ಇಸ್ರೇಲನ್ನು ಒಂಟಿಯಾಗಿಸಿದ ತೂಫಾನುಲ್ ಅಖ್ಸಾ

0
499

✍️ ಏ.ಕೆ. ಕುಕ್ಕಿಲ

2023 ಸೆ. 22

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾಷಣಕ್ಕೆ ನಿಂತರು. ಅವರ ದೇಹಭಾಷೆಯೇ ಅವರಲ್ಲಿರುವ ಆತ್ಮವಿಶ್ವಾಸವನ್ನು ಸೂಚಿಸುತ್ತಿತ್ತು. ವಿಜಯಶಾಲಿಯ ಮುಖಭಾವ ಅವರದಾಗಿತ್ತು. ಅದಕ್ಕೆ ಕಾರಣ ಅರಬ್ ರಾಷ್ಟçಗಳ ಜೊತೆಗಿನ ಅಬ್ರಹಾಂ ಒಪ್ಪಂದ. ಯುಎಇ, ಬಹರೇನ್, ಸುಡಾನ್ ಮತ್ತು ಮೊರೊಕ್ಕೊ ದೇಶಗಳ ಜೊತೆ ನಡೆಸಲಾದ ಯಶಸ್ವಿ ಒಪ್ಪಂದದ ಹೆಸರೇ ಅಬ್ರಹಾಂ ಒಪ್ಪಂದ.

'The Abraham accords were a pivot of history-ಅಬ್ರಹಾಂ ಒಪ್ಪಂದವು ಇತಿಹಾಸದ ಒಂದು ಪ್ರಮುಖ ತಿರುವು..’ಎಂದು ವಿಶ್ವಸಂಸ್ಥೆಯ ವೇದಿಕೆಯಲ್ಲಿ ನಿಂತು ಅವರು ಘೋಷಿಸಿದರು.

`There is no question, the Abraham accords heralded the dawn of new age of peace- ಅಬ್ರಹಾಂ ಒಪ್ಪಂದವು ಶಾಂತಿಯ ಹೊಸ ಯುಗದ ಉದಯ ವನ್ನು ಸೂಚಿಸಿದೆ ಎಂಬುದರಲ್ಲಿ ಸಂದೇಹವೇ ಇಲ್ಲ..’ ಎಂದು ಪಶ್ಚಿಮ ಏಷ್ಯಾದಲ್ಲಿ ಮುಂಬರುವ ಬದಲಾವಣೆಗಳ ಶುಭ ಸೂಚನೆಯಾಗಿ ಅವರು ಅದನ್ನು ಉಲ್ಲೇಖಿಸಿದರು.

ಈ ಮೇಲಿನ ನಾಲ್ಕು ಅರಬ್ ರಾಷ್ಟ್ರಗಳಲ್ಲದೇ ಸೌದಿ ಅರೇಬಿಯಾದೊಂದಿಗೆ ಸಂಬಂಧ ಸಹಜಗೊಳಿಸುವ ಮತ್ತು ಅದು ಕೂಡಾ ಅಬ್ರಹಾಂ ಒಪ್ಪಂದದ ಭಾಗವಾಗುವ ಸೂಚನೆ ನೀಡಿದರು. ಎಲ್ಲಿಯವರೆಗೆಂದರೆ, ಸೌದಿ ಅರೇಬಿಯಾ ಒಪ್ಪಂದದ ಹೊಸ್ತಿಲಲ್ಲಿದೆ’ ಎಂದರು. ಫೆಲೆಸ್ತೀನ್ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಮುನ್ನವೇ ಅರಬ್ ದೇಶಗಳು ಮತ್ತು ಇಸ್ರೇಲ್ ನಡುವೆ ಶಾಂತಿ ಮತ್ತು ಸಹಕಾರವನ್ನು ಮುಂದುವರಿಸುವುದಾಗಿಯೂ ನೇತನ್ಯಾಹು ಘೋಷಿಸಿದರು.ಕಳೆದ 25 ವರ್ಷಗಳಲ್ಲಿ ‘ತಜ್ಞರ’ ಪ್ರಯತ್ನ ಹೇಗೆ ವಿಫಲವಾಗಿದೆ ಮತ್ತು ಈಗ ತಾನು ಪ್ರತಿಪಾದಿಸಿದ ರೀತಿಯಲ್ಲಿಯೇ ಹೇಗೆ ಈ ಒಪ್ಪಂದ ನಡೆದಿದೆ ಎಂದೂ ಹೇಳಿದರು. ಅಂದರೆ, ಇಸ್ರೇಲ್ ಜೊತೆ ಸಂಬಂಧವನ್ನು ಸಹಜಗೊಳಿಸುವುದಕ್ಕೆ ಈಗ ಫೆಲೆಸ್ತೀನ್ ವಿವಾದ ಒಂದು ತಡೆಗೋಡೆಯಾಗಿಲ್ಲ ಎಂದೇ ಇದರ ಅರ್ಥವಾಗಿತ್ತು. ಹೀಗೆ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಎಂಬ ಕೂಗನ್ನು ಯಶಸ್ವಿಯಾಗಿ ಅರಬ್ ಜಗತ್ತಿನ ಮರಳುಗಾಡಿನಲ್ಲಿ ಹೂತು ಹಾಕಿದ್ದಾನೆ ಎಂದು ನೇತನ್ಯಾಹು ಘೋಷಿಸಿದ 15 ದಿನಗಳ ಬಳಿಕ ಅಂದರೆ, 2023 ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ರಣಭೀಕರ ದಾಳಿ ನಡೆಸಿತು.

ಅಲ್ಲಿಗೆ ಎಲ್ಲವೂ ಕೊನೆಗೊಂಡಿತು.

ಹಾಗಂತ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೇತನ್ಯಾಹು ಮಾಡಿದ ಭಾಷಣಕ್ಕೂ ಹಮಾಸ್‌ನ ಈ ದಾಳಿಗೂ ಸಂಬಂಧ ಇದೆ ಎಂದು ಹೇಳಲಾಗದು. ಇಲ್ಲ ಎಂದೂ ತಿರಸ್ಕರಿಸಲೂ ಆಗದು. ಫೆಲೆಸ್ತೀನ್ ಸಮಸ್ಯೆಯು ಅಂತಾರಾಷ್ಟ್ರೀಯ ಗಮನದಿಂದ ಬಹುತೇಕ ಮರೆಯಾಯಿತು ಎಂಬ ಸ್ಥಿತಿ ಇದ್ದಾಗಲೇ ಹಮಾಸ್‌ನಿಂದ ‘ತೂಫಾನುಲ್ ಅಖ್ಸಾ’ ಎಂಬ ಈ ದಾಳಿ ನಡೆಯಿತು. ಈ ದಾಳಿ ನಡೆಯುವುದಕ್ಕಿಂತ ಕೆಲವೇ ದಿನಗಳ ಮೊದಲು ಅಮೇರಿಕದ ಅಧ್ಯಕ್ಷ ಜೋ ಬೈಡನ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯಾಕ್ ಸುಲ್ಲಿವಾನ್ ಅವರು ಒಂದು ಹೇಳಿಕೆ ನೀಡಿದ್ದರು. ಅದೇನೆಂದರೆ, ‘ಮಧ್ಯಪ್ರಾಚ್ಯದ ಪರಿಸ್ಥಿತಿಯು ಕಳೆದ ಎರಡು ದಶಕಗಳಲ್ಲೇ ಅತ್ಯಂತ ಶಾಂತಿಯುತವಾಗಿದೆ’. ಇಂಥ ಸ್ಥಿತಿಯಲ್ಲೇ ಇಸ್ರೇಲ್‌ನ ಎಲ್ಲ ಭದ್ರತಾ ವ್ಯವಸ್ಥೆಯನ್ನು ಛಿದ್ರಗೊಳಿಸಿ ಹಮಾಸ್ ದಾಳಿ ನಡೆಸಿತು. ಇದರ ಬೆನ್ನಲ್ಲೇ ಫೆಲೆಸ್ತೀನ್ ಸಮಸ್ಯೆ ಮತ್ತೆ ಜಗತ್ತಿನ ಗಮನ ಸೆಳೆಯಿತು. ಮಾತ್ರವಲ್ಲ, ಇಸ್ರೇಲ್ ಮತ್ತು ಸೌದಿ ಅರೇಬಿಯಾದ ನಡುವೆ ನಡೆಯಬೇಕಿದ್ದ ಅಬ್ರಹಾಂ ಶಾಂತಿ ಒಪ್ಪಂದವು ಸ್ಥಗಿತಗೊಂಡಿತು. ಒಂದುವೇಳೆ, ಈ ಒಪ್ಪಂದ ನಡೆಯುತ್ತಿದ್ದರೆ, ಆ ಬಳಿಕ ಇಸ್ರೇಲನ್ನು ತಡೆಯುವವರು ಯಾರೂ ಇರಲಿಲ್ಲ.

ಅರಬ್ ರಾಷ್ಟ್ರಗಳ ನಾಯಕನ ಸ್ಥಾನದಲ್ಲಿರುವ ಮತ್ತು ಜಾಗತಿಕ ಮುಸ್ಲಿಮರ ಕೇಂದ್ರಬಿಂದುವಾದ ಮಕ್ಕಾ ಮತ್ತು ಮದೀನಾದ ಒಡೆತನವನ್ನು ಹೊಂದಿರುವ ಸೌದಿಯು ಇಸ್ರೇಲ್ನೊಂದಿಗೆ ಸಹಜ ಸಂಬಂಧವನ್ನು ಸ್ಥಾಪಿಸುವುದೆಂದರೆ, ಇಸ್ರೇಲ್ ರಾಷ್ಟ್ರಕ್ಕೆ ಅಂಗೀಕಾರ ನೀಡಿದಂತೆ. ಆ ಬಳಿಕ ಇಸ್ರೇಲ್ ಜೊತೆ ವಿಮಾನಯಾನ ಸೇವೆ ಆರಂಭಗೊಳ್ಳುತ್ತಿತ್ತು. ವ್ಯಾಪಾರ ಸಂಬಂಧ ಆರಂಭವಾಗುತ್ತಿತ್ತು. ಇಸ್ರೇಲಿ ನಾಗರಿಕರು ಸೌದಿ ಅರೇಬಿಯಾಕ್ಕೆ ತಡೆಯಿಲ್ಲದೇ ಭೇಟಿ ಕೊಡಬಹುದಿತ್ತು. ಇಸ್ರೇಲ್ ಉದ್ಯಮಿಗಳು ಸೌದಿಯಲ್ಲಿ ಹೂಡಿಕೆ ಮಾಡಲು ಮತ್ತು ಅಲ್ಲಿನ ನಾಗರಿಕರು ಸೌದಿಯಲ್ಲಿ ಉದ್ಯೋಗಿಗಳಾಗಿ ನೆಲೆಸುವುದಕ್ಕೆ ಅವಕಾಶ ಒದಗುತ್ತಿತ್ತು. ಈಗಾಗಲೇ ಅಬ್ರಹಾಂ ಒಪ್ಪಂದದ ಬಳಿಕ ಯುಎಇ ಮತ್ತು ಇಸ್ರೇಲ್ ನಡುವೆ ಕೇವಲ 2025ರ ಒಂದೇ ವರ್ಷದಲ್ಲಿ ಸುಮಾರು 15 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಲಕ್ಷಾಂತರ ಇಸ್ರೇಲಿ ನಾಗರಿಕರು ಯುಎಇಗೆ ಭೇಟಿ ನೀಡಿದ್ದಾರೆ. ಒಪ್ಪಂದದ ಬಳಿಕ ಯುಎಇ ಮತ್ತು ಇಸ್ರೇಲ್ ನಡುವೆ 2020ರಲ್ಲಿ 200 ಮಿಲಿಯನ್ ಡಾಲರ್ ವ್ಯಾಪಾರ ನಡೆದರೆ 2024ರಲ್ಲಿ ಅದು 3 ಬಿಲಿಯನನ್ನೂ ಮೀರಿದೆ. 2023ರಲ್ಲಿ ಉಚಿತ ವ್ಯಾಪಾರ ಒಪ್ಪಂದ ಜಾರಿಗೆ ಬಂತು. ರಾಯ ಭಾರ ಕಚೇರಿಗಳ ಸ್ಥಾಪನೆಯಾಯಿತು. ಇಸ್ರೇಲ್‌ನಿಂದ ಸುಮಾರು 2 ಬಿಲಿಯನ್ ಡಾಲರ್ ಮೌಲ್ಯದ ಮಿಲಿಟರಿ ಸಲಕರಣೆಯನ್ನು ಮೊರೊಕ್ಕೋ ಖರೀದಿಸಿತು. ಎಲ್ಲ ಅರಬ್ ರಾಷ್ಟ್ರಗಳನ್ನು ಅಬ್ರಹಾಂ ಒಪ್ಪಂದದಲ್ಲಿ ಸೇರಿಸುವ ಬೃಹತ್ ಯೋಜನೆಯ ನೀಲನಕ್ಷೆಯನ್ನು ನೇತನ್ಯಾಹು ತಯಾರಿಸಿದ್ದರು. ಆದರೆ,

2023 ಅಕ್ಟೋಬರ್ 7, ಆ ನೀಲನಕ್ಷೆ ರದ್ದಿಯಾಗುವಂತೆ ಮಾಡಿತು.

ಹಾಗಂತ, ಇಸ್ರೇಲ್ ಮೇಲಿನ ದಾಳಿಯಿಂದ ಗಾಝಾ ಪಡಕೊಂಡದ್ದೇನು ಎಂಬ ಪ್ರಶ್ನೆ ಇದೆ. ಹಾಗೆಯೇ ಇಸ್ರೇಲ್‌ಗೆ ಇದರಿಂದ ಆಗಿರುವ ಹಾನಿ ಏನು ಎಂಬ ಸವಾಲೂ ಇದೆ.

ಹೌದು,ಗಾಝಾದಲ್ಲಿ ಮರಣ ಮೃದಂಗವಾಗಿದೆ. ಗಾಝಾ ಈವರೆಗೆ ಕಂಡೂ ಕೇಳರಿಯದ ವಿನಾಶಕ್ಕೆ ತುತ್ತಾಗಿದೆ. 70 ಸಾವಿರದಿಂದ 1 ಲಕ್ಷವನ್ನೂ ಮೀರಿ ಜನರ ಪ್ರಾಣಾಹುತಿಯಾಗಿದೆ. ಅಸಂಖ್ಯ ಮಂದಿ ಅಂಗವಿಕಲರಾಗಿದ್ದಾರೆ. ಅನಾಥರಾಗಿದ್ದಾರೆ. ವಿಧವೆಯರಾಗಿದ್ದಾರೆ. ಶಾಲೆಗಳು, ಆಸ್ಪತ್ರೆಗಳು, ಗ್ರಂಥಾಲಯಗಳು ನಾಶವಾಗಿವೆ. ಕೃಷಿ ಕ್ಷೇತ್ರ ಮರುಭೂಮಿಯಾಗಿದೆ. ಗಾಝಾ ಮತ್ತೆ ಮೊದಲಿನಂತಾಗಬೇಕಾದರೆ ದಶಕಗಳೇ ಬೇಕಾದೀತು ಎಂಬುದೂ ಸರಿ. ಆದರೆ,

ಗಾಝಾದ ಮೇಲೆ ಇಸ್ರೇಲ್ ನಡೆಸಿದ ಈ ಪ್ರತೀಕಾರದ ದಾಳಿಯೇ ಇವತ್ತು ಇಸ್ರೇಲನ್ನು ಜಾಗತಿಕವಾಗಿ ಒಂಟಿಯಾಗಿಸಿದೆ. 2023 ಅ. 7 ರಂದು ಜಾಗತಿಕ ರಾಷ್ಟ್ರಗಳ ಕಣ್ಣಿನಲ್ಲಿ ಹಮಾಸ್ ಖಳನಾಯಕನಾಗಿತ್ತು. ಆದರೆ, 2026 ಅಕ್ಟೋಬರ್ 7ರಂದು ನೋಡಿದರೆ ಆ ಖಳನಾಯಕನ ಜಾಗದಲ್ಲಿ ಇಸ್ರೇಲ್ ಕೂತಿದೆ.ಗಾಝಾದ ಮೇಲೆ ಇಸ್ರೇಲ್ ಅತಿಯಾದ ಪ್ರತಿಕ್ರಿಯೆ ನೀಡಿದೆ ಮತ್ತು ಯುದ್ಧಾಪರಾಧವನ್ನು ಮಾಡಿದೆ’ ಎಂಬುದಾಗಿ, ಈಗ ಹೆಚ್ಚಿನ ಎಲ್ಲಾ ರಾಷ್ಟ್ರಗಳೂ ಹೇಳುತ್ತಿವೆ. ಈ ದಾಳಿಯನ್ನು ವಿರೋಧಿಸಿ ಬೊಲಿವಿಯಾ, ಕೊಲಂಬಿಯಾ, ಬೆಲಿಜ್, ನಿಕರಾಗುವಾ ರಾಷ್ಟ್ರಗಳು ಇಸ್ರೇಲ್ ಜೊತೆ ಪೂರ್ಣ ಪ್ರಮಾಣದಲ್ಲಿ ಸಂಬಂಧವನ್ನು ಕಡಿದುಕೊಂಡವು. ಚಿಲಿ, ಹೊಂಡುರಾಸ್, ಜೋರ್ಡಾನ್, ಟರ್ಕಿ, ದಕ್ಷಿಣ ಆಫ್ರಿಕಾ, ಬಹರೇನ್, ಚಾಡ್, ಬ್ರೆಝಿಲ್ ದೇಶಗಳು ಇಸ್ರೇಲ್‌ನಲ್ಲಿರುವ ತಮ್ಮ ರಾಯಭಾರಿಗಳನ್ನು ಹಿಂಪಡೆದುಕೊಂಡವು. ಬಹರೇನ್ ದೇಶವು ರಾಯಭಾರಿಯನ್ನು ಹಿಂಪಡೆಯುವುದರ ಜೊತೆಗೇ ಆರ್ಥಿಕ ಸಂಬಂಧವನ್ನೂ ಕಡಿದು ಕೊಂಡಿತು. ಇದರ ಜೊತೆಗೇ ಉಂಟಾದ ಇನ್ನೊಂದು ಪ್ರಬಲ ಮತ್ತು ಪರಿಣಾಮಕಾರಿ ಬೆಳವಣಿಗೆ ಏನೆಂದರೆ, ಇಸ್ರೇಲ್‌ನ ಪರ ವಹಿಸುತ್ತಾ ಬಂದಿದ್ದ ಯುರೋಪಿಯನ್ ರಾಷ್ಟ್ರಗಳೇ ತಿರುಗಿ ಬಿದ್ದವು. ಇಂಗ್ಲೆಂಡ್, ಫ್ರಾನ್ಸ್, ಕೆನಡಾ, ಸ್ಪೇನ್, ಐರ್ಲೆಂಡ್ ಮತ್ತು ನಾರ್ವೆ ದೇಶಗಳು ಇದೇ ಮೊದಲ ಬಾರಿಗೆ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ಬೆಂಬಲ ಸಾರಿದುವು ಮತ್ತು ಅಧಿಕೃತವಾಗಿ ಮಾನ್ಯತೆ ನೀಡಿದುವು.

ಯುರೋಪಿಯನ್ ರಾಷ್ಟ್ರಗಳಲ್ಲಿ ಇಸ್ರೇಲ್ ವಿರೋಧಿ ಚರ್ಚೆಗಳು ಭಾರೀ ದೊಡ್ಡ ಮಟ್ಟದಲ್ಲಿ ನಡೆದುವು. ಇಸ್ರೇಲ್‌ನೊಂದಿಗೆ ವ್ಯಾಪಾರ ಒಪ್ಪಂದವನ್ನು ನಿಲ್ಲಿಸುವ ಬೆದರಿಕೆ ಹಾಕಿದುವು. ಇಸ್ರೇಲ್ ಆಕ್ರಮಿತ ವಸಾಹತು ಪ್ರದೇಶದಲ್ಲಿ ಉತ್ಪಾದಿತ ಸರಕುಗಳ ಮೇಲೆ ನಿರ್ಬಂಧ ವಿಧಿಸಿದುವು. ಇಸ್ರೇಲ್‌ಗೆ ಕೆಲವು ಶಸ್ತ್ರಾಸ್ತ್ರಗಳು ರಫ್ತಿಗೆ ನಿಷೇಧ ಹೇರಿದುವು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಸ್ರೇಲ್ ಒಂಟಿಯಾಯಿತು. ಫೆಲೆಸ್ತೀನ್‌ಗೆ ಮಾನವೀಯ ನೆರವು ನೀಡುವ ಬಗ್ಗೆ, ಯುದ್ಧ ವಿರಾಮದ ಬಗ್ಗೆ ಮತ್ತು ಫೆಲೆಸ್ತೀನ್‌ಗೆ ಬೆಂಬಲ ನೀಡುವ ಬಗ್ಗೆ 150ಕ್ಕಿಂತಲೂ ಅಧಿಕ ರಾಷ್ಟ್ರಗಳು ಪರವಾಗಿ ಮತ ಹಾಕಿದುವು. ಅಮೇರಿಕ ಮತ್ತು ಇಸ್ರೇಲ್ ಹಲವು ಬಾರಿ ಒಂಟಿಯಾದುವು. ಇದೇವೇಳೆ, ಇಸ್ರೇಲ್‌ನ ಪ್ರಬಲ ಬೆಂಬಲಿಗ ರಾಷ್ಟ್ರವಾದ ಅಮೇರಿಕದ ನಾಗರಿಕರೇ ಇಸ್ರೇಲ್ ವಿರುದ್ಧ ನಿಂತರು. Pew research ಮತ್ತು Gallup ಸಂಸ್ಥೆಗಳು ನಡೆಸಿದ ಸಮೀಕ್ಷೆಗಳ ಫಲಿತಾಂಶವಂತೂ ಇನ್ನಷ್ಟು ಆಘಾತಕಾರಿಯಾಗಿತ್ತು. 2022ರಲ್ಲಿ 42% ಅಮೇರಿಕನ್ ನಾಗರಿಕರು ಇಸ್ರೇಲ್‌ಗೆ ವಿರುದ್ಧ ಇದ್ದರೆ 2025-26ರಲ್ಲಿ ಈ ವಿರೋಧ 60%ಕ್ಕೆ ಏರಿತು. ಯುವ ಸಮೂಹ ದೊಡ್ಡ ಸಂಖ್ಯೆಯಲ್ಲಿ ಫೆಲೆಸ್ತೀನ್ ಪರ ನಿಂತಿರುವುದೂ ಸಮೀಕ್ಷೆಯಿಂದ ಗೊತ್ತಾಯಿತು.

ಆಸ್ಟ್ರೇಲಿಯಾ, ಸ್ಪೇನ್, ಸ್ವೀಡನ್, ನೆದರ್‌ಲ್ಯಾಂಡ್ ಮುಂತಾದ ದೇಶಗಳಲ್ಲಿ 75% ಹೆಚ್ಚು ಜನರು ಇಸ್ರೇಲ್ ವಿರೋಧಿ ನಿಲುವನ್ನು ಪ್ರಕಟಿಸಿದರು. ಇಸ್ರೇಲ್ ಉತ್ಪನ್ನಗಳಿಗೆ ಜಗತ್ತಿನ ಎಲ್ಲೆಲ್ಲೂ ಬಹಿಷ್ಕಾರದ ಕೂಗು ಮೊಳಗಿತು. ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ನೇತನ್ಯಾಹು ಮತ್ತು ಅವರ ಸಚಿವ ಸಂಪುಟದ ಸದಸ್ಯರ ವಿರುದ್ಧ ಬಂಧನ ವಾರಂಟ್ ಹೊರಡಿಸಿತು. ಅವರನ್ನು ಯುದ್ಧಾಪರಾಧಿ ಎಂದು ಘೋಷಿಸಿತು. ಇದರಿಂದಾಗಿ ಇವರ ವಿದೇಶಿ ಪ್ರಯಾಣದ ಮೇಲೆ ನಿಯಂತ್ರಣಗಳು ಹೇರಲ್ಪಟ್ಟವು. ಐತಿಹಾಸಿಕ ಕಾರಣಗಳಿಂದಾಗಿ ಪಾಶ್ಚಾತ್ಯ ಜಗತ್ತಿನಲ್ಲಿ ಇಸ್ರೇಲ್‌ಗೆ ದೊರೆಯುತ್ತಿದ್ದ ಜಾಗತಿಕ ಸಹಾನುಭೂತಿಯೂ ಗಾಝಾದ ಮೇಲಿನ ದಾಳಿಯ ಬಳಿಕ ಕರಗುತ್ತಾ ಹೋಯಿತು. ಎಲ್ಲಿಯವರೆಗೆಂದರೆ,

ನೇತನ್ಯಾಹು ಅವರಿಗೆ ಜಗತ್ತಿನಲ್ಲಿ ಸುರಕ್ಷಿತ ಸ್ಥಳ ಎಂಬುದು ಇಸ್ರೇಲ್ ಬಿಟ್ಟರೆ ಎಲ್ಲೂ ಇಲ್ಲ ಎಂಬಂತಾಗಿದೆ. 2026 ಸೆ. 24ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿವಹಿಸಲೆಂದು ನ್ಯೂಯಾರ್ಕ್ಗೆ ತೆರಳಿದರು. ಆದರೆ, ಎಲಾನ್ ಮಸ್ಕ್ ಜೊತೆ ಉದ್ದೇಶಿತ ಭೇಟಿಯನ್ನೂ ಮಾಡದೇ ಟ್ರಂಪ್‌ರನ್ನೂ ಕಾಣದೇ ಸಭೆಯಲ್ಲಿ ಸಂಕ್ಷಿಪ್ತ ಭಾಷಣ ಮಾಡಿ ತುರ್ತು ತುರ್ತಾಗಿ ಇಸ್ರೇಲ್‌ಗೆ ಮರಳಿದರು. 6ರಿಂದ 8 ಗಂಟೆಯ ವರೆಗಷ್ಟೇ ಅಮೇರಿಕದಲ್ಲಿದ್ದ ಅವರು, ಇಷ್ಟು ಅವಸರದಿಂದ ಅಮೇರಿಕ ಬಿಡುವುದಕ್ಕೆ ಪ್ರತಿಭಟನೆಯ ಭಯವೇ ಕಾರಣ ಎಂದು ಹೇಳಲಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೇತನ್ಯಾಹು ಭಾಷಣ ಮಾಡುವಾಗ ಅಮೇರಿಕದ ಅನೇಕ ನಗರಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದುವು. ಅನೇಕರನ್ನು ಬಂಧಿಸಲಾಯಿತು. Stop arming Israel, Let Gaza Live… ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದ್ದರು. ಇವರು ಭಾಷಣ ಮಾಡುವಾಗ ಅನೇಕ ರಾಷ್ಟ್ರಗಳ ಪ್ರತಿನಿಧಿಗಳು ಸಭಾತ್ಯಾಗ ಮಾಡಿದರು. ಅದರಲ್ಲೂ, ಎಲಾನ್ ಮಸ್ಕ್ ಅವರನ್ನು ಭೇಟಿಯಾಗುವುದಕ್ಕಾಗಿ ಇಸ್ರೇಲ್ ನಿಂದ ವಿಶೇಷ ನಿಯೋಗವು ನೇತನ್ಯಾಹು ಅವರಿಗಿಂತ ಮೊದಲೇ ಅಮೇರಿಕಕ್ಕೆ ಹೋಗಿತ್ತು ಮತ್ತು ಅಲ್ಲಿ ನೇತನ್ಯಾಹು ಆ ನಿಯೋಗದ ಜೊತೆಗೂಡಿ ಮಾತಾಡುವುದು ಎಂಬ ವೇಳಾಪಟ್ಟಿ ನಿಗದಿಯಾಗಿತ್ತು. ಇಷ್ಟೆಲ್ಲಾ ಇದ್ದೂ ನೇತನ್ಯಾಹು ಇತಿಹಾಸದಲ್ಲೇ ಅತೀ ಸಂಕ್ಷಿಪ್ತ ಭೇಟಿಗೆ, ಭದ್ರತಾ ಕಳವಳವೇ ಕಾರಣ ಎಂದು ಹೇಳಲಾಗಿದೆ. ಅಮೇರಿಕದಲ್ಲಿ ರಾತ್ರಿ ಉಳಿದುಕೊಂಡರೆ ಪ್ರತಿಭಟನೆ ಹೆಚ್ಚಾಗಬಹುದು ಎಂಬ ಭಯವೇ ಅವರು ತಕ್ಷಣ ಅಮೇರಿಕ ತೊರೆಯಲು ಕಾರಣ ಎಂದು ಹೇಳಲಾಗಿದೆ.

2023 ಅಕ್ಟೇಬರ್ 7ರ ದಾಳಿಗೆ ಮೂರು ವರ್ಷಗಳಾದ ಈ ಸಮಯದಲ್ಲಿ ರಾಗ-ದ್ವೇಷ ಇಲ್ಲದೇ ಒಟ್ಟು ಬೆಳವಣಿಗೆಯನ್ನು ಹರಡಿ ಕುಳಿತಾಗ, ಇಸ್ರೇಲ್ ಈ ಹಿಂದೆಂದಿಗಿಂತಲೂ ಹೆಚ್ಚು ಒಂಟಿಯಾದಂತೆ ಕಾಣಿಸುತ್ತಿದೆ. ಗಾಝಾದ ಸ್ಮಶಾನ ಸದೃಶ ಸ್ಥಿತಿ ಯಲ್ಲೂ ಜೀವಕಳೆ ಕಾಣಿಸುತ್ತಿದೆ. ಆ ದಾಳಿಯು ಅಬ್ರಹಾಂ ಒಪ್ಪಂದವನ್ನು ನುಚ್ಚುನೂರು ಗೊಳಿಸಿತು. ಇಸ್ರೇಲ್‌ನ ತೆಕ್ಕೆಗೆ ಸೇರಬಹುದಾದ ಸೌದಿಗೆ ಬಹುದೊಡ್ಡ ತಡೆಗೋಡೆಯನ್ನು ಹಾಕಿತು. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ನಿರೀಕ್ಷಿಸಲೂ ಸಾಧ್ಯವಿಲ್ಲದ ಇಂಗ್ಲೆಂಡ್, ಫ್ರಾನ್ಸ್, ಇಟಲಿ ಮುಂತಾದ ರಾಷ್ಟ್ರಗಳಿಂದಲೇ ಮಾನ್ಯತೆ ದೊರಕಿಸಿಕೊಟ್ಟಿತು. ನೇತನ್ಯಾಹು ಅವ ರನ್ನು ಯುದ್ಧಾಪರಾಧಿಯನ್ನಾಗಿ ಮಾಡಿತು. ಇಸ್ರೇಲ್ ನಾಗರಿಕರನ್ನು ಜಗತ್ತಿನ ಹತ್ತು-ಹಲವು ರಾಷ್ಟ್ರಗಳಲ್ಲಿ ಅಪರಾಧಿಗಳಂತೆ ನಡೆಸಿಕೊಳ್ಳಲಾಯಿತು.