ಸನ್ಮಾರ್ಗ ವಾರ್ತೆ
ರಾಯ್ಪುರ: ನವರಾತ್ರಿ ವೇಳೆ ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರು ಭಾಗವಹಿಸುವುದನ್ನು ನಿಷೇಧಿಸಬೇಕೆಂಬ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕರೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತವು ಸಂವಿಧಾನದಿಂದ ನಡೆಸಲ್ಪಡುತ್ತದೆ. ಅದು ಧರ್ಮವನ್ನು ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಖಾತರಿಪಡಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಛತ್ತೀಸ್ಗಢಕ್ಕೆ ಒಂದು ದಿನದ ಭೇಟಿ ನೀಡಿರುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ಮುಖ್ಯಸ್ಥರೂ ಆಗಿರುವ ಅಠಾವಳೆ, ಕೋಮು ಸೌಹಾರ್ದತೆ ಮತ್ತು ಅಂತರ-ಸಾಂಸ್ಕೃತಿಕ ಭಾಗವಹಿಸುವಿಕೆ ಭಾರತೀಯ ಸಮಾಜದ ಮೂಲಭೂತ ಮೌಲ್ಯಗಳಾಗಿವೆ ಎಂದು ಹೇಳಿದರು.
ಮೂರ್ತಿ ಪೂಜೆ ಮಾಡದವರು ಅಂತಹ ಧಮ೯ದ ಉತ್ಸವಗಳಿಂದ ದೂರವಿರಬೇಕೆಂದು ಮಹಾರಾಷ್ಟ್ರದ ವಿಎಚ್ಪಿ ಮುಖಂಡರು ಒತ್ತಾಯಿಸಿದ್ದರು. ಅಠಾವಳೆ ಈ ನಿಲುವನ್ನು ಅನುಚಿತವೆಂದು ಬಣ್ಣಿಸಿದರು.
“ಭಾರತವು ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಜೈನರು, ಬೌದ್ಧರು, ಲಿಂಗಾಯತರು, ಪಾರ್ಸಿಗಳು ಮತ್ತು ಇತರ ಹಲವು ಸಮುದಾಯಗಳ ನೆಲೆವೀಡಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಮತ್ತು ರಕ್ಷಣೆಯನ್ನು ನೀಡುತ್ತದೆ” ಎಂದು ಅವರು ಹೇಳಿದರು.
ವಿವಿಧ ಧರ್ಮಗಳ ಸಮುದಾಯಗಳ ಸದಸ್ಯರು ಪರಸ್ಪರರ ಹಬ್ಬಗಳಲ್ಲಿ ಭಾಗವಹಿಸಲು ಸಂಪೂರ್ಣ ಹಕ್ಕಿದೆ ಎಂದು ಸಚಿವರು ಎತ್ತಿ ತೋರಿಸಿದರು. ರಾಜಸ್ಥಾನದ ಅಜ್ಮೀರ್ ಷರೀಫ್ ದರ್ಗಾವನ್ನು ಸ್ಪಷ್ಟ ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಎಂಬುದನ್ನು ಗಮನಸೆಳೆದರು.
ಜಾತಿ ಆಧಾರಿತ ಮೀಸಲಾತಿಯ ಸುತ್ತಲಿನ ಚರ್ಚೆಗಳ ಬಗ್ಗೆಯೂ ಮಾತನಾಡಿದ ಅಠಾವಳೆ, ಮೀಸಲಾತಿಯನ್ನು ವಿರೋಧಿಸುವುದು ಸಂವಿಧಾನದ ಸ್ಪೂರ್ತಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದರು. ಸಮಾಜದ ದುರ್ಬಲ ಮತ್ತು ಹಿಂದುಳಿದ ವರ್ಗಗಳನ್ನು ಸಬಲೀಕರಣಗೊಳಿಸಲು ಮೀಸಲಾತಿ ನೀತಿಯನ್ನು ತರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತೆಯನ್ನು ನಿಷೇಧಿಸಿದ್ದರೂ, ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯಗಳು ಮುಂದುವರಿದಿವೆ. ಸಮಾಜದಿಂದ ಜಾತಿಪದ್ಧತಿಯು ಸಂಪೂರ್ಣವಾಗಿ ನಿರ್ಮೂಲನೆಯಾಗುವ ದಿನದಂದು ಸಮುದಾಯಗಳು ಮೀಸಲಾತಿಯನ್ನು ಬಿಟ್ಟುಕೊಡಲು ಸಿದ್ಧವಿರುತ್ತವೆ ಎಂದು ಅಠಾವಳೆ ಹೇಳಿದರು. ಆ ದಿನ ಬರುವವರೆಗೆ ಮೀಸಲಾತಿ ಜಾರಿಯಲ್ಲಿರಬೇಕು ಎಂದು ಹೇಳಿರುವುದುದಾಗಿ ವರದಿಯಾಗಿದೆ.












