿಧಾನ ಗುರುತಿಸಿಕೊಂಡಿತು. ಹಾಗಂತ,
ಅAಬೇಡ್ಕರ್ ನೇತೃತ್ವದಲ್ಲಿ ರಚನೆಯಾಗಿ 1950 ಜನವರಿ 26ರಂದು ಜಾರಿಯಾದ ಭಾರತದ ಸಂವಿಧಾನವು ಇದೇ ಅಂತಃಸ್ಸತ್ವವನ್ನು ಒಳಗೊಂಡಿದೆ. ಸರ್ವರನ್ನೂ ಏಕರೆಂದು ಘೋಷಿಸಿ ಎಲ್ಲರ ಅಭಿವೃದ್ಧಿಯನ್ನೂ ಖಾತರಿಪಡಿಸುವ ಭರವಸೆಯನ್ನು ಈ ಸಂವಿಧಾನ ನೀಡುತ್ತದೆ. ಆದರೆ 7 ದಶಕಗಳ ಬಳಿಕವೂ ಸಂವಿಧಾನದ ಈ ಆಶಯವನ್ನು ಸಾಧಿಸಲಾಗಿಲ್ಲ ಎಂದು ಮಾತ್ರವಲ್ಲ, ಬರಬರುತ್ತಾ ಈ ಸಂವಿಧಾನದ ಅಸ್ತಿತ್ವವೇ ಅನಿಶ್ಚಿತತೆಯತ್ತ ಸಾಗುತ್ತಿದೆ. ಸಂವಿಧಾನದ ತತ್ವಗಳನ್ನೆಲ್ಲ ಮಣ್ಣುಪಾಲು ಮಾಡಿ, ಮುಸ್ಲಿಮರನ್ನು ಹೊಸ ದಲಿತ ಸಮುದಾಯವಾಗಿ ಶೋಷಿಸುವ ಪ್ರಕ್ರಿಯೆ ವೇಗ ಪಡೆಯುತ್ತಿದೆ. ಜನಸಂಖ್ಯೆಯಲ್ಲಿ 20% ಇದ್ದರೂ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗುತ್ತಲೇ ಬರುತ್ತಿದೆ. ಲೋಕಸಭೆಯಲ್ಲಿ ಕೇವಲ 24 ಮುಸ್ಲಿಮ್ ಸಂಸದರಿದ್ದಾರೆ. ಮುಸ್ಲಿಮರು ಬಹು ಸಂಖ್ಯಾತರಾಗಿರುವ ಕಾಶ್ಮೀರವನ್ನು ಬಿಟ್ಟರೆ ದೇಶದ ಇನ್ನಾವ ರಾಜ್ಯದಲ್ಲೂ ಮುಸ್ಲಿಮ್ ಮುಖ್ಯಮಂತ್ರಿಯಿಲ್ಲ. ಕೇಂದ್ರ ಸಚಿವ ಸಂಪುಟದಲ್ಲೂ ಮುಸ್ಲಿಮರಿಲ್ಲ. ದೇಶಾದ್ಯಂತ ಮುಸ್ಲಿಮರು ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ದೇಶದ ನೀತಿ ನಿರೂಪಣೆ ಮತ್ತು ನಿರ್ಧಾರ ಪ್ರಕ್ರಿಯೆಗಳಲ್ಲಿ ಮುಸ್ಲಿಮ್ ಧ್ವನಿ ಕ್ಷೀಣವಾಗುತ್ತಿದೆ. ಅಲ್ಲದೇ, ಮುಸ್ಲಿಮರನ್ನೇ ಗುರಿಯಾಗಿಸಿಕೊಂಡಿದೆ ಎಂದು ಹೇಳಲಾಗುತ್ತಿರುವ ಎಸ್ಐಆರ್, ಎನ್ಆರ್ಸಿ, ವಕ್ಫ್ ಮಸೂದೆಯಂಥ ಬೆಳವಣಿಗೆಗಳು ಮುಸ್ಲಿಮರಲ್ಲಿ ಅಭದ್ರತೆಯನ್ನು ಮೂಡಿಸುತ್ತಿವೆ. ಇದರ ಜೊತೆಗೇ,
ಸಾಮಾಜಿಕ ಸಮಸ್ಯೆಗಳೂ ದಿನೇ ದಿನೇ ಬಿಗಡಾಯಿಸುತ್ತಿವೆ. ಮುಸ್ಲಿಮರಿಗೆ ಬಾಡಿಗೆ ಮನೆ ನೀಡದಿರುವುದು, ಉಡುಪು ಮತ್ತು ಆಹಾರದ ಕಾರಣಕ್ಕಾಗಿ ತಾರತಮ್ಯ, ನಿಂದನೆ, ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳಲ್ಲಿ ಕಡಿಮೆ ಅಭಿವೃದ್ಧಿ; ಚರಂಡಿ, ಸರಕಾರಿ ಶಾಲೆ, ನೀರು ಇತ್ಯಾದಿ ಸೌಕರ್ಯಗಳು ಕಡಿಮೆ ಇರುವುದು ಇತ್ಯಾದಿಗಳೂ ನಡೆಯುತ್ತಿವೆ. ಇನ್ನು, ಆರ್ಥಿಕವಾಗಿಯೂ ಮುಸ್ಲಿ ಮರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸರಕಾರಿ ಉದ್ಯೋಗಗಳ ಆಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯಕ್ಕೆ ಮುಸ್ಲಿಮರು ಒಳಗಾಗುತ್ತಿದ್ದಾರೆ. ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ಸಂಖ್ಯೆ ಸಮಾಧಾನಕರವೂ ಆಗಿಲ್ಲ. ಸ್ವಯಂ ಉದ್ಯೋಗ, ಸಣ್ಣ ವ್ಯಾಪಾರ ಇತ್ಯಾದಿ ಅಸಂಘಟಿತ ವಲಯ ಮತ್ತು ಕಡಿಮೆ ಕೌಶಲ್ಯದ ಕ್ಷೇತ್ರಗಳಲ್ಲಿ ಮುಸ್ಲಿಮರು ಕೇಂದ್ರೀಕೃತರಾಗಿದ್ದಾರೆ. ಇತರ ಸಮುದಾಯಗಳಿಗೆ ಹೋಲಿಸಿದರೆ, ಮುಸ್ಲಿಮರ ಮಾಸಿಕ ತಲಾ ವೆಚ್ಚ ಕಡಿಮೆ. ಅಲ್ಲದೇ, ವ್ಯಾಪಾರ ಕ್ಷೇತ್ರಗಳಲ್ಲಿ ಧರ್ಮಾಧಾರಿತ ಬಹಿಷ್ಕಾರಕ್ಕೂ ತುತ್ತಾಗುತ್ತಿದ್ದಾರೆ.
ಆದರೆ,
ಇವು ಮತ್ತು ಇವುಗಳಾಚೆಗಿನ ಸವಾಲುಗಳಿಗೆ ಉತ್ತರ ಏನು ಅನ್ನುವುದು ಬಹಳ ಮುಖ್ಯ. ಇತಿಹಾಸದ ಓದಿನಿಂದ ಗೊತ್ತಾಗುವುದೇನೆಂದರೆ, ಯಾವುದೇ ಸಮುದಾಯ ಬಾಹ್ಯ ಸವಾಲುಗಳನ್ನು ಮೀರಿ ಬೆಳೆಯುವುದಕ್ಕೆ ಆಂತರಿಕ ಸಾಮರ್ಥ್ಯ, ಸಾಮುದಾಯಿಕ ಒಗ್ಗಟ್ಟು ಮತ್ತು ದೀರ್ಘಕಾಲೀನ ಯೋಜನೆಯಿಂದ ಮಾತ್ರ ಸಾಧ್ಯವಿದೆ. ಪ್ರವಾದಿ(ಸ)ಯವರು ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದರು. ಅವರು ಸುಧಾರಣೆಯನ್ನು ಕೈಗೆತ್ತಿಕೊಂಡಾಗ ಒಂಟಿಯಾಗಿದ್ದರು. ಆದರೆ, ಅವರು ಎದೆಗುಂದಲಿಲ್ಲ. ಮಾತ್ರವಲ್ಲ, ಸದೃಢ ಮತ್ತು ದಕ್ಷ ಸಮುದಾಯವಾಗಿ ಬೆಳೆಯಬೇಕೆಂಬ ಅವರ ಗಟ್ಟಿ ನಿಲುವನ್ನು ಸೋಲಿಸಲು ಯಾವ ಸವಾಲಿಗೂ ಸಾಧ್ಯವಾಗಲಿಲ್ಲ. ಶಿಕ್ಷಣ, ನೈತಿಕತೆ ಮತ್ತು ತಾಳ್ಮೆಯ ಮೂಲಕ ಅವರು ಈ ಸವಾಲುಗಳನ್ನು ಎದುರಿಸಿದರು. ಇವತ್ತಿಗೂ ಮುಸ್ಲಿಮರಿಗೆ ಇರುವುದು ಇದೇ ಮಾದರಿ.
ಶಿಕ್ಷಣ: ವಿಜ್ಞಾನ, ತಂತ್ರಜ್ಞಾನ, ಕಾನೂನು, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯ ಹೆಚ್ಚಿನ ಹೂಡಿಕೆ ಮಾಡಬೇಕು. ಮಹಿಳಾ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಶಿಕ್ಷಿತ ಮಹಿಳೆಯರು ಸಮುದಾಯದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಬಲವನ್ನು ವೃದ್ಧಿಸುತ್ತಾರೆ. ಸ್ಕಾಲರ್ಶಿಪ್ ಕೋಚಿಂಗ್ ಮತ್ತು ಮೆಂಟರ್ಶಿಪ್ ವ್ಯವಸ್ಥೆಗಳನ್ನು ಬಲವಾಗಿಸಬೇಕು. ಸರ್ವ ಮೌಲ್ಯಗಳನ್ನೂ ಒಳಗೊಂಡ ಮತ್ತು ದೇವಪ್ರೀತಿಯಿರುವ ಉನ್ನತ ವಿದ್ಯಾವಂತ ವ್ಯಕ್ತಿಗಳನ್ನು ಸಮುದಾಯ ಈ ಸಮಾಜಕ್ಕೆ ಒದಗಿಸುತ್ತಲೇ ಇರಬೇಕು. ಪ್ರತಿಭೆ ಮತ್ತು ಕೌಶಲ್ಯಕ್ಕೆ ಮಾತ್ರವೇ ಭವಿಷ್ಯದ ಜಗತ್ತಿನಲ್ಲಿ ಬೇಡಿಕೆ ಇದ್ದು, ಇವೆರಡರ ಜೊತೆಗೇ ಉನ್ನತ ನೈತಿಕ ಮೌಲ್ಯಗಳನ್ನು ಒಳಗೊಂಡ ಸಮುದಾಯದ ಯುವಪೀಳಿಗೆಯನ್ನು ನಿರಾಕರಿಸಲು ಯಾವ ಕಾರಣಕ್ಕೂ ಈ ದೇಶಕ್ಕೆ ಸಾಧ್ಯವಾಗದು.
ವ್ಯಾಪಾರ: ಪ್ರವಾದಿ(ಸ) ವ್ಯಾಪಾರಿಯಾಗಿದ್ದರು. ಆದರೆ ಅವರ ವ್ಯಾಪಾರ ಮಕ್ಕಾದ ಇತರ ವ್ಯಾಪಾರಿಗಳಿಗಿಂತ ಭಿನ್ನವಾಗಿತ್ತು. ಅವರು ಬಡ್ಡಿಯ ವಿರೋಧಿಯಾಗಿದ್ದರು. ಮಾರು ಕಟ್ಟೆಯಲ್ಲಿ ಉತ್ಪನ್ನಗಳ ಕೊರತೆ ಉಂಟಾಗಿ ಬೇಲೆ ಏರಿಕೆಯಾಗುವಂತೆ ನೋಡಿಕೊಳ್ಳುವುದಕ್ಕಾಗಿ ಉತ್ಪನ್ನ ದಾಸ್ತಾನು ಮಾಡುವ ವ್ಯಾಪಾರಿ ಅವರಾಗಿರಲಿಲ್ಲ. ಶ್ರೀಮಂತರು ಕಡ್ಡಾಯವಾಗಿ ದಾನ (ಝಕಾತ್) ನೀಡಬೇಕೆಂಬುದು ಅವರ ನಿಲುವಾಗಿತ್ತು. ಅದೇವೇಳೆ, ಕಾರ್ಮಿಕನ ಬೆವರು ಆರುವುದಕ್ಕಿಂತ ಮೊದಲು ವೇತನ ಕೊಟ್ಟು ಬಿಡಬೇಕು ಎಂಬುದು ಅವರ ಸಿದ್ಧಾಂತವಾಗಿತ್ತು.
ವ್ಯಾಪಾರದಲ್ಲಿ ಸುಳ್ಳು ಹೇಳಬಾರದು ಎಂದೂ ಅವರು ನಿಯಮ ಮಾಡಿದ್ದರು. ಆದ್ದರಿಂದ ಮುಸ್ಲಿಮ್ ಸಮುದಾಯ ಕೌಶಲ್ಯ ಅಭಿವೃದ್ಧಿಗೆ ಒತ್ತು ಕೊಡುವುದರ ಜೊತೆಗೇ ಪ್ರಾಮಾಣಿಕ ವ್ಯಾಪಾರದ ಪಟ್ಟುಗಳನ್ನು ಕಲಿತುಕೊಳ್ಳಬೇಕು. ಝಕಾತ್ ಮತ್ತು ವಕ್ಫ್ ಆದಾಯವನ್ನು ಗರಿಷ್ಠ ಸದ್ಬಳಕೆ ಮಾಡುವತ್ತ ಗಮನ ಹರಿಸಬೇಕು. ಉನ್ನತ ಶಿಕ್ಷಣ, ಆರೋಗ್ಯ, ಸಣ್ಣ ಕೈಗಾರಿಕೆ, ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ಇತ್ಯಾದಿಗಳಿಗಾಗಿ ವಕ್ಫ್ ಆದಾಯಗಳನ್ನು ಬಳಸುವ ಯೋಜಿತ ಮತ್ತು ಪಕ್ಕಾ ವೃತ್ತಿಪರ ಪ್ರಯತ್ನಗಳಾಗಬೇಕು. ವೃತ್ತಿ ವೈವಿಧ್ಯತೆಯನ್ನು ಹೆಚ್ಚಿಸಬೇಕು.
ಸಾಮುದಾಯಿಕ ಐಕ್ಯತೆ: ಮದೀನಾ ಸಂವಿಧಾನವು ಯಹೂದಿ, ಮುಸ್ಲಿಮ್ ಮತ್ತು ಇತರ ಸಮುದಾಯಗಳ ನಡುವೆ ಐಕ್ಯತೆ ತರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು. ಬಂಧುತ್ವ ನಿರ್ಮಾಣದಲ್ಲಿ ಅತಿದೊಡ್ಡ ಮಾದರಿ ಯಾವುದೆಂದರೆ, ಅದು ಮದೀನಾ ಸಂವಿಧಾನ. ದೇಶದ ಇತರ ಸಮುದಾಯಗಳೊಂದಿಗೆ ಸಹಕಾರ, ಸ್ನೇಹ, ವಿಶ್ವಾಸಗಳನ್ನು ಬಲಪಡಿಸಿಕೊಳ್ಳುವುದಕ್ಕೆ ಪ್ರಯತ್ನಗಳಾಗಬೇಕು. ಎಲ್ಲರನ್ನೂ ಒಳಗೊಳಿಸಿಕೊಂಡು ಮತ್ತು ವಿಶ್ವಾಸಕ್ಕೆ ಪಡಕೊಂಡು ಸಾಗುವುದಕ್ಕೆ ಸಮುದಾಯದಲ್ಲಿ ಹೆಚ್ಚು ಒತ್ತು ಸಿಗಬೇಕು. ಇಂಥ ಸ್ಥಿತಿ ನಿರ್ಮಾಣವಾಗದಂತೆ ತಡೆಯುವುದಕ್ಕೆ ವಿಭಜಕ ಶಕ್ತಿಗಳು ಪ್ರಯತ್ನಿಸುತ್ತಿರುವಾಗ ಮದೀನಾ ಸಂವಿಧಾನದAತೆ ಸಾಗಲು ಮುಸ್ಲಿಮ್ ಸಮುದಾಯ ಪ್ರತಿ ತಂತ್ರ ಹೆಣೆಯಬೇಕು.
ನೈತಿಕತೆ: ನೈತಿಕತೆಗೆ ಪ್ರವಾದಿ(ಸ) ಅತೀ ಹೆಚ್ಚು ಮಹತ್ವವನ್ನು ಕೊಟ್ಟಿದ್ದಾರೆ. ನ್ಯಾಯ ಮತ್ತು ಕರುಣೆಯು ಪ್ರವಾದಿಯ(ಸ) ಅತಿದೊಡ್ಡ ಗುಣ. ಮುಸ್ಲಿಮರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದನ್ನು ತಡೆಯುವುದಕ್ಕೆ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಹಿಂಸೆ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಬೇಕು. ಮಸೀದಿಗಳಲ್ಲಿ ಈ ಬಗ್ಗೆ ನಿರಂತರ ಜಾಗೃತಿಯ ಮಾತುಗಳನ್ನು ಹೇಳುತ್ತಿರ ಬೇಕು. ಅಶಿಸ್ತಿನ ಸಮುದಾಯ ಎಂಬ ಅಡ್ಡ ಹೆಸರನ್ನು ತೊಡೆದು ಹಾಕುವುದಕ್ಕೆ ನಿರಂತರ ಪ್ರಯತ್ನಗಳಾಗ ಬೇಕು. ಸಮುದಾಯದ ಯುವ ಪೀಳಿಗೆಯು ಶಿಸ್ತು, ಸಂಯಮವುಳ್ಳ ಮತ್ತು ಉನ್ನತ ಶಿಕ್ಷಣವನ್ನು ಪಡೆದ ಹಾಗೂ ನೈತಿಕ ಮೌಲ್ಯಗಳನ್ನು ಪಾಲಿಸುವ ಸಮುದಾಯವಾಗಿ ಮಾರ್ಪಟ್ಟರೆ ಬದಲಾವಣೆ ಕಷ್ಟವಲ್ಲ.
ಬಾಹ್ಯ ಸವಾಲುಗಳನ್ನು ಪ್ರಬಲ ಆಂತರಿಕ ಸುಧಾರಣೆ, ಸ್ವಾಭಿಮಾನ ಮತ್ತು ಸೃಷ್ಟಿಕರ್ತನೊಂದಿಗೆ ಅಚಲ ಸಂಬಂಧದ ಮೂಲಕವೇ ಸೋಲಿಸಬೇಕಾಗಿದೆ. ಪ್ರವಾದಿ(ಸ) ಬದುಕನ್ನು ಅಧ್ಯಯನ ನಡೆಸಿದರೆ ಸಿಗುವ ಪಾಠವೇ ಇದು.












