✍️ ಏ.ಕೆ. ಕುಕ್ಕಿಲ
- ವಲಿ ದರಜಾಲಿ ದುಸ್ಲಿಕ್
- ಪರ್ಗಾನಾ
ಇವು ಎರಡೂ ಉಜ್ಬೆಕಿಸ್ತಾನಕ್ಕೆ ಸಂಬಂಧಿಸಿದ್ದು. ಕ್ರಮ ಸಂಖ್ಯೆ 1, ಗೆಳೆತನವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಸರಕಾರ ಕೊಡುವ ಪ್ರಶಸ್ತಿಯಾದರೆ, ಕ್ರಮ ಸಂಖ್ಯೆ 2, ಬಾಬರ್ ಚಕ್ರವರ್ತಿ ಹುಟ್ಟಿದ ಊರಿನ ಹೆಸರು.
1526 ರಲ್ಲಿ ಉಜ್ಬೆಕಿಸ್ತಾನದಿಂದ ಹೊರಟ ಬಾಬರ್, ದೆಹಲಿ ಸುಲ್ತಾನ ಇಬ್ರಾಹೀಮ್ ಲೋಧಿಯನ್ನು ಪಾಣಿಪತ್ ಎಂಬಲ್ಲಿ ಎದುರಿಸಿ ಸೋಲಿಸಿದ. ಇಲ್ಲಿಂದ ಮೊಘಲ್ ಆಡಳಿತ ಪ್ರಾರಂಭವಾಯಿತು. 1527ರಲ್ಲಿ ಮೇವಾಡದ ರಜಪೂತ ದೊರೆ ರಾಣಾ ಸಂಗ್ರಾಮ್ ಸಿಂಗ್ನನ್ನು ಕಾನ್ವಾ ಎಂಬಲ್ಲಿ ನಡೆದ ಯುದ್ಧದಲ್ಲಿ ಸೋಲಿಸುವ ಮೂಲಕ ಮೊಘಲ್ ಆಡಳಿತಕ್ಕೆ ಗಟ್ಟಿ ಅಡಿಪಾಯವನ್ನು ಹಾಕಿದ. ಇಲ್ಲಿಂದ ಸುಮಾರು 200 ವರ್ಷಗಳ ಕಾಲ ಮೊಘಲರು ಈ ದೇಶವನ್ನು ಆಳಿದರು. ಈಗಿನ ಭಾರತದ ನಕಾಶೆಯಂತೆ ಅವರ ಆಳ್ವಿಕೆಯ ದೇಶದ ನಕಾಶೆ ಇದ್ದಿರಲಿಲ್ಲವಾದರೂ ಈ 200 ವರ್ಷಗಳ ಆಡಳಿತದಲ್ಲಿ ಮೊಘಲರು ಈ ದೇಶಕ್ಕೆ ಕೊಟ್ಟ ಕೊಡುಗೆ ನಿಜಕ್ಕೂ ಅಪಾರ. ಮೊಘಲರೆಂದರೆ,
ಮಂದಿರ ಕೆಡವಿದವರು, ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿದವರು, ಇಸ್ಲಾಮನ್ನು ಬಲವಂತದಿಂದ ಹರಡಿದವರು, ಜಿಝಿಯಾ ತೆರಿಗೆ ಹಾಕಿದವರು.. ಎಂಬಿತ್ಯಾದಿ ಅರ್ಧ ಸತ್ಯ ಮತ್ತು ಕೆಲವೊಮ್ಮೆ ಪೂರ್ಣ ಸುಳ್ಳುಗಳು ವರ್ತಮಾನ ಭಾರತವನ್ನು ಆಳುತ್ತಿರುವ ಈ ದಿನಗಳಲ್ಲಿ ಬಾಬರ್ನಿಂದ ಹಿಡಿದು ಹುಮಾಯೂನ್, ಅಕ್ಬರ್, ಶಹಜಹಾನ್ ಮತ್ತು ಔರಂಗಝೇಬ್ನ ಕಾಲದ ವರೆಗೆ ಮೊಘಲರಿಂದ ಈ ದೇಶಕ್ಕೆ ನೀಡಲಾದ ಕೊಡುಗೆ ಗಳು ಬಹುತೇಕ ವಿಸ್ಮೃತಿಗೆ ಒಳಗಾಗುತ್ತಿವೆ. ಆಡಳಿತ, ಸಂಸ್ಕೃತಿ, ಕಲೆ, ಸಾಹಿತ್ಯ, ಭಾಷೆ, ಚಿತ್ರಕಲೆ, ಸಂಗೀತ, ಪಾಕಶಾಲೆ, ಧಾರ್ಮಿಕ ಸಹಿಷ್ಣುತೆ, ವಿಜ್ಞಾನ-ತಂತ್ರಜ್ಞಾನ, ಸೇನೆ.. ಇತ್ಯಾದಿ ಕ್ಷೇತ್ರಗಳಿಗೆ ಮೊಘಲ್ ದೊರೆಗಳು ನೀಡಿರುವ ಅಭೂತಪೂರ್ವ ಕೊಡುಗೆಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತಿದೆ. ‘ಔರಂಗಝೇಬನು ಜಿಝಿಯಾ ಎಂಬ ಅತಿಕ್ರೂರ ತೆರಿಗೆ ಪದ್ಧತಿಯನ್ನು ಹಿಂದೂಗಳ ಮೇಲೆ ಹೇರಿದ ಮತ್ತು ಮಂದಿರ ನಾಶ ಮಾಡಿದ..’ ಎಂಬ ಆರೋಪವು 200 ವರ್ಷಗಳ ಮೊಘಲ್ ಆಡಳಿತದ ಅಷ್ಟೂ ಅವಧಿಯನ್ನು ಕಪ್ಪು ಪಟ್ಟಿಗೆ ಸೇರಿಸುವಷ್ಟು ಇವತ್ತು ಭಾರತದಲ್ಲಿ ಪ್ರಬಲವಾಗಿದೆ. ನಿಜ ಏನೆಂದರೆ,
ಭಾರತದಲ್ಲಿ ಜಿಝಿಯಾ ಆರಂಭಿಸಿದ್ದು ಔರಂಗಝೇಬ ಅಲ್ಲ. ಮೊಘಲರಿಗಿಂತಲೂ ಮೊದಲಿನ ದೆಹಲಿ ಸುಲ್ತಾನರ ಕಾಲದಲ್ಲಿಯೇ ಜಿಝಿಯಾ ಜಾರಿಯಲ್ಲಿತ್ತು ಮತ್ತು ಅದು ಮೂಲತಃ ಕ್ರೂರ ಪದ್ಧತಿಯೂ ಆಗಿರಲಿಲ್ಲ. ಮುಸ್ಲಿಮರು ತಮ್ಮ ಆದಾಯದ ನಿರ್ದಿಷ್ಟ ಪಾಲನ್ನು ಕಡ್ಡಾಯವಾಗಿ ದಾನ ಮಾಡಬೇಕಾಗಿತ್ತು. ಅದಕ್ಕೆ ಝಕಾತ್ ಎಂದು ಹೆಸರು. ಇದು ಮುಸ್ಲಿಮರಿಗೆ ಮಾತ್ರ ಸೀಮಿತವಾಗಿತ್ತು ಮತ್ತು ಮುಸ್ಲಿಮೇತರರು ಝಕಾತ್ ಕೊಡುವ ಹಾಗಿರಲಿಲ್ಲ. ಆದಾಯವು ನಿರ್ದಿಷ್ಟ ಮಿತಿಯನ್ನು ದಾಟಿದಾಗ ಈ ಝಕಾತ್ ಅನ್ವಯವಾಗುತ್ತಿತ್ತು. ಮಳೆಯಾಧಾರಿತ ಬೆಳೆಗೆ 10% ಮತ್ತು ನೀರಾವರಿ ಕೃಷಿಗೆ 5% ಝಕಾತ್ ನೀಡಬೇಕಾಗಿತ್ತು. ವ್ಯಾಪಾರ, ಉದ್ಯಮ ಇತ್ಯಾದಿ ಎಲ್ಲಾ ರೀತಿಯ ಚಟುವಟಿಕೆಗೂ ಝಕಾತ್ ಕಡ್ಡಾಯವಾಗಿತ್ತು. ಇದೇವೇಳೆ,
ಮುಸ್ಲಿಮೇತರರು ಪಾವತಿಸಬೇಕಾದ ತೆರಿಗೆಯನ್ನು ಜಿಝಿಯಾ ಎಂದು ಕರೆಯಲಾಗುತ್ತಿತ್ತು. ಸೇನಾ ನೇಮಕಾತಿಯಿಂದ ವಿನಾಯಿತಿಯನ್ನು ಬಯಸುವ ಮುಸ್ಲಿಮೇತರರು ದೇಶದ ರಕ್ಷಣೆಗಾಗಿ ಜಿಝಿಯಾ ಹೆಸರಿನ ತೆರಿಗೆಯನ್ನು ಪಾವತಿಸಬೇಕಾಗಿತ್ತು. ಇದು ವಯಸ್ಕ ಪುರುಷರ ಮೇಲೆ ವಿಧಿಸಲಾಗುವ ವಾರ್ಷಿಕ ತಲಾವಾರು ತೆರಿಗೆ ಎಂದೂ ಹೇಳಬಹುದು. ಬಾಬರ್ ಮತ್ತು ಹುಮಾಯೂನ್ ಈ ತೆರಿಗೆ ಪದ್ಧತಿಯನ್ನು ಮುಂದುವರಿಸಿದರು. ಅಕ್ಬರ್ ಈ ಪದ್ಧತಿಯನ್ನು ಕೈಬಿಟ್ಟು ಸುಲ್-ಎ-ಕುಲ್ ಅಥವಾ ಒಂದೇ ತೆರಿಗೆಯನ್ನು ಪ್ರಾರಂಭಿಸಿದ. ಔರಂಗಝೇಬ ಮತ್ತೆ ಹಳೇ ತೆರಿಗೆ ಪದ್ಧತಿಯನ್ನು ಒಪ್ಪಿಕೊಂಡ.
ಜಿಝಿಯಾ ಎಂಬುದು ಆಯಾ ದೊರೆಗಳು ಆಡಳಿತಾತ್ಮಕ ದೃಷ್ಟಿಯಿಂದ ಮಾಡಿಕೊಂಡ ನೀತಿಗಳೇ ಹೊರತು ಹಿಂದೂಗಳನ್ನು ಸತಾಯಿಸುವುದಕ್ಕೆ ತೆಗೆದುಕೊಂಡ ನಿರ್ಧಾರವಾಗಿರಲಿಲ್ಲ. ಒಂದುವೇಳೆ ಹಿಂದೂಗಳನ್ನು ಸತಾಯಿಸಿ ಮುಸ್ಲಿಮರನ್ನು ಓಲೈಸುವುದು ಮೊಘಲ್ ದೊರೆಗಳ ಉದ್ದೇಶವಾಗಿದ್ದರೆ, ಝಕಾತನ್ನು ರದ್ದು ಮಾಡಬಹುದಿತ್ತು. ಜಿಝಿಯಾಕ್ಕೆ ಹೋಲಿಸಿದರೆ ಇದು ಹೆಚ್ಚು ಸವಾಲಿನದ್ದಾಗಿತ್ತು. ಸೇನೆಗೆ ಸೇರಿದರೂ ಸೇರದಿದ್ದರೂ ಸಂಪತ್ತಿನಿಂದ ನಿರ್ದಿಷ್ಟ ಪಾಲನ್ನು ಸರಕಾರಕ್ಕೆ ಸಲ್ಲಿಸುವು ದನ್ನು ಮುಸ್ಲಿಮರ ಧಾರ್ಮಿಕ ಕರ್ತವ್ಯವಾಗಿ ಕಾಣಲಾಗಿತ್ತು. ಆದರೆ, ಮುಸ್ಲಿಮೇ ತರರಿಗೆ ಈ ಒತ್ತಡ ಇರಲಿಲ್ಲ. ಸೇನೆಗೆ ಸೇರಿದರೆ ಜಿಝಿಯಾ ಮುಕ್ತವಾಗುತ್ತಿದ್ದರು.
ಇಲ್ಲಿ ಇನ್ನೂ ಒಂದು ಅಂಶ ಇದೆ.
ಹಿಂದೂಗಳನ್ನು ಇಸ್ಲಾಮ್ಗೆ ಬಲವಂತದಿಂದ ಮತಾಂತರಿಸುವುದು ಔರಂಗಝೇಬನ ಉದ್ದೇಶವಾಗಿರುತ್ತಿದ್ದರೆ ಝಕಾತನ್ನು ರದ್ದುಪಡಿಸಿ ಹಿಂದೂಗಳನ್ನು ಇಸ್ಲಾಮ್ಗೆ ಆಕರ್ಷಿಸಬಹುದಿತ್ತು. ಒಂದೋ ಜಿಝಿಯಾ ಪಾವತಿಸಿ ಅಥವಾ ಮುಸ್ಲಿಮ್ ಆಗಿ ತೆರಿಗೆಮುಕ್ತರಾಗಿ ಎಂದು ಘೋಷಿಸಬಹುದಿತ್ತು. ಆದರೆ, ಜಿಝಿಯಾಕ್ಕೆ ಹೋಲಿಸಿದರೆ ಹಲವು ಪಟ್ಟು ಕಠಿಣವಾಗಿರುವ ಝಕಾತನ್ನು ಔರಂಗಝೇಬ್ ಕಡ್ಡಾಯಗೊಳಿಸಿದ. ಈ ನೆಲೆಯಲ್ಲಿ ನೋಡಿದರೆ ಝಕಾತ್ ಮತ್ತು ಜಿಝಿಯಾ ಎಂಬುದು ಮುಸ್ಲಿಮರಿಗೆ ಮತ್ತು ಮುಸ್ಲಿಮೇತರರಿಗೆ ವಿಧಿಸಲಾಗುತ್ತಿದ್ದ ತೆರಿಗೆಗಳ ಹೆಸರುಗಳೇ ಹೊರತು ಇನ್ನೇನಲ್ಲ ಎಂದು ಗೊತ್ತಾಗುತ್ತದೆ. ಅಂದಹಾಗೆ,
ಬಾಬರ್ನಿಂದ ಔರಂಗಝೇಬನ ವರೆಗೆ ಮೊಘಲ್ ದೊರೆಗಳ ಮೇಲೆ ಮಂದಿರ ನಾಶದ ಆರೋಪಗಳಿವೆ. ವರ್ತಮಾನ ಭಾರತವು ಮೊಘಲ್ ದೊರೆಗಳನ್ನು ಹಿಂದೂ ದ್ವೇಷಿಗಳಂತೆ ನೋಡುವುದಕ್ಕೆ ಈ ಆರೋಪಗಳೇ ಬಹುಮುಖ್ಯ ಕಾರಣ ಇರಬಹುದು. ಹಾಗಂತ, ಮಂದಿರಗಳ ಮೇಲೆ ದಾಳಿ ಮಾಡಿದವರು ಮೊಘಲ್ ದೊರೆಗಳು ಅಥವಾ ಮುಸ್ಲಿಮ್ ರಾಜರು ಮಾತ್ರವಾ ಎಂಬ ಪ್ರಶ್ನೆಯನ್ನು ಇಂದಿನ ಭಾರತ ಅಷ್ಟಾಗಿ ಕೇಳುತ್ತಿಲ್ಲ. ನಿಜ ಏನೆಂದರೆ,
ದೇವಾಲಯಗಳ ಮೇಲಿನ ದಾಳಿಗೆ ಹಿಂದೂ ದೊರೆ ಮತ್ತು ಮುಸ್ಲಿಮ್ ದೊರೆ ಎಂಬ ಭೇದವೇ ಇರಲಿಲ್ಲ. 1069ರಿಂದ 1101ರ ವರೆಗೆ ಆಡಳಿತ ನಡೆಸಿದ ಕಾಶ್ಮೀರದ ರಾಜ ಹರ್ಷನು ಮಂದಿರ ಧ್ವಂಸಕ್ಕಾಗಿ ದೇವೋತ್ಪಾಟನಾ ನಾಯಕ ಎಂಬ ವಿಶೇಷ ಹುದ್ದೆ ಮತ್ತು ಸಚಿವಾಲಯವನ್ನೇ ಸ್ಥಾಪಿಸಿದ್ದನು. ಕಲ್ಹಣನ ರಾಜತರಂಗಿಣಿ ಕೃತಿಯಲ್ಲಿ ಈ ಬಗ್ಗೆ ವಿಸ್ತೃತ ವಿವರಗಳಿವೆ. ಈತ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗುವುಕ್ಕಾಗಿ ಸತತವಾಗಿ ದೇವಾಲಯಗಳನ್ನು ಲೂಟಿ ಮಾಡಿದ. ಸುಮಾರು 4 ಸಾವಿರ ಬೌದ್ಧ ಮತ್ತು ಹಿಂದೂ ದೇವಾಲಯಗಳನ್ನು ಈತ ಧ್ವಂಸಗೊಳಿಸಿದ್ದಾನೆ ಎಂಬ ವರದಿಗಳಿವೆ. ರಾಷ್ಟ್ರಕೂಟರ ದೊರೆ 3ನೇ ಇಂದ್ರನು ಪ್ರತಿಹಾರರ ಪ್ರಮುಖ ದೇವಾಲಯವನ್ನು ನಾಶಪಡಿಸಿದನು.
ಇವೆರಡೂ ಬಾಬರ್ ಭಾರತಕ್ಕೆ ಬರುವುದಕ್ಕಿಂತ 500 ವರ್ಷಗಳ ಮೊದಲೇ ನಡೆದ ಘಟನೆಗಳಾಗಿವೆ. ಇವರಲ್ಲದೇ,
ಪಲ್ಲವರು, ಚಾಲುಕ್ಯರು, ಪಾಂಡ್ಯರು, ಚೋಳರು, ವಿಜಯನಗರದ ಅರಸರೂ ಸೇರಿ ದಂತೆ 7ನೇ ಶತಮಾನದಿಂದಲೇ ಅನೇಕ ಹಿಂದೂ ರಾಜರುಗಳು ಶತ್ರುಗಳ ದೇವಾಲಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಸಂಪತ್ತು ದೋಚಿದ್ದಾರೆ. ಆ ಕಾಲದಲ್ಲಿ ರಾಜಮನೆತನದ ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿರಲಿಲ್ಲ. ಅವು ರಾಜನ ಅಧಿಕಾರ ಮತ್ತು ಸಂಪತ್ತಿನ ಪ್ರಮುಖ ಸಂಕೇತಗಳಾಗಿದ್ದುವು. ಇವುಗಳನ್ನು ಧ್ವಂಸ ಮಾಡುವುದೆಂದರೆ, ತನ್ನ ರಾಜಕೀಯ ಪ್ರತಿಸ್ಪರ್ಧಿಯನ್ನು ಅವಮಾನಿಸುವುದು ಎಂದಾಗಿತ್ತು. ಆತನ ಸಾರ್ವಭೌಮತ್ವಕ್ಕೆ ಸವಾಲು ಒಡ್ಡುವುದರ ಭಾಗವಾಗಿಯೂ ಅದನ್ನು ಪರಿಗಣಿಸಲಾಗುತ್ತಿತ್ತು. ಇದರ ಹಿಂದೆ ಧಾರ್ಮಿಕ ದ್ವೇಷ ಇರಲಿಲ್ಲ. ತನ್ನ ಎದುರಾಳಿಯನ್ನು ಅವಮಾನಿಸುವುದು ಮತ್ತು ಸಂಪತ್ತನ್ನು ಲೂಟಿ ಮಾಡುವುದೇ ಗುರಿಯಾಗಿತ್ತು. ಆದರೆ,
ವರ್ತಮಾನ ಭಾರತವು ಪೂರ್ವಕಾಲದ ದೊರೆಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿರುವುದಲ್ಲದೇ, ಮುಸ್ಲಿಮ್ ದೊರೆಯ ಮಂದಿರ ದಾಳಿಯನ್ನು ಮಾತ್ರ ತಾರಕ ಸದ್ದಿನೊಂದಿಗೆ ಅಪರಾಧೀಕರಿಸುತ್ತಿದೆ ಮತ್ತು ಹಿಂದೂ ದೊರೆಗಳ ಮಂದಿರ ನಾಶವನ್ನು ಅಡಗಿಸುತ್ತಿದೆ. ಅಲ್ಲದೇ, ಯಾರಾದರೂ ಈ ಬಗ್ಗೆ ಪ್ರಶ್ನೆ ಎತ್ತಿದರೆ, ಅವರ ತೇಜೋವಧೆಗೈದು ಬಾಯಿ ಮುಚ್ಚಿಸುತ್ತಿದೆ. ಅಂದಹಾಗೆ,
ಆಡಳಿತಾತ್ಮಕವಾಗಿ ಮನ್ಸಬ್ದಾರಿ ಎಂಬ ವಿನೂತನ ವ್ಯವಸ್ಥೆಯನ್ನು ಪರಿಚಯಿಸಿದ್ದು ಇದೇ ಮೊಘಲರು. ಮನ್ಸಬ್ ಎಂದರೆ ಶ್ರೇಣಿ ಎಂದರ್ಥ. ಸರಳವಾಗಿ ಹೇಳಬೇಕೆಂದರೆ, ಶ್ರೇಯಾಂಕ ವೇತನ ವ್ಯವಸ್ಥೆ.. ಇದು ಧರ್ಮಾಧಾರಿತವಾಗಿರಲಿಲ್ಲ. ಇದರಿಂದಾಗಿ ಭಾರೀ ಸಂಖ್ಯೆಯಲ್ಲಿ ಹಿಂದೂಗಳು ತಮ್ಮ ಯೋಗ್ಯತೆಯ ಆಧಾರದಲ್ಲಿ ಉನ್ನತ ಶ್ರೇಣಿಯ ವೇತನವನ್ನು ಪಡೆಯತೊಡಗಿದರು. ಅಧಿ ಕಾರಿಗಳನ್ನು ನಿಯಮಿತವಾಗಿ ವರ್ಗಾಯಿಸಲಾಗುತ್ತಿತ್ತು. ಇದರಿಂದಾಗಿ ಓರ್ವ ಅಧಿಕಾರಿ ಒಂದೇ ಸ್ಥಳಕ್ಕೆ ಅಂಟಿಕೊಂಡು ಅಧಿಕಾರ ದುರುಪಯೋಗಿಸುವುದು ತಪ್ಪುವಂತಾಯಿತು. ಆಡಳಿತಗಾರರು ಮತ್ತು ಸೇನೆಯ ಏಕೀಕೃತ ವ್ಯವಸ್ಥೆಯನ್ನು ರಚಿಸುವುದು ಇದರಿಂದ ಸಾಧ್ಯವಾಯಿತಲ್ಲದೇ ಬೃಹತ್ ಸಾಮ್ರಾಜ್ಯವನ್ನು ಹತೋಟಿಯಲ್ಲಿಡಲೂ ಸಾಧ್ಯವಾಯಿತು. ಸಾಮ್ರಾಜ್ಯವನ್ನು ಪ್ರಾಂತ್ಯ(ಸುಬಾ)ಗಳಾಗಿ ವಿಭಜಿಸಿ ಸುಬೇದಾರರನ್ನು ನೇಮಿಸಲಾಯಿತು. ಇವತ್ತಿಗೂ ಈ ವ್ಯವಸ್ಥೆ ದೇಶದಲ್ಲಿ ಮುಂದುವರಿದಿದೆ. ಅಲ್ಲದೇ, ಭೂಮಿಯ ಉತ್ಪಾದನೆಯನ್ನು ಆಧರಿಸಿ ತೆರಿಗೆ ನಿಗದಿಪಡಿಸಲಾಯಿತು. ಇದುವೇ ಆನಂತರ ಬ್ರಿಟಿಷ್ ಆಡಳಿತಕ್ಕೂ ಮತ್ತು ಸ್ವತಂತ್ರ ಭಾರತಕ್ಕೂ ಮಾದರಿಯಾಯಿತು. ಒಂದುರೀತಿಯಲ್ಲಿ,
ಸ್ವತಂತ್ರ ಭಾರತದಲ್ಲಿ ಭೂಕಂದಾಯ, ಜಿಲ್ಲಾಡಳಿತ ಮತ್ತು ನೌಕರಶಾಹಿ ಮಾದರಿಗಳ ಮೇಲೆ ಮೊಘಲರ ಈ ಆಡಳಿತ ನೀತಿ ಸಾಕಷ್ಟು ಪ್ರಭಾವ ಬೀರಿದುವು. ವಿಶೇಷ ಏನೆಂದರೆ,
17ನೇ ಶತಮಾನದಲ್ಲಿ ಮೊಘಲ್ ಆಳ್ವಿಕೆಯ ಭಾರತವು ವಿಶ್ವದ ಜಿಡಿಪಿಯ ಸುಮಾರು 24% ದಷ್ಟು ಪಾಲನ್ನು ಹೊಂದಿತ್ತು. ಅಂದಹಾಗೆ,
ಮೊಘಲರ ವಾಸ್ತುಶಿಲ್ಪವಂತೂ ಭಾರತಕ್ಕೆ ಬಹುದೊಡ್ಡ ಕೊಡುಗೆಯಾಗಿದೆ. ತಾಜ್ಮಹಲ್, ದೆಹಲಿಯ ಕೆಂಪುಕೋಟೆ ಮತ್ತು ಜಾಮಾ ಮಸೀದಿ, ಆಗ್ರಾ ಕೋಟೆ, ಶಾಲಿಮಾರ್ ಉದ್ಯಾನವನಗಳು ಇವತ್ತಿಗೂ ಆಧುನಿಕ ಭಾರತದ ಅಮೋಘ ಮತ್ತು ಅತ್ಯಪೂರ್ವ ರಚನೆಗಳಾಗಿ ಜನರನ್ನು ಸೆಳೆಯುತ್ತಿವೆ. ಆಡಳಿತ ಭಾಷೆಯಾಗಿದ್ದ ಪರ್ಷಿಯನ್ ಭಾಷೆಯು ಹಿಂದಿಯ ಮೇಲೆ ಅಪಾರ ಪ್ರಭಾವ ಬೀರಿತು. ಮಹಾಭಾರತದ ಪರ್ಷಿಯನ್ ಅನುವಾದವೂ ಮೊಘಲರ ಕಾಲದಲ್ಲಿ ನಡೆಯಿತು. ಹಿಂದೂಸ್ತಾನಿ ಸಂಗೀತಕ್ಕೆ ಮೊಘಲರು ಅಪಾರ ಕೊಡುಗೆ ನೀಡಿದರು.
ಘಜಲ್ಗಳನ್ನು ಪರಿಚಯಿಸಿದರು. ಮೊಘಲೈ ಬಿರಿಯಾನಿ ಸಹಿತ ಹಲವು ಪಾಕಪದ್ಧತಿಯನ್ನೂ ಪರಿಚಯಿಸಿದರು. ಅಷ್ಟಕ್ಕೂ,
ಈ ಎಲ್ಲವನ್ನೂ ಇಲ್ಲಿ ಸ್ಮರಿಸಿಕೊಳ್ಳುವು ದಕ್ಕೆ ಒಂದು ಕಾರಣ ಇದೆ.
ಆಧುನಿಕ ಭಾರತದಲ್ಲಿ ಮುಸ್ಲಿಮರನ್ನು ಬಾಬರ್ ಸಂತಾನಗಳು ಅಥವಾ ಬಾಬರ್ ಕಿ ಔಲಾದ್ ಎಂದು ತಿವಿಯಲಾಗುತ್ತಿದೆ. ಬಾಬರ ಕೆಟ್ಟವ ಮತ್ತು ಭಾರತದ ಈಗಿನ ಮುಸ್ಲಿಮರು ಆ ಕೆಟ್ಟ ಬಾಬರನ ಸಂತತಿಗಳು ಎಂದು ನಿಂದಿಸುವ ಈ ಕೃತ್ಯದಲ್ಲಿ ಬಿಜೆಪಿ ನಾಯಕರು ಮುಂಚೂಣಿಯಲ್ಲಿದ್ದಾರೆ. ಗೃಹ ಸಚಿವ ಅಮಿತ್ ಶಾರಿಂದ ಹಿಡಿದು ತಳ ಮಟ್ಟದ ಕಾರ್ಯಕರ್ತರ ವರೆಗೆ ಈ ನಿಂದನೆ ಮುಂದುವರಿದಿದೆ. ಆದರೆ, ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರು ಇದೇ ಬಾಬರನ ಹುಟ್ಟೂರಾದ ಉಜ್ಬೆಕಿಸ್ತಾನಕ್ಕೆ ಹೋದರು. ಮಾತ್ರವಲ್ಲ, ಬಾಬರನ ಸಂತಾನ ಪರಂಪರೆಯವರಾದ ಉಜ್ಬೆಕಿಸ್ತಾನದ ಅಧ್ಯಕ್ಷ ಶೌಕತ್ ಮಿರ್ಝಿಯೆಯೋವ್ ಅವರಿಂದ ವಲಿ ದರಜಾಲಿ ದುಸ್ಲಿಕ್ ಎಂಬ ಪ್ರಶಸ್ತಿಯನ್ನೂ ಸ್ವೀಕರಿಸಿದರು. ಒಂದುಕಡೆ, ಭಾರತೀಯ ಮುಸ್ಲಿಮರನ್ನು ಬಾಬರನ ಸಂತಾನಗಳು ಎಂದು ಅವಮಾನಿಸುವುದು ಮತ್ತು ಇನ್ನೊಂದು ಕಡೆ, ಅದೇ ಬಾಬರನ ಸಂತಾನದಿಂದ ಪ್ರಶಸ್ತಿಯನ್ನು ಸ್ವೀಕರಿಸುವುದು- ಇವರೆಡರ ಅರ್ಥ ಏನು? ನಿಜ ಏನೆಂದರೆ,
ಭಾರತೀಯ ಮುಸ್ಲಿಮರು ಬಾಬರನ ಸಂತಾನದವರಲ್ಲ. ಬಾಬರ್ನ ಆನಂತರ ದವರೆಲ್ಲ ಮದುವೆಯಾಗಿದ್ದು ಮತ್ತು ಮಣ್ಣಾದದ್ದು ಇದೇ ಮಣ್ಣಿನಲ್ಲಿ. ಆದರೆ, ಉಜ್ಬೆಕಿಸ್ತಾನದ ಅಧ್ಯಕ್ಷ ಶೌಕತ್ ಅವರು ನಿಜಕ್ಕೂ ಬಾಬರನ ಸಂತಾನವೇ. ಅವರು ಭಾರತೀಯರನ್ನು ಮದುವೆಯಾಗಿಲ್ಲ. ಭಾರತಕ್ಕೆ ನಿಷ್ಠರೂ ಆಗಿಲ್ಲ. ಆದರೆ, ಅಪ್ಪಟ ಭಾರತೀಯರನ್ನು ಬಾಬರನ ಸಂತಾನಗಳೆಂದು ಕರೆಯುವುದು ಮತ್ತು ಅಪ್ಪಟ ಬಾಬರನ ಸಂತಾನದವರಿಂದ ಪ್ರಶಸ್ತಿ ಸ್ವೀಕರಿಸುವುದೆಂದರೆ ಏನು? ಒಂದು ರೀತಿಯಲ್ಲಿ,
ಮೊಘಲರ 200 ವರ್ಷಗಳ ಆಡಳಿ ತವು ಭಾರತಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಅದನ್ನು ಧೈರ್ಯದಿಂದ ಹೇಳ ಬೇಕಾಗಿದೆ ಮತ್ತು ಪ್ರೊಪಗಂಡಾವನ್ನು ಮಣಿಸಬೇಕಾಗಿದೆ.












