ಸನ್ಮಾರ್ಗ ವಾರ್ತೆ
ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮನುಕುಲಕ್ಕೆ ತೆರೆದ ಪುಸ್ತಕ — ಕರುಣೆ, ಪ್ರೀತಿ ಮತ್ತು ಸತ್ಯದ ಸಂದೇಶ ಇಂದಿನ ಸಮಾಜಕ್ಕೆ ಅಗತ್ಯ
ಕೊಪ್ಪಳ, ಸೆ. 06: ಕ್ರಾಂತಿ ಎಂದರೆ ಸಂಘರ್ಷ, ಗಲಭೆ ಅಥವಾ ಹಿಂಸೆಯಲ್ಲ; ಬದಲಾಗಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ, ಸುಧಾರಣೆ ಹಾಗೂ ಮಾನವೀಯ ಮೌಲ್ಯಗಳ ಸ್ಥಾಪನೆಯಾಗಿದೆ. ಪ್ರವಾದಿ ಮುಹಮ್ಮದ್ (ಸ) ಅವರು ತಮ್ಮ 23 ವರ್ಷಗಳ ಪ್ರವಾದಿತ್ವದ ಅವಧಿಯಲ್ಲಿ ಇಂತಹ ಮಹತ್ವದ ಪರಿವರ್ತನೆಯನ್ನು ಜಗತ್ತಿನಲ್ಲಿ ತಂದರು ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ರಾಜ್ಯ ಘಟಕದ ಕಾರ್ಯದರ್ಶಿ ಮುಹಮ್ಮದ್ ಕುಂಞ ಹೇಳಿದರು.
ಕೊಪ್ಪಳದ ಸಾಹಿತ್ಯ ಭವನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕೊಪ್ಪಳ ಘಟಕದ ವತಿಯಿಂದ “ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)” ಎಂಬ ವಿಷಯದಡಿ ಹಮ್ಮಿಕೊಂಡಿದ್ದ ಸೀರತ್ ಅಭಿಯಾನ-2026ರ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರವಾದಿ ಮುಹಮ್ಮದ್ (ಸ) ಅವರ ಜೀವನದ ಪ್ರತಿಯೊಂದು ಹಂತವೂ ಪಾರದರ್ಶಕವಾಗಿದ್ದು, ಅದು ಇಡೀ ಮಾನವಕುಲಕ್ಕೆ ತೆರೆದ ಪುಸ್ತಕವಾಗಿದೆ. ಅವರು ಕೇವಲ ಬೋಧನೆ ಮಾಡುವುದಕ್ಕೆ ಸೀಮಿತರಾಗದೆ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜವನ್ನು ಪ್ರಾಯೋಗಿಕವಾಗಿ ಕಟ್ಟಿಕೊಟ್ಟರು ಎಂದು ಅವರು ಹೇಳಿದರು.
ಇಂದಿನ ಸಮಾಜದಲ್ಲಿ ಕರುಣೆ ಮತ್ತು ವಾತ್ಸಲ್ಯ ಕ್ಷೀಣಿಸುತ್ತಿದ್ದು, ಸ್ವಾರ್ಥ ಮತ್ತು ಹಗೆತನ ಹೆಚ್ಚುತ್ತಿದೆ. ಹೆತ್ತವರನ್ನು ಕಡೆಗಣಿಸುವುದು ಹಾಗೂ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂತಹ ಸಂದರ್ಭದಲ್ಲಿ ಪ್ರವಾದಿಯವರ ಕರುಣೆ, ಪ್ರೀತಿ ಮತ್ತು ಮಾನವೀಯತೆಯ ಸಂದೇಶವನ್ನು ಎಲ್ಲ ವರ್ಗದ ಜನರಿಗೆ ತಲುಪಿಸುವ ಅಗತ್ಯವಿದೆ ಎಂದರು.
ಇಂದು ‘ಪೋಸ್ಟ್-ಟ್ರೂತ್’ ಪರಿಸ್ಥಿತಿ ನಿರ್ಮಾಣವಾಗಿದ್ದು, ಸತ್ಯಕ್ಕಿಂತ ಸುಳ್ಳನ್ನು ಹೆಚ್ಚು ಬಲವಾಗಿ ಪ್ರತಿಪಾದಿಸುವ ಪ್ರವೃತ್ತಿ ಕಂಡುಬರುತ್ತಿದೆ. ಅಪನಂಬಿಕೆ ಮತ್ತು ದ್ವೇಷದ ವಾತಾವರಣವನ್ನು ನಿವಾರಿಸಲು ಪ್ರತಿಯೊಬ್ಬರೂ ಧೈರ್ಯದಿಂದ ಸತ್ಯದ ಪರ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಪ್ರವಾದಿ ಮುಹಮ್ಮದ್ (ಸ) ಅವರಿಗೆ ದೊರೆತ ಮೊದಲ ದೈವಿಕ ಸಂದೇಶವೇ ‘ಇಖ್ರಅ್’ — ಓದು ಎಂಬುದಾಗಿತ್ತು. ಜ್ಞಾನ, ಶಿಕ್ಷಣ ಮತ್ತು ವೈಚಾರಿಕತೆಯ ಮೂಲಕ ಅವರು ಅಜ್ಞಾನ ಮತ್ತು ಅಂಧಕಾರದಲ್ಲಿದ್ದ ಸಮಾಜವನ್ನು ಜಾಗೃತಗೊಳಿಸಿದರು. ಮದೀನಾದಲ್ಲಿ ಪ್ರೀತಿ, ಸಹೋದರತ್ವ ಮತ್ತು ಪರಸ್ಪರ ಗೌರವದ ಬುನಾದಿಯ ಮೇಲೆ ಸಮಾಜವನ್ನು ನಿರ್ಮಿಸಿದರು. ಪರಸ್ಪರ ಸಂಬಂಧಗಳು ಬಲಿಷ್ಠವಾದಾಗ ಮಾತ್ರ ಒಂದು ದೇಶ ಸುಭದ್ರವಾಗಲು ಸಾಧ್ಯ ಎಂದು ಅವರು ಹೇಳಿದರು.

ಪ್ರವಾದಿ ಮುಹಮ್ಮದ್ (ಸ) ಶಾಂತಿಯ ಜ್ಯೋತಿಯೂ ಹೌದು: ಶ್ರೀ ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು
ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ, ಅಳವಂಡಿ-ಹೊಳಗುಂದಿ-ಭಾವಿಹಳ್ಳಿಯ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ತಮ್ಮ ಮೇಲೆ ನಿಂದನೆ ಮತ್ತು ಅಪಮಾನ ಮಾಡಿದವರಿಗೂ ಕರುಣೆ ತೋರಿದ ಮಹಾತ್ಮ ಪ್ರವಾದಿ ಮುಹಮ್ಮದ್ (ಸ) ಅವರು ಕೇವಲ ಕ್ರಾಂತಿಯ ಜ್ಯೋತಿಯಲ್ಲ, ಶಾಂತಿಯ ಜ್ಯೋತಿಯೂ ಹೌದು ಎಂದು ಹೇಳಿದರು.
ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಪುಣ್ಯಭೂಮಿ. ಬಸವಣ್ಣನವರು ಸೇರಿದಂತೆ ನಾಡಿನ ಶರಣರು ‘ಇವ ನಮ್ಮವ’ ಎಂಬ ಸಮಾನತೆಯ ಸಂದೇಶ ಸಾರಿದ್ದಾರೆ. ಪ್ರವಾದಿ ಮುಹಮ್ಮದ್ (ಸ) ಸೇರಿದಂತೆ ಜಗತ್ತಿನ ಎಲ್ಲ ಮಹಾತ್ಮರ ಮೂಲ ಉದ್ದೇಶವೂ ಮಾನವ ಕಲ್ಯಾಣವೇ ಆಗಿದೆ ಎಂದು ಹೇಳಿದರು.
ಮೊದಲು ಮನುಷ್ಯ ಬದಲಾಗಬೇಕು; ನಂತರ ಕುಟುಂಬ, ಸಮಾಜ ಬದಲಾಗಿ ದೇಶ ಅಭಿವೃದ್ಧಿಯಾಗುತ್ತದೆ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲು ಆತ್ಮಾವಲೋಕನ ಅಗತ್ಯ. ನಾವು ಪರಸ್ಪರರಲ್ಲಿ ದೈವಿಕತೆಯನ್ನು ಕಂಡಾಗ ಮಾತ್ರ ನಿಜವಾದ ಸೌಹಾರ್ದತೆ ಮತ್ತು ಸಹಬಾಳ್ವೆ ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ಧರ್ಮಗಳ ಮೂಲ ಸಂದೇಶ ಮಾನವೀಯತೆಯೇ: ಡಾ. ಫಾದರ್ ಸುದೀಪ್ ಪೌಲ್
ಕೊಪ್ಪಳದ ಎಸ್.ಎಫ್.ಎಸ್. ಶಾಲೆಯ ಪ್ರಾಚಾರ್ಯರಾದ ಡಾ. ಫಾದರ್ ಸುದೀಪ್ ಪೌಲ್ ಮಾತನಾಡಿ, ಧರ್ಮಗಳು ಕೇವಲ ಬದುಕುವ ಮಾರ್ಗವನ್ನು ತೋರಿಸುವುದಲ್ಲ; ಮನುಷ್ಯನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿ ಸಮಾಜದಲ್ಲಿ ಶಾಂತಿ, ನ್ಯಾಯ ಮತ್ತು ಪ್ರೀತಿಯನ್ನು ಸ್ಥಾಪಿಸಬೇಕು ಎಂದರು.
ಕ್ರೈಸ್ತ ಧರ್ಮವು ಪ್ರೀತಿ, ಸೇವೆ ಮತ್ತು ಕ್ಷಮೆಯ ಮಾರ್ಗವನ್ನು ಬೋಧಿಸಿದರೆ, ಇಸ್ಲಾಂ ನ್ಯಾಯ, ಸಹನೆ, ಕರುಣೆ ಮತ್ತು ಮಾನವೀಯ ಹೊಣೆಗಾರಿಕೆಯನ್ನು ಬೋಧಿಸುತ್ತದೆ. ಪ್ರವಾದಿ ಮುಹಮ್ಮದ್ (ಸ) ಅವರ ಜೀವನವು ಈ ಮೌಲ್ಯಗಳಿಗೆ ಜೀವಂತ ಉದಾಹರಣೆಯಾಗಿದೆ. ಹಿಂದೂ ಧರ್ಮದ ‘ವಸುದೈವ ಕುಟುಂಬಕಂ’ ತತ್ವವೂ ಇಡೀ ವಿಶ್ವವನ್ನು ಒಂದು ಕುಟುಂಬವಾಗಿ ಕಾಣುವ ಸಂದೇಶ ನೀಡುತ್ತದೆ. ಹೀಗಾಗಿ ಎಲ್ಲ ಧರ್ಮಗಳ ಮೂಲ ಉದ್ದೇಶ ಮಾನವೀಯತೆಯನ್ನು ಎತ್ತಿಹಿಡಿಯುವುದೇ ಆಗಿದೆ ಎಂದು ಹೇಳಿದರು.
ಇಂದಿನ ಸಂದರ್ಭದಲ್ಲಿ ಭಿನ್ನತೆಗಳು ಹೆಚ್ಚುತ್ತಿರುವಾಗ ಇಂತಹ ಸೌಹಾರ್ದ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ನಾವೆಲ್ಲರೂ ಕುಟುಂಬ, ಸಮಾಜ ಮತ್ತು ದೇಶದಲ್ಲಿ ಶಾಂತಿಯ ದೂತರಾಗಿ, ಧರ್ಮಗಳ ನಡುವೆ ಸೇತುವೆ ನಿರ್ಮಿಸಿ, ಬಡವರು ಮತ್ತು ಅಗತ್ಯವಿರುವವರ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೌಲಾನ ಮಹಮ್ಮದ್ ಅಲಿ ಹಿಮಾಯತಿ, ಮೌಲಾನ ಸಿರಾಜ್ ಅಹಮದ್ ರಶಾದಿ, ಅಮ್ಜದ್ ಪಟೇಲ್, ಸುರೇಶ್ ಭೂಮರೆಡ್ಡಿ, ಈಶಣ್ಣ ಕೊಲ್ಹಳ್ಳಿ, ಎಂ. ಪಾಷಾ ಕಾಟನ್, ಎಂ.ಡಿ. ಆಸಿಫ್ ಕರ್ಕಿಹಳ್ಳಿ, ಮೀನಾಕ್ಷಿ ಬಣ್ಣದ ಬಾವಿ, ಅಲ್ಲಮ ಪ್ರಭು ಬೆಟ್ಟದೂರು, ಡಾ. ಮಹಂತೇಶ್ ಮಲ್ಲನಗೌಡರ್, ಸರೋಜಾ ಬಾಕಳೆ, ಜಿ.ಎಸ್. ಗೋನಾಳ, ಸಾಧಿಕ್ ಅಲಿ, ಸೈಯದ್ ಜಮೀರ್ ಖಾದ್ರಿ, ಶಾಹಿದ್ ಹುಸೇನ್ ತಹಸಿಲ್ದಾರ್, ಶಬ್ಬೀರ್ ಹುಸೇನ್ ತಹಸಿಲ್ದಾರ್, ಮುಸ್ತಫಾ ಕುದುರಿಮೋತಿ, ಶಾಬುದ್ದೀನ್ ಸಾಬ್ ನೂರ ಭಾಷಾ, ಶರಣಪ್ಪ ಸಜ್ಜನ್, ಸಬಿಹಾ ಪಟೇಲ್, ಉಮೇರಾ ಫಾರೂಕ್, ರಿಜವಾನ ಬೇಗಂ ಹಾಗೂ ಉಮ್ಮೆ ಸಲ್ಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆರಂಭದಲ್ಲಿ ಹಾಫೀಜ್ ಯಾಹೀಯಾ ನಬೀಲ್ ಅವರು ಕುರಾನ್ ಪಠಣ ಮಾಡಿದರು. ಮಹಮ್ಮದ್ ಫೈಹಿಮುದ್ದೀನ್ ಅವರು ಕನ್ನಡ ಅನುವಾದ ನೀಡಿದರು. ಜಮಾಅತೆ ಇಸ್ಲಾಮೀ ಹಿಂದ್ ಕೊಪ್ಪಳದ ಸಂಚಾಲಕ ಮೊಹಮ್ಮದ್ ದಿಲಾವರ್ ಅಂಬರ್ ಖಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊಹಮ್ಮದ್ ಫಯಾಜ್ ಶರೀಫ್ ಕಾರ್ಯಕ್ರಮ ನಿರೂಪಿಸಿದರು. ಕೊಪ್ಪಳ ಘಟಕದ ಅಧ್ಯಕ್ಷ ಸೈಯದ್ ಹಿದಾಯತ್ ಅಲಿ ವಂದಿಸಿದರು.












