ಸನ್ಮಾರ್ಗ ವಾರ್ತೆ
ನವಲಗುಂದ, ಸೆಪ್ಟೆಂಬರ್ 6: ಜಮಾಅತೆ ಇಸ್ಲಾಮಿ ಹಿಂದ್, ನವಲಗುಂದ ಘಟಕದ ವತಿಯಿಂದ “ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ) ರಾಜ್ಯವ್ಯಾಪಿ ಅಭಿಯಾನದ ಅಂಗವಾಗಿ ಸೀರತ್ ಪ್ರವಚನ ಹಾಗೂ ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮವು ಸೆಪ್ಟೆಂಬರ್ 6ರಂದು ಮಧ್ಯಾಹ್ನ 3 ಗಂಟೆಗೆ ನವಲಗುಂದದ ಅಂಬೇಡ್ಕರ್ ಭವನ, ಕಳ್ಳಿ ಮಠ ಓಣಿಯಲ್ಲಿ ನಡೆಯಿತು.
ಕಾರ್ಯಕ್ರಮವು ಖಾಲಿದ್ ಶೇಖ್ ಅವರ ಪವಿತ್ರ ಕುರ್ಆನ್ ಪಠಣದೊಂದಿಗೆ ಆರಂಭವಾಯಿತು. ಜಮಾಅತೆ ಇಸ್ಲಾಮಿ ಹಿಂದ್, ನವಲಗುಂದದ ಕಾರ್ಯದರ್ಶಿ ಜನಾಬ್ ಜಾಫರ್ ಸಾದಿಕ್ ಅವರು ಸ್ವಾಗತಿಸಿದರು.
ಮುಖ್ತಾರ್ ಅಹ್ಮದ್. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಸೀರತ್ ಅಭಿಯಾನದ ಉದ್ದೇಶ ಮತ್ತು ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಹಾಗೂ ಸಂದೇಶದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್, ಧಾರವಾಡ ಜಿಲ್ಲಾ ಸಂಚಾಲಕರಾದ ಜನಾಬ್ ಅಬ್ದುಲ್ ಖಾದರ್ ಬೆಳಗಲಿ ಅವರು “ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ) ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಿದರು. ಪ್ರವಾದಿ ಮುಹಮ್ಮದ್ಅ (ಸ)ವರ ಜೀವನವು ಸತ್ಯ, ನ್ಯಾಯ, ಕರುಣೆ, ಸಹನೆ, ಪ್ರಾಮಾಣಿಕತೆ ಮತ್ತು ಮಾನವೀಯತೆಯ ಶ್ರೇಷ್ಠ ಮಾದರಿಯಾಗಿದೆ. ಅವರ ಸೀರತ್ನಿಂದ ಸ್ಫೂರ್ತಿ ಪಡೆದು ಸಮಾಜದಲ್ಲಿ ಶಾಂತಿ, ಸೌಹಾರ್ದ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಸಿದ್ಧಲಿಂಗೇಶ್ ಹಂಡಗಿ, ಡಾ. ಶಾದಾಬ್, ದಂತ ವೈದ್ಯರು, ಶ್ರೀ ಈರಣ್ಣ ಶೀಡಗಂಟಿ ಹಾಗೂ ಶ್ರೀ ಧ್ಯಾಮಣ್ಣ ಹೊನಕೋದರಿ ಅವರು ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕದ ಸಹಕಾರ್ಯದರ್ಶಿ ಜನಾಬ್ ರಿಯಾಜ್ ಅಹ್ಮದ್ ರೋಣ ಅವರು ವಹಿಸಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಸೀರತ್ನ ಮಾನವೀಯ ಮತ್ತು ನೈತಿಕ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪೌರಕಾರ್ಮಿಕರ ಸನ್ಮಾನ
ಕಾರ್ಯಕ್ರಮದ ಪ್ರಮುಖ ವಿಶೇಷತೆಯಾಗಿ ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯಕ್ಕಾಗಿ ಪ್ರತಿದಿನವೂ ಶ್ರಮಿಸುತ್ತಿರುವ ಪೌರಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸಮಾರಂಭವನ್ನು ಜನಾಬ್ ಗುಲ್ಜಾರ್ ಅಹ್ಮದ್ ಎಸ್. ಅವರು ನೆರವೇರಿಸಿದರು.
ನಗರವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಅವರ ಪರಿಶ್ರಮವನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದ ಅಭಿಯಾನದ ಸ್ಥಳೀಯ ಸಂಚಾಲಕರಾಗಿ ಜನಾಬ್ ಅಬ್ದುಲ್ ಖಾದರ್ ಕುನ್ನಿಭಾವಿ ಅವರು ಕಾರ್ಯನಿರ್ವಹಿಸಿದರು. ಕೊನೆಯಲ್ಲಿ ಜನಾಬ್ ಸಲೀಮ್ ಅಹ್ಮದ್ ಅವರು ಧನ್ಯವಾದಗಳನ್ನು ಅರ್ಪಿಸಿದರು.
ಸೀರತ್-ಎ-ನಬಿ (ಸ) ಅಭಿಯಾನದ ಮೂಲಕ ಪ್ರವಾದಿ ಮುಹಮ್ಮದ್ (ಸ) ಅವರ ಜೀವನ, ಚಾರಿತ್ರ್ಯ, ಕರುಣೆ, ನ್ಯಾಯ ಮತ್ತು ಮಾನವೀಯತೆಯ ಸಂದೇಶವನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಭಿಯಾನವು ಸಮಾಜದಲ್ಲಿ ಶಾಂತಿ, ಸೌಹಾರ್ದ, ಸಹಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸಲಿ ಎಂಬ ಆಶಯವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಯಿತು.












