ಸನ್ಮಾರ್ಗ ವಾರ್ತೆ
ವಾಷಿಂಗ್ಟನ್: ಇರಾನ್ ನಡೆಸಿದ ಸರಣಿ ದಾಳಿಯಿಂದಾಗಿ ಬಹ್ರೇನ್‌ನಲ್ಲಿರುವ ಅಮೆರಿಕದ ಪ್ರಮುಖ ನೌಕಾ ನೆಲೆ ‘ನೇವಲ್ ಸಪೋರ್ಟ್ ಆಕ್ಟಿವಿಟಿ ಬಹ್ರೇನ್’ಗೆ ವ್ಯಾಪಕ ಹಾನಿಯಾಗಿದೆ ಎಂದು ವರದಿಯಾಗಿದೆ. ಈ ನೆಲೆಯನ್ನು ದುರಸ್ತಿ ಮಾಡಿ ಮರುಸ್ಥಾಪಿಸಬೇಕೇ ಅಥವಾ ಇತರ ಪರ್ಯಾಯಗಳನ್ನು ಹುಡುಕಬೇಕೇ ಎಂಬುದನ್ನು ಅಮೆರಿಕ ನೌಕಾಪಡೆಯು ಪರಿಶೀಲಿಸುತ್ತಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ಅಮೆರಿಕದ ನೌಕಾಪಡೆಯ ಮಧ್ಯಪ್ರಾಚ್ಯ ಕೇಂದ್ರ ಕಮಾಂಡ್ ಮತ್ತು ಅಮೆರಿಕದ ಐದನೇ ನೌಕಾಪಡೆಯ ನೆಲೆಯಾಗಿರುವ ಈ ಕೇಂದ್ರವು, ಮಧ್ಯಪ್ರಾಚ್ಯದಲ್ಲಿ ಅಮೆರಿಕದ ನೌಕಾ ಕಾರ್ಯಾಚರಣೆಗಳಿಗೆ ಮುಖ್ಯ ಲಾಜಿಸ್ಟಿಕ್ಸ್ ಹಬ್ ಆಗಿದೆ.
ನೆಲೆಗೆ ಆಗಿರುವ ಹಾನಿಯ ಬಗ್ಗೆ ಅಮೆರಿಕದ ಅಧಿಕಾರಿಯೊಬ್ಬರು ಉಲ್ಲೇಖಿಸುತ್ತಾ, “ಅವರು ಬಹ್ರೇನ್ ಅನ್ನು ನಾಶಪಡಿಸಿದ್ದಾರೆ” ಎಂದು ಹೇಳಿರುವುದಾಗಿ ಮಾಧ್ಯಮ ವರದಿಯಾಗಿದೆ. ನೆಲೆಯ ಭವಿಷ್ಯವನ್ನು ಅಧ್ಯಯನ ಮಾಡಲು ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಮತ್ತೊಂದಡೆ, ನೆಲೆಗೆ ಆಗಿರುವ ಹಾನಿಯನ್ನು ಗಮನಿಸಿದರೆ ಅಮೆರಿಕದ ಪಡೆಗಳು ಸದ್ಯದಲ್ಲೇ ನೆಲೆಗೆ ಹಿಂತಿರುಗುವ ಸಾಧ್ಯತೆಯಿಲ್ಲ ಎಂದು ಅಮೆರಿಕ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಡೇರಿಲ್ ಕಾಲ್ಡ್ವೆಲ್ ಹೇಳಿದ್ದಾರೆ. ಜೋರ್ಡಾನ್‌ನಲ್ಲಿರುವ ಮುವಾಫಕ್ ಸಾಲ್ಟಿ ವಾಯುನೆಲೆಯನ್ನು ಗುರಿಯಾಗಿಸಿ ಇರಾನ್ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ಹಲವಾರು ವಿಮಾನಗಳು ಹಾನಿಗೊಳಗಾಗಿವೆ ಎಂದೂ ವರದಿಯಾಗಿದೆ.
ಇದೇ ವೇಳೆ, ಹಾರ್ಮುಝ್ ಜಲಸಂಧಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಹಿಂದಿನ ದಿನ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಡಗು ಮಾರ್ಗದಲ್ಲಿ ಅಮೆರಿಕದ ಸೇಲ್-ಡ್ರೋನ್ ಶೈಲಿಯ ಮಾನವರಹಿತ ನೌಕೆಯ ಮೇಲೆ ದಾಳಿ ಮಾಡಿದೆ ಎಂದು ಘೋಷಿಸಿತ್ತು.












