ಪ್ರಕೃತಿಯನ್ನು ಹೇಗೆ ನೋಡಬೇಕು? ಪ್ರವಾದಿ ಚರ್ಯೆಯ ಒಳನೋಟಗಳು

0
139

✍️ ಏ. ಕ್ಯೂ. ಸುಹೈಬ್‌, ಚಿಕ್ಕಮಗಳೂರು
ಎನ್ವಿರಾನ್ಮೆಂಟ್‌ ಇಂಜಿನಿಯರ್‌, ಟೆಕ್ನಿಕಲ್‌ ಯೂನಿವರ್ಸಿಟಿ ಆಫ್‌ ಮ್ಯೂನಿಚ್‌, ಜರ್ಮನಿ 

ಪ್ರವಾಹ, ಬರ, ಉಷ್ಣ ಅಲೆಗಳು ಮತ್ತು ಕಾಡ್ಗಿಚ್ಚಿನಂತಹ ತೀವ್ರ ಹವಾಮಾನ ವೈಪರೀತ್ಯಗಳಿಂದ ತತ್ತರಿಸಿರುವ ಜಗತ್ತಿನಲ್ಲಿ, ಪ್ರಕೃತಿಯನ್ನು ಜಯಿಸಿ ಅದರ ಹಿಡಿತದಿಂದ ನಮ್ಮನ್ನು ನಾವು ಮುಕ್ತಗೊಳಿಸಿಕೊಳ್ಳಬಹುದು ಎಂಬ ಆಧುನಿಕ ಸೆಕ್ಯುಲರ್‌ವಾದದ ಭ್ರಮೆಯು ಕಳಚಿಬಿದ್ದಿದೆ. ಪ್ರಕೃತಿಯ ಮೇಲೆ ಮಾನವನಿಗಿರುವ ಸಂಪೂರ್ಣ ಅವಲಂಬನೆಯನ್ನು ಇದು ಮತ್ತೆ ನೆನಪಿಸುತ್ತಿದ್ದು, ಸೃಷ್ಟಿಯ ಮಹಾವಿಸ್ಮಯದಲ್ಲಿ ನಮ್ಮ ಸರಿಯಾದ ಸ್ಥಾನವನ್ನು ಗುರುತಿಸಲು ನಮ್ಮನ್ನು ಒತ್ತಾಯಿಸುತ್ತಿದೆ. ಆದರೆ, ನಮಗೆ ಈ ಎಚ್ಚರಿಕೆ ಅರ್ಥವಾಗುತ್ತಿರುವಂತೆ ಕಾಣುತ್ತಿಲ್ಲ; ಪ್ರಕೃತಿಯೊಂದಿಗೆ ನಾವು ಸಂವಾದ ನಡೆಸುತ್ತಿದ್ದ ಭಾಷೆಯನ್ನೇ ಮರೆತುಬಿಟ್ಟಿದ್ದೇವೆ ಅನಿಸುತ್ತದೆ. ಹಸಿರು ಬೆಳವಣಿಗೆಯ ಸುಳ್ಳು ಆಶ್ವಾಸನೆಗಳು, ಸುಸ್ಥಿರ ಅಭಿವೃದ್ಧಿಯ ಮಂತ್ರ, ಜಾಗತಿಕ ತಾಪಮಾನ ತಡೆಗೆ ತಂತ್ರಜ್ಞಾನ-ಕೇಂದ್ರಿತ ಉಪಾಯಗಳು ಹಾಗೂ ನಮ್ಮ ಭೌತಿಕ ವ್ಯಾಮೋಹದ ದುರಾಶೆಯನ್ನು ಬಿಡಬೇಕಿಲ್ಲ ಎಂಬ ಭ್ರಮೆಗಳು ನಮ್ಮನ್ನು ಈಗಲೂ ಸೌಮ್ಯವಾಗಿ ಸೆಳೆಯುತ್ತಲೇ ಇವೆ. 

ಆದರೂ, ಪಶ್ಚಿಮ ದೇಶಗಳಲ್ಲೂ ಮತ್ತು ನಮ್ಮ ಸಾಂಪ್ರದಾಯಿಕ ಸಮಾಜಗಳಲ್ಲೂ ಮೊದಲಿನಿಂದಲೂ ಕೂಡ ಈ ಕುರಿತ ಅಸಮಾಧಾನದ ಧ್ವನಿಗಳು ಕೇಳುತ್ತಲೇ ಇದ್ದವು. ಪ್ರಕೃತಿಯ ಮೌಲ್ಯವನ್ನು ಹತಮಾಡುವುದನ್ನು ಮತ್ತು ಅದನ್ನು ಕೇವಲ ಒಂದು ನಿರ್ಜೀವ ವಸ್ತುವಿನಂತೆ ನೋಡುವಂತಹ ಧೋರಣೆಯನ್ನು ಅವರು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಪ್ರಕೃತಿಗೆ ಅದರದೇ ಆದ ಯಾವುದೇ ಸ್ವತಂತ್ರ ಬೆಲೆ ಇಲ್ಲ, ಅದು ಕೇವಲ ನಮ್ಮ ಉಪಯೋಗಕ್ಕೆ ಮಾತ್ರ ಇದೆ ಎಂದು ಭಾವಿಸುವುದನ್ನು ಅವರು ಒಪ್ಪಿಲ್ಲ. ಇಸ್ಲಾಮ್‌ ಧರ್ಮವು ಇದೇ ಪರಂಪರೆಗೆ ಸೇರಿದ್ದು, ಪರಿಸರದ ಬಿಕ್ಕಟ್ಟನ್ನು ಕೇವಲ ಒಂದು ಸಮಸ್ಯೆಯಾಗಿ ನೋಡದೆ, ಅದೊಂದು ಮೂಲಭೂತ ನೈತಿಕ ಮತ್ತು ಮೌಲ್ಯದ ಬಿಕ್ಕಟ್ಟು ಎಂದು ಪರಿಗಣಿಸುತ್ತದೆ. ಇದು ಕೇವಲ ತಂತ್ರಜ್ಞಾನದ ಬದಲಾವಣೆ, ಸಂಪನ್ಮೂಲಗಳ ಜೋಪಾನ ಅಥವಾ ಕಾರ್ಬನ್ ಹೊಗೆಯನ್ನು ಕಡಿತಗೊಳಿಸಿ ಭೌತಿಕ ಪ್ರಗತಿ ಸಾಧಿಸಬಹುದು ಎಂದು ವಾದಿಸುವ ವಿಷಯವಷ್ಟೇ ಅಲ್ಲ; ಇದು ಪ್ರಕೃತಿಯ ಅಸ್ತಿತ್ವದ ಪ್ರಶ್ನೆ ಮತ್ತು ಅದರೊಂದಿಗೆ ನಮಗಿರುವ ನಂಟಿನ ಅತಿ ಮುಖ್ಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿಯೇ ನಾವು ಪ್ರವಾದಿ ಮುಹಮ್ಮದ್(ಸ) ಅವರ ಮಾರ್ಗದರ್ಶನವನ್ನು ಗಮನಿಸಬೇಕು. ಆ ಬೋಧನೆಯನ್ನು ಬಿಡಿಬಿಡಿಯಾಗಿರುವ ಪ್ರವಾದಿ ವಚನ(ಹದೀಸ್‌)ಗಳ ಸಂಗ್ರಹವಾಗಿ ನೋಡಬಾರದು. ಬದಲಿಗೆ, ಅವರನ್ನು ‘ಅಲ್-ಇನ್ಸಾನ್ ಅಲ್-ಕಾಮಿಲ್’ (ಸಮಗ್ರ ಮಾನವ) ಎಂದು ಸ್ಮರಿಸಬೇಕು. ಮಾನವ ಕುಲ ಮತ್ತು ಪ್ರಕೃತಿ ಎರಡೂ ಸೃಷ್ಟಿಯಲ್ಲಿ ತಮ್ಮದೇ ಆದ ಸರಿಯಾದ ಸ್ಥಾನವನ್ನು ಹೊಂದಿರುವ, ಸಮಗ್ರವಾದ ನೈತಿಕ ಮತ್ತು ವಿಶ್ವ ದೃಷ್ಟಿಕೋನವನ್ನು ಅವರ ಜೀವನವು ನಮಗೆ ತೋರಿಸುತ್ತದೆ.

ಮೀಝಾನ್‌

ಮೊದಲನೆಯದಾಗಿ, ಪ್ರವಾದಿವರ್ಯ(ಸ) ರವರು ಸೃಷ್ಟಿಯ ಮೂಲಾಧಾರವಾಗಿರುವ ಸಮತೋಲನ, ಸರಿಪ್ರಮಾಣ ಮತ್ತು ಸಾಮರಸ್ಯದ ಕುರ್‌ಆನಿನ ತತ್ವವಾದ ‘ಮೀಝಾನ್‌’ನ ಸಮಗ್ರ ರೂಪವಾದ್ದರು. ಅಲ್ಲಾಹನು ಸೃಷ್ಟಿಯ ಮೇಲೆ ಏರ್ಪಡಿಸಿರುವ ಆ ಸಮತೋಲನವನ್ನು ಮೀರದೆ ಹೇಗೆ ಬದುಕಬೇಕು ಎಂಬುದನ್ನು ಅವರ ಇಡೀ ಜೀವನವೇ ನಮಗೆ ತೋರಿಸಿಕೊಟ್ಟಿದೆ. 

ಪವಿತ್ರ ಕುರ್‌ಆನ್‌ ಹೇಳುತ್ತದೆ: “ಆಕಾಶವನ್ನು ಅವನು ಉನ್ನತಗೊಳಿಸಿದನು ಮತ್ತು ತಕ್ಕಡಿ ಸ್ಥಾಪಿಸಿದನು. ಆದುದರಿಂದ ನೀವು ಸಮತೋಲನವನ್ನು ಕೆಡಿಸಬೇಡಿ” (55:7-8)

ಹಾಗಾಗಿ, ಅವರು ಪ್ರಕೃತಿಯ ಸಂಪನ್ಮೂಲಗಳನ್ನು ಬಳಸುವಾಗ ಮಿತಿಯನ್ನು ಕಾಯ್ದುಕೊಂಡರು ಮತ್ತು ಅವರ ಅನುಯಾಯಿಗಳು ಹಾಗೆ ಮಾಡದಿದ್ದಾಗ ಅವರನ್ನು ತಿದ್ದಿದರು. ಈ ತತ್ವವನ್ನು ತಿಳಿಸಿಕೊಡುವ ಎರಡು ಹದೀಸ್‌ ಇಲ್ಲಿವೆ:

ಅನಸ್ ಇಬ್ನ್ ಮಾಲಿಕ್(ರ) ರವರು ವರದಿ ಹೀಗೆ ಮಾಡಿದ್ದಾರೆ: “ಪ್ರವಾದಿ(ಸ) ರವರು ಒಂದು ಮುದ್ದ್‌ (ಅರ್ಧ ಲೀಟರ್) ನೀರಿನಲ್ಲಿ ವುಝೂ ಮಾಡುತ್ತಿದ್ದರು ಮತ್ತು ಒಂದು ಸಾಅ್‌ (ಸುಮಾರು ಎರಡು ಲೀಟರ್) ನಿಂದ ಐದು ಮುದ್ಧ್‌ (ಎರಡೂವರೆ ಲೀಟರ್) ವರೆಗೆ ನೀರಿನಲ್ಲಿ ಸ್ನಾನ ಮಾಡುತ್ತಿದ್ದರು.” (ಮುತ್ತಫಕುನ್ ಅಲೈಹ್)  

ಅಬ್ದುಲ್ಲಾ ಇಬ್ನ್ ಅಮ್ರ್(ರ) ರವರು ಹೀಗೆ ವರದಿ ಮಾಡುತ್ತಾರೆ: ಸಾದ್‌ ರವರು ವುಝೂ(ಅಂಗಶುದ್ಧಿ) ಮಾಡಿಕೊಳ್ಳುತ್ತಿದ್ದಾಗ ಸಂದೇಶವಾಹಕರು(ಸ) ಅಲ್ಲಿಂದ ಹಾದು ಹೋದರು. ಆಗ ಪ್ರವಾದಿವರ್ಯರು, “ಈ ಅತಿವ್ಯಯ ಮಾಡುವುದು ಏನು?” ಎಂದು ಕೇಳಿದರು. ಅದಕ್ಕೆ ಸಾದ್‌ ರವರು, “ವುಝೂ ಮಾಡುವಾಗಲೂ ನೀರಿನಲ್ಲಿ ಅತಿವ್ಯಯ ಇರುತ್ತದೆಯೇ?” ಎಂದು ಕೇಳಿದರು. ಆಗ ಪ್ರವಾದಿಯವರು, “ಹೌದು, ನೀನು ಹರಿಯುವ ನದಿಯ ದಂಡೆಯ ಮೇಲೆ ನಿಂತಿದ್ದರೂ ಸರಿ” ಎಂದರು. (ಮುಸ್ನದ್ ಅಹ್ಮದ್) 

ಭೋಗವಿಲಾಸಗಳ ಸಮಸ್ತ ಸೌಕರ್ಯಗಳೊಂದಿಗೆ ರಾಜೋಪಚಾರದ ಬದುಕನ್ನು ಬಾಳಬಹುದಾಗಿದ್ದ ಯಜಮಾನ, ಆಡಳಿತಗಾರ, ದೊರೆಯೊಬ್ಬ, ತನ್ನ ಚಪ್ಪಲಿಗಳನ್ನು ತಾನೇ ಹೊಲಿದುಕೊಳ್ಳುವುದನ್ನು, ಹರಿದ ಬಟ್ಟೆಗಳಿಗೆ ತಾನೇ ತೇಪೆ ಹಾಕಿಕೊಳ್ಳುವುದನ್ನು (ಅಲ್-ಅದಬ್ ಅಲ್-ಮುಫ್ರದ್), ಒರಟಾದ ಹಾಸಿಗೆಯ ಮೇಲೆ ನಿದ್ರಿಸುವುದನ್ನು ಹಾಗೂ ಮಿತವಾಗಿ ಉಣ್ಣುವುದನ್ನು ಸ್ವಯಂ ಆರಿಸಿಕೊಂಡರು. 

ತೌಹೀದ್, ಖಿಲಾಫತ್, ಅಮಾನತ್

ಎರಡನೆಯದಾಗಿ, ಪ್ರವಾದಿಯವರು ಕಲಿಸಿದ ಕಟ್ಟುನಿಟ್ಟಾದ ಪರಿಸರ ನೈತಿಕತೆಯು ದೇವರು, ಮಾನವರು ಮತ್ತು ಪ್ರಕೃತಿ ಎಂಬ ಮೂರು ಭಾಗಗಳ ನಡುವಿನ ಸಂಬಂಧವನ್ನು ತಿಳಿಸುತ್ತದೆ. ಕುರ್‌ಆನಿನ ಮೂರು ತತ್ವಗಳಾದ: ತೌಹೀದ್ (ದೈವಿಕ ಏಕತೆ), ಖಿಲಾಫತ್ (ಪಾಲನೆ ಅಥವಾ ಪ್ರತಿನಿಧಿತ್ವ), ಮತ್ತು ಅಮಾನತ್ (ನಂಬಿಕೆ/ಜವಾಬ್ದಾರಿ) ಇದರ ಹೃದಯಭಾಗದಲ್ಲಿದೆ. 

ತೌಹೀದ್; ಅಂದರೆ ದೇವನ ಏಕತೆಯು ಈ ನೈತಿಕತೆಯ ಅಸ್ತಿವಾರವಾಗಿದೆ. ಸೃಷ್ಟಿಯೆಲ್ಲವೂ ಅಂತಿಮವಾಗಿ ಅದರ ಸೃಷ್ಟಿಕರ್ತನಾದ ಅಲ್ಲಾಹನಿಗೆ ಸೇರಿದೆ ಮತ್ತು ಮಾನವರು ಅದರ ಪರಮ ಮಾಲೀಕರಲ್ಲ, ಕೇವಲ ಅದರ ಕಾಳಜಿಯನ್ನು ನೋಡಿಕೊಳ್ಳಲು ನೇಮಿಸಲ್ಪಟ್ಟವರು ಎಂದು ಇದು ಸ್ಪಷ್ಟಪಡಿಸುತ್ತದೆ. ಖಿಲಾಫತ್(ಪಾಲನೆ ಅಥವಾ ಪ್ರತಿನಿಧಿತ್ವ) ಮತ್ತು ಅಮಾನತ್(ನಂಬಿಕೆ) ಎಂಬ ಪರಿಕಲ್ಪನೆಗಳು ತೌಹೀದ್ ತತ್ವದಿಂದಲೇ ಮೂಡಿಬಂದಿವೆ. ಕುರ್‌ಆನ್‌ ಮಾನವರಿಗೆ ಸೃಷ್ಟಿಯಲ್ಲಿ ಒಂದು ವಿಶೇಷ ಸ್ಥಾನವನ್ನು ನೀಡಿದೆ: ಮಾನವರು ಭೂಮಿಯ ಮೇಲೆ ಖಲೀಫಾ ಅಂದರೆ ಪ್ರತಿನಿಧಿಗಳಾಗಿ ನೇಮಿಸಲ್ಪಟ್ಟಿದ್ದಾರೆ ಮತ್ತು ದೇವನ ಈ ಭೂಮಿಯ ಸೃಷ್ಟಿಯ ಬಗ್ಗೆ ಜವಾಬ್ದಾರಿಯನ್ನು ಹೊಂದಿದ್ದಾರೆ. ಇದು ಒಂದು ಸವಲತ್ತು ಮತ್ತು ಉತ್ತರದಾಯಿತ್ವದ ಭಾರ ಎರಡೂ ಆಗಿದೆ. 

ಆಧ್ಯಾತ್ಮಿಕತೆ

ಮೂರನೆಯದಾಗಿ, ಪ್ರವಾದಿವರ್ಯರು(ಸ) ಭೂಮಿಯ ಪಾವಿತ್ರ್ಯತೆಯನ್ನು ಗುರುತಿಸಿ ಮತ್ತು ಅದರ ಕಾಳಜಿ ವಹಿಸಲು ಆಧ್ಯಾತ್ಮಿಕವಾಗಿ ಹುರಿದುಂಬಿಸುವ ಮೂಲಕ ಮನುಷ್ಯರು ಮತ್ತು ಪ್ರಕೃತಿಯ ನಡುವಿನ ನಂಟನ್ನು ಗಟ್ಟಿಗೊಳಿಸಿದರು. 

ಜಾಬಿರ್ ಬಿನ್ ಅಬ್ದುಲ್ಲಾ(ರ) ರವರು ಹೀಗೆ ವರದಿ ಮಾಡಿದ್ದಾರೆ: ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು: “ಭೂಮಿಯು ನನಗೆ ಸಾಷ್ಟಾಂಗ ಮಾಡುವ ಜಾಗವಾಗಿ ಮತ್ತು ಶುದ್ಧೀಕರಣದ ಸಾಧನವಾಗಿಯೂ ಅನುಗ್ರಹಿಸಲ್ಪಟ್ಟಿದೆ…” (ಸುನನ್ ಅನ್-ನಸಾಯಿ 736). 

ಇದು ಭೂಮಿಯ ಬಗ್ಗೆ ಇರುವ ಅತ್ಯಂತ ಸುಂದರವಾದ ಕಲ್ಪನೆ. ಇದು ಮಾನವರು ವಾಸಿಸಲು ಮತ್ತು ಸಂಪನ್ಮೂಲಗಳನ್ನು ಪಡೆದುಕೊಳ್ಳಲು ಇರುವ ಕೇವಲ ಒಂದು ಜಡ ವಸ್ತು ಅಲ್ಲ; ಇದು ಮಾನವರು ದೇವನನ್ನು ಕಾಣುವ ಮತ್ತು ಆರಾಧಿಸುವ ಜಾಗವೂ ಹೌದು.

ಅನಸ್ ಇಬ್ನ್ ಮಾಲಿಕ್(ರ) ರವರು ಹೀಗೆ ವರದಿ ಮಾಡಿದ್ದಾರೆ: “ಪ್ರವಾದಿ(ಸ) ರವರು ಹೇಳಿದರು, ಯಾವನೇ ಮುಸ್ಲಿಮ್ ಒಂದು ಮರವನ್ನು ನೆಟ್ಟರೆ ಅಥವಾ ಬೀಜ ಬಿತ್ತಿದರೆ, ಮತ್ತು ಅದರಿಂದ ಯಾವುದಾದರೂ ಪಕ್ಷಿ, ಅಥವಾ ಮನುಷ್ಯ, ಅಥವಾ ಪ್ರಾಣಿ ತಿಂದರೆ, ಅದು ದಾನವೆಂದು (ಸದಖಾ) ಪರಿಗಣಿಸಲ್ಪಡುತ್ತದೆ.” (ಸಹೀಹ್ ಅಲ್-ಬುಖಾರಿ) 

ಅಬೂ ಹುರೈರಾ(ರ) ರವರು ವರದಿ ಮಾಡಿದ್ದಾರೆ: “ಪ್ರವಾದಿ(ಸ) ರವರ ಬಳಿ ಪ್ರಾಣಿಗಳ ಸೇವೆ ಮಾಡಿದರೆ ಸಿಗುವ ಪ್ರತಿಫಲದ ಬಗ್ಗೆ ಕೇಳಲಾಯಿತು. ಆಗ ಪ್ರವಾದಿ(ಸ) ರವರು ಹೇಳಿದರು, ಯಾವುದೇ ಜೀವಿಯ ಸೇವೆ ಮಾಡಿದರೂ ಅದಕ್ಕೆ ಪ್ರತಿಫಲವಿದೆ.” (ಸಹೀಹ್ ಅಲ್-ಬುಖಾರಿ)  

ಹಿಂದಿನ ಕೆಲವು ಪ್ಯಾರಗಳಲ್ಲಿ ಪ್ರಕೃತಿಯ ಬಗ್ಗೆ ಪ್ರವಾದಿಯವರು ಕಲಿಸಿದ ವಿವೇಕವನ್ನು ನಾನು ಕೇವಲ ಮೇಲ್ಮೈಯಾಗಿ ಮುಟ್ಟಿದ್ದೇನೆ. ಪ್ರವಾದಿಯನ್ನು ಮತ್ತು ದೇವನ ಸೃಷ್ಟಿಯನ್ನು ಪ್ರೀತಿಸುವವರು ತಮ್ಮ ಆ ಪ್ರೀತಿಯನ್ನು ಕಾಳಜಿ, ಮಿತತ್ವ ಮತ್ತು ಗೌರವದ ನೈತಿಕತೆಯಾಗಿ ಬದಲಾಯಿಸಿಕೊಳ್ಳುತ್ತಾರೆ ಎಂದು ನಾನು ಆಶಿಸುತ್ತೇನೆ; ಈ ನೈತಿಕತೆಯು ಜಗತ್ತಿಗೆ ಮುನ್ನಡೆಯಲು ಒಂದು ಮಾರ್ಗವನ್ನು ಒದಗಿಸಬಹುದು.