ಹೊಸದಿಲ್ಲಿ, ಜು. 25: ಮೂರು ಬಾರಿ ತಲಾಕ್ ನೀಡಿ ಮದುವೆ ಸಂಬಂಧ ಕೊನೆಗೊಳಿಸುವುದು ಕ್ರಿಮಿನಲ್ ಅಪರಾಧ ಎನ್ನುವ ತ್ರಿವಳಿ ತಲಾಕ್ ನಿಷೇಧ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಗೊಳ್ಳಲಿದೆ. ಮಸೂದೆಯನ್ನು ಪ್ರತಿಪಕ್ಷಗಳು ವಿರೋಧಿಸಲಿವೆ ಎಂದು ಮೂಲಗಳು ತಿಳಿಸಿವೆ. ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆಗೆ ಮೋದಿ ಆಗ್ರಹಿಸಿದರು ಎನ್ನುವ ಟ್ರಂಪ್ ಹೇಳಿಕೆಯ ನಂತರ ಮೋದಿಯ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರಿಯುತ್ತಿರುವ ವೇಳೆಯೇ ತ್ರಿವಳಿ ತಲಾಕ್ ಮಸೂದೆ ಪಾರ್ಲಿಮೆಂಟಿನಲ್ಲಿ ಚರ್ಚೆಗೆ ಬರಲಿದೆ. ತ್ರಿವಳಿ ತಲಾಕ್ ಸುಗ್ರೀವಾಜ್ಞೆಯ ಬದಲಾಗಿ ಮಸೂದೆಯನ್ನು ಮಂಡಿಸಲಾಗುತ್ತಿದೆ.
ತ್ರಿವಳಿ ತಲಾಕ್ ಮಸೂದೆಯಲ್ಲದೆ ಡಿಎನ್ಎ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಸೂದೆ, ರಾಷ್ಟ್ರೀಯ ಮೆಡಿಕಲ್ ಕಮಿಶನ್ ಮಸೂದೆ ಕೂಡ ಲೋಕಸಭೆಯಲ್ಲಿ ಪರಿಗಣನೆಗೆ ಬರಲಿದೆ. ಇದೇ ವೇಳೆ ಮಾಹಿತಿ ಹಕ್ಕು ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ. ಇಂತಹ ಸುಪ್ರಧಾನ ಏಳು ಮಸೂದೆಗಳು ಆಯ್ಕೆ ಸಮಿತಿಯ ಮುಂದೆ ಇಡಬೇಕೆಂದು ಪ್ರತಿಪಕ್ಷ ಆಗ್ರಹಿಸಿದ್ದು ಮಾಹಿತಿ ಹಕ್ಕು ಕಾನೂನು ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಮತ ಹಾಕಲು ಹದಿಮೂರು ಪ್ರತಿಪಕ್ಷಗಳು ತೀರ್ಮಾನಿಸಿವೆ ಎಂಬ ಸೂಚನೆಗಳು ಲಭ್ಯವಾಗಿವೆ.












