ಎಸ್‌ಐಆರ್: ಭಾರತರತ್ನ ಪುರಸ್ಕೃತ ಸಿಎನ್‌ಆರ್ ರಾವ್ ಅವರ ಹೆಸರಿನ ಕಾಗುಣಿತ ವ್ಯತ್ಯಾಸಕ್ಕಾಗಿ ನೋಟಿಸ್‌

0
294

ಸನ್ಮಾರ್ಗ ವಾರ್ತೆ

ಭಾರತರತ್ನ ಪುರಸ್ಕೃತ ವಿಜ್ಞಾನಿ ಸಿಎನ್‌ಆರ್ ರಾವ್ ಅವರಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಭಾಗವಾಗಿ ತಮ್ಮ ಗುರುತನ್ನು ಸಾಬೀತುಪಡಿಸುವಂತೆ ಚುನಾವಣಾ ಆಯೋಗ ಕೇಳಿದೆ ಎಂದು ‘ದಿ ಹಿಂದೂ’ ಬುಧವಾರ ವರದಿ ಮಾಡಿದೆ.

ಹೆಸರಿನ ಕಾಗುಣಿತದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ರಾವ್ ಅವರಿಗೆ ನೋಟಿಸ್‌ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಹಳೆಯ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು “ಪ್ರೊ. (Prof) ಸಿಎನ್‌ಆರ್ ರಾವ್” ಎಂದು ಉಲ್ಲೇಖಿಸಿದ್ದರೆ, ಹೊಸ ಪಟ್ಟಿಯಲ್ಲಿ ಹೆಚ್ಚುವರಿ “f” ಸೇರಿ “ಪ್ರೊಫ್ಫ್‌ (Proff) ಸಿಎನ್‌ಆರ್ ರಾವ್” ಎಂದು ದಾಖಲಾಗಿರುವುದಾಗಿ 92 ವರ್ಷದ ವಿಜ್ಞಾನಿಗೆ ತಿಳಿಸಲಾಗಿದೆ. ಇದನ್ನು “ಸ್ವಯಂ-ವ್ಯತ್ಯಾಸ” (self-mismatch) ಎಂದು ವರ್ಗೀಕರಿಸಲಾಗಿದೆ.

2002 ರ ಮತದಾರರ ಪಟ್ಟಿಯಲ್ಲಿರುವ ಮತದಾರರು ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಆ ಪಟ್ಟಿಯಿಂದ ತಮ್ಮದೇ ವಿವರಗಳನ್ನು ಬಳಸಿದಾಗ, ಆ ವಿವರಗಳು ತಾಳೆಯಾಗದಿದ್ದರೆ ಅಂತಹ ವ್ಯತ್ಯಾಸವನ್ನು “ತಾರ್ಕಿಕ ವ್ಯತ್ಯಾಸಗಳು” (logical discrepancies) ಎಂದು ಕರೆಯಲಾಗುತ್ತದೆ. ತಾರ್ಕಿಕ ವ್ಯತ್ಯಾಸಗಳು ಪೋಷಕರ ಹೆಸರುಗಳಲ್ಲಿನ ವ್ಯತ್ಯಾಸ, ಪೋಷಕರೊಂದಿಗೆ ಕಡಿಮೆ ವಯಸ್ಸಿನ ಅಂತರ ಮತ್ತು ಪೋಷಕರ ಮಕ್ಕಳ ಸಂಖ್ಯೆ ಆರಕ್ಕಿಂತ ಹೆಚ್ಚಿರುವುದನ್ನೂ ಸೂಚಿಸಬಹುದು.

ಅಧಿಕಾರಿಗಳ ಮುಂದೆ ಹಾಜರಾಗುವಂತೆ ರಾವ್ ಅವರಿಗೆ ಸೂಚಿಸಲಾಗಿದೆ ಎಂದು ವರದಿ ಮಾಡಿರುವ ‘ದಿ ಹಿಂದೂ’, ಪತ್ರಿಕೆಯು ಸಂಪರ್ಕಿಸುವವರೆಗೆ ಅವರ ಪರಿಚಿತರಿಗೆ ಈ ನೋಟಿಸ್ ಬಗ್ಗೆ ತಿಳಿದಿರಲಿಲ್ಲ ಎಂದು ಸೇರಿಸಿದೆ.

ಘನಸ್ಥಿತಿ ಮತ್ತು ವಸ್ತು ರಸಾಯನಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ವಿಜ್ಞಾನಿಗೆ 2014 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.