ಸನ್ಮಾರ್ಗ ವಾರ್ತೆ
2013ರ ಅತ್ಯಾಚಾರ ಪ್ರಕರಣವೊಂದರಲ್ಲಿ 20 ದಿನಗಳ ತಾತ್ಕಾಲಿಕ ಜಾಮೀನು ಕೋರಿ ಆಸಾರಾಮ್ ಬಾಪು ಎಂದೇ ಪರಿಚಿತರಾಗಿರುವ ಧಾರ್ಮಿಕ ಮುಖಂಡ ಆಸುಮಲ್ ಹರಪಲಾನಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.
2001 ಮತ್ತು 2006ರ ನಡುವೆ ತಮ್ಮ ಆಶ್ರಮದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಗುಜರಾತ್ನ ಗಾಂಧಿನಗರದ ಸೆಷನ್ಸ್ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದ ನಂತರ 85 ವರ್ಷದ ಆಸಾರಾಮ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಆಸಾರಾಮ್ ಅವರನ್ನು ಈ ಪ್ರಕರಣದಲ್ಲಿ ಈಗಾಗಲೇ ಬಂಧಿಸಲಾಗಿದೆ, ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗಿದೆ, ಅಲ್ಲದೆ ಅವರು ವೈದ್ಯಕೀಯ ಕಾರಣಗಳಿಗಾಗಿ ತಾತ್ಕಾಲಿಕ ಜಾಮೀನು ಕೋರುತ್ತಿಲ್ಲ ಎಂದು ಅವರ ಪರ ವಕೀಲರು ಗುಜರಾತ್ ಹೈಕೋರ್ಟ್ಗೆ ತಿಳಿಸಿದರು.
ವಯಸ್ಸು ಮತ್ತು 13 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದ ಕಾರಣಕ್ಕಾಗಿ ಪ್ರತ್ಯೇಕ ಪ್ರಕರಣವೊಂದರಲ್ಲಿ ಆಸಾರಾಮ್ಗೆ 20 ದಿನಗಳ ಪರೋಲ್ ಮಂಜೂರು ಮಾಡಿದ ರಾಜಸ್ಥಾನ ಹೈಕೋರ್ಟ್ನ ಆಗಸ್ಟ್ 3ರ ಆದೇಶವನ್ನು ಅವರ ವಕೀಲರು ಉಲ್ಲೇಖಿಸಿದರು. ಪರೋಲ್ ನಿರಾಕರಿಸಲು ಅಧಿಕಾರಿಗಳು ನೀಡಿದ್ದ ಕಾರಣಗಳನ್ನು “ಯಾವುದೇ ಆಧಾರವಿಲ್ಲದ, ದಾರಿತಪ್ಪಿಸುವ ಮತ್ತು ಕಲ್ಪನೆಯ ಕಂತೆಗಳು” ಎಂದು ಹೇಳಿ ರಾಜಸ್ಥಾನ ಹೈಕೋರ್ಟ್ ತಿರಸ್ಕರಿಸಿತ್ತು.
ಆಸಾರಾಮ್ ಗುಜರಾತ್ ಅಧಿಕಾರಿಗಳ ಮುಂದೆ ಪರೋಲ್ಗಾಗಿ ಅರ್ಜಿ ಸಲ್ಲಿಸಿದ್ದರು, ಆದರೆ ಅವರ ಕೋರಿಕೆಯನ್ನು ತಿರಸ್ಕರಿಸಲಾಗಿತ್ತು. ತರುವಾಯ ಅವರು ತಮ್ಮ ಬಿಡುಗಡೆಗೆ ರಾಜ್ಯ ಸರ್ಕಾರ ಅಥವಾ ಪ್ರಾಸಿಕ್ಯೂಟಿಂಗ್ ಏಜೆನ್ಸಿಯಿಂದ ಯಾವುದೇ ಆಕ್ಷೇಪಣೆಯಿಲ್ಲ ಎಂದು ವಾದಿಸಿ ತಾತ್ಕಾಲಿಕ ಜಾಮೀನು ಕೋರಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ತಾತ್ಕಾಲಿಕ ಜಾಮೀನು ಕೋರಲು ಆಸಾರಾಮ್ ಯಾವುದೇ ಸ್ವತಂತ್ರ ಕಾರಣವನ್ನು ನೀಡಿಲ್ಲ ಎಂದು ವಾದಿಸಿದ ರಾಜ್ಯ ಸರ್ಕಾರವು ಅರ್ಜಿಯನ್ನು ವಿರೋಧಿಸಿತು. ಪ್ರತ್ಯೇಕ ಪ್ರಕರಣದಲ್ಲಿ ಪರೋಲ್ ಮಂಜೂರು ಮಾಡಿದ ರಾಜಸ್ಥಾನ ಹೈಕೋರ್ಟ್ನ ಆದೇಶವನ್ನು ಗುಜರಾತ್ ಪ್ರಕರಣದಲ್ಲಿ ಜಾಮೀನು ನೀಡಲು ಸಮರ್ಥನೆಯಾಗಿ ಬಳಸಿಕೊಳ್ಳಲಾಗದು ಎಂದು ಸರ್ಕಾರ ಹೇಳಿರುವುದಾಗಿ ‘ಲೈವ್ ಲಾ’ ವರದಿ ಮಾಡಿದೆ.
ಪರೋಲ್ ಹಕ್ಕಲ್ಲ ಮತ್ತು ಪ್ರತ್ಯೇಕ ಆಧಾರವಿಲ್ಲದೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ವಾದಿಸಿತು.
ಗುಜರಾತ್ ಹೈಕೋರ್ಟ್ ಆಸಾರಾಮ್ ಆರೋಗ್ಯಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಆದೇಶಗಳನ್ನು ಸಹ ಪರಿಗಣಿಸಿತು. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ (ಏಮ್ಸ್) ಸುಪ್ರೀಂ ಕೋರ್ಟ್ ವೈದ್ಯಕೀಯ ವರದಿಯನ್ನು ಕೇಳಿತ್ತು. ಆಸಾರಾಮ್ಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ, ಆದರೆ ತರಬೇತಿ ಪಡೆದ ಆರೈಕೆದಾರರಿಂದ ದಿನದ 24 ಗಂಟೆಯೂ ಸಹಾಯದ ಅಗತ್ಯವಿದೆ ಎಂದು ಆ ವರದಿಯಲ್ಲಿ ಕಂಡುಬಂದಿತ್ತು.
ಆಸಾರಾಮ್ ಅವರ ಆರೋಗ್ಯ ಹದಗೆಟ್ಟರೆ ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದ್ದನ್ನು ಉಲ್ಲೇಖಿಸಿದ ಹೈಕೋರ್ಟ್, ಈ ಹಂತದಲ್ಲಿ ಅವರ ತಾತ್ಕಾಲಿಕ ಜಾಮೀನು ಅರ್ಜಿಯನ್ನು ಪರಿಗಣಿಸಲು ಯಾವುದೇ ಕಾರಣ ಕಂಡುಬರುತ್ತಿಲ್ಲ ಎಂದು ಹೇಳಿರುವುದಾಗಿ ‘ಲೈವ್ ಲಾ’ ವರದಿ ಮಾಡಿದೆ.
ಆಸಾರಾಮ್ ವಿರುದ್ಧದ ಪ್ರಕರಣಗಳು
2001 ಮತ್ತು 2006ರ ನಡುವೆ ತಮ್ಮ ಆಶ್ರಮದಲ್ಲಿ 16 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗಾಂಧಿನಗರದ ಸೆಷನ್ಸ್ ನ್ಯಾಯಾಲಯವು ಜನವರಿ 2023ರಲ್ಲಿ ಆಸಾರಾಮ್ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
2013ರಲ್ಲಿ ತಮ್ಮ ಆಶ್ರಮದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಪ್ರತ್ಯೇಕ ಪ್ರಕರಣದಲ್ಲಿ ಜೋಧ್ಪುರದ ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 2018ರಲ್ಲಿ ಆಸಾರಾಮ್ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಭಾರತೀಯ ದಂಡ ಸಂಹಿತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೊ) ಮತ್ತು ಬಾಲ ನ್ಯಾಯ ಕಾಯ್ದೆಯ ಹಲವಾರು ನಿಬಂಧನೆಗಳ ಅಡಿಯಲ್ಲಿ ಅವರನ್ನು ದೋಷಿ ಎಂದು ನಿರ್ಣಯಿಸಲಾಗಿತ್ತು.
ಈ ವರ್ಷದ ಮೇ ತಿಂಗಳಿನಲ್ಲಿ, ರಾಜಸ್ಥಾನ ಹೈಕೋರ್ಟ್ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಆರೋಪಗಳಿಂದ ಆಸಾರಾಮ್ ಅವರನ್ನು ಖುಲಾಸೆಗೊಳಿಸಿತ್ತು. ಆದಾಗ್ಯೂ, ಅತ್ಯಾಚಾರ ಪ್ರಕರಣದಲ್ಲಿ ಅವರ ಮೇಲಿನ ದೋಷಾರೋಪಣೆಯನ್ನು ಅದು ಎತ್ತಿಹಿಡಿದಿತ್ತು.
ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಆಸಾರಾಮ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ ಪೀಠವು, ಭಾರತೀಯ ದಂಡ ಸಂಹಿತೆಯಡಿಯ ಅತ್ಯಾಚಾರದ ಆರೋಪ, ಪೋಕ್ಸೊ ಕಾಯ್ದೆಯಡಿಯ ಲೈಂಗಿಕ ದೌರ್ಜನ್ಯ ಮತ್ತು ಬಾಲ ನ್ಯಾಯ ಕಾಯ್ದೆಯಡಿಯ ಅಪರಾಧಗಳು ಸಾಬೀತಾಗಿವೆ ಎಂದು ಅಭಿಪ್ರಾಯಪಟ್ಟಿತ್ತು.












