ಹೊಸದಿಲ್ಲಿ, ಜು. 23: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಾತುಕತೆಯಲ್ಲಿ ಏನು ಸಂಭವಿಸಿದೆ ಎಂದು ದೇಶಕ್ಕೆ ತಿಳಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಮಧ್ಯಸ್ಥಿತಿಕೆ ವಹಿಸಲು ಪ್ರಧಾನಿ ಆಗ್ರಹಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ ನೀಡಿರುವುದರಿಂದ ಈಕುರಿತು ದೇಶಕ್ಕೆ ಪ್ರಧಾನಿ ಸ್ಪಷ್ಟನೆ ನೀಡಬೇಕೆಂದು ರಾಹುಲ್ ಹೇಳಿದರು.
ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಮೋದಿ ಆಗ್ರಹಿಸಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದು ನಿಜವಾಗಿದ್ದರೆ ಎರಡು ದೇಶಗಳ ನಡುವಿನ 1972ರ ಶಿಮ್ಲಾ ಒಪ್ಪಂದ ಮತ್ತು ಭಾರತದ ಹಿತಾಸಕ್ತಿಗಳನ್ನು ವಂಚಿಸುವ ಕೆಲಸವನ್ನು ಮೋದಿ ಮಾಡಿದ್ದಾರೆ. ದುರ್ಬಲವಾದ ವಿದೇಶ ಸಚಿವಾಲಯದ ನಿರಾಕರಣೆ ಈ ವಿಷಯದಲ್ಲಿ ಅಗತ್ಯವಿಲ್ಲ. ಟ್ರಂಪ್ ಮೋದಿ ಭೇಟಿಯಲ್ಲಿ ಏನು ನಡೆದಿದೆ ಎಂದು ಮೋದಿ ಬಹಿರಂಗಪಡಿಸಬೇಕೆಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.












