ಲಂಡನ್ನಿನ ಗಾರ್ಡಿಯನ್‌ ಪತ್ರಿಕೆಯಲ್ಲಿ ಉಮರ್‌ ಖಾಲಿದ್‌

0
230

✍️ ಹನ್ನಾ ಎಲ್ಲಿಸ್-ಪೀಟರ್ಸನ್
ಬ್ರಿಟಿಷ್ ಪತ್ರಕರ್ತೆ ಮತ್ತು ದಕ್ಷಿಣ ಏಷ್ಯಾ ವರದಿಗಾರ್ತಿ, ದಿ ಗಾರ್ಡಿಯನ್‌

ತಿಹಾರ್ ಜೈಲಿನ ಗೋಡೆಗಳ ಹೊರಗೆ, ಉಮರ್‌ ಖಾಲಿದ್ ಅವರ ಹೆಸರನ್ನು ತಿಳಿದಿಲ್ಲದವರು ಭಾರತದಲ್ಲಿ ಕೆಲವೇ ಜನ ಇರಬಹುದು. ಕಳೆದ ದಶಕದಲ್ಲಿ ಮೊದಲು ಪ್ರಕರ ವಿದ್ಯಾರ್ಥಿ ಹೋರಾಟಗಾರನಾಗಿ ಮತ್ತು ನಂತರ 2019ರಲ್ಲಿ ದೇಶಾದ್ಯಂದ ಹಬ್ಬಿದ ಸರ್ಕಾರ ವಿರೋಧಿ ಪ್ರತಿಭಟನೆಗಳ ಮುಖವಾಗಿ ಮುಂಚೂಣಿಗೆ ಬಂದರು. ಇದು ನರೇಂದ್ರ ಮೋದಿ ಸರ್ಕಾರಕ್ಕೆ ಎದುರಾದ ಮೊದಲ ದೊಡ್ಡ ಸವಾಲಾಗಿತ್ತು. ಸೆಪ್ಟೆಂಬರ್ 2020 ರ ವೇಳೆಗೆ, ದೆಹಲಿಯಲ್ಲಿ ನಡೆದ ಮಾರಕ ಕೋಮು ಗಲಭೆಗಳಲ್ಲಿ “ಪ್ರಮುಖ ಸಂಚುಕೋರ” ಮತ್ತು “ಹಿಂಸಾತ್ಮಕವಾಗಿ ಆಡಳಿತ ಬದಲಾವಣೆ” ತರಲು ಸಂಚು ಹೂಡಿದ್ದಾರೆ ಎಂದು ಆರೋಪಿಸಿ ಉಮರ್‌ ಖಾಲಿದ್‌ನನ್ನು ಭಯೋತ್ಪಾದಕನೆಂದು ಬಂಧಿಸಿ ಜೈಲಿಗೆ ಹಾಕಲಾಯಿತು.

ಟಿವಿ ನಿರೂಪಕರು ಇಂದಿಗೂ ರಾತ್ರಿ ಸುದ್ದಿ ಪ್ರಸಾರಗಳಲ್ಲಿ ಉಮರ್‌ ಖಾಲಿದ್‌ ಹೆಸರನ್ನು ಬಳಸುತ್ತಾ ಮುಸ್ಲಿಂ ಭಯೋತ್ಪಾದಕ ಮತ್ತು ರಾಷ್ಟ್ರವಿರೋಧಿ ಎಂದು ಕರೆಯುತ್ತಾರೆ. ಎಡಪಂಥೀಯ ಕಾರ್ಯಕರ್ತರು ಪ್ರತಿಭಟನೆಗಳಲ್ಲಿ ಉಮರ್‌ ಖಾಲಿದ್‌ ಹೆಸರನ್ನು ಕೂಗುತ್ತಾರೆ ಮತ್ತು ಆತನ ಚಿತ್ರವಿರುವ ಟಿ-ಶರ್ಟ್‌ಗಳನ್ನು ಧರಿಸುತ್ತಾರೆ.

ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಕಾರ್ಯಕರ್ತರಿಗೆ, ಮೋದಿ ಆಡಳಿತದಲ್ಲಿ ಭಿನ್ನಮತ ದಮನದ ಪ್ರತೀಕವಾಗಿ ಉಮರ್‌ ಖಾಲಿದ್ ನಿಂತಿದ್ದಾರೆ. ಮೋದಿಯವರ ಭಾರತೀಯ ಜನತಾ ಪಾರ್ಟಿ (ಬಿಜೆಪಿ) 12 ವರ್ಷಗಳಿಂದ ಆಳುತ್ತಿದ್ದು, ವಿರೋಧಿಗಳನ್ನು ಮಟ್ಟಹಾಕಲು ನ್ಯಾಯಾಂಗ ವ್ಯವಸ್ಥೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.

ಮುಸ್ಲಿಂ ಮತ್ತು ಮಾನವ ಹಕ್ಕುಗಳ ಎಡಪಂಥೀಯ ಕಾರ್ಯಕರ್ತರಾಗಿರುವ ಉಮರ್‌ ಖಾಲಿದ್, ಭಾರತವನ್ನು ಜಾತ್ಯತೀತ ದೇಶದಿಂದ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿಯ ಹಿಂದೂ ರಾಷ್ಟ್ರೀಯವಾದಿ ಅಜೆಂಡಾದ ಅತ್ಯಂತ ಪ್ರಕರ ಟೀಕಾಕಾರರಾಗಿದ್ದಾರೆ. ದೇಶದ 200 ಮಿಲಿಯನ್ ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತರ ಕಿರುಕುಳ ಮತ್ತು ದೌರ್ಜನ್ಯವನ್ನು ಮೋದಿ ಸರ್ಕಾರವು ಉತ್ತೇಜಿಸುತ್ತಿದೆ ಎಂದು ಆರೋಪಿಸಿದ್ದಾರೆ. ಧರ್ಮ ಆಧಾರಿತ ತಾರತಮ್ಯದ ಎಲ್ಲಾ ಆರೋಪಗಳನ್ನು ಬಿಜೆಪಿ ಪದೇ ಪದೇ ನಿರಾಕರಿಸುತ್ತಾ ಬಂದಿದೆ.

ಉಮರ್‌ ಖಾಲಿದ್ ಸುಮಾರು ಆರು ವರ್ಷಗಳಿಂದ ವಿಚಾರಣೆಯಿಲ್ಲದೆ ಜೈಲಿನಲ್ಲಿರುವುದನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಅನ್ಯಾಯವೆಂದು ವ್ಯಾಪಕವಾಗಿ ಖಂಡಿಸಿವೆ. ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಮ್ದಾನಿ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ಸ್ವಂತ ಕೈಯಿಂದ ಬರೆದ ಪತ್ರವನ್ನು ಇತ್ತೀಚೆಗೆ ಕಳುಹಿಸಿದರು. ಇದು ಭಾರತ ಸರ್ಕಾರದಿಂದ ತೀವ್ರ ಆಕ್ರೋಶದ ಪ್ರತಿಕ್ರಿಯೆಗೆ ಕಾರಣವಾಯಿತು. ಭಾರತದ ನ್ಯಾಯಾಂಗ ವ್ಯವಸ್ಥೆಯು ಸ್ವತಂತ್ರವಾಗಿದೆ ಮತ್ತು ಉಮರ್‌ ಖಾಲಿದ್ ಅವರ ಮೇಲಿನ ಮೊಕದ್ದಮೆಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸಮರ್ಥಿಸಿತು.

ಬಂಧನದ  ಪರಿಸ್ಥಿತಿಗಳ ಕಾರಣದಿಂದಾಗಿ, ‘ದಿ ಗಾರ್ಡಿಯನ್’ ಪತ್ರಿಕೆಗೆ ಈ ಸಂದರ್ಶನಕ್ಕಾಗಿ ಖಾಲಿದ್ ಅವರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗಲಿಲ್ಲ, ಆದ್ದರಿಂದ ಪ್ರಶ್ನೆಗಳು ಮತ್ತು ಉತ್ತರಗಳನ್ನು ಕುಟುಂಬ ಮತ್ತು ಸ್ನೇಹಿತರ ಮೂಲಕ ರವಾನಿಸಲಾಯಿತು.

ತಾವು ನಿರಾಕರಿಸುವ ಆರೋಪಗಳನ್ನು ಎದುರಿಸುತ್ತಾ ಮತ್ತು ತಮ್ಮ ನಿಯಂತ್ರಣ ಮೀರಿದ ಪ್ರಚಾರ ಯಂತ್ರದೊಂದಿಗೆ ವ್ಯವಹರಿಸುತ್ತಾ ವರ್ಷಗಳನ್ನು ಕಳೆದ ನಂತರ, 38 ವರ್ಷ ವಯಸ್ಸಿನ ಅವರು ಸಂಪೂರ್ಣವಾಗಿ ಕುಸಿದುಹೋಗದಿರುವುದು ಕಷ್ಟಕರವಾಗಿತ್ತು ಎಂದು ಒಪ್ಪಿಕೊಳ್ಳುತ್ತಾರೆ.

“ನಿಮ್ಮನ್ನು ಕೇವಲ ಒಂದು ಬಿಂಬಕ್ಕೆ, ಅದು ನಕಾರಾತ್ಮಕವಾಗಿರಲಿ ಅಥವಾ ಧನಾತ್ಮಕವಾಗಿರಲಿ, ಸೀಮಿತಗೊಳಿಸಿದಾಗ, ನಿಮ್ಮ ಮನುಷ್ಯತ್ವವನ್ನು ಮಾತ್ರವಲ್ಲದೆ ಕೆಲವೊಮ್ಮೆ ನಿಮ್ಮ ಮಾನಸಿಕ ಸ್ಥಿಮಿತವನ್ನ ಸಹ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ನಿಮ್ಮ ಬಗ್ಗೆ ಸಹಾನುಭೂತಿ ಹೊಂದಿರುವವರು ಅಥವಾ ನಿಮ್ಮನ್ನು ನಿಮಗಿಂತ ದೊಡ್ಡವರಾಗಿ ಚಿತ್ರಿಸುವವರು ಕೂಡ, ನಾನು ನನ್ನದೇ ಆದ ದೌರ್ಬಲ್ಯ, ಭಯ ಮತ್ತು ಅಪೂರ್ಣತೆಗಳನ್ನು ಹೊಂದಿರುವ ಒಬ್ಬ ಮನುಷ್ಯ ಎಂಬುದನ್ನು ಮರೆತುಬಿಡುತ್ತಾರೆ. ಜೈಲಿನಲ್ಲಿ ಕಳೆದ ಈ ಸುದೀರ್ಘ ವರ್ಷಗಳು ನನ್ನ ಮನಸ್ಸಿಗೆ ಮತ್ತು ದೇಹಕ್ಕೆ ತೀವ್ರ ಹಾನಿಯನ್ನುಂಟುಮಾಡಿವೆ ಮತ್ತು ನನ್ನೊಳಗಿನ ಈ ಎಲ್ಲಾ ಆತಂಕಗಳನ್ನು ಮತ್ತಷ್ಟು ಹೆಚ್ಚಿಸಿವೆ.” ಎಂದು ಅವರು ಹೇಳಿದರು.

ಆದರೂ ಜೈಲಿನಲ್ಲಿ ಕಳೆದಿರುವ ವರ್ಷಗಳು ಮೋದಿ ಸರ್ಕಾರದ ಕುರಿತಾದ ಅವರ ನಿಲುವನ್ನು ಮೃದುಗೊಳಿಸಿಲ್ಲ. ಹಿಂದೂ ರಾಷ್ಟ್ರೀಯವಾದವು ಭಾರತದಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆದಿರುವಂತೆ, “ದ್ವೇಷ ಭಾಷಣ ಮತ್ತು ನರಮೇಧದ ಭಾಷೆಯ ಸಾಮಾನ್ಯೀಕರಣ ಮತ್ತು ಮಹಿಮೆಗೊಳಿಸುವಿಕೆ”ಯನ್ನು ಕಂಡು ಉಮರ್‌ ಖಾಲಿದ್ ತಮ್ಮ ಆತಂಕವನ್ನು ವ್ಯಕ್ತಪಸುತ್ತಾರೆ.

ಇಂದು, “ಭಾರತವು ಸತ್ಯೋತ್ತರ (post-truth) ಸಮಾಜವಾಗುವ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ” ಎಂದು ಅವರು ಹೇಳಿದರು.

ನಾವು ಅವರ ಕಾನೂನು ಪ್ರಕರಣದ ಬಗ್ಗೆ ಅಥವಾ ತಿಹಾರ್‌ನಲ್ಲಿನ ಅವರ ಪರಿಸ್ಥಿತಿಗಳ ಬಗ್ಗೆ ಚರ್ಚಿಸದಿರಲು ಒಪ್ಪಿಕೊಂಡೆವು, ಆದರೆ ಮೌನವಾಗಿರುವುದು ಒಂದು ಆಯ್ಕೆಯಲ್ಲ ಎಂದು ಖಾಲಿದ್ ಸ್ಪಷ್ಟಪಡಿಸಿದರು.

“ನೀವು ಒಟ್ಟಿಗೆ ಊಟ ಮಾಡಿದ ಸಹ ಕೈದಿಗಳೇ ನಿಮ್ಮ ಬಗ್ಗೆ ಗುಸುಗುಸು ಮಾಡುವುದನ್ನು, ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಭಯೋತ್ಪಾದಕ ಎಂದು ಕರೆಯುವುದನ್ನು ಕೇಳುತ್ತೀರಿ. ಈ ಪ್ರಚಾರವು ಜನಜೀವನದಲ್ಲಿ ನನ್ನನ್ನು ಅಮಾನವೀಯಗೊಳಿಸುತ್ತದೆ. ಮನುಷ್ಯತ್ವ ಎಂಬುದು ನನ್ನಂತಹ ಜನರಿಗೆ ನೀಡದ ಒಂದು ಸೌಲಭ್ಯವಾಗಿದೆ” ಎಂದು ಅವರು ಹೇಳಿದರು.

‘ಮೌನವು ಈ ಆಡಳಿತಕ್ಕೆ ಧೈರ್ಯ ತುಂಬುತ್ತದೆ’

ದಕ್ಷಿಣ-ಪೂರ್ವ ದೆಹಲಿಯ ಮುಸ್ಲಿಂ ಬಾಹುಳ್ಯ ಪ್ರದೇಶವಾದ ಜಾಮಿಯಾ ನಗರದಲ್ಲಿ ಬೆಳೆದ ಉಮರ್‌ ಖಾಲಿದ್, ಹಿಂದೂ ರಾಷ್ಟ್ರೀಯವಾದಿ ರಾಜಕೀಯದ ಉದಯವು ಹೇಗೆ ಸಮಾಜವನ್ನು ಧರ್ಮದ ಆಧಾರದಲ್ಲಿ ಒಡೆಯಲು ಪ್ರಾರಂಭಿಸಿತು ಮತ್ತು ಮುಸ್ಲಿಮರ ಹಕ್ಕುಗಳು ಹಾಗೂ ಘನತೆಯನ್ನು ಹೇಗೆ ಕಸಿದುಕೊಂಡಿತು ಎಂಬುದನ್ನು ತಾವೇ ಖುದ್ದಾಗಿ ಕಂಡಿರುವುದಾಗಿ ಹೇಳಿದರು.

“ಮುಸ್ಲಿಮರನ್ನು ಹೆಚ್ಚು ಹೆಚ್ಚು ದಬ್ಬಾಳಿಕೆಗೆ ಒಳಪಡಿಸುತ್ತಿದ್ದ, ಅಂಚಿಗೆ ಸರಿಸುತ್ತಾ ರಾಕ್ಷಸರಂತೆ ಬಿಂಬಿಸುತ್ತಿದ್ದ ಸಮಯದಲ್ಲಿ ನಾನು ಮುಸ್ಲಿಂ ಕೇರಿಯೊಂದರಲ್ಲಿ ಬೆಳೆದಿದ್ದೇನೆ. ಯಾವುದೇ ಸಂವೇದನಾಶೀಲ ವ್ಯಕ್ತಿಗೆ, ಈ ಎಲ್ಲಾ ಬೆಳವಣಿಗೆಗಳಿಂದ ಪ್ರಭಾವಿತನಾಗದೆ ಇರುವುದು ಅಸಾಧ್ಯ” ಎಂದು ಅವರು ಹೇಳಿದರು. 

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ತಮ್ಮ ಪಿಎಚ್‌ಡಿ ಅಧ್ಯಯನ ಮಾಡುವಾಗ, ಉಮರ್‌ ಖಾಲಿದ್  ಸರ್ಕಾರದಿಂದ ಅನುದಾನ ಪಡೆದ ಆ ಸಂಸ್ಥೆಯಲ್ಲಿ ಸಕ್ರೀಯವಾಗಿದ್ದ ವಿದ್ಯಾರ್ಥಿ ರಾಜಕೀಯವನ್ನು ಅಪ್ಪಿಕೊಂಡರು. ಆದರೆ ಎಡಪಂಥೀಯ ಸಕ್ರಿಯತೆ, ವೈಚಾರಿಕತೆ ಮತ್ತು ಚರ್ಚೆಯ ಭದ್ರಕೋಟೆಯಾಗಿ ದೀರ್ಘಕಾಲದಿಂದ ನೋಡಲ್ಪಟ್ಟಿದ್ದ ಕಲಿಕಾ ಕೇಂದ್ರವನ್ನು ಕೆಡವಲು ಬಯಸಿದ ಬಲಪಂಥೀಯ ಸಿದ್ಧಾಂತಿಗಳ ಗುರಿಯ ಕೇಂದ್ರಬಿಂದುವಾಗಿ ವಿಶ್ವವಿದ್ಯಾಲಯವು ಬದಲಾದಾಗ ಉಮರ್‌ ಖಾಲಿದ್‌ ಮುಂಚೂಣಿಗೆ ಬಂದರು.

2016ರಲ್ಲಿ ಜೆಎನ್‌ಯುವಿನಲ್ಲಿ ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ, ಭಾರತದ ಧ್ರುವೀಕೃತ ಮಾಧ್ಯಮವು ಅವರನ್ನು ದೇಶದ “ರಾಷ್ಟ್ರವಿರೋಧಿ” ಬೆದರಿಕೆ ಎಂದು ಖಂಡಿಸಿ ಸ್ಪೋಟಕ ವರದಿ ಪ್ರಕಟಿಸುತ್ತಿದ್ದಂತೆ ಉಮರ್‌ ಖಾಲಿದ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಯಿತು. ಆ ಕ್ಷಣದಿಂದ, “ನನ್ನ ಜೀವನವು ಎಂದಿಗೂ ಮೊದಲಿನಂತಿರಲಿಲ್ಲ” ಎಂದು ಖಾಲಿದ್ ಹೇಳಿದರು. ವಿಶ್ವವಿದ್ಯಾಲಯವು ಅವರು ಪಿಎಚ್‌ಡಿ ಪ್ರಬಂಧವನ್ನು ಸಲ್ಲಿಸುವುದನ್ನು ತಡೆಯಲು ಸಹ ಪ್ರಯತ್ನಿಸಿತು, ಇದನ್ನು ಅವರು ಹೈಕೋರ್ಟ್‌ನಲ್ಲಿ ಯಶಸ್ವಿಯಾಗಿ ಪ್ರಶ್ನಿಸಿದರು. ಇದು ಅವರ ಮೊದಲ ಪುಸ್ತಕವಾಗಿ ‘Fractured Communities’ (ಒಡೆದ ಸಮುದಾಯಗಳು) ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ.

2019 ರಲ್ಲಿ ಸರ್ಕಾರವು ಮುಸ್ಲಿಮರ ಮೇಲೆ ತಾರತಮ್ಯ ಮಾಡುತ್ತದೆ ಎಂದು ಪರಿಗಣಿಸಲ್ಪಟ್ಟ ಪೌರತ್ವ ಮಸೂದೆಯನ್ನು ಅಂಗೀಕರಿಸಿದ ನಂತರ ಬಿಜೆಪಿ ಸರ್ಕಾರದೊಂದಿಗೆ ಉಮರ್‌ ಖಾಲಿದ್ ಸಂಘರ್ಷವು ಅತ್ಯುನ್ನತ ಮಟ್ಟವನ್ನು ತಲುಪಿತು. ಜೆಎನ್‌ಯು ಕ್ಯಾಂಪಸ್ ಈ ಮಸೂದೆಯ ವಿರುದ್ಧದ ಪ್ರತಿಭಟನೆಗಳ ಕೇಂದ್ರ ಬಿಂದುವಾಯಿತು. ಮೋದಿ ಆಡಳಿತದ ವಿರುದ್ಧದ ಮಹತ್ವದ ಮೊದಲ ರಾಜಕೀಯ ಪ್ರತಿರೋಧಗಳಲ್ಲಿ ನೂರಾರು ಸಾವಿರಾರು ಜನರು ಭಾರತದ ನಗರಗಳು ಮತ್ತು ಪಟ್ಟಣಗಳಲ್ಲಿ ಮೆರವಣಿಗೆ ನಡೆಸಿದರು.

ಈ ಚಳುವಳಿಯಲ್ಲಿ ಉಮರ್‌ ಖಾಲಿದ್ ಪ್ರಮುಖ ವ್ಯಕ್ತಿಯಾಗಿದ್ದರು. ಈಗ ಪ್ರಸಿದ್ಧವಾಗಿರುವ ಅವರ ಭಾಷಣದಲ್ಲಿ ಜನರನ್ನು ಉದ್ದೇಶಿ ಹೀಗೆ ಹೇಳಿದರು: “ನಾವು ಹಿಂಸಾಚಾರಕ್ಕೆ ಹಿಂಸೆಯಿಂದ ಪ್ರತಿಕ್ರಿಯಿಸುವುದಿಲ್ಲ. ನಾವು ದ್ವೇಷಕ್ಕೆ ದ್ವೇಷದಿಂದ ಪ್ರತಿಕ್ರಿಯಿಸುವುದಿಲ್ಲ. ಅವರು ದ್ವೇಷವನ್ನು ಹರಡಿದರೆ, ನಾವು ಅದಕ್ಕೆ ಪ್ರೀತಿಯಿಂದ ಪ್ರತಿಕ್ರಿಯಿಸುತ್ತೇವೆ.”

ಆದರೆ, ಸರ್ಕಾರದ ಪ್ರತಿಕ್ರಿಯೆಯು ನಿರ್ದಯೆಯಿಂದ ಕೂಡಿತ್ತು. ಪ್ರತಿಭಟನೆಗಳನ್ನು ಮಾರಕ ಪೊಲೀಸ್ ಹಿಂಸಾಚಾರದಿಂದ ಎದುರಿಸಲಾಯಿತು ಮತ್ತು ಬಿಜೆಪಿಗೆ ಸಂಬಂಧಿಸಿದ ವ್ಯಕ್ತಿಗಳು ಮುಸ್ಲಿಂ ವಿರೋಧಿ ಮತ್ತು ಉದ್ರೇಕಕಾರಿ ಹಿಂಸಾತ್ಮಕ ಘೋಷಣೆಗಳನ್ನು ಕೂಗಿದರು. ಉದ್ವಿಗ್ನತೆ ಹೆಚ್ಚಾದಂತೆ, ಫೆಬ್ರವರಿ 2020 ರಲ್ಲಿ ದೆಹಲಿಯಲ್ಲಿ ಕೋಮು ಗಲಭೆಗಳು ಭುಗಿಲೆದ್ದವು. ಆನ್‌ಲೈನ್ ತಪ್ಪು ಮಾಹಿತಿಯಿಂದ ಪ್ರಚೋದಿಸಲ್ಪಟ್ಟ ಹಿಂದೂ ಗುಂಪುಗಳು ರಾಜಧಾನಿಯಾದ್ಯಂತ ದಾಂಧಲೆ ನಡೆಸಿ ಮಸೀದಿಗಳನ್ನು ಮತ್ತು ಮುಸ್ಲಿಂ ಹೆಸರುಗಳನ್ನು ಹೊಂದಿರುವವರನ್ನು ಅಥವಾ ಮುಂಜಿ ಮಾಡಿಸಿಕೊಂಡವರನ್ನು ಗುರಿಯಾಗಿಸಿಕೊಂಡವು. ಕೆಲವು ಮುಸ್ಲಿಮರು ಪ್ರತಿದಾಳಿ ನಡೆಸಿದರು.

ಹಿಂಸಾಚಾರವು ಮೂರು ದಿನಗಳ ಕಾಲ ಮುಂದುವರಿಯಿತು ಮತ್ತು ಪ್ರಾಣ ಕಳೆದುಕೊಂಡ 53 ಜನರಲ್ಲಿ ಬಹುಪಾಲು ಮಂದಿ ಮುಸ್ಲಿಮರಾಗಿದ್ದರು. ಆದರೆ ದೆಹಲಿ ಪೊಲೀಸರು ತಮ್ಮ ಚಾರ್ಜ್‌ಶೀಟ್ ಸಲ್ಲಿಸಿದಾಗ, ಯಾವುದೇ ಬಿಜೆಪಿ ವ್ಯಕ್ತಿಗಳ ವಿರುದ್ಧ ಆರೋಪಗಳಿರಲಿಲ್ಲ ಮತ್ತು ಬಹಳ ಕಡಿಮೆ ಸಂಖ್ಯೆಯ ಹಿಂದೂ ದಂಗೆಕೋರರನ್ನು ಮಾತ್ರ ಹೆಸರಿಸಲಾಗಿತ್ತು. ಬದಲಾಗಿ, ಆ ಸಮಯದಲ್ಲಿ 1,000 ಮೈಲು ದೂರದಲ್ಲಿದ್ದ ಉಮರ್‌ ಖಾಲಿದ್ ಅವರೇ ಗಲಭೆಗಳ “ಮಾಸ್ಟರ್ ಮೈಂಡ್” ಎಂದು ಆರೋಪಿಸಲಾಯಿತು.

ಉಮರ್‌ ಖಾಲಿದ್‌ ಮತ್ತು ಹತ್ತಕ್ಕೂ ಹೆಚ್ಚು ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ವಿದ್ಯಾರ್ಥಿ ಹೋರಾಟಗಾರರು, “ಸಶಸ್ತ್ರ ದಂಗೆ”ಯ ಮೂಲಕ “ದೇಶದ ಮೇಲೆ ಪೂರ್ವಯೋಜಿತ ದಾಳಿ”ಯನ್ನು ಸಂಘಟಿಸುವ ಸಾಧನವಾಗಿ “ಕೋಮು ಗಲಭೆಗಳನ್ನು ವಿನ್ಯಾಸ ಮಾಡಿದ್ದಾರೆ” ಎಂದು ಆರೋಪಿಸಲಾಯಿತು.

ಉಮರ್‌ ಖಾಲಿದ್ ಈ ಆರೋಪಗಳನ್ನು “ಡಿಸ್ಟೋಪಿಯನ್” (dystopia-ಭಯಾನಕ ಸಮಾಜ) ಎಂದು ಬಣ್ಣಿಸಿದರು. ಏಳು ತಿಂಗಳ ನಂತರ ದೆಹಲಿಯಲ್ಲಿರುವ ಅವರ ಕುಟುಂಬದ ಮನೆಗೆ ಬಂದ ಪೊಲೀಸರು ದೇಶದ ಅತ್ಯಂತ ಕಠಿಣ ಭಯೋತ್ಪಾದನಾ ಕಾನೂನುಗಳ ಅಡಿಯಲ್ಲಿ ಹಾಗೂ ಇತರ ಗಂಭೀರ ಆರೋಪಗಳೊಂದಿಗೆ ಅವರನ್ನು ಬಂಧಿಸಿದರು. ಅಂದಿನಿಂದ, ದೆಹಲಿ ಗಲಭೆಗಳ ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ತಿರುಚಿದ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ನಕಲಿ ಮಾಡಿದ ಆರೋಪಗಳನ್ನು ದೆಹಲಿ ಪೊಲೀಸರು ಎದುರಿಸುತ್ತಿದ್ದಾರೆ. ಈವರೆಗೂ ಅವರು ಈ ಆರೋಪಗಳಿಗೆ ಪ್ರತಿಕ್ರಿಯಿಸಿಲ್ಲ.

ಈ ಪ್ರಕರಣದಲ್ಲಿ ಹೆಸರಿಸಲಾಗಿರುವ ಇತರರಿಗೆ ಈಗಾಗಲೇ ಜಾಮೀನು ಸಿಕ್ಕಿದ್ದರೂ, ಉಮರ್ ಖಾಲಿದ್ ಅವರ ಕಾನೂನು ಹೋರಾಟ ಮಾತ್ರ ಕಠಿಣ ಸವಾಲಾಗಿ ಉಳಿದುಕೊಂಡಿದೆ. ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಬೇಕಿದ್ದ ನ್ಯಾಯಾಧೀಶರು ಅದನ್ನು ನಿರಂತರವಾಗಿ ಮುಂದೂಡುತ್ತಾ ಬಂದಿದ್ದಾರೆ ಹಾಗೂ ಕೆಲವರು ತಮ್ಮ ವಿವೇಚನೆಯಿಂದ ವಿಚಾರಣೆಯಿಂದ ದೂರ ಉಳಿದಿದ್ದಾರೆ. ಸಲ್ಲಿಕೆಯಾದ ಎಲ್ಲ ಅರ್ಜಿಗಳೂ ತಿರಸ್ಕರಿಸಲ್ಪಟ್ಟಿವೆ. ಉಮರ್‌ ಖಾಲಿದ್ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ವಾದಿಸುತ್ತ ಬಂದಿದ್ದರೂ, ಅವರ ಜಾಮೀನು ಅರ್ಜಿಗಳು ವಜಾಗೊಳ್ಳುವುದನ್ನು ಮಾತ್ರ ಮುಕ್ತವಾಗಿ ಸ್ವಾಗತಿಸಿದೆ. 

ಸ್ವಾತಂತ್ರ್ಯಕ್ಕಾಗಿ ಎಂದಿಗೂ ಈಡೇರದ ಭರವಸೆಗಳು “ತೀರಾ ಹೃದಯ ವಿದ್ರಾವಕವಾಗಿವೆ. ಕ್ರಮೇಣ ಭರವಸೆಯು ಸಾಯಲು ಪ್ರಾರಂಭಿಸಿತು. ಹಿಡಿದುಕೊಳ್ಳಲು ಯಾವುದೇ ಭರವಸೆ ಇಲ್ಲದೆ, ಜೈಲಿನಲ್ಲಿ ಬದುಕುವುದು ಅಸಾಧಾರಣವಾಗಿ ಕಷ್ಟವಾಗುತ್ತದೆ – ಇದು ನಿಮ್ಮ ಮೇಲೆ ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಭಾರೀ ನಷ್ಟವನ್ನು ಉಂಟುಮಾಡುತ್ತದೆ.” ಎಂದು ಉಮರ್‌ ಖಾಲಿದ್ ಹೇಳಿದರು. 

ಯಾವುದೇ ಸ್ಪಷ್ಟ ಅಂತ್ಯವಿಲ್ಲದೆ ಮತ್ತು ವಿಚಾರಣೆಯ ದಿನಾಂಕವು ನಿಗಧಿ ಮಾಡದೇ ಪೊಲೀಸ್ ತನಿಖೆಯು ಮುಂದುವರಿಯುತ್ತಿರುವಾಗ ಅವರು ಜೈಲಿನಲ್ಲಿಯೇ ಉಳಿದಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಭಾರತದ ಜೈಲುಗಳಲ್ಲಿ ಬಂಧಿಸಲ್ಪಟ್ಟಿರುವ ಹೆಚ್ಚುತ್ತಿರುವ ರಾಜಕೀಯ ಕೈದಿಗಳ ಹಕ್ಕುಗಳಿಗಾಗಿ ಧ್ವನಿ ಎತ್ತುವಲ್ಲಿ ಕ್ಷೀಣಿಸುತ್ತಿರುವ ವಿರೋಧ ಪಕ್ಷದ ವೈಫಲ್ಯಗಳ ಬಗ್ಗೆ ಉಮರ್‌ ಖಾಲಿದ್ ತಮ್ಮ ನಿರಾಶೆಯನ್ನು ಮುಚ್ಚಿಡುವುದಿಲ್ಲ. ಸಾಮಾಜಿಕ ಕಾರ್ಯಕರ್ತ ಫಾದರ್ ಸ್ಟ್ಯಾನ್ ಸ್ವಾಮಿ ಸೇರಿದಂತೆ ಕೆಲವರು ಕಂಬಿಗಳ ಹಿಂದೆಯೇ ಸಾವನ್ನಪ್ಪಿದ್ದಾರೆ.

“ಆರು ವರ್ಷಗಳು ಕಳೆದಿವೆ, ನಾನು ನಿಜವಾಗಿಯೂ ನಿರಾಶೆಗೊಂಡಿದ್ದೇನೆ ಮತ್ತು ಏಕಾಂಗಿಯಾಗಿದ್ದೇನೆ ಎಂದು ಭಾವಿಸುತ್ತೇನೆ. ವಿರೋಧ ಪಕ್ಷಗಳ, ನಾಗರಿಕ ಸಮಾಜ ಗುಂಪುಗಳ, ಜನರ ಚಳುವಳಿಗಳ ಮೇಲೆ ಸವಾರಿ ಮಾಡಿ ವೃತ್ತಿಜೀವನವನ್ನು ರೂಪಿಸಿಕೊಂಡ ಸೆಲೆಬ್ರಿಟಿ ಹೋರಾಟಗಾರರ  ಮೌನ ಈ ಆಡಳಿತಕ್ಕೆ ಮತ್ತಷ್ಟು ಭಿನ್ನಮತ ಹೊಂದಿದವರ ಬೆನ್ನಟ್ಟಲು ಧೈರ್ಯ ತುಂಬುತ್ತದೆ.” ಎಂದು ಹೇಳಿದರು.

ರಾತ್ರಿಗಳು ಉಮರ್‌ ಖಾಲಿದ್‌ಗೆ ಶಾಂತಿಯನ್ನು ತರುವ ಸಮಯವಾಗಿದೆ. ಒಮ್ಮೆ ತಮ್ಮ ಸೆಲ್‌ಗೆ ಹಿಂತಿರುಗಿದ ನಂತರ, ಮತ್ತು ವಾರ್ಡನ್‌ನ ಕೀಲಿ ಗೊಂಚಲುಗಳ ಸದ್ದು ಮೌನವಾಗಿ ಮರೆಯಾಗುತ್ತಿದ್ದಂತೆ, ಅವರ ಗೋಡೆಯ ಮೇಲೆ ಬರೆಯಲಾದ ಪದಗಳು – ಅವರ ಜರ್ನಲ್‌ನ ಬರಹಗಳಿಂದ ಹರಿದುಬಂದ ಉಲ್ಲೇಖಗಳು – ಅವರು ನಿದ್ರೆಗೆ ಜಾರುವ ಮೊದಲು ಅವರಿಗೆ ಸ್ವಲ್ಪ ಸಾಂತ್ವನವನ್ನು ನೀಡುತ್ತವೆ. ಸಾಮ್ರಾಜ್ಯಶಾಹಿ ವಿರೋಧಿ ಕ್ರಾಂತಿಕಾರಿ ಭಗತ್ ಸಿಂಗ್ ಚಿತ್ರದ ಪಕ್ಕದಲ್ಲಿ, ಉಮರ್‌ ಖಾಲಿದ್ ತಮ್ಮ ಪ್ರಸಿದ್ಧ ಮಾತುಗಳನ್ನು ಗೀಚಿದ್ದಾರೆ: “ನಾನು ಸೆರೆಯಲ್ಲೂ ಸ್ವತಂತ್ರನಾಗಿರುವ ಹುಚ್ಚು ಆತ್ಮ.”

ಕೃಪೆ: theguardian.com