ಭಯೋತ್ಪಾದನೆ ಆರೋಪ; 23 ವರ್ಷ ಜೈಲಲ್ಲಿ ಕೊಳೆಯಿಸಿ ಇದೀಗ ನಿರಪರಾಧಿಗಳೆಂದು ಬಿಡುಗಡೆ: ಜೀವನವೇ ಕಳೆದುಹೋಯಿತು ಎಂದು ನಿಟ್ಟುಸಿರಿಟ್ಟರು

0
3920

ಜೈಪುರ, ಜು. 25: ಜಾಮೀನು ಕೂಡ ಸಿಗದೆ 23 ವರ್ಷ ಜೈಲಿನೊಳಗೆ ಇದ್ದವರು ನಿರಪರಾಧಿಗಳೆಂದು ಸಾಬೀತಾಗಿ ಬಿಡುಗಡೆಗೊಂಡಿದ್ದಾರೆ. ಇವರ ವಿರುದ್ಧ ಸಂಲೇಟ್ಟಿ ಸ್ಫೋಟ ಪ್ರಕರಣದ ಆರೋಪ ಹೊರಿಸಿ 23 ವರ್ಷ ಜೈಲಿನಲ್ಲಿರಿಸಲಾಗಿತ್ತು. 1996ರಲ್ಲಿ ರಾಜಸ್ತಾನದ ಜೈಪುರ- ಆಗ್ರಾ ಹೆದ್ದಾರಿಯ ಸಂಲೇಟ್ಟಿಯಲ್ಲಿ ಬಸ್ ಸ್ಫೋಟ ಘಟನೆ ನಡೆದಿದ್ದು ಅದರಲ್ಲಿ ಹದಿನಾಲ್ಕು ಮಂದಿ ಮೃತಪಟ್ಟು 39 ಮಂದಿ ಗಾಯಗೊಂಡಿದ್ದರು. ಬಸ್ ಆಗ್ರಾದಿಂದ ಬಿಕಾನೇರ್ ಗೆ ಚಲಿಸುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಂಡಿಕುಯಿ ವಿಚಾರಣಾ ನ್ಯಾಯಾಲಯವು ೨೦೧೪, ಸೆಪ್ಟೆಂಬರ್ ನಲ್ಲಿ ಎಂಟು ಮಂದಿ ಆರೋಪಿಗಳನ್ನು ದೋಷಿಗಳು ಎಂದು ತೀರ್ಪಿತ್ತಿತ್ತು.

ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟು ಖುಲಾಸೆಗೊಳಿಸಿದ ಒಂದು ದಿವಸದ ಬಳಿಕ ಆರು ಮಂದಿ ಜೈಪುರ ಸೆಂಟ್ರಲ್ ಜೈಲಿನಿಂದ ಹೊರಬಂದಿದ್ದಾರೆ. ಪ್ರಕರಣದ ಪ್ರಧಾನ ಆರೋಪಿ ಡಾ. ಅಬ್ದುಲ್ ಹಮೀದ್‍ ನೊಂದಿಗೆ ಆರೋಪಿಗಳು ಸಂಬಂಧ ಹೊಂದಿದ್ದರು ಎಂಬುದನ್ನು ಸಾಬೀತು ಪಡಿಸಲು ಪೊಲೀಸರು ವಿಫಲವಾಗಿದ್ದು 42 ವರ್ಷದ ಲತೀಫ್ ಅಹ್ಮದ್, 48 ವರ್ಷದ ಅಲಿಭಟ್, 39 ವರ್ಷದ ಮಿರ್ಝಾ ನಿಸಾರ್, 57 ವರ್ಷದ ಅಬ್ದುಲ್ ಗೊನಿ, 56 ವರ್ಷದ ರಯೀಸ್ ಬೇಗ್ ಮಂಗಳವಾರ ಜೈಲು ಕಂಬಿಗಳಿಂದ ಸ್ವಾತಂತ್ರ್ಯದೆಡೆಗೆ ಹೆಜ್ಜೆ ಹಾಕಿದರು. 1996 ಜೂನ್ ಮತ್ತು 1997ರ ಜೂನ್ ನಡುವೆ ಇವರು ಜೈಲುಪಾಲಾಗಿದ್ದರು. ಇಷ್ಟು ಕಾಲ ದಿಲ್ಲಿ ಮತ್ತು ಅಹ್ಮದಾಬಾದ್ ಜೈಲಿನಲ್ಲಿದ್ದರು. ಪ್ರಕರಣದ ಪ್ರಧಾನ ಆರೋಪಿ ಡಾ. ಅಬ್ದುಲ್ ಹಮೀದ್‍ ನಿಗೆ ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ಮರಣದಂಡನೆ ಶಿಕ್ಷೆ ಮತ್ತು ಆತನಿಗೆ ಸ್ಪೋಟಕಗಳನ್ನು ಒದಗಿಸಿದ ಆರೋಪವಿರುವ ಪಪ್ಪು ಅಲಿಯಾಸ್ ಸಲೀಂ ನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರಾಜಸ್ತಾನ ಹೈಕೋರ್ಟ್ ಎತ್ತಿ ಹಿಡಿದಿದೆ. ಅದೇವೇ, ಹಮೀದ್ ಹಾಗೂ ಈ ಆರು ಮಂದಿ ಆರೋಪಿಗಳ ನಡುವೆ ಸಂಬಂಧವಿದ್ದುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಮೂರ್ತಿಗಳಾದ ಸಬೀನಾ ಮತ್ತು ಗೋವರ್ಧನ್ ಬರ್ದಾರ್ ಅವರನ್ನೊಳಗೊಂಡ ಪೀಠ ತೀರ್ಪಿತ್ತಿದೆ.

1996ರ ಮೇ 22ರಂದು ಆಗ್ರಾದಿಂದ ಬಿಕಾನೆರ್ ಗೆ ಹೋಗುತ್ತಿದ್ದ ಬಸ್ ಸ್ಫೋಟವಾಗಿತ್ತು. ಇದರಲ್ಲಿದ್ದ ಹದಿನಾಲ್ಕು ಮಂದಿ ಮೃತಪಟ್ಟು 39 ಮಂದಿ ಗಾಯಗೊಂಡಿದ್ದರು. 13 ಮಂದಿ ಮೃತಪಟ್ಟಿದ್ದ ಲಜ್‍ ಪತ್ ನಗರ್ ಬಾಂಬ್ ಸ್ಫೋಟದ ಮರು ದಿವಸ ಸಂಲೇಟ್ಟಿ ಬಸ್ ಸ್ಪೋಟ ಘಟನೆ ನಡೆದಿತ್ತು. ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಸ್ಫೋಟದ ಹಿಂದಿದೆ. ಜೈಪುರ ಸ್ಫೋಟ ಪ್ರಕರಣದಲ್ಲಿ ಇವರು ಶಾಮೀಲಾಗಿದ್ದಾರೆ ಎಂದು ಆರೋಪಿಗಳಿಗೆ ಪರೋಲ್ ಕೂಡ ತಿರಸ್ಕರಿಸಲಾಗಿತ್ತು. ತನಿಖಾ ತಂಡ ಪ್ರಕರಣದಲ್ಲಿ ಆರೋಪಿಗಳಾಗಿಸುವ ಮೊದಲು ಇವರು ಜೀವನದಲ್ಲಿ ಎಂದೂ ಭೇಟಿಯಾಗಿರಲಿಲ್ಲ. ಒಬ್ಬ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದ. ಈ ಹುಡುಗನಿಗೆ ಈ ಜಗತ್ತು ಏನೆಂದು ಗೊತ್ತಿಲ್ಲದೆ 23 ವರ್ಷ ಕಳೆದು ಹೋಗಿದೆ. ನಿರಪರಾಧಿಗಳೆಂದು ಬಿಡುಗೆಯಾದರೂ ನಮಗೆ ಜೀವನವೇ ನಷ್ಟವಾಯಿತು. ತಂದೆ,ತಾಯಿ, ನಿಕಟ ಸಂಬಂಧಿಕರ ಅಂತ್ಯಕ್ರಿಯೆಗಳನ್ನು ಕೂಡ ನೋಡಲು ಆಗಿಲ್ಲ. ಸಹೋದರಿಗೆ ಮದುವೆಯಾಗಿ ಅವರ ಮಕ್ಕಳಿಗೆ ಈಗ ಮದುವೆ ವಯಸ್ಸು ಎಂದು ನಿರಪರಾಧಿಗಳೊಬ್ಬರು ನಿಟ್ಟುಸಿರಿಟ್ಟಿದ್ದಾರೆ.