✍️ ರಾಮ್ ಪುನಿಯಾನಿ
ಅಧ್ಯಕ್ಷರು, ಸೆಂಟರ್ ಫಾರ್ ಸ್ಟಡೀ ಆಫ್ ಸೊಸೈಟಿ ಆಂಡ್ ಸೆಕ್ಯೂಲರಿಸಂ
ಆರ್ಎಸ್ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಮೂರು ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಮೊದಲಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದು, ಅಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ನಲ್ಲಿ ದೊಡ್ಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಭೆಗೆ 5000ಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇತ್ತು. ಆರ್ಎಸ್ಎಸ್ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು ಸರಿಪಡಿಸುವುದು, ಸಂವಾದ ನಡೆಸುವುದು ಮತ್ತು ಸಾರ್ವತ್ರಿಕ ಏಕತೆಯ ಸಂದೇಶವನ್ನು ಸಾರುವುದು ಈ ಭೇಟಿಯ ಮುಖ್ಯ ಉದ್ದೇಶ ಎಂದು ಹೇಳಲಾಗಿತ್ತು.
ಈ ಸಭೆ ನಡೆಯುವುದಕ್ಕೂ ಮುಂಚೆ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದವು. ಸುಮಾರು 61 ಮಾನವ ಹಕ್ಕುಗಳ ಸಂಘಟನೆಗಳು ಒಟ್ಟಾಗಿ ಆರ್ಎಸ್ಎಸ್ ಮತ್ತು ಸಂಘ ಪರಿವಾರದ ದ್ವೇಷದ ರಾಜಕಾರಣವನ್ನು ಖಂಡಿಸಿದವು. ಯಹೂದಿಗಳನ್ನು ಹತ್ಯೆ ಮಾಡಿದ್ದಕ್ಕೆ ಹಿಟ್ಲರ್ನನ್ನು ಹೊಗಳಿ, ಅದೇ ರೀತಿಯಲ್ಲಿ ಹಿಂದೂ ರಾಷ್ಟ್ರವನ್ನು ಕಟ್ಟಬೇಕು ಎಂದು ಆರ್ಎಸ್ಎಸ್ ಬರೆದಿರುವ ಸಂಗತಿಗಳನ್ನು ಪ್ರತಿಭಟನಾಕಾರರು ಎತ್ತಿತೋರಿಸಿದರು. ಅಲ್ಲದೆ, ಆರ್ಎಸ್ಎಸ್ ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದೆ ಎಂದು ಬರೆದಿದ್ದ ಬ್ಯಾನರ್ಗಳನ್ನು ಪ್ರದರ್ಶಿಸಿದರು. ಭಾರತೀಯ ಮೂಲದ ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಕೂಡ ಆರ್ಎಸ್ಎಸ್ ಅನ್ನು ಟೀಕಿಸಿದರು. ಕಾರ್ಯಕ್ರಮವನ್ನು ನಿಲ್ಲಿಸಲು ತಮಗೆ ಕಾನೂನಾತ್ಮಕವಾಗಿ ಸಾಧ್ಯವಿಲ್ಲ ಎಂಬ ಅಸಹಾಯಕತೆಯನ್ನು ತೋಡಿಕೊಳ್ಳುತ್ತಲೇ, ಈ ಸಮಾರಂಭದ ಕುರಿತಾದ ತಮ್ಮ ಅಸಮಾಧಾನವನ್ನು ಅವರು ಸ್ಪಷ್ಟಪಡಿಸಿದರು.
ಅಲ್ಲದೇ, ಅವರು (ಭಾರತದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅವರ ಪುತ್ರ), ತಾನು ಬೆಳೆದುಬಂದ ಕಾಲದ ಭಾರತವು ಭಿನ್ನತೆಯನ್ನು ಗೌರವಿಸುತ್ತಿತ್ತು ಆದರೆ ಇಂದಿನ ಭಾರತವು ಅಸಹಿಷ್ಣುತೆಯ ದೇಶವಾಗಿ ಮಾರ್ಪಟ್ಟಿದೆ ಎಂದು ನುಡಿದರು. ಮೋಹನ್ ಭಾಗವತ್ ಅವರ ವಿರುದ್ಧದ ಈ ಪ್ರತಿಭಟನೆಯಲ್ಲಿ ಹಲವಾರು ಹಿಂದೂ ಸಂಘಟನೆಗಳು ಹಾಗೂ ಮಾನವ ಹಕ್ಕುಗಳನ್ನು ಬೆಂಬಲಿಸುವ ಇತರರು ಕೂಡ ಕೈಜೋಡಿಸಿದ್ದರು.
ಮುಖ್ಯವಾಗಿ ಅಸ್ಮಿತೆಯ ವಿಚಾರವಾಗಿ ಕೆಲಸ ಮಾಡುವ 200ಕ್ಕೂ ಹೆಚ್ಚು ಸಂಘಟನೆಗಳು ಸೇರಿ ಮೋಹನ್ ಭಾಗವತ್ ಅವರ ಈ ಸಭೆಯನ್ನು ಏರ್ಪಡಿಸಿದ್ದವು. ಸಭೆಯಲ್ಲಿ ಭಾಗವತ್ ಅವರು ತಮ್ಮ ತಾರತಮ್ಯದ ರಾಜಕಾರಣವನ್ನು ಮುಚ್ಚಿಟ್ಟು, ತಾವೊಬ್ಬ ಉದಾರವಾದಿ ಎಂದು ತೋರಿಸಿಕೊಳ್ಳಲು ಪ್ರಯತ್ನಿಸಿದರು. ವೈವಿಧ್ಯತೆಗಳು ನಮ್ಮ ಸಹಜ ಐಕ್ಯತೆಯ ಅಲಂಕಾರ ಎಂದ ಅವರು, ಮುಸ್ಲಿಮರು ಭಾರತ ಬಿಟ್ಟು ಹೋಗಬೇಕು ಎಂದು ಬಯಸುವವರು ಹಿಂದೂ ಆಗಿರಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಘಟನೆಯನ್ನು ಅದರ ಮಾತಿನಿಂದಲ್ಲ ಕೆಲಸದಿಂದ ಅಳೆಯಬೇಕು:
ಅರೇ ಎಷ್ಟು ಉದಾತ್ತ ಮಾತುಗಳನ್ನು ಹೇಳಿದ್ದಾರೆ! ಒಬ್ಬ ವ್ಯಕ್ತಿಯನ್ನು ಅಥವಾ ಸಂಘಟನೆಯನ್ನು ನಾವು ಅಳೆಯುವುದು ಹೇಗೆ? ಅವರ ಬಾಯಿಯ ಮಾತಿನಿಂದಲೋ ಅಥವಾ ಬದುಕಿನ ನಡೆಯಿಂದಲೋ? ವೈವಿಧ್ಯತೆಯಲ್ಲಿ ಏಕತೆ, ಸಮನ್ವಯತೆ(syncretism) ಮತ್ತು ಧರ್ಮದ ಸೀಮೆಗಳನ್ನು ಮೀರಿ ಜನರನ್ನು ಒಗ್ಗೂಡಿಸುವುದೇ ಭಾರತದ ಇತಿಹಾಸದ ವಿಶೇಷತೆಯಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ, ಭಗತ್ ಸಿಂಗ್ ಅವರ ವಿಚಾರಧಾರೆ, ಅಂಬೇಡ್ಕರ್ ಅವರ ಆಶಯಗಳು ಹಾಗೂ ಗಾಂಧೀಜಿಯವರ ಸೋದರತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ದೇಶದ ಜನತೆ ಬ್ರಿಟಿಷ್ ದಾಸ್ಯದಿಂದ ಮುಕ್ತಿಗಾಗಿ ಹೋರಾಡಿದರು. ಆದರೆ, ಒಂದು ಬದಿಯಲ್ಲಿ ಆರ್ಎಸ್ಎಸ್-ಹಿಂದೂ ಮಹಾಸಭಾ ಹಾಗೂ ಇನ್ನೊಂದು ಬದಿಯಲ್ಲಿ ಮುಸ್ಲಿಂ ಲೀಗ್ ಈ ರಾಷ್ಟ್ರೀಯ ಐಕ್ಯತೆಯ ಪ್ರಕ್ರಿಯೆಯಿಂದ ದೂರವೇ ಉಳಿದುಕೊಂಡವು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತಳಪಾಯದ ಮೇಲೆಯೇ ಆ ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಯು ರೂಪುಗೊಂಡಿತ್ತು.
ಈ ಅವಧಿಯಲ್ಲಿ ಆರ್ಎಸ್ಎಸ್ ಭಾರತೀಯ ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಿಂದ ದೂರ ಉಳಿದಿರುವುದು ಮಾತ್ರವಲ್ಲದೆ, ಮುಸ್ಲಿಮರ (ಮತ್ತು ನಂತರ ಕ್ರಿಶ್ಚಿಯನ್ರ) ವಿರುದ್ಧ ದ್ವೇಷವನ್ನು ಹರಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿತು. ವಿವಿಧ ಮಾರ್ಗಗಳ ಮೂಲಕ ಬ್ರಿಟಿಷ್ ಆಡಳಿತಗಾರರಿಗೆ ಸಹಾಯ ಮಾಡಿತು. ತನ್ನ ಶಾಖೆಗಳು, ಶಾಲೆಗಳು, ಮಾಧ್ಯಮಗಳು ಮತ್ತು ನಂತರ ಸಾಮಾಜಿಕ ಜಾಲತಾಣಗಳ ಮೂಲಕ ಅದು ಹರಡಿದ ದ್ವೇಷವು ಕೋಮು ಗಲಭೆಗಳಿಗೆ ಕಾರಣವಾಯಿತು; ಇದರಲ್ಲಿ ಮುಸ್ಲಿಮರೇ ಪ್ರಮುಖ ಬಲಿಪಶುಗಳಾದರು. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಮುಸ್ಲಿಮ್ ಮತ್ತು ಹಿಂದೂ ಕೋಮುವಾದಗಳು ಸಮಾನವಾಗಿ ಸ್ಪರ್ಧಿಸಿದರೆ, ಸ್ವಾತಂತ್ರ್ಯದ ನಂತರ ಆರ್ಎಸ್ಎಸ್ ಕೋಮುವಾದವು ಪ್ರಾಬಲ್ಯ ಸಾಧಿಸಿತು. ಇದು ಎರಡು ಪ್ರಮುಖ ಸಮುದಾಯಗಳ ನಡುವೆ ಆಳವಾದ ಬಿರುಕನ್ನು ಸೃಷ್ಟಿಸಿತು. ಇದೇ ದ್ವೇಷದ ರಾಜಕಾರಣವು 1992ರ ಮುಂಬೈ, 2002ರ ಗುಜರಾತ್, 2012ರ ಮುಝಫ್ಫರ್ನಗರ ಮತ್ತು 2020ರ ದೆಹಲಿಯಲ್ಲಿ ಮುಸ್ಲಿಮರ ಹತ್ಯಾಕಾಂಡಗಳಿಗೆ ಸಾಕ್ಷಿಯಾಯಿತು.
ಗುಜರಾತ್ ತನ್ನ ರಾಜಕೀಯದ ಅಸಲಿ ಬಣ್ಣವನ್ನು ಬಯಲು ಮಾಡಿದೆ; ಬಿಲ್ಕಿಸ್ ಬಾನೊ ಪ್ರಕರಣವೊಂದೇ ಆ ಕರಾಳತೆಯನ್ನು ಸಂಪೂರ್ಣವಾಗಿ ಬಿಚ್ಚಿಡುತ್ತದೆ. ಗರ್ಭಿಣಿಯಾದ ಓರ್ವ ಮುಸ್ಲಿಂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗುತ್ತದೆ; ಅಪರಾಧಿಗಳು ಸೆರೆವಾಸದ ಕೆಲವು ಸಮಯ ಕಳೆದು ಆರಾಮವಾಗಿ ಬಿಡುಗಡೆಯಾಗುತ್ತಾರೆ! ಇದು ಹೆಣ್ಣಿಗೆ ಅವರು ಕೊಡುವ ಗೌರವ! ಇನ್ನು ಗೋವಿನ ಪಾವಿತ್ರ್ಯತೆಯ ಹೆಸರಿನಲ್ಲಿ ಅಖ್ಲಾಕ್, ರಕ್ಬರ್ ಖಾನ್ ಮುಂತಾದ ಮುಸ್ಲಿಮರ ಹಾಗೂ ಹಲವಾರು ದಲಿತರ ಸಾವಿಗೆ ಕಾರಣವಾದ ಗುಂಪು ಹತ್ಯೆಗಳು ನಡೆದುಹೋದವು. ಉನಾದಲ್ಲಿ ದಲಿತರ ಮೇಲೆ ನಡೆದ ಹಲ್ಲೆಯು ದಲಿತ ಸಮುದಾಯದ ಕಡೆಗೆ ಆರ್ಎಸ್ಎಸ್ನ ನಿಜವಾದ ಧೋರಣೆ ಏನೆಂಬುದನ್ನು ಎತ್ತಿ ತೋರಿಸುತ್ತದೆ.
1980ರ ದಶಕದಿಂದ, ಕ್ರಿಶ್ಚಿಯನ್ನರು ಕೂಡ ಸಂಘದ ನೇರ ದಾಳಿಗೆ ಗುರಿಯಾದರು. ಪಾಸ್ಟರ್ ಸ್ಟೇನ್ಸ್ ಅವರನ್ನು ಅವರ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಜೀವಂತವಾಗಿ ದಹಿಸಿದ ಘಟನೆಯನ್ನು, ಭಾರತದ ಅಂದಿನ ರಾಷ್ಟ್ರಪತಿಗಳಾದ ಡಾ. ಕೆ.ಆರ್. ನಾರಾಯಣನ್ ಅವರು ಮಾನವೀಯತೆಯ ಕರಾಳ ಕೃತ್ಯಗಳ ಪಟ್ಟಿಗೆ ಸೇರಿದ್ದು ಎಂದು ಸೂಕ್ತವಾಗಿಯೇ ಕರೆದಿದ್ದರು. ಇನ್ನು ಕಂಧಮಾಲ್ ಹಿಂಸಾಚಾರವು ‘ಕ್ರಿಶ್ಚಿಯನ್ ಧರ್ಮವು ವಿದೇಶಿ ಧರ್ಮ’ ಎಂಬ ಘೋಷಣೆಯನ್ನು ಸಂಘವು ಸಕ್ರಿಯವಾಗಿ ಬಿತ್ತುತ್ತಿತ್ತು ಎಂಬುದನ್ನು ಮತ್ತಷ್ಟು ಸ್ಪಷ್ಟಪಡಿಸಿತು. ಕಳೆದ ಒಂದು ದಶಕದಿಂದ ಅಥವಾ ಅದಕ್ಕಿಂತ ಹೆಚ್ಚಿನ ಕಾಲದಿಂದ ಕೇಂದ್ರದಲ್ಲಿ ಅದರ ರಾಜಕೀಯ ವಿಭಾಗವು ಅಧಿಕಾರಕ್ಕೇರಿದ 12 ವರ್ಷಗಳಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಆರ್ಎಸ್ಎಸ್ನ ಸಂದೇಶವು ಮತ್ತಷ್ಟು ತೀವ್ರಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಪ್ರಾರ್ಥನಾ ಸಭೆಗಳ ಮೇಲಿನ ಹಲ್ಲೆಗಳ ಅಬ್ಬರವು ತೀವ್ರಗತಿಯಲ್ಲಿ ಏರಿಕೆಯಾಗಿದೆ. ಮುಸ್ಲಿಂ ಸಮುದಾಯವನ್ನು ವ್ಯವಸ್ಥಿತವಾಗಿ ಅಂಚಿಗೆ ತಳ್ಳಲಾಗಿದೆ. ಆರ್ಎಸ್ಎಸ್ನ ರಾಜಕೀಯ ಮಗುವಾಗಿರುವ ಬಿಜೆಪಿಗೆ ಇಂದು ಲೋಕಸಭೆ-ವಿಧಾನಸಭೆ ಸೇರಿ ಸಾವಿರಕ್ಕೂ ಅಧಿಕ ಮಂದಿ ಜನಪ್ರತಿನಿಧಿಗಳಿದ್ದರೂ, ಅದರಲ್ಲಿ ಕನಿಷ್ಠ ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿಯೂ ಇಲ್ಲದಿರುವುದು ಗಮನಾರ್ಹ ವಿಷಯವಾಗಿದೆ. ಭಾರತದಲ್ಲಿ ಮುಸ್ಲಿಮರ ಕುರಿತ ಮೋಹನ್ ಭಾಗವತ್ ಅವರ ಧೋರಣೆ ಏನೆಂಬುದನ್ನು ಇದು ಕನ್ನಡಿಯಂತೆ ತೋರಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಗಮನಿಸಿ ಅಮೆರಿಕ ಸರ್ಕಾರಕ್ಕೆ ಸಲಹೆ ನೀಡಲು ರಚಿಸಲಾಗಿರುವ ಸ್ವತಂತ್ರ ಹಾಗೂ ದ್ವಿಪಕ್ಷೀಯ ಒಕ್ಕೂಟ ಸಂಸ್ಥೆಯಾದ ‘ಯುಎಸ್ ಕಮಿಷನ್ ಆನ್ ಇಂಟರ್ನ್ಯಾಶನಲ್ ರಿಲೀಜಿಯಸ್ ಫ್ರೀಡಂ’ (USCIRF), 2025ನೇ ಇಸವಿಯಲ್ಲಿ ಭಾರತವನ್ನು “ವಿಶೇಷ ಕಳಕಳಿಯ ದೇಶ” ಎಂದು ಅಧಿಕೃತವಾಗಿ ಪರಿಗಣಿಸಬೇಕೆಂದು ಅಮೆರಿಕ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಆರ್ಎಸ್ಎಸ್ ಸೇರಿದಂತೆ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ನಿರ್ದಿಷ್ಟ ನಿರ್ಬಂಧಗಳನ್ನು ವಿಧಿಸುವಂತೆಯೂ ಯುಎಸ್ಸಿಐಆರ್ಎಫ್ (USCIRF) ಶಿಫಾರಸು ಮಾಡಿದೆ. ಆಸ್ತಿಗಳನ್ನು ಮುಟ್ಟುಗೋಲು ಹಾಕುವುದು ಮತ್ತು ದೇಶಕ್ಕೆ ಅವರ ಪ್ರವೇಶವನ್ನು ನಿರ್ಬಂಧಿಸುವುದು ಸೂಚಿತ ಕ್ರಮಗಳಲ್ಲಿ ಸೇರಿವೆ. ತೀರಾ ಇತ್ತೀಚೆಗೆ, ಮೋಹನ್ ಭಾಗವತ್ ಮತ್ತು ಇತರ ಆರ್ಎಸ್ಎಸ್ ನಾಯಕರಿಗೆ ಉನ್ನತ ಮಟ್ಟದ ಸಭೆಗಳು ಮತ್ತು ರಾಜತಾಂತ್ರಿಕ ಮರ್ಯಾದೆಗಳನ್ನು ವಿಸ್ತರಿಸುವುದರ ವಿರುದ್ಧ ಯುಎಸ್ಸಿಐಆರ್ಎಫ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹಲವಾರು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಕಾರ್ಯಕರ್ತರು ಕೂಡ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ಮನವಿ ಮಾಡಿ, ಮೋಹನ್ ಭಾಗವತ್ ಅವರ ಅಮೆರಿಕದ ವೀಸಾವನ್ನು ನಿರಾಕರಿಸುವಂತೆ ಅಥವಾ ರದ್ದುಗೊಳಿಸುವಂತೆ ಒತ್ತಾಯಿಸಿವೆ.
ವೈವಿಧ್ಯತೆಯನ್ನು ಗೌರವಿಸುತ್ತೇನೆ ಎಂಬ ಮಾತಿಗೆ ಆರ್ಎಸ್ಎಸ್ನ ಕೆಲಸಗಳೇ ದ್ರೋಹ ಮಾಡುತ್ತಿವೆ:
ವೈವಿಧ್ಯತೆಯನ್ನು ಗೌರವಿಸುತ್ತೇನೆ ಎಂಬ ಮಾತಿಗೆ ಆರ್ಎಸ್ಎಸ್ನ ಕೆಲಸಗಳೇ ಸಂಪೂರ್ಣವಾಗಿ ದ್ರೋಹ ಬಗೆಯುತ್ತಿರಬೇಕಾದರೆ; ಆರ್ಎಸ್ಎಸ್ನ ವಾಸ್ತವಿಕತೆಯನ್ನು ಮುಚ್ಚಿಡುವಲ್ಲಿ ಭಾಗವತ್ ಎಷ್ಟು ಜಾಣರು ಎಂಬುದನ್ನು ಇದು ತೋರಿಸುತ್ತದೆ. ವೈವಿಧ್ಯತೆಯ ಮುಖವಾಡವು ಜಗತ್ತನ್ನು ದಾರಿ ತಪ್ಪಿಸಲು ಪ್ರಯತ್ನಿಸುವ ಒಂದು ತಂತ್ರವಾಗಿದೆ. ಆದರೆ ಈ ಇಂಟರ್ನೆಟ್ ಯುಗದಲ್ಲಿ ಮತ್ತು ಮಾನವ ಹಕ್ಕುಗಳಿಗಾಗಿ ಹಪಹಪಿಸುವ ಈ ಕಾಲದಲ್ಲಿ ಜಗತ್ತು ದಾರಿ ತಪ್ಪಲು ಸಾಧ್ಯವೇ? ಕ್ಯಾರವಾನ್ ಮ್ಯಾಗ್ಝೀನ್ನ ಜಾರಿಯಲ್ಲಿರುವ ಅಧ್ಯಯನದ ಪ್ರಕಾರ ವಿದೇಶಗಳಲ್ಲಿ ಆರ್ಎಸ್ಎಸ್ 2500 ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿದ್ದಾರೆ. ಆದರೆ ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು, ಮಹಿಳೆಯರು, ಆದಿವಾಸಿಗಳು ಮತ್ತು ಕಾರ್ಮಿಕರಿಗೆ ಸಂಬಂಧಿಸಿದಂತೆ ಭಾರತದ ಪರಿಸ್ಥಿತಿಯ ಸತ್ಯವನ್ನು ಹೇಳುವ ಅಂತರರಾಷ್ಟ್ರೀಯ ವಿದ್ವಾಂಸರು ಮತ್ತು ಆಕ್ಟಿವಿಸ್ಟ್ಗಳು ಕೂಡ ಹೇರಳವಾಗಿದ್ದಾರೆ.
ಮೋಹನ್ ಭಾಗವತ್ ಅವರ ಮುಖ್ಯ ಉದ್ದೇಶವು ಸಾರ್ವತ್ರಿಕ ಏಕತೆಯನ್ನು(Universal oneness) ಉತ್ತೇಜಿಸುವುದಾಗಿರಲಿಲ್ಲ, ಬದಲಾಗಿ ಭಾರತದಲ್ಲಿ ಸಂಘ ಪರಿವಾರದ ನಡೆಸಿದ ಭೀಕರ ಕೃತ್ಯಗಳಿಗೆ ಸುಣ್ಣ ಬಳಿದು ಸ್ವಚ್ಛಗೊಳಿಸುವುದಾಗಿತ್ತು. ಆರ್ಎಸ್ಎಸ್-ಬಿಜೆಪಿ ಆಡಳಿತಕ್ಕೆ ಏರುವುದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಹಸಿವಿನ ಸೂಚ್ಯಂಕ ಮತ್ತು ನೆಮ್ಮದಿ ಸೂಚ್ಯಂಕಗಳಲ್ಲಿ ಕುಸಿಯುತ್ತಿರುವುದು ಏಕಕಾಲದಲ್ಲಿ ಸಂಭವಿಸುತ್ತಿದೆ. ಹಿಂದೂ ರಾಷ್ಟ್ರೀಯವಾದಿ ರಾಜಕಾರಣದ ನೇರ ಪರಿಣಾಮವಾಗಿರುವ ದ್ವೇಷದ ರಾಜಕಾರಣವನ್ನು ಮರೆಮಾಚುವಲ್ಲಿ ಭಾಗವತ್ ತೋರಿರುವ ‘ಚತುರತೆ’ಗಾಗಿ ಅವರನ್ನು ಅಭಿನಂದಿಸಲೇಬೇಕು.
ವೈವಿಧ್ಯತೆಯ ಮುಖವಾಡದ ಅಡಿಯಲ್ಲಿ ಅಮೆರಿಕ ಮತ್ತು ವಿದೇಶಗಳಲ್ಲಿ ಹಿಂದೂ ಲಾಬಿಯನ್ನು ಬಲಪಡಿಸುವುದು ಕೂಡ ಅವರ ಗುರಿಯಾಗಿರಬಹುದು. ಆ ಮುಖವಾಡವನ್ನು ಸುಲಭವಾಗಿ ಧರಿಸಿದ್ದಾರೆ ಎಂದು ಅವರು ಭಾವಿಸುತ್ತಿದ್ದಾರೆ. ಭಾರತದಲ್ಲಿ ಶಾಂತಿ ನೆಲೆಸಲು, ಆರ್ಎಸ್ಎಸ್ ಸಂಘಟನೆಯು ವಿರೋಧಿಸುತ್ತಿರುವ ಭಾರತೀಯ ಸಂವಿಧಾನವನ್ನು ಅನುಸರಿಸಬೇಕಾಗಿದೆ. ಸಾರ್ವತ್ರಿಕ ಏಕತೆಗಾಗಿ, ಅತ್ಯುತ್ತಮ ಆಯ್ಕೆಯೆಂದರೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಚಾರ್ಟರ್. ಗ್ಲೋಬಲ್ ವಿಲೇಜ್ನ ಈ ಯುಗದಲ್ಲಿ ಧರ್ಮಗ್ರಂಥವನ್ನು ಉಲ್ಲೇಖಿಸುವುದು ಸಂಪೂರ್ಣವಾಗಿ ಅಪ್ರಸ್ತುತವಾಗಿದೆ ಮತ್ತು ಅದುವೇ ಹಿಂದೂ ಸುಪ್ರಿಮಸಿಯ ನೈಜ ಉದ್ದೇಶವನ್ನು ಬಹಿರಂಗ ಮಾಡುತ್ತದೆ.












