ಮೋಹನ್ ಭಾಗವತ್ ಉಪನ್ಯಾಸ ಮತ್ತು ಕೆಲವು ಪ್ರಶ್ನೆಗಳು

0
294

✍️ ಸಂಜಯ್ ಕೆ. ಝಾ
ರಾಜಕೀಯ ವಿಶ್ಲೇಷಕರು

ಸತ್ಯ, ಪ್ರೀತಿ, ಐಕ್ಯತೆ, ಸಾಮರಸ್ಯ ಹಾಗೂ ಸಹಬಾಳ್ವೆ ಎಂಬುದು ಪ್ರಶ್ನಾತೀತ ಹಾಗೂ ಸಾರ್ವಕಾಲಿಕವಾಗಿ ಸ್ವೀಕೃತಗೊಂಡ ಮಹೋನ್ನತ ವಿಚಾರಗಳು. ಆದರೆ ಇದರ ಮರೆಯಲ್ಲಿ ವಂಚಕರೂ ಅಡಗಿಕೊಳ್ಳಬಲ್ಲರು. ಸುಳ್ಳು-ವಂಚನೆ, ದ್ವೇಷ-ಹಿಂಸೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ಮಾನ್ಯತೆಯನ್ನು ಪಡೆದುಕೊಳ್ಳಲು ಈ ಪುಷ್ಠಿದಾಯಕ ಹಾಗೂ ಸಾಂತ್ವನದ ನೆಲೆಯನ್ನೇ ಆಶ್ರಯಿಸುತ್ತವೆ. ದಾರ್ಶನಿಕರು, ಕವಿಗಳು, ಸಂತರು ಹಾಗೂ ಸಮಾಜ ಸುಧಾರಕರು ಈ ಜ್ಞಾನವನ್ನು ಜಗತ್ತಿಗೆ ನೀಡಿದ್ದಾರೆ. ಅಂತಃಸಾಕ್ಷಿಯಿರುವ ರಾಜಕಾರಣಿಗಳೂ ಸಹ ಇದೇ ಹಾದಿಯಲ್ಲಿ ಸಾಗುತ್ತಾರೆ. 

ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಭಾರತೀಯರೊಂದಿಗೆ ಸಭೆ ನಡೆಸುವಾಗ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಸತ್ಯ, ಪ್ರೀತಿ ಹಾಗೂ ಒಗ್ಗಟ್ಟಿನ ಕುರಿತು ಮಾತನಾಡಿದರು. ಎಲ್ಲರಿಂದಲೂ ಸ್ವೀಕಾರಾರ್ಹತೆ ಪಡೆಯುವ ತವಕವು ಅವರ ಪ್ರತಿಯೊಂದು ಮಾತಿನಲ್ಲೂ ಎದ್ದು ಕಾಣುತ್ತಿತ್ತು. ಬುದ್ಧ ಹಾಗೂ ಗಾಂಧಿಯವರು ಹುಟ್ಟಿದ ಭೂಮಿ ನಮ್ಮದು ಎಂದು ಹೇಳಿಕೊಳ್ಳುವ, 130 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರನ್ನು ವಿಶ್ವ ಸಹಬಾಳ್ವೆಯ ಸಂದೇಶದೊಂದಿಗೆ ಚಿಕಾಗೋಗೆ ಕಳುಹಿಸಿಕೊಟ್ಟ ಅದೇ ನೆಲ ಎಂದು ಹೇಳಿಕೊಳ್ಳುವ ಆತುರ ಆ ಮಾತಿನಲ್ಲಿತ್ತು. ಅಷ್ಟೇ ಅಲ್ಲ, ಜ್ಞಾನ, ತ್ಯಾಗ, ನ್ಯಾಯ ಹಾಗೂ ಸಹಾನುಭೂತಿಯಂತಹ ಮಹೋನ್ನತ ಮೌಲ್ಯಗಳಿಂದ ಆವರಿಸಿಕೊಂಡಿದ್ದ ಜವಾಹರಲಾಲ್ ನೆಹರೂ ಎಂಬ ಅದ್ಭುತ ರಾಜಕಾರಣಿಯನ್ನು ಜಗತ್ತಿಗೆ ನೀಡಿದ ಭೂಮಿ ಅದು. 

ಮೋಹನ್‌ ಭಾಗವತರಿಗೆ ಆ ನಿರಂತರತೆಯನ್ನು ಮುರಿಯಲು ಧೈರ್ಯವಿರಲಿಲ್ಲ ಮತ್ತು ತಾನು ಹೊಸ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ಜಗತ್ತಿಗೆ ಹೇಳಲು ಸಾಧ್ಯವಾಗಲಿಲ್ಲ. ಅಡಾಲ್ಫ್ ಹಿಟ್ಲರ್‌ನ ಜನಾಂಗೀಯ ಅಹಂಕಾರವನ್ನು ಕೊಂಡಾಡಿದ ಸಿದ್ಧಾಂತದ ಧ್ವಜವಾಹಕ ತಾನು ಎಂದು ಒಪ್ಪಿಕೊಳ್ಳಲು ಅವರಿಗೆ ಆಗಲಿಲ್ಲ; ಮಹಾತ್ಮಾ ಗಾಂಧಿಯನ್ನು ಹತ್ಯೆಗೈದ ಸೈದ್ಧಾಂತಿಕ ಸಮುದಾಯದಿಂದ ತಾನು ಬಂದಿದ್ದೇನೆ ಎಂದು ಪ್ರೇಕ್ಷಕರಿಗೆ ಹೇಳಲು ಅವರಿಗೆ ಸಾಧ್ಯವಾಗಲಿಲ್ಲ; ಹಿಂದೂಗಳ ದಯೆಯಿಂದ ಮಾತ್ರ ಮುಸ್ಲಿಮರು ಭಾರತದಲ್ಲಿರಬಹುದು ಎಂದು ನಂಬಿದ್ದ ವಿ.ಡಿ. ಸಾವರ್ಕರ್ ತಮ್ಮ ಆದರ್ಶ ವ್ಯಕ್ತಿ ಎಂದು ಬಹಿರಂಗಪಡಿಸಲು ಅವರಿಗೆ ಆಗಲಿಲ್ಲ. ಭಾರತದಲ್ಲಿ 100 ವರ್ಷಗಳಿಂದ ವಿಭಜಕ ರಾಜಕಾರಣವನ್ನು ಮುಂದುವರೆಸಿದ ಲಕ್ಷಾಂತರ ಹಿಂದೂ ಮತಾಂಧರನ್ನು ಈ ಸಂಸ್ಥೆ ಏಕೆ ಸೃಷ್ಟಿಸುತ್ತಿದೆ ಎಂಬುದನ್ನು ವಿವರಿಸದೆ, ಸಾರ್ವತ್ರಿಕ ಏಕತೆಯ ಸಂದೇಶವನ್ನು ಮತ್ತು ಜಗತ್ ಹಿತಾಯವನ್ನು (ಜಗತ್ತಿನ ಕಲ್ಯಾಣ) ಹರಡುವುದೇ ಆರ್‌ಎಸ್‌ಎಸ್ ಉದ್ದೇಶ ಎಂದು ಅವರು ಪ್ರತಿಪಾದಿಸಿದರು.

“ವೈವಿಧ್ಯತೆಯಲ್ಲಿ ಏಕತೆಯೇ ಭಾರತದ ಡಿಎನ್‌ಎ” ಎಂದು ಮೋಹನ್ ಭಾಗವತ್ ನುಡಿದಾಗ ಸಭೆಯಲ್ಲಿ ಚಪ್ಪಾಳೆ ಮುಗಿಲು ಮುಟ್ಟಿತು. ಆದರೆ, ದಶಕಗಳಿಂದ ಮುಸ್ಲಿಮರ ವಿರುದ್ಧ ನಿರಂತರವಾಗಿ ವಿಷ ಕಾರುತ್ತಾ ಬಂದಿರುವ ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕರು, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಮತ್ತು ಸಂಘ ಪರಿವಾರದ ಬೆಂಬಲಿಗರ ಕೋಮುವಾದಿ ಹಾಗೂ ಕರಾಳ ಮಾತುಗಳ ಅಬ್ಬರವೇ ಅವರ ಆ ಸುಂದರ ನುಡಿಗಳನ್ನು ಮುಳುಗಿಸಿಬಿಟ್ಟಿದೆ. 

ಮೋಹನ್‌ ಭಾಗವತ್ ಅವರು ಒಗ್ಗಟ್ಟಿನ ಅನಿವಾರ್ಯತೆಯನ್ನು ತಿಳಿಸುತ್ತಾ, “ನೀವು ಸರಿಯಾದ ಮಾರ್ಗದಲ್ಲಿ ಯೋಚಿಸಿದರೆ ದೇವರಿಗೆ ಹತ್ತಿರವಾಗುತ್ತೀರಿ, ಕೆಟ್ಟದಾಗಿ ಆಲೋಚಿಸಿದರೆ ರಾಕ್ಷಸರಾಗುತ್ತೀರಿ” ಎಂದು ಹೇಳಿದರು. ರಾಕ್ಷಸರೇ? ವಿದ್ಯಾವಂತ-ಅವಿದ್ಯಾವಂತ ಎಂಬ ಭೇದವಿಲ್ಲದೆ, ಬಡವ-ಶ್ರೀಮಂತ ಎನ್ನದೆ, ಹಗಲು-ರಾತ್ರಿ ಎನ್ನದೆ ಮುಸ್ಲಿಮರನ್ನು ದೂಷಿಸುತ್ತಾ, ಹೀಯಾಳಿಸುತ್ತಿರುವ ನನ್ನ ಕೆಲ ಬಂಧುಗಳ ಹಾಗೂ ಸ್ನೇಹಿತರ ಮುಖಗಳು ನನ್ನ ಮನಸ್ಸಿನಲ್ಲಿ ಮರುಕಳಿಸಿದವು. ಅವರೆಲ್ಲರೂ ಆರ್‌ಎಸ್‌ಎಸ್ ಅಥವಾ ಬಿಜೆಪಿಯ ಕಟ್ಟಾ ಬೆಂಬಲಿಗರು; ಆದರೆ ನೋಡಲು ಅವರು ಯಾರೂ ರಾಕ್ಷಸರಂತೆ ಕಾಣುವುದಿಲ್ಲವಲ್ಲ! ಪ್ರೀತಿ ಹಾಗೂ ಒಗ್ಗಟ್ಟಿನ ಕುರಿತು ಅಮೆರಿಕದಲ್ಲಿ ಬೋಧನೆ ಮಾಡುವ ಮುನ್ನ, ಮೋಹನ್‌ ಭಾಗವತ್ ಮೊದಲು ಇಂಥವರ ಜೊತೆ ಮಾತುಕತೆ ನಡೆಸಬೇಕಿತ್ತು. 

2002ರ ಗುಜರಾತ್ ಹತ್ಯಾಕಾಂಡಕ್ಕೆ ಕಾರಣರಾದವರನ್ನೆಲ್ಲ ಬಿಜೆಪಿಯಿಂದ ಉಚ್ಚಾಟಿಸಿಬಿಟ್ಟಿದ್ದೇನೆ ಎಂಬಂತೆ ಭಾಗವತ್ ಮಾತನಾಡಿದರು. ಮುಸ್ಲಿಮರನ್ನು ಸತತವಾಗಿ ಬೆದರಿಸುತ್ತಾ, ಹೀಯಾಳಿಸುತ್ತಿರುವ ಮುಖ್ಯಮಂತ್ರಿಗಳನ್ನೆಲ್ಲ ಅಧಿಕಾರದಿಂದ ಕೆಳಗಿಳಿಸಿದ್ದೇನೆ ಎನ್ನುವಂತೆ ಅವರ ಮಾತುಗಳಿದ್ದವು. ಗಾಝಾದಲ್ಲಿ ನರಮೇಧ ನಡೆಸಿ ಜಾಗತಿಕ ಖಳನಾಯಕನಾಗಿ ಹೊರಹೊಮ್ಮಿರುವ ಬೆಂಜಮಿನ್ ನೆತನ್ಯಾಹುವಿನ ಅಪ್ಪುಗೆಯಿಂದ ದೂರವಿರುವಂತೆ ತಮ್ಮ ಸರ್ಕಾರಕ್ಕೆ ತಾಕೀತು ಮಾಡಿದ್ದೇನೆ ಎಂಬ ಭಾವ ಅವರ ನುಡಿಗಳಲ್ಲಿತ್ತು. ಸಂವಿಧಾನದ ಆಶಯಗಳನ್ನು ಮಾತಿನಲ್ಲಿ ಹಾಗೂ ಕೃತಿಯಲ್ಲಿ ಹೇಗೆ ಪಾಲಿಸಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ತಾವೇ ಪಾಠ ಮಾಡಿರುವಂತೆ ಅವರು ಧ್ವನಿಸಿದರು. ಆರ್‌ಎಸ್‌ಎಸ್‌ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ನುಡಿಯುವಂತಿಲ್ಲ; ಏಕೆಂದರೆ ವಂಚನೆಯು ಅವರು ಕೊಂಡಾಡಿದ ಸದ್ಗುಣಗಳಲ್ಲಿ ಒಂದಾಗಿರಲಿಲ್ಲ. “ಮಾನವೀಯತೆ ಒಂದೇ, ಸತ್ಯ ಒಂದೇ” ಎಂದು ಘೋಷಿಸುವ ಮೂಲಕ ಅವರು ಕಾಪಟ್ಯ ಹಾಗೂ ದ್ವಿಮುಖ ನೀತಿಗೆ ಎಳ್ಳುನೀರುಬಿಟ್ಟಿದ್ದರು. 

ಭಾಗವತ್‌ ರವರ ಬೋಧನೆಗಳ ತಿರುಳನ್ನೇ ಬುಡಮೇಳುಗೊಳಿಸುವ ಕೆಲವು ಪ್ರಮುಖ ಪ್ರಶ್ನೆಗಳಿವೆ: ಭಾರತದಲ್ಲಿ ಜಾತ್ಯತೀತತೆಯನ್ನು ನಾಶಮಾಡುತ್ತಿರುವ ಪ್ರಬಲ ಅಸ್ತ್ರ ಯಾವುದು? ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಒಡಕುಂಟುಮಾಡಲು ಕೆಲಸ ಮಾಡುತ್ತಿರುವ ಸಂಘಟನೆಗಳು ಯಾವುವು? ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರ ಮೇಲೆ ದ್ವೇಷ ಸಾಧಿಸುವ ಯಾವನೇ ಪುಂಡ ಯಾವ ರಾಜಕೀಯ ಪಕ್ಷವನ್ನು ಸೇರಿಕೊಳ್ಳುತ್ತಾನೆ? ನಾಥೂರಾಮ್ ಗೋಡ್ಸೆಯ ವಿಚಾರಗಳಿಂದ ಪ್ರಭಾವಿತನಾದವನಿಗೆ ರಾಜಕೀಯ ಆಶ್ರಯ ಸಿಗುವುದು ಎಲ್ಲಿ? ಮೋಹನ್‌ ಭಾಗವತ್ ಅಥವಾ ಪ್ರಧಾನ ಮಂತ್ರಿಯವರ ಪಾತ್ರವು ಚಲನಚಿತ್ರಗಳಲ್ಲಿ ಕಾಲ್ಪನಿಕ ಪಾತ್ರಗಳನ್ನು ನಿರ್ವಹಿಸುವ ನಟನಂತಿಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು.

ತತ್ವಗಳು ಆಟಿಕೆಗಳಲ್ಲ. ಆದರೆ ದೃಢವಾದ ನಂಬಿಕೆ ಮತ್ತು ಉದ್ದೇಶದ ಪ್ರಾಮಾಣಿಕತೆ ಇಲ್ಲದಿದ್ದರೆ, ಅವು ಕೇವಲ ಆಟಿಕೆಗಳಷ್ಟೇ. ಮೋಹನ್‌ ಭಾಗವತ್ ಅವರು ಪದೇ ಪದೇ ವೈವಿಧ್ಯತೆಯನ್ನು “ಅಲಂಕಾರ” ಎಂದು ಬಣ್ಣಿಸಿದರು; ಅದುವೇ ನಿಜವಾದ ಸಮಸ್ಯೆ. ಯಾಕೆಂದರೆ, ವೈವಿಧ್ಯತೆಯು ಅಲಂಕಾರವಲ್ಲ; ಅದು ಸಾರ ಮತ್ತು ಆತ್ಮ ಆಗಿದೆ. ಅಲಂಕಾರವನ್ನು ಇಚ್ಛೆಯಂತೆ ಬದಲಾಯಿಸಬಹುದು; ಮಾನವೀಯತೆಯನ್ನು ಬೀದಿಗಳಲ್ಲಿ ಹತ್ಯೆ ಮಾಡುವಂತಹ ಕಷ್ಟದ ಸಮಯದಲ್ಲಿ ನಾಯಕರು ಮೌನ ವಹಿಸಿ ವಿಶೇಷ ಸಂದರ್ಭಗಳಿಗಾಗಿ ಅಲಂಕಾರವನ್ನು ಬದಲಾಯಿಸುತ್ತಾರೆ. ಭಾರತವು ಈ ಪ್ರವೃತ್ತಿಯನ್ನು ಅಸಂಖ್ಯಾತ ಸಂದರ್ಭಗಳಲ್ಲಿ ಕಂಡಿದೆ ಮತ್ತು ಅನುಭವಿಸಿದೆ.

ಮಾನ್ಯತೆಯ ಬಿಕ್ಕಟ್ಟು

ಕಳೆದ 12 ವರ್ಷಗಳಲ್ಲಿ ವಿಶ್ವ ನಾಯಕರೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿಯವರು, ತಮ್ಮ ಸೈದ್ಧಾಂತಿಕ ಗುರುವಾಗಿರುವ ಆರ್‌ಎಸ್‌ಎಸ್‌ಗೆ ಜಾಗತಿಕ ಮಟ್ಟದಲ್ಲಿ ಒಂದು ಮಾನ್ಯತೆ ಅಥವಾ ಸ್ವೀಕಾರಾರ್ಹತೆಯನ್ನು ತಂದುಕೊಡುವಲ್ಲಿ ವಿಫಲರಾಗಿದ್ದಾರೆ ಎನ್ನಬಹುದಲ್ಲವೇ? ಸಂಘ ಪರಿವಾರದ ಮೂಲ ಸಿದ್ಧಾಂತಕ್ಕೆ ತದ್ವಿರುದ್ಧವಾದ ತತ್ವವನ್ನು ಹೊಂದಿದ್ದ ಮಹಾತ್ಮಾ ಗಾಂಧಿಯವರಿಗೆ ಕೇವಲ ಬಾಯಿ ಮಾತಿನ ಗೌರವವನ್ನು ಸಲ್ಲಿಸುವ ಬದಲು, ಆರ್‌ಎಸ್‌ಎಸ್ ಸಿದ್ಧಾಂತದ ಪ್ರಬುದ್ಧತೆಯನ್ನು ಇಡೀ ಜಗತ್ತಿಗೆ ಮನವರಿಕೆ ಮಾಡಿಕೊಡುವ ಧೈರ್ಯವನ್ನು ಮೋದಿಯವರು ತೋರಬಹುದಿತ್ತು. ಆದರೆ, ಆ ಕಠಿಣ ಹಾದಿಯನ್ನು ಬಿಟ್ಟು, ಭಾರತದ ವಿಶಾಲ ಮಾರುಕಟ್ಟೆಯ ಪ್ರಭಾವವನ್ನು ಬಳಸಿ ಜಾಗತಿಕ ನಾಯಕರೊಂದಿಗೆ ವೈಯಕ್ತಿಕ ಬಾಂಧವ್ಯವನ್ನು ಬೆಳೆಸಿಕೊಳ್ಳುವ ಸುಲಭ ಮಾರ್ಗವನ್ನು ಅವರು ಹಿಡಿದರು. ತಮ್ಮ ಸೈದ್ಧಾಂತಿಕ ನಂಬಿಕೆಗಳ ಬಗ್ಗೆ ಜಗತ್ತಿಗೆ ಮನವರಿಕೆ ಮಾಡುವ ಗೋಜಿಗೆ ಹೋಗದೆ, ಭಾರತೀಯರ ಯೋಚನಾ ಲಹರಿಯಲ್ಲಿ ಮೂಲಭೂತವಾದ ಬದಲಾವಣೆಯಾಗಬೇಕು ಎಂಬುದನ್ನು ವಿವರಿಸುವ ಕಷ್ಟಕರ ಕೆಲಸದಿಂದ ದೂರ ಉಳಿದು, ಕೇವಲ ವೈಯಕ್ತಿಕ ಜನಪ್ರಿಯತೆ ಹಾಗೂ ಮಾನ್ಯತೆಯನ್ನು ಗಳಿಸುವ ಏಕೈಕ ಉದ್ದೇಶದಿಂದ ವಿದೇಶಗಳಲ್ಲಿರುವ ಭಾರತೀಯ ವಲಸಿಗರೊಂದಿಗೆ ಬೆರೆಯುವುದನ್ನೇ ಮೋದಿ ಆಯ್ಕೆ ಮಾಡಿಕೊಂಡರು. 

ಹಲವಾರು ಹಿಂದೂ ಸಂಘಟನೆಗಳು, ಮಾನವ ಹಕ್ಕುಗಳ ಗುಂಪುಗಳು, ವಿವಿಧ ಧರ್ಮಗಳ ಒಕ್ಕೂಟಗಳು ಮತ್ತು ಚಿಂತಕರು ಮೋಹನ್‌ ಭಾಗವತ್ ಅವರ ಭೇಟಿಯನ್ನು ವಿರೋಧಿಸಿದ್ದು ಏಕೆ? ಇದು ಭಾರತೀಯ ನಾಝಿ ಎಂದು ಬ್ರಾಂಡ್ ಮಾಡುವ ಹಂತಕ್ಕೆ ಹೋಗಲು ಕಾರಣವೇನು? ಅಮೆರಿಕದ ಒಕ್ಕೂಟದ ಸಲಹಾ ಸಮಿತಿಯಾದ ‘ಯುಎಸ್ ಕಮಿಷನ್ ಆನ್ ಇಂಟರ್‌ನ್ಯಾಷನಲ್ ರಿಲಿಜಿಯಸ್ ಫ್ರೀಡಮ್’ ಕೂಡ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದ್ವೇಷ ಹಾಗೂ ಹಿಂಸಾಚಾರದ ಕುರಿತು ಬಲವಾದ ಧ್ವನಿ ಎತ್ತಿತು. ಅಲ್ಲದೆ, ಮೋಹನ್‌ ಭಾಗವತ್ ಅವರ ವೀಸಾವನ್ನು ರದ್ದುಗೊಳಿಸಿ, ಆ ಸಂಘಟನೆಯ ಸದಸ್ಯರ ಮೇಲೆ ನಿರ್ಬಂಧಗಳನ್ನು ಹೇರುವಂತೆ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಮನವಿ ಮಾಡಿತು. ಈ ವಿರೋಧವು ಯಾವುದೇ ಕಾರಣಕ್ಕೂ ಹಿಂದೂ ಧರ್ಮದ ಮೇಲಾಗಲಿ ಅಥವಾ ಭಾರತ ದೇಶದ ಮೇಲಾಗಲಿ ಮಾಡಿದ್ದಲ್ಲ. ಬದಲಿಗೆ, ಆರ್‌ಎಸ್‌ಎಸ್ ಎನ್ನುವುದು ಇತರ ಧರ್ಮಗಳ ವಿರುದ್ಧ ದ್ವೇಷವನ್ನು ಬಿತ್ತುವ ಒಂದು ಹಿಂದೂ ಸರ್ವೋಚ್ಚವಾದಿ ಸಂಘಟನೆ ಎಂಬ ಜಾಗತಿಕ ಆಂತಕವೇ ಜಗತ್ತನ್ನು ಕಾಡಿದೆ. 

1925 ರಿಂದ ಆರ್‌ಎಸ್‌ಎಸ್ ಏನು ಪ್ರತಿನಿಧಿಸುತ್ತದೆ ಎಂಬುದು ಜಗತ್ತಿಗೆ ತಿಳಿದಿದೆ. ಮೋದಿಯವರ ಆಡಳಿತವು ಆ ಅಭಿಪ್ರಾಯವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ರಕ್ಷಕನಾಗಬೇಕಿದ್ದ ಮೋದಿಯವರು, ಅದಕ್ಕೆ ತಿಲಾಂಜಲಿಯಿಟ್ಟು ಒಬ್ಬ ಹಿಂದೂ ಪೂಜಾರಿಯಂತೆ ವರ್ತಿಸುತ್ತಾ ಬಹುಸಂಖ್ಯಾತವಾದದ ಅಜೆಂಡಾವನ್ನು ತೀವ್ರವಾಗಿ ಜಾರಿಗೆ ತಂದರು. ದೇಶದಲ್ಲಿ ನಡೆದ ಅಸಂಖ್ಯಾತ ಗುಂಪು ಹತ್ಯೆಗಳು (ಲಿಂಚಿಂಗ್), ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರ ಮೇಲಿನ ನಿರಂತರ ದಾಳಿಗಳು, ಮತ್ತು ದಿನೇ ದಿನೇ ಕುಸಿಯುತ್ತಿರುವ ಸಾಂಸ್ಥಿಕ ಹಾಗೂ ವೈಯಕ್ತಿಕ ಸ್ವಾತಂತ್ರ್ಯಗಳು— ಜವಾಹರಲಾಲ್ ನೆಹರೂ ಕನಸಿನ ಭಾರತವು ಕಣ್ಣೆದುರೇ ಕರಗಿಹೋಗುತ್ತಿದೆ ಎಂಬುದಕ್ಕೆ ಸಾಕ್ಷಿಯಾದವು. ಜಾಗತಿಕ ವೇದಿಕೆಯಲ್ಲಿ ಭಾರತವು ತನ್ನ ನೈತಿಕ ಧ್ವನಿಯನ್ನು ಕಳೆದುಕೊಳ್ಳುವ ಮೂಲಕ, ಮೋದಿಯವರ ವಿದೇಶಾಂಗ ನೀತಿಯು ಸಹ ಈ ದೇಶದ ಬದಲಾದ ಮುಖವನ್ನು ಜಗತ್ತಿಗೆ ಸ್ಪಷ್ಟವಾಗಿ ಸಾರಿತು. 

ಭಾರತದ ಅಲಿಪ್ತ ನೀತಿಯನ್ನು ವಿವರಿಸುತ್ತಾ ನೆಹರೂ ರವರು ಸ್ಪಷ್ಟವಾಗಿ ಹೀಗೆ ಹೇಳಿದ್ದಾರೆ: “ನಿರ್ಲಿಪ್ತವಾಗಿರುವುದು ಎಂದರೆ ಸ್ವಾತಂತ್ರ್ಯ ಅಥವಾ ಶಾಂತಿಗೆ ಕುತ್ತು ಬಂದಾಗ ಪ್ರತ್ಯೇಕವಾಗಿರುವುದು, ನಿರ್ಲಕ್ಷ್ಯವಾಗಿರುವುದು ಅಥವಾ ತಟಸ್ಥವಾಗಿರುವುದು ಅಲ್ಲವೇ ಅಲ್ಲ.‌ ಮನುಷ್ಯನ ಸ್ವಾತಂತ್ರ್ಯ ಹಾಗೂ ಶಾಂತಿಗೆ ಧಕ್ಕೆಯಾದಾಗ ನಮಗೆ ತಟಸ್ಥವಾಗಿರಲು ಸಾಧ್ಯವಿಲ್ಲ, ಸಾಧ್ಯವಾಗಲೂಬಾರದು. ಹಾಗೇನಾದರೂ ಆದರೆ, ಆ ತಟಸ್ಥತೆಯು ನಾವು ಹೋರಾಡಿದ ಮತ್ತು ನಿಂತಿರುವ ಆದರ್ಶಗಳಿಗೆ ಮಾಡುವ ದೋಹ್ರವಾಗಿದೆ”. ಗಾಝಾದ ಬೀದಿಗಳಲ್ಲಿ ಅಮಾಯಕ ಜನತೆ ರಕ್ತಸಿಕ್ತವಾಗಿ ಒದ್ದಾಡುತ್ತಿದ್ದ ಹೊತ್ತಿನಲ್ಲೇ, ಬೆಂಜಮಿನ್ ನೆತನ್ಯಾಹುವಿನ ಅಪ್ಪುಗೆಗೆ ಜಾರುವ ಮೂಲಕ ಮೋದಿಯವರು ಈ ಉದಾತ್ತ ದೃಷ್ಟಿಕೋನವನ್ನು ಗಾಳಿಗೆ ತೂರಿದರು. ಇರಾನ್ ಮೇಲಿನ ಅನ್ಯಾಯದ ದಾಳಿಯ ವೇಳೆ ಅಮೆರಿಕ ಹಾಗೂ ಇಸ್ರೇಲ್ ಪರ ಭಾರತ ತೋರಿದ ನಡೆ, ತಾವು ನಂಬಿದ ತತ್ವಗಳಿಗೇ ಎಸಗಿದ ದ್ರೋಹದಂತಿತ್ತು. ಒಂದುವೇಳೆ ಆರ್‌ಎಸ್‌ಎಸ್ ತನ್ನ ಹಳೇ ಧೋರಣೆಯನ್ನು ಮೃದುಗೊಳಿಸಿ ಮಾನ್ಯತೆ ಗಳಿಸಬೇಕು ಎಂದು ಕನಸು ಕಂಡಿದ್ದರೆ, ಮೋದಿಯವರ ಆಡಳಿತಾವಧಿಯು ಆ ಕನಸನ್ನು ಸಂಪೂರ್ಣವಾಗಿ ಅಸಾಧ್ಯವಾಗಿಸಿದೆ.

ಶಬ್ದಕೋಶದ ಹಗರಣ

ದೊಡ್ಡ ದೊಡ್ಡ ಶ್ರೀಮಂತರಿಗೆ ಮತ್ತು ಅಧಿಕಾರಿಗಳಿಗೆ ತಾವು ಮಾಡುವ ತಪ್ಪುಗಳನ್ನು ಹೇಗೆ ಸಮರ್ಥಿಸಿಕೊಳ್ಳಬೇಕು ಎಂಬುದು ಚೆನ್ನಾಗಿ ಗೊತ್ತು. ಸಾಲ ಮರುಪಾವತಿಯನ್ನು ಸರಿಪಡಿಸುವುದನ್ನು ಅವರು “ಹೇರ್‌ಕಟ್” (ಕ್ಷೌರ ಮಾಡಿಕೊಳ್ಳುವುದು) ಎಂದು ಹೆಸರಿಟ್ಟರು. ಯಾಕೆಂದರೆ ಅವರು ಮಾಡಿರುವ ದೊಡ್ಡ ಲೂಟಿಯನ್ನು ಜನರಿಗೆ ಗೊತ್ತಾಗದಂತೆ ಮುಚ್ಚಲು ಒಂದು ನಾಟಕ ಬೇಕಿತ್ತು. ‘ಹೇರ್‌ಕಟ್’ ಎಂದರೆ ಯಾರೂ ಅದನ್ನೊಂದು ಅಪರಾಧ ಎಂದು ಭಾವಿಸುವುದಿಲ್ಲ. ಸಾಲವನ್ನು ಉದ್ದೇಶಪೂರ್ವಕವಾಗಿ ಕಟ್ಟಿಹಾಕದ ದೊಡ್ಡ ಮನುಷ್ಯನ ಗೌರವಕ್ಕೆ ಯಾವುದೇ ಕಲೆ ಅಂಟದಂತೆ ತಡೆಯುವ ಒಂದು ಸಿಹಿಯಾದ ಹಣಕಾಸಿನ ಪದವದು. ಕುತ್ತಿಗೆಯನ್ನೇ ಕತ್ತರಿಸಿದರೂ ಅದಕ್ಕೆ ‘ಹೇರ್‌ಕಟ್’ ಎಂದು ಹೆಸರು! ಆಕರ್ಷಕ ಮೇಕಪ್ ನಡುವೆ ಹೊರಗೆ ಬಂದಿದ್ದ ಸ್ವಲ್ಪ ಕೂದಲನ್ನು ಕತ್ತರಿಸಿದ ಹಾಗೆ ಅಷ್ಟೆ. ಎಷ್ಟು ಸೌಮ್ಯವಾದ ಮಾತು! 

ಇದು ತಪ್ಪು ಮಾಡಿದವನಿಗೂ ಮತ್ತು ಕಾನೂನು ಕಾಪಾಡುವವರಿಗೂ ಒಳ್ಳೆಯ ಹೆಸರು ತಂದುಕೊಡಲು ಆಡಿದ ಶಬ್ದಗಳ ದೊಡ್ಡ ಆಟ. ಈ ಲೆಕ್ಕವನ್ನು ಒಮ್ಮೆ ನೋಡಿ; ಒಬ್ಬನನ್ನು ಕೊಲೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸುವುದನ್ನು ಯಾರಾದರೂ ‘ಕೂದಲು ಕತ್ತರಿಸುವುದು’ (ಹೇರ್‌ಕಟ್) ಎಂದು ಕರೆಯಲು ಸಾಧ್ಯವೇ ನೀವೇ ಹೇಳಿ: ಒಟ್ಟು 22,006 ಕೋಟಿ ರೂಪಾಯಿ ಸಾಲವನ್ನು ಕೇವಲ 6.5 ಕೋಟಿ ರೂಪಾಯಿ ಕೊಡುವ ಮೂಲಕ ಮುಗಿಸಲಾಗಿದೆ! ಇದನ್ನು ಕೇಳಿ ನಿಮಗೆ ಇನ್ನೂ ತಲೆತಿರುಗುತ್ತಿಲ್ಲ ಅಂದರೆ, ಒಂದು ವೇಳೆ ನೀವು 10 ಲಕ್ಷ ರೂಪಾಯಿ ಸಾಲ ಕಟ್ಟುವುದು ತಪ್ಪಿದರೆ ಬ್ಯಾಂಕ್‌ನವರು ನಿಮ್ಮನ್ನು ಏನು ಮಾಡುತ್ತಿದ್ದರು ಎಂದು ಒಮ್ಮೆ ಯೋಚಿಸಿ. ಬಡ ರೈತರು ಸಾಲ ತೀರಿಸಲಾಗದೆ ಜೈಲಿನಲ್ಲಿ ಕೊಳೆಯುತ್ತಾರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಈ ಸಿಸ್ಟಮ್‌ನಿಂದ ಎಲ್ಲ ರೀತಿಯ ಕಾರುಣ್ಯಕ್ಕೆ ಒಳಗಾದ ಆ ಮಹಾನ್ ವ್ಯಕ್ತಿ ಯಾರು ಗೊತ್ತಾ? ಝೀ ಟಿವಿ ನೆಟ್‌ವರ್ಕ್‌ನಲ್ಲಿ ಅತಿ ದುಖಃದ ಧಾರವಾಹಿಗಳನ್ನು ನಮಗೆ ತೋರಿಸುವ ಉದ್ಯಮಿ ಸುಭಾಷ್ ಚಂದ್ರ. ಆ ಟಿವಿಯಲ್ಲಿ ಬರುವ ಸುದ್ದಿಯನ್ನು ನೋಡಿ ನಿಮಗೆ ನಂಬಿಕೆ ಬರದಿದ್ದರೆ, ಆ 22,000 ಕೋಟಿಗೂ ಮತ್ತು 6.5 ಕೋಟಿಗೂ ಎಷ್ಟು ವ್ಯತ್ಯಾಸವಿದೆ ಎಂದು ತಿಳಿಯಲು ಒಮ್ಮೆ ಕ್ಯಾಲ್ಕುಲೇಟರ್ ಬಳಸಿ ಲೆಕ್ಕ ಮಾಡಿ ನೋಡಿ. 

ಮೋದಿ ಸರ್ಕಾರಕ್ಕೆ ಅನುಕಂಪ ಮತ್ತು ಕರುಣೆ ಇಲ್ಲ ಎಂದು ಹೇಳಿದವರು ಯಾರು? ಮೋದಿ ಪ್ರಧಾನಿಯಾದಾಗಿನಿಂದ ಬ್ಯಾಂಕ್‌ಗಳು ಸುಮಾರು 18 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. 56 ಇಂಚಿನ ಎದೆಯ ಹಿಂದೆ ಅಡಗಿರುವ ‘ಉದಾರ ದೇವತೆ’ಯನ್ನು ಬಡವರು ಮತ್ತು ಅಂಚಿನಲ್ಲಿರುವ ರೈತರು ನೋಡಿರಲಿಕ್ಕಿಲ್ಲ; ಆದರೆ ಕಾರ್ಪೊರೇಟ್‌ಗಳು ಆಗಾಗ್ಗೆ ಆಕೆಯೊಂದಿಗೆ ಸಂವಹನ ನಡೆಸುತ್ತವೆ. ಅದಾನಿ ಗುಂಪು ಒಟ್ಟು 62,000 ಕೋಟಿ ರೂಪಾಯಿಗಳ ಸಾಲವನ್ನು ಹೊಂದಿದ್ದ 10 ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ವರದಿಗಳು ಸೂಚಿಸುತ್ತವೆ. ನಂತರ ಸಾಲದ ಹೊಣೆಯನ್ನು 16,000 ಕೋಟಿ ರೂಪಾಯಿಗಳಿಗೆ ಟ್ರಿಮ್ ಮಾಡುವ ಮೂಲಕ ಹೇರ್‌ಕಟ್ ನೀಡಲು ಗುಪ್ತ ಕ್ಷೌರಿಕ ಬಂದನು. ವಾಹ್, ಹೇರ್‌ಕಟ್! ಶೇ. 90 ಕ್ಕಿಂತ ಹೆಚ್ಚು ಸಾಲ ಮನ್ನಾ ಮಾಡಿರುವುದು ಕೇವಲ ಹೇರ್‌ಕಟ್ ಆಗಿದೆ. ಈ ಸೇವೆಯ ಫಲಾನುಭವಿಗಳ ಪಟ್ಟಿಗೆ ಕೊನೆಯೇ ಇಲ್ಲದಂತಾಗಿದೆ: ವಿಡಿಯೋಕಾನ್ ಸಾಲವನ್ನು 64,838 ಕೋಟಿಯಿಂದ 2,962 ಕೋಟಿಗೆ ಕಡಿತ ಮಾಡಲಾಗಿದೆ, ಲಾಂಕೋ ಇನ್ಫ್ರಾಟೆಕ್ ಸಾಲವನ್ನು 45,263 ಕೋಟಿಯಿಂದ 5,431 ಕೋಟಿಗೆ ಕಡಿತ ಮಾಡಲಾಗಿದೆ, ಅಲೋಕ್ ಇಂಡಸ್ಟ್ರೀಸ್ ಸಾಲವನ್ನು 30,000 ಕೋಟಿಯಿಂದ 5,050 ಕೋಟಿಗೆ ಕಡಿತ ಮಾಡಲಾಗಿದೆ.

ಎಂತಹ ರೋಮಾಂಚನಕಾರಿ ಅಂಕಿಅಂಶಗಳು! ಆದರೆ ಬಡತನ ರೇಖೆಗಿಂತ ಕೆಳಗೆ ಕೋಟ್ಯಂತರ ಜನರು ಹೇಗೆ ಬದುಕು ಸಾಗಿಸುತ್ತಿದ್ದಾರೆ, ಎಷ್ಟು ಜನರಿಗೆ ಹೊಟ್ಟೆತುಂಬಾ ತಿನ್ನಲು ಅಥವಾ ಔಷಧಿಗೆ ಹಣವಿಲ್ಲ, ಕೆಲಸ ಕಳೆದುಕೊಂಡು ಎಷ್ಟು ಜನರು ಭಿಕ್ಷೆ ಬೇಡುತ್ತಿದ್ದಾರೆ ಎನ್ನುವ ಆ ನೋವಿನ ಕಥೆಗಳ ಬಗ್ಗೆ ಇಲ್ಲಿ ಮಾತೇ ಇಲ್ಲ. ಭಾರತವು ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುತ್ತಿದೆ ಎಂದು ಹೇಳುವಾಗ ಈ ಬಡವರ ಕಷ್ಟದ ಕಥೆಗಳೆಲ್ಲ ಒಪ್ಪುವುದಿಲ್ಲ ಬಿಡಿ! ತರಕಾರಿ, ಎಣ್ಣೆ ಮತ್ತು ಬೇಳೆಕಾಳುಗಳ ಬೆಲೆ ಗಗನಕ್ಕೇರಿ ಬಡವರನ್ನು ಹೇಗೆ ಮಾನಸಿಕ ಖಿನ್ನತೆಗೆ ತಳ್ಳುತ್ತಿದೆ ಎಂಬುದನ್ನೆಲ್ಲ ಮರೆತುಬಿಡೋಣ. ಬನ್ನಿ, ಈಗ ಸಾವಿರಾರು ಕೋಟಿ ಹಣದಾಟದ ಥ್ರಿಲ್ ಅನ್ನು ಮಾತ್ರ ಅನುಭವಿಸೋಣ!  

ಕೃಪೆ: thewire.in