ಸನ್ಮಾರ್ಗ ವಾರ್ತೆ
‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಸಮೀಕ್ಷೆಯೊಂದರ ವೇಳೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸರ್ಕಾರವು 252 ಮದರಸಾಗಳನ್ನು ಮುಚ್ಚುತ್ತಿದ್ದು, ಸುಮಾರು 100 ಮದರಸಾಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ತರಗತಿ ಕೊಠಡಿಗಳ ಸ್ಥಳಾವಕಾಶ, ಸಾಕಷ್ಟು ವಿದ್ಯಾರ್ಥಿಗಳು ಅಥವಾ ಶಿಕ್ಷಕರ ಕೊರತೆ ಹಾಗೂ ರಾಜ್ಯದ ಮಾದರಿ ಶಾಲಾ ಪಠ್ಯಕ್ರಮದಿಂದ ವಿಮುಖವಾಗಿರುವ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ ಈ 252 ಅನುದಾನರಹಿತ ಮದರಸಾಗಳಿಗೆ ಮುಚ್ಚುವಂತೆ ನೋಟಿಸ್ ನೀಡಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಕಾರಣ ಕೇಳಿ ನೀಡಿರುವ ನೋಟಿಸ್ಗಳಿಗೆ ಆ 100 ಮದರಸಾಗಳಿಂದ ಬರುವ ಉತ್ತರಗಳು ತೃಪ್ತಕರವಾಗಿಲ್ಲದಿದ್ದರೆ ಅವುಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.
ಅನುದಾನರಹಿತ ಮದರಸಾಗಳು ಅಧಿಕೃತವಾಗಿವೆಯೇ ಮತ್ತು ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಜುಲೈ ತಿಂಗಳಲ್ಲಿ ನಡೆಸಿದ ಸಮೀಕ್ಷೆಯ ನಂತರ ಈ ನೋಟಿಸ್ಗಳನ್ನು ಕಳುಹಿಸಲಾಗಿದೆ.
ಮುಚ್ಚಲ್ಪಡುತ್ತಿರುವ ಮದರಸಾಗಳ ಪೈಕಿ 45 ಮಾಲ್ದಾ ಜಿಲ್ಲೆಯಲ್ಲಿ, 37 ಉತ್ತರ ದಿನಾಜ್ಪುರದಲ್ಲಿ ಮತ್ತು ತಲಾ 25 ಮದರಸಾಗಳು ದಕ್ಷಿಣ 24 ಪರಗಣ, ಮುರ್ಷಿದಾಬಾದ್ ಹಾಗೂ ನದಿಯಾ ಜಿಲ್ಲೆಗಳಲ್ಲಿ ಇವೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಸಚಿವ ಕ್ಷುದಿರಾಮ್ ತುಡು ಮಾತನಾಡಿ, ಮದರಸಾ ವಿದ್ಯಾರ್ಥಿಗಳು ಸಹ ಇತರ ಶಾಲೆಗಳ ವಿದ್ಯಾರ್ಥಿಗಳಂತೆ ಆಧುನಿಕ, ಮುಖ್ಯವಾಹಿನಿಯ ಶಿಕ್ಷಣವನ್ನು ಪಡೆದು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂಬುದು ರಾಜ್ಯ ಸರ್ಕಾರದ ಆಶಯವಾಗಿದೆ ಎಂದು ತಿಳಿಸಿರುವುದಾಗಿ ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಆಡಳಿತರೂಢ ಭಾರತೀಯ ಜನತಾ ಪಕ್ಷದ ಬಂಗಾಳ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ ಮಾತನಾಡಿ, ಮದರಸಾಗಳ ಸಮೀಕ್ಷೆಯನ್ನು ಬಹಳ ಹಿಂದೆಯೇ ನಡೆಸಬೇಕಿತ್ತು ಎಂದಿದ್ದಾರೆ.
ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರು ಮದರಸಾಗಳಲ್ಲಿ ಉಳಿದುಕೊಂಡು ಸಿಕ್ಕಿಬಿದ್ದಿದ್ದಾರೆ ಎಂದು ರಾಜ್ಯ ಪಂಚಾಯತ್ ರಾಜ್ ಸಚಿವ ದಿಲೀಪ್ ಘೋಷ್ ಆರೋಪಿಸಿದ್ದಾರೆ. ನಿಯಮಗಳನ್ನು ಪಾಲಿಸುವ ಮದರಸಾಗಳು ಎಂದಿನಂತೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತವೆ, “ಆದರೆ ಮದರಸಾಗಳು ಎಲ್ಲೆಂದರಲ್ಲಿ ತಲೆಯೆತ್ತುವಂತಿಲ್ಲ” ಎಂದು ಅವರು ಹೇಳಿರುವುದಾಗಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಮಮತಾ ಬ್ಯಾನರ್ಜಿ ಬಣದ ತೃಣಮೂಲ ಕಾಂಗ್ರೆಸ್ ಶಾಸಕ ಕುನಾಲ್ ಘೋಷ್ ಮಾತನಾಡಿ, “ಶಿಕ್ಷಣ ವ್ಯವಸ್ಥೆಯ ಮೇಲೆ ದಾಳಿ ಮಾಡುವುದು ಮತ್ತು ಇಂತಹ ಅಪಪ್ರಚಾರದ ವಾತಾವರಣ ಸೃಷ್ಟಿಸುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆಂದು ಪತ್ರಿಕೆ ಉಲ್ಲೇಖಿಸಿದೆ.












