ಸಲೀಮ್ ಬೋಳಂಗಡಿ
ದೇಶದ ಸ್ಥಿತಿ ಬಹಳ ಕಳವಳಕಾರೀ ಹಂತಕ್ಕೆ ತಲುಪುತ್ತಿದೆ. ಆಗಾಗ ನಡೆಯುತ್ತಿರುವ ಗುಂಪು ಹಲ್ಲೆಗಳು ದೇಶದ ಗೌರವವನ್ನೇ ಹಾಳು ಮಾಡುತ್ತಿದೆ. ಜಾನುವಾರು ಕಳ್ಳತನದ ಆರೋಪ ಹೊರಿಸಿ ಬಿಹಾರದಲ್ಲಿ ಮೂವರನ್ನು ಥಳಿಸಿ ಕೊಲ್ಲಲಾಯಿತು. ಅದರಲ್ಲಿ ಈರ್ವರು ದಲಿತರೂ ಸೇರಿದ್ದಾರೆ. ಗ್ರಾಮಕ್ಕೆ ಕೆಲವು ಗೋ ಕಳ್ಳರು ಬಂದಿದ್ದಾರೆಂದು ಪ್ರಚಾರ ಮಾಡಿದ ಬಳಿಕ ಈ ಹತ್ಯೆ ನಡೆದಿದೆ. ಇದೇ ದಿನ ಪವನ್ ಗೌಡ ಮತ್ತು ಆತನ ತಂದೆಯನ್ನು ಊರ ಜನರು ಮರಕ್ಕೆ ಕಟ್ಟಿ ಥಳಿಸಿದ ಘಟನೆ ಉತ್ತರ ಪ್ರದೇಶದ ಔಟಾ ಗ್ರಾಮದಲ್ಲಿ ನಡೆಯಿತು. ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರವಾದ ಮೇಲೆ ಎಂದಿನಂತೆ ಪೋಲೀಸರು ಎಚ್ಚೆತ್ತುಗೊಂಡಿದ್ದಾರೆ. ಬಳಿಕ ಹಲ್ಲೆಕೋರರಿಂದ ಬಿಡಿಸಿದ್ದಾರೆ. ಗುಂಪು ಹಲ್ಲೆಗಳು ಅಪಾಯಕಾರಿ ಎಂಬ ನೆಲೆಯಲ್ಲಿ ವ್ಯಾಪಕವಾಗುತ್ತಿದೆ. ಉತ್ತರ ಪ್ರದೇಶದಲ್ಲಂತೂ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿದ ಬಳಿಕ ಅಲ್ಲಿನ ಸ್ಥಿತಿ ಕಳವಳಕಾರಿಯಾಗಿದೆಯೆಂಬುದನ್ನು ಮಾನವ ಹಕ್ಕುಗಳ ಆಯೋಗ ನೀಡಿದ ಅಂಕಿ ಅಂಶಗಳನ್ನು ಗಮನಿಸಿದಾಗ ವೇದ್ಯವಾಗುತ್ತದೆ.
2016ರಿಂದ 2019ರ ಜೂನ್ 15ರ ತನಕದ ಅಂಕಿ ಅಂಶಗಳ ಪ್ರಕಾರ ದಲಿತ ಮತ್ತು ಅಲ್ಪ ಸಂಖ್ಯಾತ ವಿಭಾಗಗಳ ವಿರುದ್ಧ ದೇಶದಲ್ಲಿ ನಡೆದ ಅಕ್ರಮ ದಾಳಿ ದೌರ್ಜನ್ಯದಲ್ಲಿ ಶೇಕಡಾ 43ರಷ್ಟು ಉತ್ತರ ಪ್ರದೇಶದಲ್ಲಿ ನಡೆದಿದೆ, ಇದರಲ್ಲಿ ಗುಂಪು ಹಲ್ಲೆಗಳೂ ಸೇರಿವೆ. ಈ ಲೆಕ್ಕಾಚಾರದ ಪ್ರಕಾರ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಶೇಕಡಾ 54ರಷ್ಟು ಕಡಿಮೆಯಾಗಿವೆ. ಅಂದರೆ 43ರಿಂದ 19ಕ್ಕೆ ಇಳಿದಿದೆ. ಆದರೆ ದಲಿತರ ವಿರುದ್ಧದ ದಾಳಿ ಶೇಕಡಾ 41ರಷ್ಟು ಹೆಚ್ಚಾಗಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ. ಉತ್ತರ ಪ್ರದೇಶವು ದೇಶಕ್ಕೆ ಕೆಟ್ಟ ಸಂದೇಶ ನೀಡುತ್ತಿದೆ. ಈ ರೀತಿ ಕಾನೂನುಗಳನ್ನು ಜನರು ಕೈಗೆತ್ತಿಕೊಳ್ಳುತ್ತಿರುವುದು ದೇಶದ ಮಟ್ಟಿಗೆ ಅಪಾಯ ಕಾರಿಯಾಗಿದೆ. ದೇಶದ ಘನತೆಗೆ, ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿರುವಂತಹ ಈ ಹಲ್ಲೆ, ಕೊಲೆ ಸುಲಿಗೆಗಳಿಗೆ ಅಂತ್ಯ ಹಾಡಲು ಆಡಳಿತಗಾರರು ಮುಂದಾಗಬೇಕು. ಸ್ವತಂತ್ರಗೊಂಡು ಕೇವಲ ಏಳು ದಶಕಗಳು ಕಳೆಯುವಷ್ಟರಲ್ಲಿ ದೇಶವು ಈ ಹೀನಾಯ ಸ್ಥಿತಿಗೆ ತಲುಪಲಿದೆಯೆಂದು ಭಾರತದ ಸ್ವಾತಂತ್ರ್ಯ ಹೋರಾಟಗಾರರು ಅರಿತಿರುತ್ತಿದ್ದರೆ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರಲಿಲ್ಲವೇನೋ?
ಮಾನವೀಯತೆ ಎಂಬುದು ದಿನಗಳೆದಂತೆ ನಶಿಸುತ್ತಿದೆ. ಜಾನುವಾರುಗಳಿಗೆ ಕೊಡುವ ಮಹತ್ವ ಭಾರತೀಯ ಪ್ರಜೆಗಳಿಗೆ ಇಲ್ಲವೇ? ಎಂತಹ ಕಳವಳಕಾರೀ ಸ್ಥಿತಿಯಿದು? ಅಮಾಯಕರ ವಿರುದ್ದ ನಡೆಯುತ್ತಿರುವ ಹಲ್ಲೆಗಳಿಗೆ ಅಂತ್ಯ ವಿಲ್ಲವೇ? ಯಾಕೆ ಈ ಬಗ್ಗೆ ಆಡಳಿತಗಾರರು ಮೌನ ವಹಿಸುತ್ತಿದ್ದಾರೆ? ಅವರು ಪರೋಕ್ಷವಾಗಿ ಇಂತಹ ಹಲ್ಲೆ ದೊಂಬಿಗಳಿಗೆ ಪ್ರಚೋದನೆ ನೀಡುತ್ತಿದ್ದಾರೆಯೇ?
ಅವಿಭಜಿತ ದಕ್ಷಿಣ ಕನ್ನಡದಲ್ಲೂ ನೈತಿಕ ಪೊಲೀಸ್ ಗಿರಿ ಬಹಳಷ್ಟು ನಡೆದಿದೆ. ಹೆಚ್ಚಿನದ್ದೆಲ್ಲಾ ಜಾನುವಾರು ಸಾಗಾಟಗಾರರ ವಿರುದ್ಧ ನಡೆದ ಹಲ್ಲೆಗಳೇ. ಹಾಗಂತ ಅಕ್ರಮ ಜಾನುವಾರು ಸಾಗಾಟಗಾರರನ್ನು ಸಮರ್ಥಿಸುವುದಲ್ಲ. ಅವರು ಶಿಕ್ಷಾರ್ಹರು ಎಂಬುದು ನಿಸ್ಸಂದೇಹ. ಅವರನ್ನು ಕಾನೂನು ಶಿಕ್ಷೆಗೆ ಒಳಪಡಿಸಬೇಕಾಗಿದೆ. ಇಷ್ಟೊಂದು ಕಾನೂನು ಬಿಗಿಯಾಗಿದ್ದರೂ ಹಲ್ಲೆ ದೌರ್ಜನ್ಯಗಳು ನಡೆಯು ತ್ತಿದ್ದರೂ ಅಕ್ರಮ ಸಾಗಾಟ ದಿನೇ ದಿನೇ ವ್ಯಾಪಕವಾಗಲು ಕಾರಣವೇನಿರಬಹುದು ಎಂಬುದಕ್ಕೆ ಉತ್ತರವನ್ನು ಕೋಟಾದ ಪೋಲೀಸ್ ಠಾಣಾಧಿಕಾರಿಯವರ ಚಾಣಾಕ್ಷ ಕಾರ್ಯಾಚರಣೆ ಬಹಿರಂಗಪಡಿಸಿದೆ. ಹೌದು,
ಅಕ್ರಮ ಜಾನುವಾರು ಸಾಗಾಟಗಾರರು ಮತ್ತು ಪೋಲೀಸರ ನಡುವಿನ ಅಪವಿತ್ರ ಮೈತ್ರಿಯನ್ನು ಕೋಟಾ ಎಸ್.ಐ. ನಿತ್ಯಾನಂದ ಗೌಡರು ಬಯಲಿಗೆಳೆದಿದ್ದಾರೆ. ಈ ಅಕ್ರಮ ಜಾನುವಾರು ಸಾಗಾಟದಲ್ಲಿ ಜಿಲ್ಲೆಯ ಹತ್ತಾರು ಪೋಲೀಸರ ಹೆಸರು ಕೇಳಿ ಬರುತ್ತಿರುವುದು ಆತಂಕಕಾರೀ ವಿಷಯವಾಗಿದೆ. ಇಲ್ಲಿ ಜಾನುವಾರು ಕಳ್ಳತನ ವ್ಯಾಪಕವಾಗಲು ಇದೇ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ ತಾನೇ. ಕೋಟಾದ ಪೊಲೀಸ್ ಠಾಣಾಧಿಕಾರಿ ನಿತ್ಯಾನಂದ ಗೌಡರು ಪ್ರಕರಣವನ್ನು ನಿಭಾಯಿಸಿದ ರೀತಿ ಪ್ರಶಂಸನೀಯ. ಪ್ರತೀ ತಿಂಗಳು ಒಂದೂವರೆ ಲಕ್ಷ ರೂಪಾಯಿಯಷ್ಟು ಹಣ ಉಡುಪಿ ಜಿಲ್ಲೆಯ ಠಾಣೆಗಳಿಗೆ ಸಮಾದಾಯವಾಗುತ್ತಿದೆಯೆಂಬ ವರದಿಗಳೂ ಕೇಳಿ ಬರುತ್ತಿವೆ. ಒಂದು ಸಮುದಾಯದವರನ್ನು ನಿರಂತರ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲ ಮಾಧ್ಯಮಗಳು ಇನ್ನಾದರೂ ಕಣ್ತೆರೆದು ವಾಸ್ತವವನ್ನು ಅರಿಯಲು ಪ್ರಯತ್ನಿಸ ಬೇಕಾಗಿದೆ. ಜಾನುವಾರು ಸಾಗಾಟಗಾರರನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಕುಖ್ಯಾತಿಯೂ ಉಡುಪಿಗಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಪರಸ್ಪರ ಧರ್ಮಗಳ ನಡುವಿನ ಸಂಘರ್ಷಗಳಿಗೆ ಕಾರಣವಾಗುವಂತಹ ಇಂತಹ ಪೋಲೀಸರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇ ಬೇಕಾಗಿದೆ.












