ಮಣಿಪುರದಲ್ಲಿ ಮರುಕಳಿಸಿದ ಹಿಂಸಾಚಾರ: ನಾಲ್ವರು ಸಾವು

0
176

ಸನ್ಮಾರ್ಗ ವಾರ್ತೆ

ಇಂಫಾಲ್: ಮತ್ತೊಂದು ದಾಳಿಯು ಮಣಿಪುರವನ್ನು ಗಲಭೆ ಪೀಡಿತ ಪ್ರದೇಶವನ್ನಾಗಿ ಪರಿವರ್ತಿಸಿದೆ. ನಿನ್ನೆ ನಡೆದ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರು ಕುಕಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ತಮೆಂಗ್ಲಾಂಗ್ ಮತ್ತು ನೋನಿ ಜಿಲ್ಲೆಗಳಲ್ಲಿ ಸಶಸ್ತ್ರ ವ್ಯಕ್ತಿಗಳು ನಡೆಸಿದ ಈ ದಾಳಿಯಲ್ಲಿ ಒಂದು ಮಗು ಗಾಯಗೊಂಡಿದ್ದು, ಓರ್ವ ಮಹಿಳೆ ನಾಪತ್ತೆಯಾಗಿದ್ದಾರೆ. ಈ ದಾಳಿಯ ಹಿಂದೆ ನಾಗಾ ಸಮುದಾಯದವರ ಕೈವಾಡವಿದೆ ಎಂದು ಕುಕಿ ಸಮುದಾಯ ಆರೋಪಿಸಿದೆ.

ಮೊದಲ ದಾಳಿಯು ತಮೆಂಗ್ಲಾಂಗ್‌ನ ಟೊಲ್ಲಾನ್ ಗ್ರಾಮದಲ್ಲಿ ಬೆಳಿಗ್ಗೆ 4 ಗಂಟೆಗೆ ಸಂಭವಿಸಿದೆ ಎಂದು ಕುಕಿಗಳು ತಿಳಿಸಿದ್ದಾರೆ. ಸ್ಥಳದಲ್ಲೇ ಓರ್ವ ಮಹಿಳೆ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆಕೆಯ ಪತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಬುಡಕಟ್ಟು ನಾಯಕ ವೇದಿಕೆಯ ವಕ್ತಾರ ಗಿನ್ಜಾ ವುಲ್ಸೊಂಗ್ ತಿಳಿಸಿದ್ದಾರೆ. ಆರು ವರ್ಷದ ಮಗನಿಗೂ ಗುಂಡೇಟು ತಗುಲಿದೆ. ನೋನಿ ಜಿಲ್ಲೆಯ ಲಾಂಗ್‌ಪಿ ಗ್ರಾಮದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆದ ದಾಳಿಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಟೊಲ್ಲಾನ್ ಮತ್ತು ಲಾಂಗ್‌ಪಿ ಗ್ರಾಮಗಳ ಕುಕಿ ಪ್ರತಿನಿಧಿಗಳು ಈ ದಾಳಿಗಳ ಹಿಂದೆ ಸಶಸ್ತ್ರ ನಾಗಾಗಳ ಕೆಲವು ವ್ಯಕ್ತಿಗಳಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತೀಚಿನ ಈ ದಾಳಿಗಳನ್ನು ನಾಗರಿಕರ ಮೇಲಿನ ಭಯೋತ್ಪಾದನಾ ಕೃತ್ಯಗಳೆಂದು ಪರಿಗಣಿಸಬೇಕೆಂದು ಮತ್ತು ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಗಿಸಬೇಕೆಂದು ಟೊಲ್ಲಾನ್ ಗ್ರಾಮದ ಆಡಳಿತ ಮಂಡಳಿಯು ಒತ್ತಾಯಿಸಿದೆ.

ಕುಕಿ ಶಾಸಕರಾದ ಲೆಟ್ಸಾಮಂಗ್ ಹಾವೋಕಿಪ್ ಮತ್ತು ಕಿಮ್ನ್ಯೆಯೋ ಹಂಗ್ಶಿಂಗ್ ಅವರು ಈ ದಾಳಿಯನ್ನು ಖಂಡಿಸಿ ಮುಂದೆ ಬಂದಿದ್ದಾರೆ. ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಗಳನ್ನು ಸಹಿಸಲು ಸಾಧ್ಯವಿಲ್ಲ ಹಾಗೂ ಇಂತಹ ಹೇಡಿತನದ ಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಂಗ್ಶಿಂಗ್ ಹೇಳಿದ್ದಾರೆ.

ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷವು 2023ರ ಮೇ 3 ರಂದು ಪ್ರಾರಂಭವಾಯಿತು. ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುವ ಮೈತೇಯಿ ಸಮುದಾಯಕ್ಕೆ ಮೀಸಲಾತಿಯನ್ನು ಜಾರಿಗೆ ತರಬಹುದು ಎಂಬ ಮಣಿಪುರ ಹೈಕೋರ್ಟ್‌ನ ತೀರ್ಪಿನಿಂದ ಈ ಗಲಭೆಗಳು ಭುಗಿಲೆದ್ದವು. ಬುಡಕಟ್ಟು ಕುಕಿಗಳ ಬಳಿ ಇದ್ದ ಮೀಸಲಾತಿಯನ್ನು ಮೈತೇಯಿ ಸಮುದಾಯಕ್ಕೂ ವಿಸ್ತರಿಸಿದರೆ ತಾವು ಮೀಸಲಾತಿಯಿಂದ ವಂಚಿತರಾಗುತ್ತೇವೆ ಎಂಬ ಆತಂಕ ಹೊಂದಿದ್ದ ಕುಕಿಗಳು, ನ್ಯಾಯಾಲಯದ ತೀರ್ಪಿನ ವಿರುದ್ಧ ಮೇ 3 ರಂದು ಪ್ರತಿಭಟನೆಯನ್ನು ಆರಂಭಿಸಿದರು. ಕುಕಿ ಸಮುದಾಯದ ಪ್ರಮುಖ ಕೇಂದ್ರವಾದ ಚುರಾಚಂದ್‌ಪುರದಲ್ಲಿ ಅವರು ಸಾವಿರಾರು ಸಂಖ್ಯೆಯಲ್ಲಿ ಪ್ರದರ್ಶನ ನಡೆಸಿದರು. ಈ ಪ್ರತಿಭಟನೆಯೊಳಗೆ ನುಸುಳಿದ ಕೆಲವು ವ್ಯಕ್ತಿಗಳ ಹಸ್ತಕ್ಷೇಪವು ನಂತರ ಗಲಭೆಗೆ ದಾರಿ ಮಾಡಿಕೊಟ್ಟಿತು. ಕಳೆದ ಮೂರು ದಿನಗಳಿಂದ ಮಣಿಪುರ ಉದ್ವಿಗ್ನತೆ ನೆಲೆಸಿದೆ ಎಂದು ವರದಿಯಾಗಿದೆ.